ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುವ ಶೆಡ್‌ನಲ್ಲಿ ಕಾವಾಡಿಗಳು, ಮಾವುತರು!

Last Updated 3 ಸೆಪ್ಟೆಂಬರ್ 2013, 19:35 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವಕ್ಕೆ ಗಜಪಡೆಯೊಂದಿಗೆ ಬಂದಿರುವ ಮಾವುತರು ಹಾಗೂ ಕಾವಾಡಿಗಳು ನಗರದ ಅಂಬಾವಿಲಾಸ  ಅರಮನೆಯ ಅಂಗಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್‌ಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಆ ಶೆಡ್‌ಗಳು ಮಳೆಯಿಂದ ಸೋರುತ್ತಿದ್ದು, ಅವ್ಯವಸ್ಥೆಯ ತಾಣವಾಗಿವೆ.

ಸೋಮವಾರ ಹಾಗೂ ಮಂಗಳವಾರ ಸುರಿದ ಮಳೆಯಿಂದಾಗಿ ಶೆಡ್‌ನೊಳಗೆ ನೀರು ನುಗ್ಗಿದ ಪರಿಣಾಮ ಉರಿಯುತ್ತಿದ್ದ ಒಲೆಗಳು ತಣ್ಣಗಾದವು. ಕಾಡಿನಿಂದ ತಂದ ಸೌದೆಗಳು ನೆನೆದು ಹಸಿಯಾದವು. ಹೀಗಾಗಿ, ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದೆ ಮಾವುತರ ಹಾಗೂ ಕಾವಾಡಿ ಕುಟುಂಬಗಳು ಪರದಾಡುತ್ತಿವೆ. ಮಳೆನೀರಿಗೆ ಬಟ್ಟೆ ಹಾಗೂ ಹಾಸಿಗೆಗಳು ಒದ್ದೆಯಾದ ಪರಿಣಾಮ ರಾತ್ರಿ ನೆಮ್ಮದಿಯಿಂದ ಮಲಗಲು ಆಗುತ್ತಿಲ್ಲ ಎನ್ನುವ ಕೊರಗು ಅವರದು. ಇದಕ್ಕೆ ಮುಖ್ಯ ಕಾರಣ; ಶೆಡ್‌ಗಳನ್ನು ಪೂರ್ತಿಯಾಗಿ ತಗಡುಗಳಿಂದ ಮುಚ್ಚಿಲ್ಲ. ಹೀಗಾಗಿ, ಸಣ್ಣ ಗಾಳಿಯೂ ಶೆಡ್‌ನೊಳಗೆ ನುಸುಳುವ ಪರಿಣಾಮ ತಗಡುಗಳ ಸದ್ದು ನಿರಂತರವಾಗಿರುತ್ತದೆ. ಸೋಮವಾರ ಮಳೆಯೊಂದಿಗೆ ಜೋರಾದ ಗಾಳಿ ಬೀಸಿದ ಪರಿಣಾಮ ಶೆಡ್‌ವೊಂದರ ತಗಡುಗಳು ಜರುಗಿವೆ. ರಾತ್ರಿ ಮಲಗಿದ್ದಾಗ ಮೈಮೇಲೆ ತಗಡುಗಳು ಬಿದ್ದರೆ ಗತಿ ಏನು ಎನ್ನುವುದು ಕಾವಾಡಿ ಹಾಗೂ ಮಾವುತರ ಕುಟುಂಬಗಳ ಆತಂಕ.

ಅರ್ಜುನ, ಬಲರಾಮ, ಅಭಿಮನ್ಯು, ವರಲಕ್ಷ್ಮೀ, ಸರಳಾ ಹಾಗೂ ಗಜೇಂದ್ರ -ಹೀಗೆ 6 ಆನೆಗಳೊಂದಿಗೆ ಮಾವುತರಾದ ದೊಡ್ಡಮಾಸ್ತಿ, ತಿಮ್ಮ, ವಸಂತ್, ಸರಳಾ ಆನೆ ನೋಡಿಕೊಳ್ಳುವ ರಾಮ, ಗಜೇಂದ್ರ ಆನೆಯನ್ನು ನೋಡಿಕೊಳ್ಳುವ ರಾಮ, ವರಲಕ್ಷ್ಮೀಯನ್ನು ನೋಡಿಕೊಳ್ಳುವ ಗುಂಡ ಅವರ ಕುಟುಂಬಗಳು ಶೆಡ್‌ಗಳಲ್ಲಿ ಬೀಡುಬಿಟ್ಟಿವೆ. ಆದರೆ, ಅವುಗಳಿಂದ ಅಪಾಯವೇ ಹೆಚ್ಚು ಎಂದು ಮಾವುತರ ಹಾಗೂ ಕಾವಾಡಿಗಳ ಕುಟುಂಬಗಳು ಆತಂಕದಿಂದ ದಿನದೂಡುತ್ತಿವೆ. ಎರಡು ತಿಂಗಳ ಕೂಸಿನೊಂದಿಗೆ ಬಂದಿರುವ ತಿಮ್ಮನ ಕುಟುಂಬ ಹೆಚ್ಚು ಭೀತಿಗೊಳಗಾಗಿದೆ.

`ತಗಡುಗಳ ಎತ್ತರ ಹೆಚ್ಚಾಯಿತು. ಹೀಗಾಗಿ, ಜೋರಾಗಿ ಗಾಳಿ ಬೀಸಿದಾಗ ತಗಡುಗಳು ಹಾರಿ ಹೋಗಬಹುದು ಎನ್ನುವ ಹೆದರಿಕೆ ಇದೆ' ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮಾವುತ. ನಮಗೆ ಕಾಡೇ ಸರಿ. ಸಿಟಿ ಸರಿಯಿಲ್ಲ, ಹೊಂದಲ್ಲ ಎನ್ನುವವರೇ ಹೆಚ್ಚು. ಇವರ ಆತಂಕ ಗಮನಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ದೇವರಾಜ್ ಅವರು ಮಂಗಳವಾರ ಮಧ್ಯಾಹ್ನ ಮೊಬೈಲ್ ಮೂಲಕ ಟೆಂಡರ್ ಪಡೆದವರಿಗೆ ಶೆಡ್‌ಗಳನ್ನು ಪೂರ್ತಿಯಾಗಿ ಮುಚ್ಚಿ ಎಂದು ಸೂಚಿಸಿದರು. ಆದರೆ, ಮಂಗಳವಾರ ಸಂಜೆಯವರೆಗೂ ಶೆಡ್‌ಗಳು ಹಾಗೆಯೇ ಇದ್ದವು.

ಈ ಸಮಸ್ಯೆ ಜತೆಗೆ ಶೆಡ್‌ಗಳ ಸ್ವಲ್ಪ ದೂರದಲ್ಲಿರುವ ಶೌಚಾಲಯದಲ್ಲಿ ನೀರಿನ ಕೊರತೆ ಕೂಡಾ ಮಾವುತರ ಹಾಗೂ ಕಾವಾಡಿಗಳ ನೆಮ್ಮದಿ ಕೆಡಿಸಿದೆ.

ಆರೋಗ್ಯ ತಪಾಸಣೆ:  ಸಂಘಟನೆಯೊಂದರ ಸಹಯೋಗದಲ್ಲಿ ಕೆ.ಆರ್. ಆಸ್ಪತ್ರೆಯ ವೈದ್ಯರ ತಂಡ ಮಾವುತರ ಹಾಗೂ ಕಾವಾಡಿಗಳ ಕುಟುಂಬದ ಆರೋಗ್ಯದ ತಪಾಸಣೆಯನ್ನು ಮಂಗಳವಾರ ಬೆಳಿಗ್ಗೆ ಕೈಗೊಂಡಿತು. `ಹೆಚ್ಚಿನವರು ಮದ್ಯಪಾನಿಗಳು, ಧೂಮಪಾನಿಗಳು. ಅವರ ಕರುಳಿಗೆ ತೊಂದರೆಯಾಗಿರುವ ಕುರಿತು ಪರೀಕ್ಷಿಸಲಾಗುತ್ತದೆ' ಎಂದು ಕೆ.ಆರ್. ಆಸ್ಪತ್ರೆಯ ಡಾ.ಮೋಹನಕುಮಾರ್ ತಿಳಿಸಿದರು.

ಇದಕ್ಕಿಂತ ಆತಂಕ ಸಂಗತಿ ಎಂದರೆ, ಪೌಷ್ಟಿಕತೆಯ ಕೊರತೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT