ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌತ್ ಯುನೈಟೆಡ್ ಜಯಭೇರಿ

ಸೂಪರ್ ಡಿವಿಷನ್ ಫುಟ್‌ಬಾಲ್: ಸ್ಟೀಫನ್ ಹ್ಯಾಟ್ರಿಕ್ ಗೋಲು
Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಸೌತ್ ಯುನೈಟೆಡ್ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ 7-0 ಗೋಲುಗಳಿಂದ ಡಿವೈಎಸ್‌ಎಸ್ ತಂಡವನ್ನು ಮಣಿಸಿದರು.
 
ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟೀಫನ್ ಹ್ಯಾಟ್ರಿಕ್ ಗೋಲು ಕಲೆ ಹಾಕಿದರು. ಆ ಗೋಲುಗಳು 33, 51 ಹಾಗೂ 81ನೇ ನಿಮಿಷದಲ್ಲಿ ಬಂದವು. ಇದಕ್ಕೂ ಮುನ್ನ ವಿಘ್ನೇಶ್ ಪಂದ್ಯ ಆರಂಭದ ಮೊದಲ ನಿಮಿಷದಲ್ಲಿಯೇ ಗೋಲು ಗಳಿಸಿ ತಂಡದ ಉತ್ಸಾಹವನ್ನು ಹೆಚ್ಚಿಸಿದ್ದರು. ಇನ್ನುಳಿದ ಗೋಲುಗಳನ್ನು ಅಮೋಸ್ 12, 22ನೇ ನಿಮಿಷದಲ್ಲಿ ತಂದಿತ್ತರೆ, ಸುನಿಲ್ ಕುಮಾರ್ 26ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.
 
ಗೆಲುವಿನ ಓಟ: ಯುನೈಟೆಡ್ ತಂಡದ ಗೆಲುವಿನ ಓಟ ಮುಂದುವರಿದಿದೆ. ಈ ತಂಡ ಪಡೆದ ಸತತ ನಾಲ್ಕನೇ ಗೆಲುವು ಇದಾಗಿದೆ. ಹಿಂದಿನ ಪಂದ್ಯಗಳಲ್ಲಿ ಸ್ಟೂಡೆಂಟ್ ಯೂನಿಯನ್, ಪೋಸ್ಟಲ್ ಮತ್ತು ಕೆಎಸ್‌ಪಿ ತಂಡವನ್ನು ಮಣಿಸಿತ್ತು.
 
ನಾಲ್ಕು ಪಂದ್ಯಗಳನ್ನಾಡಿರುವ ಸೌತ್ ಯುನೈಟೆಡ್ ತಂಡ ಏಳು ಅಂಕಗಳನ್ನು ಕಲೆ ಹಾಕಿದೆ. ಇದರಿಂದ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 
 
ಸಿಐಎಲ್‌ಗೆ ಜಯ:`ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸಿಐಎಲ್ ತಂಡ 1-0ಗೋಲುಗಳಿಂದ ಎಲ್‌ಆರ್‌ಡಿಇ ತಂಡವನ್ನು ಸೋಲಿಸಿತು.
 
ಪಂದ್ಯದ ಪ್ರಥಮಾರ್ಧ ಗೋಲು ರಹಿತವಾಗಿತ್ತು ಆದ್ದರಿಂದ ಪಂದ್ಯ ಡ್ರಾ ಹಾದಿಯಲ್ಲಿ ಸಾಗುವ ಸಾಧ್ಯತೆಯಿತ್ತು. ಆದರೆ, 77ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದ ಪ್ರದೀಪ್ ಗೆಲುವಿನ ರೂವಾರಿ ಎನಿಸಿದರು. 
ಶುಕ್ರವಾರದ ಪಂದ್ಯಗಳು: ಬೆಂಗಳೂರು ಕಿಕ್ಕರ್ಸ್‌-ಬೆಂಗಳೂರು ಮಾರ್ಸ್‌ (ಎ ಡಿವಿಷನ್) ಹಾಗೂ ಪೋಸ್ಟಲ್-ಆರ್‌ಡಬ್ಲ್ಯುಎಫ್ (ಸೂಪರ್ ಡಿವಿಷನ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT