ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ಹೊಸ ಅಂಗನವಾಡಿ ಮಾಳಿಗೆ!

ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಸಭೆಯಲ್ಲಿ ಸಿಡಿಪಿಒ ದೂರು
Last Updated 14 ಸೆಪ್ಟೆಂಬರ್ 2013, 5:24 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಹೋಬಳಿಯಲ್ಲಿ ಖಾಸಾಪುರ ಎಸ್‌.ಸಿ.ಕಾಲೊನಿ, ವಡ್ಡರ ಸಿದ್ದವ್ವನಹಳ್ಳಿ ಸೇರಿದಂತೆ ಕೆಲವು ಕಡೆ ಹೊಸದಾಗಿ ಕಟ್ಟಿರುವ ಅಂಗನವಾಡಿ ಕಟ್ಟಡಗಳು ಸೋರುತ್ತಿವೆ ಎಂದು ಭರಮಸಾಗರದ ಸಿಡಿಪಿಒ ಪುಟ್ಟಶಂಕ್ರಪ್ಪ ಅವರು ಸಭೆಗೆ ಮಾಹಿತಿ ನೀಡಿದರು.

ಶುಕ್ರವಾರ ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾ. ಪಂ ಅಧ್ಯಕ್ಷೆ ಆಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ಮತ್ತು ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷರಿಗೆ ಹಾಗೂ ಪಂಚಾಯತ್‌ ರಾಜ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರ ಗಮನ ಸೆಳೆದರು.

ಪುಟ್ಟರಂಗಶೆಟ್ಟಿಯವರ ಮಾಹಿತಿಗೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ ಬಸವರಾಜು, ‘ಹೊಸ ಕಟ್ಟಡಗಳು ಸೋರಿಕೆಯಾಗುತ್ತಿರುವ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಇಂಥ ಮಾಹಿತಿಗಳಿದ್ದರೆ ಅಧಿಕಾರಿಗಳು ಹಂಚಿಕೊಳ್ಳಬಹುದು. ಆ ವಿಷಯವನ್ನು ಪರಿಗಣಿಸಿ, ಕ್ರಮಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು. ಭರಮಸಾಗರದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳು ಸೋರುತ್ತಿದ್ದು, ಅವುಗಳ ದುರಸ್ತಿ ಮಾಡಬೇಕಿದೆ ಎಂದರು.

ಸಿಡಿಪಿಒ ಕಚೇರಿ ಗೊಂದಲ
ಸ್ಥಾಯಿ ಸಮಿತಿ ಸದಸ್ಯ ಎನ್‌.ಟಿ.ರಾಜ್‌ಕುಮಾರ್‌ ಅವರು, ‘ಭರಮಸಾಗರ ವ್ಯಾಪ್ತಿಯಲ್ಲಿ 283 ಅಂಗನವಾಡಿ ಕೇಂದ್ರಗಳಿವೆ. ಚಿತ್ರದುರ್ಗ ವ್ಯಾಪ್ತಿಯಲ್ಲಿ ಅಂದಾಜು 73 ಇರಬಹುದು. ಹೀಗಾಗಿ ನಮಗೆ ಕೇಂದ್ರ ಅನಿವಾರ್ಯ. ಸರ್ಕಾರ ಕೂಡ ಆದೇಶದಲ್ಲಿ ಇದನ್ನೇ ಸೂಚಿಸಿದೆ. ಹಾಗಾಗಿ ಸಿಡಿಪಿಒ ಕಚೇರಿಯನ್ನು ಭರಮಸಾಗರದಲ್ಲೇ ತೆರೆಯಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಪುಟ್ಟಶಂಕ್ರಪ್ಪ ಅವರು, ‘ಸಿಡಿಪಿಒ ಕಚೇರಿಯನ್ನು ಸರ್ಕಾರದ ಆದೇಶದಂತೆ ಭರಮಸಾಗರದಲ್ಲೇ ತೆರೆಯಬೇಕು. ಆದರೆ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪುತ್ತಿಲ್ಲ. ತುರುವನೂರಿನವರು ಚಿತ್ರದುರ್ಗದಲ್ಲಿ ಸಿಡಿಪಿಒ ಕಚೇರಿ ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ. ಚಳ್ಳಕೆರೆ ಶಾಸಕರೂ ಕೂಡ ಚಿತ್ರದುರ್ಗದಲ್ಲೇ ಕಚೇರಿ ತೆರೆಯುವಂತೆ ಒತ್ತಡ ತರುತ್ತಿದ್ದಾರೆ. ರಾಜಕೀಯ ನಾಯಕರ ಒತ್ತಡದಲ್ಲಿ ನಾವು ಹೈರಾಣಾಗಿದ್ದೇವೆ’ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್‌ಕುಮಾರ್‌, ‘ಪ್ರತಿ ಸಭೆಯಲ್ಲೂ ಹೀಗೆ ಹೇಳ್ತೀರಿ. ಸರ್ಕಾರ ಆದೇಶದಂತೆ ನಡೆಯಿರಿ. ನಾನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡುತ್ತೇನೆ. ನೀವು ಸರ್ಕಾರದ ಆದೇಶದ ಅನ್ವಯ ನಡಾವಳಿ ಪಾಸ್ ಮಾಡಿ ಕಾರ್ಯಪ್ರವೃತ್ತರಾಗಿ’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

ಶುದ್ಧೀಕರಣ ಘಟಕ
ಜಿಲ್ಲೆಯಲ್ಲಿ ಐದು ಕಡೆ ` 60 ಲಕ್ಷ ವೆಚ್ವದಲ್ಲಿ ಫ್ಲೋರೈಡ್‌ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕೆಂಬ ಗುರಿ ಹೊಂದಲಾಗಿತ್ತು. ನಾಲ್ಕು ಕಡೆ ಕಾಮಗಾರಿ ನಡೆದಿದೆ. ನಿವೇಶನದ ಕೊರತೆಯಿಂದ ಒಂದು ಕಡೆ ಘಟಕದ ಕಾಮಗಾರಿ ನಿಂತಿದೆ. ಸ್ಥಳದ ಸಮಸ್ಯೆ, ಸ್ಥಾಪಿಸಿರುವ ಘಟಕಗಳಿಗ ವಿದ್ಯುತ್‌ ಸೌಲಭ್ಯ ಕಲ್ಪಿಸುವುದು ಬಾಕಿ ಇದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜು ಸಭೆಗೆ ಮಾಹಿತಿ ನೀಡಿದರು. ಇದೇ ರೀತಿ ` 16 ಲಕ್ಷ ವೆಚ್ಚದಲ್ಲಿ ಎರಡು ರಿವರ್ಸ್ ಆಸ್ಮೋಸಿಸ್ (ನೀರು ಶುದ್ಧೀಕರಣ ಘಟಕ) ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಯಲ್ಲೂ ವಿದ್ಯುತ್‌ ಸಂಪರ್ಕ ಬಾಕಿ ಇದೆ ಎಂದು ಹೇಳಿದರು.

ಪ್ರತಿ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ` 30 ಸಾವಿರ ಹಣ ತೆಗೆದಿರಿಸಲಾಗಿದೆ. ಇದರಲ್ಲಿ ಟ್ಯಾಂಕ್‌ನಿಂದ ಪೈಪ್‌ ಲೈನ್‌ ಹಾಕಿಸುವುದು, ಹಾಳಾದ ಪೈಪ್‌ ಲೈನ್‌ ದುರಸ್ತಿಯಂತಹ ಕಾಮಗಾರಿಗಳನ್ನು ಮಾಡಿಸಬಹುದು ಎಂದು ಅವರು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ‘ಎಲ್ಲೆಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ಅವಕಾಶವಿದೆ. ನಮ್ಮ ಕ್ಷೇತ್ರಗಳನ್ನೂ ಸೇರಿಸಿಕೊಳ್ಳಲು ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಎಚ್‌.ಎನ್‌.ಆಶಾ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸದಸ್ಯರಾದ ಬಿ.ಆನಂದ್‌, ಎನ್‌.ಟಿ.ರಾಜ್‌ಕುಮಾರ್‌, ಪ್ರತಿಭಾ ಎಸ್‌.ರಮೇಶ್‌, ದಾಕ್ಷಾಯಣಮ್ಮ ಆರ್‌.ಪರಮೇಶ್ವರ್‌, ಸಹಾಯಕ ನಿರ್ದೇಶಕ ಪ್ರಕಾಶ್‌ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಅಂಗನವಾಡಿ ಕಟ್ಟಡದ ಕೊರತೆ
‘ನಮ್ಮ ಕ್ಷೇತ್ರದಲ್ಲಿ ಅಂಗನವಾಡಿ ಕಟ್ಟಡಗಳ ಕೊರತೆ ಇದೆ. ಇರುವ ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ದೇವಸ್ಥಾನಗಳಲ್ಲಿ ಕೇಂದ್ರವನ್ನು ನಡೆಸುವ ಸ್ಥಿತಿ ಬಂದೊದಗಿದೆ. ಕಟ್ಟಡಗಳ ವ್ಯವಸ್ಥೆ ಮಾಡಿ’ ಎಂದು ಸದಸ್ಯೆ ಪ್ರತಿಭಾ ಅವರು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಚಿತ್ರದುರ್ಗ ಸಿಡಿಪಿಒ ‘ಉದ್ಯೋಗ ಖಾತ್ರಿಯಲ್ಲಿ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ` 11 ಲಕ್ಷ  ನಿಗದಿ ಮಾಡಿದೆ. ಕಟ್ಟಡದ ದುರಸ್ತಿಗೆ ಬಿಡುಡೆಯಾಗಿರುವ ಹಣದಲ್ಲಿ ಕೆಲಸ ಮಾಡುತ್ತಿದ್ದೇವೆ. ನಿವೇಶನ ಕೊಡಿಸಿ, ಕಟ್ಟಡ ನಿರ್ಮಾಣಕ್ಕೆ ಹಣ ನೀಡಿದರೆ, ಹೊಸ ಕಟ್ಟಡಗಳನ್ನು ಕಟ್ಟುತ್ತೇವೆ, ಹಳೆಯದನ್ನು ದುರಸ್ತಿ ಮಾಡುತ್ತೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT