ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯದ ಮಾತು ಕತೆ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿ ಅತಿಥಿ
ಚಾರ್ಟೆರ್ಡ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ವಿಯೆನ್ನಾ ವಿವಿಯೊಂದಿಗೆ ಸೇರಿ ಸೌಕರ್ಯ ವ್ಯವಸ್ಥಾಪಕರಿಗಾಗಿ (ಫೆಸಿಲಿಟಿ ಮ್ಯಾನೇಜರ್ಸ್‌) ವಿಶೇಷ ತರಬೇತಿ ನಡೆಸಲಿದೆ.

ಈ ಯೋಜನೆಯ ಉದ್ಘಾಟನೆಗಾಗಿ ವಿಯೆನ್ನಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಪ್ರೊ. ಅಲೆಕ್ಸಾಂಡರ್ ರೆಡ್ಲೈಯಿನ್ ನಗರಕ್ಕೆ ಆಗಮಿಸಿದ್ದರು. `ಮೆಟ್ರೊ~ಗೆ ಮಾತಿಗೆ ಸಿಕ್ಕಾಗ ಅವರು ಹೇಳಿದ್ದಿಷ್ಟು...

ಏನಿದು ಸೌಕರ್ಯ ನಿರ್ವಹಣೆ?
ಸೌಲಭ್ಯ ಹಾಗೂ ಸೇವಾಕ್ಷೇತ್ರದಲ್ಲಿ ಸಂಕೀರ್ಣತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಕಂಪೆನಿಯೊಂದರ ಸೌಕರ್ಯ ನಿರ್ವಹಣೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಶಕ್ತಿ, ಸಾಗಾಣಿಕೆ, ತಾಣ ಮತ್ತು ಮಾನವ ಸುರಕ್ಷತೆ ಮೊದಲಾದ ಕ್ಷೇತ್ರಗಳಲ್ಲಿ ನಿರ್ವಾಹಕ ವೃತ್ತಿನಿರತರು ತಮ್ಮ ದಕ್ಷತೆ ಹಾಗೂ ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ಖಾತರಿಪಡಿಸಬೇಕಾಗುತ್ತದೆ.

ಪ್ರತಿಯೊಂದು ಯಶಸ್ವಿ ಸಂಸ್ಥೆಯ ಹಿಂದೆ ಸೌಕರ್ಯ ನಿರ್ವಹಣೆಯ ತಂಡವೊಂದು ಕೆಲಸ ನಿರ್ವಹಿಸುತ್ತಿರುತ್ತದೆ. ಹೀಗಾಗಿ  ಬೆಂಗಳೂರಿನಂತಹ ಮೆಟ್ರೊ ನಗರಿಯಲ್ಲಿ ಸೌಕರ್ಯ ನಿರ್ವಹಣೆ ಕುರಿತು ವಿಶೇಷ ಪಾಠ ಹೇಳುವುದು ಅಗತ್ಯವಿದೆ.

ಈ ಒಡಂಬಡಿಕೆ ಬಗ್ಗೆ?
ಸೌಕರ್ಯ ನಿರ್ವಹಣೆ ಭಾರತದ ಮಟ್ಟಿಗೆ ಹೊಸ ಪರಿಕಲ್ಪನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೌಕರ್ಯ ವ್ಯವಸ್ಥಾಪಕರಿಗಾಗಿ ಬೇಡಿಕೆಗಳಿದ್ದರೂ ಅವರನ್ನು ತಯಾರು ಮಾಡುವ ತರಬೇತಿಗಳಿಲ್ಲ.

ಎಂಬಿಎ ಕೋರ್ಸ್ ಈ ಬಗ್ಗೆ ಮಾಹಿತಿ ನೀಡಿದರೂ ಅದು ಪರಿಪೂರ್ಣ ವ್ಯವಸ್ಥಾಪಕರನ್ನು ತಯಾರಿಸುವುದಿಲ್ಲ. ಹೀಗಾಗಿ ನಿರ್ವಹಣೆ, ಯೋಜನೆ ಮತ್ತು ತಾಂತ್ರಿಕ ವ್ಯವಸ್ಥಾಪನೆ, ನಿರ್ವಹಣಾ ಸೇವೆ ಸಲ್ಲಿಸುತ್ತಿರುವ ವೃತ್ತಿನಿರತರಿಗಾಗಿಯೇ ಈ ಕೋರ್ಸ್ ಆರಂಭವಾಗಲಿದೆ. 

ಈ ಕೋರ್ಸ್ ಹೊಸದೇ? ಭಾರತವನ್ನೇ ಏಕೆ ಆಯ್ದುಕೊಂಡಿರಿ?
ಅಲ್ಲ. ಹೊಸದೇನನ್ನೂ ನಾವು ಪರಿಚಯಿಸುತ್ತಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ವಿವಿಯಲ್ಲಿ ಇದನ್ನು ಪಠ್ಯವಾಗಿ ಬೋಧಿಸುತ್ತಿದ್ದೇವೆ. ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ.

ಏಳು ದಶಲಕ್ಷದಷ್ಟಿರುವ ಈ ಅವಕಾಶ ಮುಂದಿನ ಐದು ವರ್ಷಗಳಲ್ಲಿ ಇಪ್ಪತ್ತು ದಶಲಕ್ಷದಷ್ಟು ಬೆಳೆಯಲಿದೆ. ಈ ಬೇಡಿಕೆಯನ್ನು ಪೂರೈಸಲು ಉತ್ತಮ ಮಾನವ ಸಂಪನ್ಮೂಲವನ್ನು ವೃದ್ಧಿಪಡಿಸುವುದು ನಮ್ಮ ಜವಾಬ್ದಾರಿಯೂ ಹೌದು. ಈಗಾಗಲೇ ಆರು ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರಗತಿಪರ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ.

ಪಠ್ಯಕ್ರಮದಲ್ಲೇನಾದರೂ ಬದಲಾವಣೆ ಮಾಡಿಕೊಂಡಿದ್ದೀರಾ?
ಹೌದು. ಪ್ರಾದೇಶಿಕ ಮಾರುಕಟ್ಟೆ ಹಾಗೂ ಸ್ವರೂಪಕ್ಕೆ ಅವಶ್ಯವಿರುವ ಪಠ್ಯಗಳನ್ನು ಸೇರಿಸುವ ಮೂಲಕ ಪಠ್ಯಕ್ರಮದಲ್ಲಿ ಒಂದಷ್ಟು ಬದಲಾವಣೆ ತಂದಿದ್ದೇವೆ. ಇಲ್ಲಿನ ಉದ್ಯಮವನ್ನು ಅಭ್ಯಸಿಸಿ ವಿದ್ಯಾರ್ಥಿಗಳ ಬೆಳವಣಿಗೆಗೆ ನೆರವಾಗುವಂತೆ ಒಂದಷ್ಟು ಸಂಗತಿ ಸೇರಿಸಿದ್ದೇವೆ.

ನೂರಾರು ಸರ್ಟಿಫಿಕೇಟ್ ಕೋರ್ಸ್‌ಗಳಂತೆ ಇದೂ ಒಂದಾಗಬಾರದು, ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ಕತೆಯ ರೂಪದಲ್ಲಿ ಪಾಠಹೇಳುವ ಯೋಜನೆ ಇದೆ. ಪ್ರಾಯೋಗಿಕ ಕಲಿಕೆಗೇ ಹೆಚ್ಚು ಒತ್ತು ನೀಡಲಾಗಿದೆ.

ತರಗತಿಯ ಸ್ವರೂಪ ಹೇಗಿರುತ್ತದೆ?
ಒಂದು ತರಗತಿಯಲ್ಲಿ 30-35 ವಿದ್ಯಾರ್ಥಿಗಳಿರುತ್ತಾರೆ. ಇವರಲ್ಲಿ ಬಹುತೇಕರು ವೃತ್ತಿಪರರಾಗಿರುವುದರಿಂದ ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಆರು ಗಂಟೆಗಳ ತರಗತಿಗಳಿರುತ್ತವೆ. ಒಟ್ಟು 86 ಗಂಟೆಯ ಪಾಠಕ್ಕೆ 42,500 ರೂಪಾಯಿ ಶುಲ್ಕ ನಿಗದಿಪಡಿಸಿದ್ದೇವೆ.

ಭಾರತದ ಏಳು ಮಂದಿ ಅಧ್ಯಾಪಕರು ಹಾಗೂ ವಿಯೆನ್ನಾದ ಮೂವರು ಪಾಠ ಹೇಳುತ್ತಾರೆ. ಡಿಸೆಂಬರ್ ಎರಡನೇ ವಾರದಿಂದ ತರಗತಿಗಳು ಆರಂಭವಾಗಲಿವೆ. ವರ್ಷಕ್ಕೆ ಮೂರು ಇಲ್ಲವೇ ನಾಲ್ಕು ಬಾರಿ ಕೋರ್ಸ್ ಮಾಡಬೇಕೆಂದಿದ್ದೇವೆ.

ನೀವು ಕಂಡಂತೆ ಭಾರತೀಯ ಶಿಕ್ಷಣ ಪದ್ಧತಿಗೂ ಯುರೋಪಿಯನ್ ಮಾದರಿಗೂ ವ್ಯತ್ಯಾಸಗಳಿವೆಯೇ?

ಹೌದು. ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ಶಿಕ್ಷಣ ಪದ್ಧತಿ ನೈತಿಕತೆಯನ್ನು ಕಳೆದುಕೊಳ್ಳುತ್ತಿದೆ. ಯಾವುದೋ ಒಂದು ವೃತ್ತಿಗೆ ಆತನನ್ನು ತಯಾರು ಮಾಡುತ್ತದೆಯೇ ಹೊರತು ಜೀವನ ಕಲೆಯನ್ನು ಕಲಿಸುತ್ತಿಲ್ಲ.

ಭಾರತೀಯ ಶಿಕ್ಷಣ ಪದ್ದತಿ ಹಾಗಿಲ್ಲ. ಅದು ಬದುಕುವ ಕಲೆಯನ್ನೂ ಹೇಳುತ್ತದೆ. ನನಗೂ ಇಲ್ಲಿ ಪಾಠ ಹೇಳಬೇಕೆಂಬ ಆಸೆ ಇದೆ. ಎರಡನೇ ಸರಣಿ ಆರಂಭವಾದಾಗ ಖಂಡಿತವಾಗಿ ನಾನೂ ಪಾಠ ಹೇಳುತ್ತೇನೆ.

ನಿಮ್ಮದು ಯುರೋಪಿಯನ್ ಇಂಗ್ಲಿಷ್ ಉಚ್ಚಾರ. ಇಲ್ಲಿನವರೊಂದಿಗೆ ಸಂವಾದ ಕಷ್ಟವಾಗುವುದಿಲ್ಲವೇ?

ಆರಂಭದಲ್ಲಿ ನನಗೂ ಹಾಗೇ ಅನಿಸುತ್ತಿತ್ತು. ಭಾರತೀಯರು  ಇಂಗ್ಲಿಷನ್ನು ನಿಧಾನಕ್ಕೆ ಮಾತನಾಡುತ್ತಾರೆ. ಪದ ಬಳಕೆ ಅದೇ ಇರುತ್ತದೆ. ಅರ್ಥೈಸಿಕೊಳ್ಳುವುದು ತುಸು ನಿಧಾನವಾಗುತ್ತದೆ ಅಷ್ಟೇ.

ಬೆಂಗಳೂರಿನ ಬಗ್ಗೆ?
ಇದು ಭಾರತಕ್ಕೆ, ಅದರಲ್ಲೂ ಬೆಂಗಳೂರಿಗೆ ನನ್ನ ಎರಡನೇ ಭೇಟಿ. ನನ್ನೂರು ಬಿಟ್ಟರೆ ಇಷ್ಟವಾಗುವುದು ಇದೇ. ವಿಮಾನ ನಿಲ್ದಾಣದಿಂದ ಕರೆತರುವುದರಿಂದ ಆರಂಭಿಸಿ ಮತ್ತೆ ವಾಪಾಸು ಕಳಿಸುವವರೆಗಿನ ಆತಿಥ್ಯ ನನಗಿಷ್ಟ. ನಮ್ಮಲ್ಲಿ ಇಂತಹ ಪ್ರೀತಿ-ಉಪಚಾರ ನಿರೀಕ್ಷಿಸಲೂ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT