ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಹಾ ಬಿಚ್ಚಿಟ್ಟ ಸೈಫೀನಾ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಅವರಿಬ್ಬರಲ್ಲಿ ಪರಸ್ಪರ ನಿಷ್ಠೆ ಇದೆ. ಗೌರವ ಇದೆ. ಸಂಬಂಧದ ಬಗ್ಗೆ ಬದ್ಧತೆಯೂ ಇದೆ. ಕಳೆದ ಐದು ವರ್ಷಗಳಿಂದ ಅವರಿಬ್ಬರನ್ನೂ ಗಮನಿಸಿರುವ ನನಗೆ ಇದೇ ಅಂಶಗಳು ಖುಷಿ ನೀಡುತ್ತವೆ~ ಹೀಗೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಬಗ್ಗೆ ವಿಶ್ಲೇಷಿಸಿರುವುದು ಸೈಫ್ ತಂಗಿ ಸೋಹಾ ಅಲಿ ಖಾನ್.

ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸೋಹಾ ಈ ಮದುವೆ ಹಾಗೂ ಇವರಿಬ್ಬರ ಸಂಬಂಧದ ಬಗ್ಗೆ ಬಲು ಅಕ್ಕರೆಯಿಂದ ಮಾತನಾಡಿದರು. `ಹೌದು, ಇದು ಬಹುದಿನಗಳಿಂದ ಚರ್ಚೆಯಲ್ಲಿರುವ ಬಲು ನಿರೀಕ್ಷಿತ ಮದುವೆ. ಕೇವಲ ಚಿತ್ರೋದ್ಯಮ ಮಾತ್ರವಲ್ಲ, ಅಭಿಮಾನಿ ಬಳಗವೂ ಈ ಮದುವೆಗಾಗಿ ಕಾಯುತ್ತಿದೆ.

ಆದರೆ ಸೈಫ್ ಕುಟುಂಬದವರಾಗಿ ನಮಗೆ ಇದೊಂದು ಅತಿ ಮಹತ್ವದ ಸಂದರ್ಭವಾಗಿದೆ. ನಾವೆಲ್ಲರೂ ಕಳೆದ ಐದು ವರ್ಷಗಳಿಂದ ಅವರಿಬ್ಬರನ್ನೂ ಗಮನಿಸುತ್ತಿದ್ದೇವೆ. ಚಿತ್ರೋದ್ಯಮದಲ್ಲಿ ಸಾಕಷ್ಟು ಬಾಂಧವ್ಯಗಳು ಮುರಿದು ಬಿದ್ದಿವೆ. ಬಿಕ್ಕಟ್ಟಿನಲ್ಲಿವೆ. ಆದರೆ ಇವರಿಬ್ಬರ ನಡುವಿನ ಪರಸ್ಪರ ಗೌರವ, ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಅದೇ ನನಗೆ ಖುಷಿ ನೀಡಿದೆ~ ಎನ್ನುತ್ತಾರೆ.

ಮದುವೆಯಲ್ಲಿ ಈ ಪುಟ್ಟ ತಂಗಿಯ ಜವಾಬ್ದಾರಿಯೇನು ಎಂಬ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದರು... `ನಾನು ಬೇಜವಾಬ್ದಾರಿಯ ಹುಡುಗಿ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಯಾವುದೇ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಿಲ್ಲ. ಮದುವೆಯ ಯಾವ ಕೆಲಸಗಳನ್ನೂ ನಾನು ಮಾಡುತ್ತಿಲ್ಲ~ ಎನ್ನುತ್ತಾರೆ ಅವರು.

ಮದುವೆಗೆ ಪಟೌಡಿ ಮನೆತನದ ಉಡುಗೆ ತೊಡುಗೆಗಳನ್ನೇ ತೊಡುತ್ತಿದ್ದೇವೆ. `ನಾನು ಸೀರೆ, ಸಲ್ವಾರ್, ಘಾಗ್ರಾ~ ಮುಂತಾದ ಸಾಂಪ್ರದಾಯಿಕ ಪೋಷಾಕುಗಳನ್ನೇ ತೊಡುತ್ತಿದ್ದೇನೆ. ಈ ಉಡುಗೆಗಳಿಗೆ ನೂರು ವರ್ಷಗಳ ಇತಿಹಾಸವೂ ಇದೆ. ಅವುಗಳ ಮೇಲೆ ನಿಜವಾದ ಚಿನ್ನ, ಬೆಳ್ಳಿ ಜರಿಯ ಕಸೂತಿ ಕೆಲಸವಿರುವ ನಾಜೂಕಿನ ಉಡುಗೆಗಳು ಅವು~ ಎಂದು ತಮ್ಮ ತಯಾರಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಒಂದು ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಸಂಬಂಧದ ಬಗ್ಗೆ ವಿಶ್ವಾಸವಿದ್ದಲ್ಲಿ ಮಾತ್ರ ಅಂಥ ಮದುವೆಗಳು ಯಶಸ್ವಿಯಾಗುತ್ತವೆ ಎನ್ನುವುದು ಸೋಹಾ ಅವರ ನಂಬಿಕೆಯಂತೆ.

ಮದುವೆಯ ಬಗ್ಗೆ ಇಷ್ಟೆಲ್ಲ ಹರಟಿದ ಸೋಹಾ ತಮ್ಮ ಚಲನಚಿತ್ರಗಳ ಬಗ್ಗೆಯೂ ಒಂದಷ್ಟು ಮಾತನಾಡಿದರು. `ಸಾಹೀಬ್ ಬಿವಿ ಔರ್ ಗ್ಯಾಂಗ್‌ಸ್ಟರ್ 2~ ಚಿತ್ರದ ಪಾತ್ರ ಅತಿ ಆಸಕ್ತಿಕರವಾಗಿದೆ. ನಿರ್ದೇಶಕ ಟಿಗ್ಮಾನ್‌ಶು ಧುಲಿಯಾ ಅತಿ ಸೃಜನಾತ್ಮಕವಾಗಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಾವುದನ್ನೂ ಊಹಿಸುವಂತಿಲ್ಲ.

ಇಡೀ ಚಿತ್ರವೇ ಅನೂಹ್ಯವಾದ ತಿರುವುಗಳಿಂದ ಕೂಡಿದೆ. ಹಾಗಾಗಿ ಕ್ಯಾಮೆರಾ ಮುಂದೆ ಧುಲಿಯಾ ಹೇಳಿದ್ದಷ್ಟನ್ನೇ ಮಾಡುತ್ತಿದ್ದೇನೆ. ಇದೊಂದು ಬಗೆಯ ಹೊಸ ಅನುಭವ. ಆದರೆ ಸಾಕಷ್ಟು ಸಾಮರ್ಥ್ಯ ಇರುವ ಪಾತ್ರವಿದು~ ಎಂದು ಸೋಹಾ ಹೇಳಿಕೊಂಡಿದ್ದಾರೆ.
ಇನ್ನೊಂದು ಪ್ರೊಜೆಕ್ಟ್ `ಚಾರ್ ಫುಟಿಯಾ ಛೋಕರೆ~ ಚಿತ್ರವೂ ವಿಶೇಷವಾಗಿದೆ.

ಇಲ್ಲಿ ಯಾವ ಹೀರೊ ಇಲ್ಲ. ನಾನಿಲ್ಲಿ ಎನ್‌ಆರ್‌ಐ ಯುವತಿಯ ಪಾತ್ರ ನಿರ್ವಹಿಸುತ್ತಿದ್ದೇನೆ.  ಬಿಹಾರ್‌ನ ಕುಗ್ರಾಮವೊಂದರಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುವ ಯುವತಿಯ ಪಾತ್ರ ಅದು. ಇದೊಂದು ಸೂಕ್ಷ್ಮವಾದ ವಿಷಯ ನಿಭಾಯಿಸುವ ಚಿತ್ರವಾಗಿದೆ. ಬಾಲಕಾರ್ಮಿಕ, ಶೋಷಣೆ ವಿಷಯಗಳನ್ನು ಆಧಾರವಾಗಿಟ್ಟುಕೊಂಡಿರುವ ಬಲು ಗಟ್ಟಿಯಾದ ಸ್ಕ್ರಿಪ್ಟ್ ಇದೆ.~ ಎಂದು ತಮ್ಮ ಅಭಿಪ್ರಾಯವನ್ನು ಹೇಳುತ್ತಾರೆ ಸೋಹಾ.

ಫ್ಯಾಶನ್ ಶೋಗಳಲ್ಲಿ ಶೋ ಸ್ಟಾಪರ್ ಆಗಿ ಅವರ ಅನುಭವವನ್ನು ಕೇಳಿದರೆ ಮತ್ತೊಮ್ಮೆ ಸೋಹಾ ನಗೆಮಲ್ಲಿಗೆ ಚೆಲ್ಲುತ್ತಾರೆ. `ರ‌್ಯಾಂಪ್ ಮೇಲೆ ನಟಿಸುವ ಅಗತ್ಯ ಇರುವುದಿಲ್ಲ. ನಿಮ್ಮಷ್ಟಕ್ಕೆ ನೀವಿರಿ ಎಂದು ಹೇಳಲಾಗುತ್ತದೆ.

ಆದರೆ ಅದು ಅತಿ ಕಷ್ಟದ ಕೆಲಸ. ಆದರೆ ಕೇವಲ 30 ಸೆಕೆಂಡುಗಳ ಅವಧಿಯಲ್ಲಿ ನೀವು ಅತ್ಯುತ್ತಮ ದಿರಿಸನ್ನು ಧರಿಸಿ, ಜನರ ಮುಂದೆ ನಿಲ್ಲುವ ಖುಷಿಯೇ ಬೇರೆ~ ಎಂದು ನಗೆಯರಳಿಸುತ್ತಾರೆ ಸೋಹಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT