ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಲ್ಲದ ಸರದಾರ, ದಾಖಲೆ ವೀರ ಕೆ.ಲಕ್ಕಪ್ಪ

Last Updated 26 ಮಾರ್ಚ್ 2014, 11:34 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರ­ದಲ್ಲಿ ಕೆ.ಲಕ್ಕಪ್ಪ ಚಿರಸ್ಥಾಯಿಯಾದ ಹೆಸರು. 4, 5, 6, 7ನೇ ಲೋಕಸಭೆ ಸದಸ್ಯರಾಗಿದ್ದ ಇವರು ನಿರ್ಮಿಸಿದ ದಾಖಲೆಯನ್ನು; ಹದಿನೈದು ಚುನಾವಣೆ ನಡೆದರೂ ಯಾರಿಗೂ ಸರಿಗಟ್ಟಲು ಸಾಧ್ಯವಾಗಿಲ್ಲ.

ಆರಂಭದಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯ ಕಟ್ಟಾ ಬೆಂಬಲಿಗ. ನಂತರ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ. ಸೋಲಿಲ್ಲದ ಸರದಾರ. ಜಿ.ಎಸ್‌.­ಬಸವ­ರಾಜು ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆ­ಯಾ­ಗಿದ್ದರೂ; ಸತತವಾಗಿ ವಿಜಯಿಯಾಗಿಲ್ಲ.

ಮೊದಲ ಮೂರು ಚುನಾವಣೆಗಳಲ್ಲೂ ಅಭ್ಯರ್ಥಿ ಬದಲಾಯಿಸುವ ಪರಿಪಾಠ ಬೆಳೆಸಿ­ಕೊಂಡಿದ್ದ ಪಿಎಸ್‌ಪಿ ನಾಲ್ಕನೇ ಚುನಾ­ವಣೆ­ಯಲ್ಲೂ ತನ್ನ ಅಭ್ಯರ್ಥಿ ಬದಲಿಸಿ ಕೆ.ಲಕ್ಕಪ್ಪ ಅವರನ್ನು ಕಪ್ಪು ಕುದುರೆಯನ್ನಾಗಿ ಚುನಾವಣಾ ಅಖಾಡಕ್ಕಿಳಿಸಿತು.

ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್‌ಗೆ, ಲಕ್ಕಪ್ಪ 67ರ ಚುನಾವಣೆಯಲ್ಲಿ ಜಿದ್ದಾಜಿದ್ದಿಯ ಪೈಪೋಟಿ ನೀಡಿ ದೊಡ್ಡ ಹೊಡೆತ ನೀಡಿದರು. ಮೂರು ಬಾರಿ ಜಿಲ್ಲೆಯ ಸಂಸದರಾಗಿದ್ದ ಸಿ.ಆರ್‌.ಬಸಪ್ಪ ಕೇವಲ 261 ಮತಗಳ ಅಂತರದಿಂದ ಸೋತರು.

ಚುನಾ­ವಣೆಗೆ ಸ್ಪರ್ಧಿಸಿದ ಮೊದಲ ಯತ್ನದಲ್ಲೇ ಲಕ್ಕಪ್ಪ ಯಶಸ್ಸು ಕಂಡರು. ಪ್ರಥಮ ಬಾರಿಗೆ ಕ್ಷೇತ್ರ­ವನ್ನು ಕಾಂಗ್ರೆಸ್‌ ‘ಕೈ’ನಿಂದ ಕಿತ್ತುಕೊಂಡ ಕೀರ್ತಿ ಇವರದ್ದು. ನಂತರ ನಡೆದ ಮೂರು ಚುನಾ­ವಣೆಗಳಲ್ಲೂ ಕಾಂಗ್ರೆಸ್‌ ಬಾವುಟ ಹಾರಿಸಿದ­ವರು ಇವರೇ.

‘ಗೆಲುವಿನಲ್ಲಿ ಕಮ್ಯುನಿಸ್ಟರ ಪಾತ್ರ ದೊಡ್ಡದು. ರಾಜಕೀಯದಲ್ಲಿ ಇರುವ ತನಕ ಕಮ್ಯುನಿಸ್ಟರ ಸಹಕಾರವನ್ನು ಎಂದಿಗೂ ಮರೆ­ಯಲ್ಲ’ ಎಂದು ಲಕ್ಕಪ್ಪ ಸದಾ ಹೇಳುತ್ತಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರ, ಸಿಪಿಐ ಮುಖಂಡ ಟಿ.ಆರ್‌.ರೇವಣ್ಣ ನೆನಪಿಸಿಕೊಳ್ಳು­ತ್ತಾರೆ.

71ರ ಚುನಾವಣೆ ಸೈದ್ಧಾಂತಿಕ ಸಂಘರ್ಷ­ದಿಂದ ಕೂಡಿದ್ದು. ಲಕ್ಕಪ್ಪ ಪಕ್ಷ ಬದಲಾಯಿಸಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಎಂ.ಆರ್‌.­ರಾಮಣ್ಣ ಸಂಸ್ಥಾ ಕಾಂಗ್ರೆಸ್‌ನ ಅಭ್ಯರ್ಥಿ. ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯೂ ಅಭ್ಯರ್ಥಿ­ಯನ್ನು ಕಣಕ್ಕಿಳಿಸಿತ್ತು. ಲಕ್ಕಪ್ಪ ಗೆಲುವಿನ ಓಘ ಮುಂದುವರೆಯಿತು.

161779 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಈ ಚುನಾವಣೆಯಲ್ಲಿ ಮುಕ್ಕಾಲು ಪಾಲು ಮತ­ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಪಕ್ಷ ಬದಲಾಯಿಸಿದರೂ ಲಕ್ಕಪ್ಪನವರ ಜನಪ್ರಿಯತೆ ಕಿಂಚಿತ್‌ ಕಳೆಗುಂದಲಿಲ್ಲ. ಎದುರಾಳಿಗಳು 82­492 ಮತ ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ 240718 ಮತ ಪಡೆದು ದಾಖಲೆ ನಿರ್ಮಿಸಿದರು. ಪ್ರಜಾಸೋಷಿಯಲಿಸ್ಟ್‌ ಪಾರ್ಟಿ ಕೇವಲ 3553 ಮತ ಪಡೆಯಿತು.

ತುರ್ತು ಪರಿಸ್ಥಿತಿ ನಂತರ ನಡೆದ 1977ರ ಚುನಾವಣೆಯಲ್ಲಿ ದೇಶದ ಎಲ್ಲೆಡೆ ಕಾಂಗ್ರೆಸ್‌ ವಿರೋಧಿ ಅಲೆ. ಜನ ಸಾಮಾನ್ಯರು ಸಹ ಇಂದಿರಾ ಹೆಸರೆತ್ತಿದ್ದರೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಾಲ. ವಿರೋಧ ಪಕ್ಷಗಳೆಲ್ಲ ಒಮ್ಮತದ ಅಭ್ಯರ್ಥಿ ನಿಲ್ಲಿಸಿದರೂ ಕಾಂಗ್ರೆಸ್‌ ಗೆಲುವು ತಡೆಯಲಾಗಲಿಲ್ಲ. ಲಕ್ಕಪ್ಪ 237086 ಮತಗಳನ್ನು ಪಡೆದರೆ ವಿರೋಧಿ ಬಣದ ಭಾರತೀಯ ಲೋಕದಳದ ಅಭ್ಯರ್ಥಿ ಎಸ್‌.ಮಲ್ಲಿಕಾರ್ಜುನಯ್ಯ 170269 ಮತಗಳನ್ನು ಪಡೆದರು. ಗೆಲುವಿನ ಅಂತರ 66817 ಮತಗಳು.

1980ರ ಚುನಾವಣೆಯೇ ಲಕ್ಕಪ್ಪ ಅವರ ಕೊನೆಯ ಚುನಾವಣೆ. ಕಾಂಗ್ರೆಸ್‌ ಒಡೆದ ಮನೆಯಾಗಿದ್ದ ಕಾಲ. ಸ್ಪರ್ಧಿಗಳ ಸಂಖ್ಯೆ ಹೆಚ್ಚಿದ್ದರೂ; ವೈಯಕ್ತಿಕ ವರ್ಚಸ್ಸಿನಿಂದ ಲಕ್ಕಪ್ಪ ನಾಲ್ಕನೇ ಬಾರಿಗೆ 117061 ಮತಗಳ ಅಂತರದಿಂದ ಸಂಸದರಾಗಿ ಆಯ್ಕೆಯಾದರು.

ತುಮಕೂರು ಜಿಲ್ಲೆಗೆ ಎಚ್‌ಎಂಟಿ ಕಾರ್ಖಾನೆ ತಂದ ಕೀರ್ತಿ ಲಕ್ಕಪ್ಪ ಅವರಿಗೆ ಸಲ್ಲುತ್ತದೆ. ಕಾರ್ಖಾನೆಯನ್ನು ಹಾಸನ ಜಿಲ್ಲೆಗೆ ಸ್ಥಳಾಂತರಿಸುವ ಚಿಂತನೆ ನಡೆಯುತ್ತಿದ್ದಾಗ; ಲಕ್ಕಪ್ಪ ತುಮಕೂರಿನಲ್ಲಿ ಸ್ಥಾಪನೆಯಾಗದಿದ್ದರೆ ಸಂಸತ್‌ನಲ್ಲಿ ಉಪವಾಸ ಕೂರುತ್ತೇನೆ ಎಂದು ಗುಡುಗಿದರು. ತಕ್ಷಣವೇ ಎಚ್ಚೆತ್ತ ಕೇಂದ್ರ ಸರ್ಕಾರ ಹಾಸನದ ಪ್ರಸ್ತಾಪ ಕೈಬಿಟ್ಟಿತ್ತು.

ಲಕ್ಕಪ್ಪ ಪಕ್ಷಾತೀತ, ಜಾತ್ಯತೀತ ವ್ಯಕ್ತಿ. ವೈಯಕ್ತಿಕ ವರ್ಚಸ್ಸಿನಿಂದಲೇ ನಾಲ್ಕು ಬಾರಿ ಸಂಸದರಾದರು. ಸದಾ ಜನರಿಗೆ ಸ್ಪಂದಿಸುತ್ತಿದ್ದರು. ಜನರ ನಡುವೆಯೇ ಬದುಕಿದ ಜನಸ್ನೇಹಿ ಸಂಸದ. ಸಂಸತ್‌ ಕಲಾಪ ನಡೆಯುತ್ತಿದ್ದ ವೇಳೆ ಹೊರತುಪಡಿಸಿದರೆ ಸದಾ ತುಮಕೂರಿನ ತಮ್ಮ ಮನೆಯಲ್ಲೇ ಇರುತ್ತಿದ್ದರು. ನಿತ್ಯವೂ ಜನ ಜಾತ್ರೆ ಮನೆಯಲ್ಲಿ ನೆರೆಯುತ್ತಿತ್ತು.

ಸಂಸತ್ ಅಧಿವೇಶನದಲ್ಲಿ ರಾಜ್ಯ ಸೇರಿದಂತೆ ಕ್ಷೇತ್ರದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸು­ತ್ತಿ­ದ್ದರು. ಕೆಲಸದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಎಂದೂ ವಾಹನ ಬಳಸಿದ ವ್ಯಕ್ತಿಯಲ್ಲ. ಪ್ರತಿ ಬಾರಿಯೂ ನಡೆದುಕೊಂಡು ಹೋಗುತ್ತಿದ್ದರು. ದಾರಿ ನಡುವೆ ಸಿಗುವ ಎಲ್ಲರನ್ನೂ ಮಾತನಾಡಿಸಿಕೊಂಡು ಅವರ ಕಷ್ಟ ಸುಖಕ್ಕೆ ಸ್ಪಂದಿಸುತ್ತಿದ್ದರು. ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಂಡಿದ್ದರು.

ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ­ರುವ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚು ಮತಗಳು ಲಕ್ಕಪ್ಪ ಅವರಿಗೆ ದೊರಕುತ್ತಿದ್ದವು. ಇದು ಲಕ್ಕಪ್ಪ ಅವರ ಜಾತ್ಯತೀತ ಧೋರಣೆಗೆ ಸಲ್ಲುತ್ತಿದ್ದ ಗೌರವವಾಗಿತ್ತು.

ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆದ ಹರಿಕಾರನಿಗೆ ರಾಜ್ಯದ ಕಾಂಗ್ರೆಸ್‌ ನಾಯಕರ ಕುತಂತ್ರದಿಂದ ಮುಂದಿನ ಚುನಾ­ವಣೆಗಳಲ್ಲಿ ಟಿಕೆಟ್‌ ತಪ್ಪಿತು. ಟಿಕೆಟ್‌ ತಪ್ಪಿದರೂ ಪಕ್ಷಕ್ಕೆ ನಿಷ್ಠರಾಗಿದ್ದ ನಾಯಕ. ಲೋಕಸಭೆ ಚುನಾವಣೆ­ಗಳಲ್ಲಿ ಒಮ್ಮೆಯೂ ಸೋಲದ ಜನಾನುರಾಗಿ ಎಂದು ಜನರ ಮನದಲ್ಲಿ ನೆಲೆಯೂರಿದ್ದರು.

ಶಾಸಕರಾಗಿ ಆಯ್ಕೆ
1962ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ­ದಿಂದ ಗೂಳೂರು ವಿಧಾನಸಭಾ ಕ್ಷೇತ್ರ ಶಾಸಕ­ರಾಗಿ ಹಾಗೂ 1989ರಲ್ಲಿ ಕಾಂಗ್ರೆಸ್‌ನಿಂದ ಕುಣಿಗಲ್‌ ವಿಧಾನಸಭಾ ಕ್ಷೇತ್ರದ

ಶಾಸಕ­ರಾ­ಗಿಯೂ ಆಯ್ಕೆಯಾಗಿದ್ದರು.

ಜನಸ್ನೇಹಿ ಸಂಸದ
4ಕಾಂಗ್ರೆಸ್ ಗೆಲುವಿಗೆ ಬ್ರೇಕ್
4ಜನಸ್ನೇಹಿ, ಜಾತ್ಯತೀತ ನಾಯಕ
4ಅಭಿವೃದ್ಧಿ ಹರಿಕಾರ
41962ರಲ್ಲಿ ಗೂಳೂರು, 89ರಲ್ಲಿ   ಕುಣಿಗಲ್ ಶಾಸಕರಾಗಿ ಆಯ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT