ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯಕ್ಕೆ ಕಾದಿದೆ ಪ್ರಾಚೀನ ತಲ್ಲೂರು

Last Updated 8 ಸೆಪ್ಟೆಂಬರ್ 2011, 12:00 IST
ಅಕ್ಷರ ಗಾತ್ರ

ಅರೆ ಮಲೆನಾಡಿನಲ್ಲಿಯೂ ಸದಾ ನೀರು ತುಂಬಿರುವ ದೊಡ್ಡ ಕೆರೆ, ಯಥೇಚ್ಚ ಬೆಳೆ. ಊರಿನ ತುಂಬಾ ಐತಿಹಾಸಿಕ ಮಹತ್ವ ಸಾರುವ ಪ್ರಾಚೀನ ಶಿಲ್ಪಗಳು, ವಿಶೇಷ ದಿನಗಳಲ್ಲಿ ಆಗಮಿಸುವ ನೂರಾರು ಭಕ್ತರು -ಈ ಎಲ್ಲ ಘನತೆಯ ನಡುವೆ ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಗ್ರಾಮವಾಗಿ ಸೊರಬ ತಾಲ್ಲೂಕಿನ ತಲ್ಲೂರು ಕಂಡು ಬರುತ್ತದೆ.

ತಡೆಯೂರು-ತಲೆಯೂರು
ಪ್ರಸ್ತುತ ಗ್ರಾಮ ಪಂಚಾಯ್ತಿ ಕೇಂದ್ರವಾಗಿದ್ದು, ಹೊಸ ತಲ್ಲೂರು, ಹಳೇ ತಲ್ಲೂರು ಎಂಬ ಎರಡು ಭಾಗಗಳಿವೆ. ಸುಮಾರು 2 ಸಾವಿರ ಜನಸಂಖ್ಯೆ ಇದೆ. ಬನವಾಸಿ 12,000 ಪ್ರಾಂತ್ಯದ, ನಾಗರಖಂಡ-70ರ ಪ್ರಮುಖ ಕೇಂದ್ರ, ಪಾಳೆಪಟ್ಟು (ಪಾಳೆಗಾರರ ವಾಸ ಸ್ಥಳ) ಆಗಿತ್ತು. `ತಡೆಯೂರು~ `ತಲೆ ಊರು~ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎನ್ನಲಾಗಿದೆ.

ಗ್ರಾಮ ಐತಿಹ್ಯ: ಕ್ರಿ.ಶ. 10ರಿಂದ 14ನೇ ಶತಮಾನದಲ್ಲಿ ರಾಜಾಡಳಿತವಿತ್ತು. 11ನೇ ಶತಮಾನದ ಆರಂಭದ ರಾಷ್ಟ್ರಕೂಟರ ಕಾಲದ ಶಾಸನದಲ್ಲಿ ಈಶ್ವರ ದೇಗುಲ ಕಟ್ಟಿಸಲಾಗಿದೆ. 1,168ರಲ್ಲಿ ಕಲಚೂರಿ ವಂಶದ ಮುರಾರಿ ಸೋಮದೇವನ ಕಾಲದಲ್ಲಿ ಗ್ರಾಮದ ಗಾವುಂಡರಾದ ತಾರಕಗೌಡ, ಕಾಳಗೌಡ ಕಲ್ಲೇಶ್ವರ ದೇಗುಲ ಕಟ್ಟಿಸಿದರು ಎಂದು ಶಾಸದಲ್ಲಿ ಉಲ್ಲೇಖವಿದೆ.

ಗ್ರಾಮದಲ್ಲಿರುವ ಪ್ರಾಚೀನ ಅವಶೇಷಗಳನ್ನು ಗಮನಿಸಿದರೆ ಇನ್ನೂ ಹಳೆಯ ಇತಿಹಾಸ ಗ್ರಾಮಕ್ಕೆ ಇರಬಹುದು. 12ಕ್ಕೂ ಹೆಚ್ಚು ಶಾಸನಗಳು ಕಂಡು ಬಂದಿದ್ದು, ಅನೇಕ ವೀರರ ಮರಣದ ಬಗ್ಗೆ ತಿಳಿಸುತ್ತವೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ.

ಹಳೇ ತಲ್ಲೂರಿನ ಹಾದಿಯಲ್ಲಿ ಸಾಗುತ್ತಾ ಹೋದಂತೆ ರಸ್ತೆ ಬದಿ ಮಣ್ಣು, ಕೆಸರಿನಲ್ಲಿ ಹೂತು ಹೋದ ಪ್ರಾಚೀನ ಮಾಸ್ತಿಕಲ್ಲು, ವೀರಗಲ್ಲು, ಶಾಸನಗಳು ಅಲ್ಲಲ್ಲಿ ಕಂಡು ಬರುತ್ತವೆ.

ಶ್ರಾವಣ ಮಾಸ, ವಿಜಯದಶಮಿ ಸಂದರ್ಭಗಳಲ್ಲಿ ಸಾವಿರಾರು ಜನರಿಂದ ಪೂಜೆ ಪಡೆಯುವ ಕೆಳದಿ ಅರಸರ ಕಾಲದ ಬಸವೇಶ್ವರ ನೆಲೆ ಕಳೆದುಕೊಳ್ಳುವ ಆತಂಕದಲ್ಲಿದ್ದಾನೆ. ಸುಮಾರು ಕ್ರಿ.ಶ. 16ನೇ ಶತಮಾನದ ಇತಿಹಾಸ ಹೊಂದಿದ್ದು, ಆಕರ್ಷಕ ನಂದಿಸ್ಥಂಭ ದೇಗುಲದ ಎದುರಿಗಿದೆ. ಪ್ರಾಚೀನ ದೇಗುಲದ ಕಂಬ, ಬಿಡಿಭಾಗಗಳು ಎದುರಿಗೆ ಅನಾಥವಾಗಿ ಬಿದ್ದಿವೆ. ಮುಜರಾಯಿ ಇಲಾಖೆಗೆ ಸೇರಿದ್ದು, ದೇಗುಲ ಅಭಿವೃದ್ಧಿಗೆ ಮಾಡಿರುವ ಮನವಿಗೆ ಯಾವುದೇ ಪುರಸ್ಕಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಕೊಮಾರಾಮಪ್ಪನ (ರಾಮಂತಪ್ಪ) ದೇವಸ್ಥಾನ ಶಿಥಿಲಗೊಂಡು ಉರುಳುವ ಹಂತ ತಲುಪಿದ್ದರೆ, ಪುಷ್ಕರಣಿ ಎದುರಿಗಿರುವ ಭವ್ಯ ದೇಗುಲವಾಗಿದ್ದ ಕಲ್ಲೇಶ್ವರ (ಕಲಿ ದೇವರು) ದೇಗುಲ ಮರಗಿಡ, ಪೊದೆಗಳು ಬೆಳೆದು ಮುಚ್ಚಿಹೋಗಿದ್ದು, ರಕ್ಷಣೆಗಾಗಿ ಮೊರೆ ಇಡುತ್ತಿರುವಂತೆ ಭಾಸವಾಗುತ್ತದೆ.

ಸಪ್ತಮಾತೃಕೆ, ಗಣಪತಿ, ಶಿವಲಿಂಗ, ಮಹಿಷಮರ್ಧಿನಿ ಶಿಲ್ಪಗಳು ಒಳ ಭಾಗದಲ್ಲಿವೆ. ನಾಗರ ಹೊಂಡದ ದಡದಲ್ಲಿ ಗಜಲಕ್ಷ್ಮೀ, ಶಕ್ತಿ ಆರಾಧನೆಯ ಕೋಣನತಲೆ ಹಾಗೂ ಹುಲಿಯಪ್ಪನ ಶಿಲ್ಪ, ದಿಬ್ಬದ ಮೇಲೆ ಪುರಾತನ ನೆಲಗಟ್ಟು, ಹೆಂಚು, ಒರಳು ಕಲ್ಲುಗಳು, ಕೋಟೆಯ ಅವಶೇಷ ಕಂಡು ಬರುತ್ತವೆ. ಪಾಳೆಗಾರರ ವಂಶಸ್ಥರು ಎನ್ನಲಾದ ಹುಡೇದ ನಾಯ್ಕರ ಕೆಲ ಕುಟುಂಬಗಳು ಇಂದಿಗೂ ಇಲ್ಲಿವೆ.

ಪೌರಾಣಿಕ ಹಿನ್ನೆಲೆಯ ನಾಗರಹೊಂಡ
ಊರಿನ ಅಂತಿಮ ಭಾಗದಲ್ಲಿರುವ ನಾಗರಹೊಂಡ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದ್ದು, ಹಾವು ಹಾಗೂ ಸ್ತ್ರೀಯೊಬ್ಬಳ ಸಂಬಂಧದಿಂದ ಜನಿಸಿ, ಮನೆಯ ಸದಸ್ಯನಂತೆ ಇದ್ದ ನಾಗರಹಾವೊಂದು ಸಿಂಬಿ ಸುತ್ತಿ ಮಲಗಿದ್ದಾಗ ಅದರ ಮೇಲೆ ಬಿಸಿಯಾದ ಅಕ್ಕಿಯ ಪಾಯಸದ ಪಾತ್ರೆ ಇಟ್ಟ ಪರಿಣಾಮವಾಗಿ ಹಾವು ಸಾವನ್ನಪ್ಪಿದ್ದು, ಇದರಿಂದ ನೊಂದ ಮಹಿಳೆ ಅದರೊಂದಿಗೆ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ನಂಬಿಕೆಯಿದೆ.

ಕನ್ನೇಶ್ವರ ರಾಮನ ನೆಚ್ಚಿನ ತಾಣ: ಪ್ರಖ್ಯಾತ ಚೋರ ಕನ್ನೇಶ್ವರ ರಾಮನ ನೆಚ್ಚಿನ ತಾಣ ಇದಾಗಿತ್ತು. ಇಲ್ಲಿನ ಅಕ್ಕಿ ಹಪ್ಪಳ ಆತನಿಗೆ ಪ್ರಿಯವಾಗಿತ್ತು. ಕದ್ದ ನಗನಾಣ್ಯ ಮುಚ್ಚಿಟ್ಟು, ನಂತರ ಹಂಚುತ್ತಿದ್ದ ಎಂಬುದು ಇಲ್ಲಿನ ಹಿರಿಯರ ಸ್ಮರಣೆ.

ಶನೀಶ್ವರ ದೇಗುಲ: ಗ್ರಾಮದ ಮಂಜಪ್ಪ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಿ, ಇಂದಿಗೂ ನಿರ್ವಹಿಸಿಕೊಂಡು ಬರುತ್ತಿರುವ ಶನಿದೇವರ ದೇಗುಲಕ್ಕೆ ಪ್ರತಿ ಶನಿವಾರ ನೂರಾರು ಭಕ್ತರು ಆಗಮಿಸುತ್ತಾರೆ. ಅನ್ನ ಸಂತರ್ಪಣೆ ನಡೆಯುತ್ತದೆ. ಹರಕೆ-ಹೇಳಿಕೆಗೆ ಪ್ರಸಿದ್ಧಿಯಾಗಿದ್ದು, ಯುಗಾದಿ ನಂತರ ಬರುವ ಶನಿವಾರ ನಡೆಯುವ ಜಾತ್ರೆಗೆ ದೂರದ ಊರುಗಳಿಂದ ಬರುವ ಭಕ್ತರಿಗೆ ತಂಗಲು ಸೂಕ್ತ ವ್ಯವಸ್ಥೆಯಿಲ್ಲ ಎಂಬುದು ಗ್ರಾಮಸ್ಥ ರಮೇಶನ ಕೊರಗು.

ಮೂಲಸೌಕರ್ಯ ಕೊರತೆ

ಐತಿಹಾಸಿಕ ಪುರಾವೆಗಳ ಖಜಾನೆ ಆಗಿರುವ ಹಳೇ ತಲ್ಲೂರು ಈವರೆಗೆ ಸರಿಯಾದ ರಸ್ತೆಯನ್ನೇ ಕಂಡಿಲ್ಲ ಎನ್ನುವ ಗ್ರಾಮಸ್ಥರಾದ ರಾಜಪ್ಪ, ಈಶ್ವರ. ಕಾಲುವೆ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ ಸಕಾಲಕ್ಕೆ ಆಗದೇ ನಡೆದಾಡುವುದೇ ಕಷ್ಟ ಎಂಬಂತಹ ಸ್ಥಿತಿ ತಲುಪಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಕಂಡು ಬರುತ್ತದೆ. ತಾಲ್ಲೂಕು ಆಡಳಿತ ಇತ್ತ ಗಮನ ಹರಿಸಬೇಕಿದೆ ಎನ್ನುತ್ತಾರೆ.

ಉಪನ್ಯಾಸಕರ ಕಳಕಳಿ
ಗ್ರಾಮದಲ್ಲಿರುವ ಪ್ರಾಚೀನ ಮಾಸ್ತಿಕಲ್ಲು, ವೀರಗಲ್ಲು, ಮೊದಲಾದ ಶಿಲ್ಪಗಳು ಕಲೆ, ತ್ಯಾಗ, ವೀರತ್ವದ ಸಂಕೇತಗಳಾಗಿವೆ ಎನ್ನುವ ಆನವಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಎಚ್.ಟಿ. ಕರಿಬಸಪ್ಪ, ಕೆ.ಎಸ್. ಚಂದ್ರಕಾಂತ್, ಉಮೇಶ್ ಮತ್ತಿತರರು, ಇನ್ನೂ ಉತ್ತಮ ಸ್ಥಿತಿ ಕಾಪಾಡಿಕೊಂಡು ಬಂದಿರುವ ಅಮೂಲ್ಯ ಶಿಲ್ಪ ಕಲಾಕೃತಿ ರಕ್ಷಣೆಗೆ ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕು. ಗ್ರಾಮಸ್ಥರಿಗೆ ಅವುಗಳ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಕಳಕಳಿ ವ್ಯಕ್ತಪಡಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT