ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಸಂಕಷ್ಟ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಭಾರತೀಯರ ಸ್ಥಿತಿ ಈಗ ಅತಂತ್ರ. ಅಲ್ಲಿನ ಕಾರ್ಮಿಕ ಸಚಿವಾಲಯವು ಜಾರಿಗೆ ತಂದಿರುವ `ನಿತಾಕತ್' (ಮಿತಿ) ಎಂಬ ಕಾನೂನು ಇದಕ್ಕೆ ಕಾರಣ. ಸೌದಿ ಅರೇಬಿಯಾದಲ್ಲಿ ಕೇರಳೀಯರು ಹಾಗೂ ಕರಾವಳಿಯ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ  ಸಹಜವಾಗಿಯೇ ಆತಂಕ ಹೆಚ್ಚಿದೆ.

ಜಗತ್ತಿನ ಶೇ 5ರಷ್ಟು ಪಾಲು ತೈಲ ಉತ್ಪಾದಿಸುವ ಶ್ರೀಮಂತ ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿ ನಿರುದ್ಯೋಗ ಪ್ರಮಾಣ ಶೇ 10.5ರಷ್ಟಿದೆ. ಖಾಸಗಿ ಕಂಪೆನಿಗಳು ಹೆಚ್ಚಿನ ಪ್ರಮಾಣದಲ್ಲಿ ಸೌದಿ ಪ್ರಜೆಗಳನ್ನೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಆ ದೇಶದ ಕಾರ್ಮಿಕ ಸಚಿವಾಲಯ ಹೊಸ ನಿಯಮ ಜಾರಿಗೆ ತಂದಿದ್ದು, ಜೂನ್‌ನಲ್ಲಿ ಅದು ಜಾರಿಗೆ ಬರಲಿದೆ. ಕೌಶಲರಹಿತ ಕಾರ್ಮಿಕರನ್ನು  ಗರಿಷ್ಠ 6 ವರ್ಷ ಮಾತ್ರ ಕೆಲಸಕ್ಕೆ ಇಟ್ಟುಕೊಳ್ಳುವ ಅವಕಾಶವನ್ನು ಕಂಪೆನಿಗಳಿಗೆ ನೀಡಲಾಗುತ್ತದೆ.

ದೇಶೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ವಿಚಾರದಲ್ಲಿ ನಿಯಮಗಳನ್ನು ಪಾಲಿಸದ ಕಂಪೆನಿಗಳನ್ನು ಕೆಂಪು, ಹಳದಿ ಮತ್ತು ಹಸಿರು ಕಂಪೆನಿಗಳಾಗಿ ವಿಂಗಡಿಸಲಾಗುತ್ತದೆ. ಕೆಂಪು ಕಂಪೆನಿ ಎಂದರೆ ಅಲ್ಲಿ ಸೌದಿ ಅರೇಬಿಯಾದವರನ್ನು ತೀರಾ ಕಡಿಮೆ ಪ್ರಮಾಣದಲ್ಲಿ ಕೆಲಸಕ್ಕೆ ಸೇರಿಸಿಕೊಂಡಿರುವ ಕಂಪೆನಿಯಾಗಿರುತ್ತದೆ. ಇಂತಹ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆ.

ಆದರೆ ಈ ಹೊಸ ನಿಯಮವನ್ನು ಮನೆಗೆಲಸಕ್ಕೆ ಇರುವವರಿಗೆ ಅನ್ವಯಿಸುವ ಸಾಧ್ಯತೆ ಕಡಿಮೆ ಇದೆ. ಆರು ವರ್ಷಕ್ಕಿಂತಲೂ ಹೆಚ್ಚು ಸಮಯ ಕೆಲಸ ಮಾಡಿದವರಿಗೂ ಮತ್ತೆ ವೀಸಾ ವಿಸ್ತರಿಸಲಾಗುವುದು ಎಂದು ಸಚಿವಾಲಯವು ಸ್ಪಷ್ಟಪಡಿಸಿದ್ದರೂ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ. ಇನ್ನೆರಡು ತಿಂಗಳಲ್ಲಿ ಸೌದಿ ಅರೇಬಿಯಾದಿಂದ ಅತೀ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಭಾರತಕ್ಕೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ. ಇದು ಭಾರತದ ಆರ್ಥಿಕತೆ, ನಿರುದ್ಯೋಗ ಸಮಸ್ಯೆ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಒಂದು ಅಂದಾಜಿನ ಪ್ರಕಾರ ಸೌದಿಯಲ್ಲಿರುವ ಖಾಸಗಿ ಕಂಪೆನಿಗಳು ನೇಮಿಸಿಕೊಂಡಿರುವ ದೇಶೀಯ ನೌಕರರ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ.  ಭಾರತ, ಶ್ರೀಲಂಕಾ ಸಹಿತ ಏಷ್ಯದ ಹಲವು ರಾಷ್ಟ್ರಗಳಿಂದ ಉತ್ತಮ ಗುಣಮಟ್ಟದ, ಕಡಿಮೆ ವೆಚ್ಚದ ಸಿಬ್ಬಂದಿ ಸಿಗುವುದರಿಂದ ಸೌದಿ ಪ್ರಜೆಗಳಿಗೆ ಕೆಲಸ ಕೊಡುವ `ಸಾಹಸ'ಕ್ಕೆ ಅವುಗಳು ಇದುವರೆಗೆ ಮುಂದಾಗಿರಲಿಲ್ಲ. ಹಳದಿ ಪಟ್ಟಿಗೆ ಸೇರಿದ ಕಂಪೆನಿಗಳು ತಮ್ಮ ಉದ್ಯೋಗ ನೀತಿಯನ್ನು ಸರಿಪಡಿಸಿಕೊಂಡರೆ ಅಲ್ಲಿನ ನೌಕರರಿಗೆ ವೀಸಾ ವಿಸ್ತರಣೆ ಮಾಡಬಹುದು.

 ಆದರೆ ಕೆಂಪು ಪಟ್ಟಿಗೆ ಸೇರಿದ ಕಂಪೆನಿಗಳ ನೌಕರರರಿಗೆ ಯಾವ ಕಾರಣಕ್ಕೂ ವೀಸಾ ವಿಸ್ತರಣೆ ಅಸಾಧ್ಯ ಎಂದು ಸ್ಪಷ್ಟಪಡಿಸಲಾಗಿದೆ. ಉಚಿತ ವೀಸಾಗಳಲ್ಲಿ ಹೋಗಿ ಅಲ್ಲಿ ಕೆಲಸಕ್ಕೆ ಸೇರಿಕೊಂಡವರು ಹಾಗೂ ಬೇನಾಮಿ ವೀಸಾದಲ್ಲಿ ತೆರಳಿದವರು ಈಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಪ್ರಕ್ರಿಯೆಯನ್ನು ಕುವೈತ್, ಒಮಾನ್, ಬಹರೇನ್ ಮುಂತಾದ ಅರಬ್ ರಾಷ್ಟ್ರಗಳೂ ಜಾರಿಗೊಳಿಸುವುದಾಗಿ ಪ್ರಕಟಿಸಿವೆ. ಹೀಗಾದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಇನ್ನಷ್ಟು ಸಂಕಟಕ್ಕೆ ಸಿಲುಕುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ತಕ್ಷಣ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT