ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರಿಲ್ಲದವರ ಬದುಕು ಮೂರಾಬಟ್ಟೆ!

Last Updated 15 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಹಳೇಬೀಡು: ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದರೂ ಕಟ್ಟೆಸೋಮನಹಳ್ಳಿಯ ಪರಿಶಿಷ್ಟ ಜನರ 12 ಕುಟುಂಬಗಳು ವಾಸ ಮಾಡುವುದಕ್ಕೆ ಸುರಕ್ಷಿತವಾದ ಸ್ಥಳ ಹಾಗೂ ಸೂರು ದೊರಕದೇ ಪರದಾಡುವಂತಾಗಿದೆ.

ಹುಡುಕಾಟ: ಜೀವನ ನಿರ್ವಹಣೆಗಾಗಿ ಕೂಲಿ  ಅವಲಂಬಿಸಿರುವ 9 ಕುಟುಂಬಗಳು 35 ವರ್ಷದಿಂದ ಖಾಸಗಿ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿದ್ದರು. ಕಾಲಕ್ರಮೇಣ ಕುಟುಂಬಗಳ ಸಂಖ್ಯೆ 12 ಕ್ಕೆ ಏರಿಕೆಯಾಯಿತು.

ವಾಸವಾಗಿದ್ದ ಜಮೀನು ಸರ್ಕಾರಕ್ಕೂ ಸೇರಿಲ್ಲ, ಸ್ವತ್ತದ್ದೂ ಅಲ್ಲ. ಹೀಗಾಗಿ ಜಾಗದ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತು. ಸರ್ಕಾರ ಅನುದಾನ ಕೊಟ್ಟರೂ ವಾಸವಾಗಿರುವ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಇಲ್ಲದಂತಾಯಿತು.

ಜಮೀನು ಮಾಲೀಕರು ದಾಖಲೆಗಳನ್ನು ಸಹ ಹೊಂದಿರುವುದರಿಂದ ದಲಿತ ಕುಟುಂಬಗಳು ವಾಸ ಮಾಡುವುದಕ್ಕೆ ಸುರಕ್ಷಿತ ಜಾಗ ಹುಡುಕುವಂತಾಗಿದೆ.

ತಾತ್ಕಲೀಕ ಶೆಡ್: ಗ್ರಾಮದ ಕೆರೆ ಪಕ್ಕದ ಸರ್ಕಾರಕ್ಕೆ ಸೇರಿದ ಗುಣತೋಪಿನಲ್ಲಿ ಈಗ 12 ಕುಟುಂಬಗಳು ತಾತ್ಕಲಿಕ ಶೆಡ್ ನಿರ್ಮಿಸಿ ವಾಸ ಮಾಡುತ್ತಿವೆ. ಕೆರೆ ಸನಿಹದಲ್ಲಿರುವ ಜಾಗ ಸುರಕ್ಷಿತವೆ ಎನ್ನುವ ಪ್ರಶ್ನೆ ತಾ.ಪಂ ಇಒ ಹಾಗೂ ಗ್ರಾ.ಪಂಗೆ ಸವಾಲಾಗಿದೆ. ಕೆರೆ ಪಕ್ಕದ ಗುಣತೋಪಿನಲ್ಲಿ ವಸತಿ ಕಲ್ಪಿಸಿದರೆ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದಂತಾಗುತ್ತದೆ ಎನ್ನುವ ಮಾತು ಇಲ್ಲಿಯ ರೈತರಿಂದ ಕೇಳಿಬರುತ್ತಿದೆ.

`ಎಲ್ಲರೂ ಒಂದೆಡೆ ವಾಸಮಾಡುವುದಕ್ಕೆ ಗುಣತೋಪು ಹೊರತುಪಡಿಸಿ ಬೇರೆ ಸ್ಥಳ ಇಲ್ಲ. ರೈತರು ಜಾನುವಾರುಗಳೊಂದಿಗೆ ತಿರುಗಾಡುವ ರಸ್ತೆಗೆ ನಾವು ಅಡ್ಡಿಮಾಡುವುದಿಲ್ಲ. ಊರಿನ ಪಕ್ಕದಲ್ಲಿ ಸರ್ಕಾರಿ ಜಮೀನು ಇದ್ದರೂ ಎಲ್ಲರಿಗೂ ನಿವೇಶನ ಕೊಡುವಷ್ಟು ಸ್ಥಳಾವಕಾಶ ಇಲ್ಲ~ ಎನ್ನುತ್ತಾರೆ  ಕಟ್ಟೆಸೋಮನಹಳ್ಳಿಯ ದಲಿತರು.

ಖಾಯಂ ವಸತಿಗೆ ಭರವಸೆ: ದಲಿತ ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡಿರುವ ಖಾಸಗಿ ಜಮೀನು ಹಾಗೂ ಗುಣತೋಪಿಗೆ ಶುಕ್ರವಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ವಿ.ಶಿವಪ್ಪ ಹಾಗೂ ಪಿಡಿಒ ಸೋಮಶೇಖರ್ ಭೇಟಿನೀಡಿ ಸಮಸ್ಯೆಗಳನ್ನು ಆಲಿಸಿದರು.

ಪ್ರತಿಯೊಬ್ಬರಿಗೂ ಸ್ವಂತಸೂರು ಹೊಂದಲು ಅವಕಾಶವಿದೆ. ಸೂಕ್ತವಾದ ಸರ್ಕಾರಿ ಜಮೀನು ಅನ್ವೇಷಣೆ ಮಾಡಿ ಪರದಾಡುತ್ತಿರುವ ಪರಿಶಿಷ್ಟ ಜನರಿಗೆ ನಿವೇಶನ ಕಲ್ಪಿಸಲಾಗುವುದು. ರಾಜೀವ್‌ಗಾಂಧಿ ವಸತಿ ನಿಗಮದಿಂದ ಹಣ ಮಂಜೂರು ಮಾಡಿಸಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT