ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ಗೆಲುವಿನಾಚೆ ಬಿಡಿಸಬೇಕಾದ ಪ್ರಶ್ನೆಗಳು

ಸುದ್ದಿ ವಿಶ್ಲೇಷಣೆ
Last Updated 8 ಡಿಸೆಂಬರ್ 2013, 20:27 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಂತ ಕುತೂಹಲ ಕೆರಳಿಸಿದ್ದ ದೆಹಲಿ, ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸ­ಗಡ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ­ವಾಗಿದೆ. ದೆಹಲಿ ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳ ಫಲಿತಾಂಶ ಹೆಚ್ಚುಕಡಿಮೆ ನಿರೀಕ್ಷೆ­ಯಂತೆ ಬಂದಿದೆ.ಗಮನ ಸೆಳೆದಿರುವುದು ದೆಹಲಿ ರಾಜಕಾರಣ ಮಾತ್ರ. ರಾಜಧಾನಿ ರಾಜ­ಕಾರಣ ಹೀಗೆ ವಿಚಿತ್ರ ತಿರುವು ಪಡೆಯುತ್ತದೆಂದು ಯಾರೂ ಊಹಿಸಿರಲಿಲ್ಲ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ­ದಲ್ಲಿ ಬರೀ ಸೋಲು– ಗೆಲುವುಗಳಿಲ್ಲ. ಅದ­ರಾಚೆಗೂ ಬಿಡಿಸಲಾಗದ ಬಹಳಷ್ಟು ಪ್ರಶ್ನೆ­ಗಳಿವೆ. 130 ವರ್ಷಗಳ ಸುದೀರ್ಘ ಇತಿಹಾಸ ಹೊಂದಿ­ರುವ ಕಾಂಗ್ರೆಸ್‌ ರಾಜಕೀಯವಾಗಿ ಹೇಗೆ ಮೂಲೆಗುಂಪಾಗಿದೆ, ಒಂದು ವರ್ಷದ ಹಿಂದೆ ಹುಟ್ಟಿದ ‘ಆಮ್‌ ಆದ್ಮಿ ಪಕ್ಷ’ ಯಾವ ರೀತಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪು­ಗೊಳ್ಳಲು ಪ್ರಯತ್ನಿಸಿದೆ ಎನ್ನುವ ಸೂಕ್ಷ್ಮಗಳಿವೆ.

ದೆಹಲಿ ವಿಧಾನಸಭೆ ಚುನಾವಣೆ ಮುಗಿ­ಯು­­ವ­ವರೆಗೂ ಕಾಂಗ್ರೆಸ್‌ ಮತ್ತು ಬಿಜೆಪಿಗಳು ಆಮ್‌ ಆದ್ಮಿ ಪಕ್ಷವನ್ನು ಗಂಭೀರವಾಗಿ ಪರಿಗ­ಣಿ­ಸಿ­ರಲಿಲ್ಲ. ‘ಅದೇನು ಮಹಾ?’ ಎಂಬ ಧೋರಣೆ­ಯಲ್ಲಿ ನೋಡಿದ್ದವು. ಆದರೆ, ಸಾಮಾನ್ಯ ಜನ ಮಾತ್ರ ಹೊಸ ಪಕ್ಷದ ಪರ ಬಂಡೆಯಂತೆ ನಿಂತರು. ಒಂದು ವಾರದಲ್ಲಿ ಪ್ರಮುಖ ಪಕ್ಷ­ಗಳ ಧೋರಣೆ ಸಂಪೂರ್ಣ ಬದಲಾಗಿದೆ. ಚುನಾವಣೆ ಫಲಿತಾಂಶ ಈ ಪಕ್ಷದ ಕಡೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

15 ವರ್ಷದಿಂದ ದೆಹಲಿಯಲ್ಲಿ ಆಡಳಿತ ನಡೆ­ಸಿದ್ದ ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ. ಹೈಕಮಾಂಡ್‌ ಮೊದಲ ಬಾರಿಗೆ ಆತ್ಮಾವ­ಲೋಕ­ನದ ಮಾತು ಆಡಿದೆ. ಇದುವರೆಗೆ ಮಾಡಿ­ಕೊಂಡು ಬಂದಿರುವ ರಾಜಕಾರಣ­ವನ್ನು ಬದಿಗೊತ್ತುವ ಅಗತ್ಯವಿದೆ ಎಂದು ಸೋನಿಯಾ ಮತ್ತು ರಾಹುಲ್‌ ಪ್ರತಿಕ್ರಿಯಿಸಿ­ದ್ದಾರೆ. 4 ರಾಜ್ಯಗಳ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ. ಕೇಂದ್ರ ಮತ್ತು ರಾಜ್ಯ­ದಲ್ಲಿ ಸಮರ್ಥ ನಾಯಕರಿಲ್ಲದೆ ಒದ್ದಾಡು­ತ್ತಿ­ರುವ ಈ ಪಕ್ಷ ಹೊಸ ನಾಯಕರಿಗಾಗಿ ಹುಡುಕಾಡುವ ಅಗತ್ಯವಿದೆ.

ಬಿಜೆಪಿಯು ರಾಜಸ್ತಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡ ಚುನಾವಣೆ ಫಲಿತಾಂಶ­ದಿಂದ ಬೀಗಬಹುದು. ಆದರೆ, ದೆಹಲಿ ಚುನಾ­ವಣೆ ಈ ಪಕ್ಷಕ್ಕೂ ದೊಡ್ಡ ಪಾಠ ಕಲಿಸಿದೆ.

ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಪಡೆದ ಪಕ್ಷವಾದರೂ, ಸರ್ಕಾರ ರಚಿಸುವಷ್ಟು ಶಾಸಕರಿಲ್ಲ. ತಾವು ದೆಹಲಿಯಲ್ಲಿ ಅಧಿಕಾರಕ್ಕೆ ಬರುತ್ತೇವೆಂಬ ಆತ್ಮವಿಶ್ವಾಸ ಬಿಜೆಪಿ ನಾಯಕರಿಗಿತ್ತು. ಈ ನಿರೀಕ್ಷೆ ಮಣ್ಣುಪಾಲಾಗಿದೆ.

‘ಬದಲೇಂಗೆ ದಿಲ್ಲಿ, ಬದಲೇಂಗೆ ಭಾರತ್‌’ ಎಂಬ ದೊಡ್ಡ ಜಾಹಿರಾತುಗಳನ್ನು ಎಲ್ಲ ಕಡೆಗಳಲ್ಲೂ ಬಿಜೆಪಿ ಹಾಕಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಡಾ. ಹರ್ಷವರ್ಧನ್‌ ಪಕ್ಕದಲ್ಲಿ ನರೇಂದ್ರ ಮೋದಿ ಇರುವ ಭಾವಚಿತ್ರಗಳು ಕಂಗೊಳಿಸಿದ್ದವು. ಮೋದಿ ಬಹಳಷ್ಟು ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು. ಮತದಾರರು ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಆದರೆ, ಬಿಜೆಪಿ ನಾಯಕರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಆಮ್‌ ಆದ್ಮಿ ಪಕ್ಷದ ಸಾಧನೆ ಹಿಂದೆ ಸಾಕಷ್ಟು ಪರಿಶ್ರಮವಿದೆ. ಒಂದು ವರ್ಷದಿಂದ ಜನರ ಸಮಸ್ಯೆಗಳಿಗಾಗಿ ಹೋರಾಡಿದೆ. ಕೇಂದ್ರದ ಹಗರಣಗಳ ವಿರುದ್ಧ ದನಿ ಎತ್ತಿದೆ. ಮಹಿಳೆಯರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದೆ. ನೀರು ಹಾಗೂ ವಿದ್ಯುತ್‌ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದೆ. ದೆಹಲಿ ಜನರ ದಿನನಿತ್ಯದ ಜಂಜಾಟದ ಪರಿಹಾರಕ್ಕೆ ಪ್ರಯತ್ನಿಸಿದೆ.

ಆದರೆ, ಕಾಂಗ್ರೆಸ್‌ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಹಗರಣಗಳ ಮೇಲೆ ಹಗರಣಗಳು ಬೆಳಕಿಗೆ ಬಂದಿವೆ. ಬೆಲೆ ಏರಿಕೆ ನಿಯಂತ್ರಣಕ್ಕೆ ತರಲಾಗದೆ ಒದ್ದಾಡಿದೆ.  ಇದನ್ನು ಕಂಡೂ ಕಾಣದಂತೆ ಬಿಜೆಪಿ ತೆಪ್ಪಗೆ ಕುಳಿತಿದ್ದು ಸುಳ್ಳೇನಲ್ಲ. ಅದಕ್ಕಾಗಿ ಎರಡೂ ಪಕ್ಷಗಳು ಭಾರಿ ಬೆಲೆ ತೆತ್ತಿವೆ.

ರಾಜಸ್ತಾನದಲ್ಲಿ ಅಶೋಕ್‌ ಗೆಹ್ಲೋಟ್‌ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಆದರೆ, ಕೊನೆಗಳಿಗೆಯಲ್ಲಿ ಜನಪರವಾದ ಯೋಜನೆಗಳನ್ನು ಜಾರಿಗೆ ತಂದರು ಎಂಬ ಅಪವಾದವಿದೆ. ರಾಜ್ಯದಲ್ಲಿ ಆಡಳಿತ ಹಿಡಿದ ಹೊಸದರಲ್ಲಿ ಯೋಜನೆಗಳನ್ನು ಜಾರಿಗೆ ತರಬೇಕಿತ್ತು ಎಂದು ಬಹುತೇಕರು ಹೇಳುತ್ತಾರೆ.

ರಾಜಸ್ತಾನ ಚುನಾವಣೆ ನಡೆದಿದ್ದು ಜಾತಿ ಆಧಾರದ ಮೇಲೆ. ಜಾಟರು ಹಾಗೂ ರಜಪೂತರು ಪ್ರಬಲ ಸಮುದಾಯ. ಅಶೋಕ್‌ ಗೆಹ್ಲೋಟ್‌ ಹಿಂದುಳಿದ ಆ ರಾಜ್ಯದಲ್ಲಿ ನಗಣ್ಯವಾದ ಮಾಲಿ ಸಮುದಾಯಕ್ಕೆ ಸೇರಿದವರು. ಪ್ರಬಲ ಸಮುದಾಯ ಹಿಂದುಳಿದ ಜಾತಿ ನಾಯಕತ್ವವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಬಹಳಷ್ಟು ಜಾತಿಗಳ ಜನ ಅವರನ್ನು ಇಷ್ಟ ಪಡುವುದಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಗೊತ್ತಿರುವ ಸತ್ಯ. ಅಷ್ಟೇ ಅಲ್ಲ, ಈ ಸಲ ಅಲ್ಪಸಂಖ್ಯಾತ ಮುಸ್ಲಿಮರು, ಹಿಂದುಳಿದ ಜಾತಿಗಳವರು ಮತ್ತು ಆದಿವಾಸಿಗಳು ಗೆಹ್ಲೋಟ್‌ ಅವರನ್ನು ಕೈಬಿಟ್ಟಿದ್ದಾರೆ.

ಗೆಹ್ಲೋಟ್‌ ಆಡಳಿತವನ್ನು ಹಿಂದಿನ ಐದು ವರ್ಷಗಳ ವಸುಂಧರರಾಜೆ ಆಡಳಿತಕ್ಕೆ ಹೋಲಿಕೆ ಮಾಡಿ ನೋಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ ರಾಜಮನೆತನಕ್ಕೆ ಸೇರಿರುವ ವಸುಂಧರಾ ರಾಜೆ ಮದುವೆ ಆಗಿರುವುದು ರಾಜಸ್ತಾನದ ಜಾಟ್‌ ರಾಜಮನೆತನಕ್ಕೆ. ಹೀಗಾಗಿ ಜಾಟ್‌ ಮತ್ತು ರಜಪೂತ ಸಮುದಾಯಗಳೆರಡೂ ವಸುಂಧರಾ ಅವರನ್ನು ಬೆಂಬಲಿಸಿವೆ. ರಾಜಸ್ತಾನದಲ್ಲಿ ಎರಡು ದಶಕಗಳಿಂದಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಕೈ ಬದಲಾಗುತ್ತಾ ಬಂದಿದೆ. ವಸುಂಧರಾ ಅವರು ಕೆಲವು ಬಿಜೆಪಿ ನಾಯಕರಂತೆ ಕಟ್ಟಾ ಹಿಂದುತ್ವವಾದಿಯಲ್ಲ. ಹೀಗಾಗಿ ಅವರನ್ನು ಜನರು ಬೆಂಬಲಿಸುತ್ತಿದ್ದಾರೆ.

ಮಧ್ಯ ಪ್ರದೇಶದಲ್ಲಿ ಶಿವರಾಜ್‌ಸಿಂಗ್‌ ಚೌಹಾಣ್‌, ಛತ್ತೀಸಗಡದಲ್ಲಿ ರಮಣ್‌ಸಿಂಗ್‌ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಇವರಿಬ್ಬರೂ ತಮ್ಮ ವರ್ಚಸ್ಸು ಮತ್ತು ಕಾರ್ಯಕ್ರಮದ ಬಲದಿಂದ ಮೂರನೇ ಸಲ ಅಧಿಕಾರಕ್ಕೆ ಬಂದಿದ್ದಾರೆ. ಛತ್ತೀಸಗಡದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನಿಸಿತ್ತು. ಅಧಿಕಾರಕ್ಕೆ ಬರಬಹುದು ಎನ್ನುವ ವಾತಾವರಣವೂ ನಿರ್ಮಾಣವಾಗಿತ್ತು. ನಕ್ಸಲೀಯರ ಹಾವಳಿ ಇರುವ ಬಸ್ತರ್‌ ಭಾಗದಲ್ಲಿ ಮೇ 25ರಂದು ನಡೆದ ರಾಜ್ಯ ಕಾಂಗ್ರೆಸ್‌ ನಾಯಕರ ಹತ್ಯೆ ಪ್ರಕರಣದ ಅನುಕಂಪವನ್ನು ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿತ್ತು. ಕೊನೆ ಗಳಿಗೆಯಲ್ಲಿ ಮುಗ್ಗರಿಸಿತು.

ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಒಂದು ಡಜನ್‌ಗೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಈ ಬಂಡಾಯ ಶಮನ ಮಾಡಲು ನಡೆದ ಪ್ರಯತ್ನ ಸಹಜವಾಗಿಯೇ ಫಲಕಾರಿಯಾಗಲಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿದ ಸೋನಿಯಾ ಗಾಂಧಿ ಅವರು, ‘ಛತ್ತೀಸಗಡದಲ್ಲಿ ಗೆಲ್ಲುವ ವಿಶ್ವಾಸವಿತ್ತು; ಅದೂ ಕೈತಪ್ಪಿತು’ ಎಂದು ವಿಷಾದಿಸಿದರು. ಆ ರಾಜ್ಯದಲ್ಲಿ ಏನಾಯಿತು ಎಂಬುದು ಅವರ ಗಮನಕ್ಕೆ ತಡವಾಗಿ ಬಂದಂತೆ ಕಾಣುತ್ತದೆ.

ಕಾಂಗ್ರೆಸ್‌ ಒಂದು ವಿಷಯದಲ್ಲಿ ಸಮಾಧಾನಪಟ್ಟುಕೊಳ್ಳಬಹುದಾಗಿದೆ. ಬಸ್ತರ್‌ ಭಾಗದ 12 ವಿಧಾನಸಭಾ ಕ್ಷೇತ್ರಗಳಲ್ಲಿ ಎಂಟು ಕಾಂಗ್ರೆಸ್‌ ಮಡಿಲಿಗೆ ಮರಳಿವೆ.  2008ರ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಆ ಪಕ್ಷ ಈ ಭಾಗದಲ್ಲಿ ಗೆದ್ದಿತ್ತು.

ಮಧ್ಯಪ್ರದೇಶದಲ್ಲಿ  ಗುಂಪುಗಾರಿಕೆಗೆ ಕಾಂಗ್ರೆಸ್‌ ಬಲಿಯಾಗಿದೆ. ದಿಗ್ವಿಜಯ್‌ ಸಿಂಗ್‌, ಕಮಲನಾಥ್‌, ಕಾಂತಿಲಾಲ್ ಭುರಿಯಾ, ಅಜಯ್‌ ಸಿಂಗ್‌ ಹೀಗೆ ಒಬ್ಬೊಬ್ಬರದು ಒಂದೊಂದು ಗುಂಪು.

ಗುಂಪುಗಾರಿಕೆಗೆ ಕಡಿವಾಣ ಹಾಕಲು ಜ್ಯೋತಿರಾದಿತ್ಯ ಸಿಂದಿಯಾ ಅವರಿಗೆ ಪ್ರಚಾರ ಸಮಿತಿ ನೇತೃತ್ವ ವಹಿಸಲಾಗಿತ್ತು. ಆದರೆ ತಡವಾಗಿ ಈ ನೇಮಕ ಮಾಡಲಾಯಿತು. ಮೊದಲೇ  ಈ ಕೆಲಸ ಮಾಡಿದ್ದರೆ ಸ್ವಲ್ಪ ಪರಿಸ್ಥಿತಿ ಸುಧಾರಣೆ ಕಾಣುತಿತ್ತು ಎಂಬ ವಾದಗಳಿವೆ. ಅದು ಏನೇ ಇರಲಿ, ಮಧ್ಯ ಪ್ರದೇಶದ ಗೆಲುವು ಶಿವರಾಜ್‌ ಅವರ ಗೆಲುವು. ಅವರು ಏಕಾಂಗಿಯಾಗಿ ಪಕ್ಷವನ್ನು ದಡ ಮುಟ್ಟಿಸಿದ್ದಾರೆ. ಈ ಗೆಲುವಿನಲ್ಲಿ ಮೋದಿ ಅವರ ಪಾತ್ರ ಕಡಿಮೆ.

ಮಧ್ಯ ಪ್ರದೇಶದಲ್ಲಿ ಶಿವರಾಜ್‌ ಅವರಿಗೆ ಸಿಕ್ಕಿರುವ ಗೆಲುವಿನ ಅಂತರ 2012ರಲ್ಲಿ ನಡೆದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲೂ ಮೋದಿ ಅವರಿಗೆ ಸಿಕ್ಕಿಲ್ಲ. ಹಿಂದಿನ ಚುನಾವಣೆಗಿಂತ ಈ ಚುನಾವಣೆಯಲ್ಲಿ ಶಿವರಾಜ್‌ ಅವರು ಪಕ್ಷದ ಬಲವನ್ನು ಹೆಚ್ಚು ಮಾಡಿದ್ದಾರೆ. ಆದರೆ, ಮೋದಿ ಅವರ ಶಕ್ತಿ ಅವರ ರಾಜ್ಯದಲ್ಲಿ ಚುನಾವಣೆಯಿಂದ ಚುನಾವಣೆಗೆ ಕಡಿಮೆ ಆಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಲೋಕಸಭೆ ಚುನಾವಣೆ ಮುನ್ನ ನಡೆದಿರುವ ಐದು ರಾಜ್ಯಗಳ ಚುನಾವಣೆಯನ್ನು ‘ಮಹಾ ಸೆಮಿಫೈನಲ್‌’ ಎಂದೇ ಬಣ್ಣಿಸಲಾಗಿದೆ. ಮೋದಿ ಮತ್ತು ರಾಹುಲ್‌ ನೇತೃತ್ವದಲ್ಲಿ ಚುನಾವಣೆಗಳು ನಡೆದಿವೆ. ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದರೂ, ದೆಹಲಿಯಲ್ಲಿ ಮುಗ್ಗರಿಸಿದೆ. ಕಾಂಗ್ರೆಸ್‌ ಎಲ್ಲ ಕಡೆ ಹೀನಾಯವಾಗಿ ಸೋತು ಮುಖ ಕಳೆದುಕೊಂಡಿದೆ.

‘ನಾವು ಎಲ್ಲಿ ಎಡವಿದ್ದೇವೆ. ಜನ ನಮ್ಮಿಂದ ಏನು ನಿರೀಕ್ಷಿಸಿದ್ದರು? ನಾವೇನು ಮಾಡಿದ್ದೇವೆ‘ ಎಂದು ಹಿಂತಿರುಗಿ ನೋಡಿಕೊಳ್ಳಲು ಇದು ಕಾಂಗ್ರೆಸ್ಸಿಗೆ ಸಕಾಲ. ರಾಷ್ಟ್ರರಾಜಧಾನಿಯ ಗದ್ದುಗೆ ಮೇಲೆ ಕಣ್ಣು ಇಟ್ಟಿರುವ ಬಿಜೆಪಿಗೆ ದೆಹಲಿ  ಫಲಿತಾಂಶವೂ ಚಿಂತೆಗೀಡು ಮಾಡುವಂಥದು. ಎರಡೂ ಪಕ್ಷಗಳು ಲೋಕಸಭೆ ಚುನಾವಣೆಗೆ ಸಜ್ಜಾಗಲು ಹೆಚ್ಚು ಸಮಯವೇನೂ ಉಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT