ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದಲಗಾ ರೇಣುಕಾದೇವಿ ಭಂಡಾರ ಉತ್ಸವ

Last Updated 4 ಏಪ್ರಿಲ್ 2013, 7:06 IST
ಅಕ್ಷರ ಗಾತ್ರ

ನಿಪ್ಪಾಣಿ: ಸಮೀಪದ ಸೌಂದಲಗಾ ಗ್ರಾಮದಲ್ಲಿ ರಂಗಪಂಚಮಿಯಂದು ರೇಣುಕಾದೇವಿ ಭಂಡಾರ ಉತ್ಸವ ವಿಜೃಂಭಣೆಯಿಂದ ಜರುಗಿತು.
ದೇವಿಗೆ ಅಭಿಷೇಕ, ಉರುಳು ಸೇವೆ, ಮಹಾಪೂಜೆ, ಮೆರವಣಿಗೆ, ಆರತಿ ಮಹಾಪ್ರಸಾದ ಮುಂತಾದ ಧಾರ್ಮಿಕ ವಿಧಿಗಳು ನಡೆದವು.

ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ದರ್ಶನ ಪಡೆದರು. ಪ್ರತಿವರ್ಷದಂತೆ ಭಕ್ತರು ನೂರಾರು ಎತ್ತಿನ ಗಾಡಿಗಳ ಮೂಲಕ ಬಂದಿದ್ದು ಗಮನ ಸೆಳೆಯಿತು.

ಜಾತ್ರೆಯ ನಿಮಿತ್ತ ಸಿಹಿತಿಂಡಿ, ಐಸ್ ಕ್ರೀಮ್, ತಂಪು ಪಾನೀಯ, ಆಟದ ಸಾಮಾನುಗಳು ಇತ್ಯಾದಿಗಳ ಮಳಿಗೆ ಗಳು ಸಾಲುಸಾಲಾಗಿ ನಿಲ್ಲಿಸಲಾಗಿತ್ತು. ಬೆಳಗಾವಿ, ನಿಪ್ಪಾಣಿ, ಆಡಿ, ಬೆನಾಡಿ, ಹಂಚಿನಾಳ, ಕುನ್ನುರ, ಭಿವಶಿ, ಯಮಗರ್ಣಿ, ಕುರ್ಲಿ, ಆಪ್ಪಾಚಿವಾಡಿ ಮುಂತಾದ ಅನೇಕ ಊರುಗಳ ಆಗಮಿಸಿ ದರ್ಶನ ಪಡೆದರು.

ಮಂದಿರದ ಹಿನ್ನೆಲೆ: ಸುಮಾರು 300 ವರ್ಷಗಳ ಹಿಂದೆ ಸೌಂದಲಗಾದ ಬಾಬಾ ಪಾಟೀಲರು ರೇಣುಕಾದೇವಿಯ ಭಕ್ತರಾಗಿದ್ದರು. ಅವರು ಸಮೀಪಿದ ಗಳತಗಾ ಗ್ರಾಮದ ಹೊಳೆದಂಡೆಯ ಮೇಲಿನ ರೇಣುಕಾದೇವಿಯ ದರ್ಶನಕ್ಕೆ ಪ್ರತಿ ಮಂಗಳವಾರ ತಪ್ಪದೇ ನಡೆದು ಹೋಗುತ್ತಿದ್ದರು. ಆಗ ಪದ್ಮಾವತಿ ಎಂಬ ದೇವಿಯ ಭಕ್ತಳು ಕುದುರೆಸವಾರಿ ಮಾಡುತ್ತ ಗ್ರಾಮ ಪ್ರದಕ್ಷಿಣೆ ಹಾಕುತ್ತಿದ್ದಳು.

ಅನೇಕ ಕಷ್ಟಗಳು ಬಂದರೂ ತಪ್ಪದೇ ದರ್ಶನಕ್ಕೆ ಹೋಗುತ್ತಿದ್ದರು. ಒಮ್ಮೆ ವೇದಗಂಗಾ ನದಿಗೆ ಪ್ರವಾಹ ಬಂದಾಗ ಕಂಬಳಿಯ ಮೇಲೆ ದೇವಿಯ ಭಂಡಾರ ಒಗೆದು ಅದರ ಕುಳಿತುಕೊಂಡು ನದಿಯನ್ನು ದಾಟಿ ಗಳತಗಾಕ್ಕೆ ದೇವಿ ದರ್ಶನಕ್ಕೆ ಹೋದರು. ಇದನ್ನು ನೋಡಿ ಪದ್ಮಾವತಿಗೆ ಬಹಳ ಆನಂದವಾಗಿ ಪಾಟೀಲರಿಗೆ `ನಿಮ್ಮ ಕಠಿಣ ತಪಶ್ಚರ್ಯೆಯ ಅಂಗವಾಗಿ ನೀವು ಸ್ವತಃ ಭಂಡಾರ ಹಾಕಲು ಸಮರ್ಥರಾಗಿದ್ದೀರಿ. ಈಗ ನೀವು ನಿಮ್ಮ ಊರಲ್ಲೇ ದೇವಿಯ ಸ್ಥಾಪನೆ ಮಾಡಿರಿ' ಎಂದಳು.

ಆ ಪ್ರಕಾರ ಪಾಟೀಲರು ಸೌಂದಲಗಾದಲ್ಲಿ ರೇಣುಕಾದೇವಿಯ ಚಿಕ್ಕ ಮಂದಿರವನ್ನು ಕಟ್ಟಿದರು. ನಂತರ ಬಾಬಾ ಪಾಟೀಲರು ತಮ್ಮ ಅಮೋಘ ಭಕ್ತಿಯಿಂದ ಅನೇಕ ಪವಾಡಗಳನ್ನು ಮಾಡಿದರು. ಅವರ ನಿಧನದ ನಂತರ ಮಂದಿರದ ಪರಿಸರದಲ್ಲಿಯೇ ಅವರನ್ನು ದಹನ ಮಾಡಲಾಯಿತು. ಅವರ ನಂತರ ಅವರ ಮಗ ಅಪ್ಪಾ ಪಾಟೀಲ (ಗಲಗಲೆ) ಇವರು ಮಂದಿರದ ಉಸ್ತುವಾರಿಯ ಹೊಣೆ ಸ್ವೀಕರಿಸಿ ದೇವಿಯ ಪೂಜೆ ಮಾಡುತ್ತಿದ್ದರು.

ಅವರ ನಂತರ ಅವಬಾ ಪಾಟೀಲ (ಗಲಗಲೆ) ಇವರು ಸುಮಾರು 40ವರ್ಷ ದೇವಿಯ ಸೇವೆ ಮಾಡಿದರು. `ತಮ್ಮಲ್ಲಿರುವ ಸಾತ್ವಿಕ ಶಕ್ತಿಯಿಂದಾಗಿ ಅವರಾಡಿದ ಮಾತುಗಳು ನಿಜವಾಗುತ್ತಿದ್ದವು. ಅವರೂ ಅನೇಕ ಪವಾಡಗಳನ್ನು ಮಾಡಿದ್ದಾರೆ. ಮಂದಿರದ ಜೀರ್ಣೋದ್ಧಾರ ಸಹಿತ ಶಿಖರ, ಮಂಟಪದ ಕೆಲಸಗಳನ್ನು ಪೂರ್ಣಗೊಳಿಸಿದರು. ಇವರು 1979ರಲ್ಲಿ ದೇಹಬಿಟ್ಟ ನಂತರ ಮಂದಿರದ ಹಿಂಬದಿಯಲ್ಲಿ ಅವಬಾ ಪಾಟೀಲರ ಸ್ಮಾರಕ ಸ್ಥಾಪಿಸಲಾಯಿತು. ಇಂದು ಭಕ್ತರು ದೇವಿಯ ಜತೆಗೆ ಅವಬಾ ಪಾಟೀಲರ ಸ್ಮಾರಕದ ದರ್ಶನವೂ ತಪ್ಪದೇ ತೆಗೆದುಕೊಳ್ಳುತ್ತಾರೆ.

ಇಲ್ಲಿ ದೇವದಾಸಿ ಪದ್ಧತಿಯಂತೆ ಯಾವುದೇ ಮೂಢನಂಬಿಕೆಗಳು ನಡೆ ಯದಿರುವುದು ಈ ದೇವಸ್ಥಾನದ ವೈಶಿಷ್ಠ್ಯ. ಮಂದಿರದಲ್ಲಿ ದಿನನಿತ್ಯ ಬೆಳಿಗ್ಗೆ 8ರಿಂದ 11 ಮತ್ತು ಸಂಜೆ 6ರಿಂದ ರಾತ್ರಿ 9ರವರೆಗೆ ಪೂಜೆ, ನೈವೇದ್ಯ, ಆರತಿ ನಡೆಯುತ್ತದೆ. ಪ್ರತಿ ಮಂಗಳ ವಾರ 11 ರಿಂದ 12ರ ವರೆಗೆ ಕುದು ರೆಯ ಮೆರವಣಿಗೆ ಮತ್ತು ಹುಣ್ಣಿಮೆ ಯಂದು ಮಹಾಪ್ರಸಾದ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT