ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಕಕ್ಷೆ ಗೆ ಮಂಗಳನೌಕೆ

ಭೂಮಿಯ ಪ್ರಭಾವಲಯ ತೊರೆದ ನೌಕೆ n ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲು
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚೆನ್ನೈ / ಬೆಂಗಳೂರು (ಪಿಟಿಐ): ದೇಶದ ಮೊದಲ ಮಂಗಳ ನೌಕೆಯು  (ಮಾರ್ಸ್‌ ಆರ್ಬಿಟರ್‌ ಮಿಷನ್‌) ಶನಿವಾರ ತಡ ರಾತ್ರಿ ಭೂಮಿಯ ಪ್ರಭಾವಲಯದಿಂದ ಕಳಚಿಕೊಂಡು, ಸೌರ ಕಕ್ಷೆ ಸೇರುವ ಮೂಲಕ ತನ್ನ ಎರಡನೇ ಹಂತದ ಯಾನವನ್ನು  ಯಶಸ್ವಿಯಾಗಿ ಆರಂಭಿಸಿತು.
ಭಾರತದ ಬಾಹ್ಯಾಕಾಶ ಸಂಶೋ­ಧನಾ ಸಂಸ್ಥೆಯ (ಇಸ್ರೊ) ಮಹತ್ವಾ­ಕಾಂಕ್ಷೆಯ ಮಂಗಳ­ಯಾನ­ ಯೋಜನೆ­ಯಲ್ಲಿ, ನೌಕೆಯು ಭೂಮಿಯ ಗುರುತ್ವಾಕರ್ಷಣೆ ಬಂಧನದಿಂದ ಕಳಚಿ­ಕೊಂಡು ಮಂಗಳನ ಕಕ್ಷೆಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ಅತ್ಯಂತ ಮಹತ್ವದ ಘಟ್ಟ ಎಂದು ಬಣ್ಣಿಸಲಾಗಿತ್ತು.

ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು. ಶನಿವಾರ  ತಡರಾತ್ರಿ 12.49ಕ್ಕೆ ಆರಂಭ­ಗೊಂಡ, ನೌಕೆಯನ್ನು ಸೌರ ಕಕ್ಷೆಗೆ ವರ್ಗಾಯಿಸುವ  ಕಾರ್ಯಾ­­ಚರ­ಣೆಯು ಯಾವುದೇ ಅಡೆ ತಡೆ ಇಲ್ಲದೆ 22 ನಿಮಿಷ­ಗಳಲ್ಲಿ ಯಶಸ್ವಿಯಾಗಿ ಪೂರ್ಣ­ಗೊಂಡಿತು.

ಕಕ್ಷೆ ವರ್ಗಾವಣೆ ಯಶಸ್ವಿ­ಯಾ­ಗಿ­ರು­ವುದರಿಂದ ನೌಕೆಯು ತನ್ನ ಎರಡನೇ ಹಂತದ ಯಾನವನ್ನು ಅಧಿಕೃತವಾಗಿ ಆರಂಭಿಸಿ­ದಂತಾಗಿದೆ.  ಇನ್ನು ನೌಕೆಯು 10 ತಿಂಗಳ ಕಾಲ ಪ್ರಯಾಣಿಸಿ, 68 ಲಕ್ಷ ಕೋಟಿ ಕಿ.ಮೀ ಗಳಷ್ಟು ದೂರದಲ್ಲಿರುವ ಮಂಗಳ ಗ್ರಹದ ಕಕ್ಷೆಯನ್ನು 2014ರ ಸೆಪ್ಟೆಂಬರ್‌ ತಿಂಗಳಲ್ಲಿ ತಲುಪಲಿದೆ.

‘ಈ ಕಾರ್ಯಾಚರಣೆ ಪೂರ್ಣ­ಗೊಂಡಿರುವು­ದರಿಂದ ನೌಕೆಯು ಭೂಮಿಯನ್ನು ಪರಿಭ್ರಮಿಸುವ ಹಂತವು ಮುಕ್ತಾಯಗೊಂಡಂತಾಗಿದೆ. ಈಗ ನೌಕೆಯು, 10 ತಿಂಗಳುಗಳ ಕಾಲ ಸೂರ್ಯ­ನನ್ನು ಸುತ್ತುತ್ತಾ ಮಂಗಳ ಕಕ್ಷೆ­ ಸೇರುವ  ಹಾದಿಯಲ್ಲಿದೆ’ ಎಂದು ಇಸ್ರೊ ಹೇಳಿಕೆಯಲ್ಲಿ ತಿಳಿಸಿದೆ.

22 ನಿಮಿಷಗಳ ಕಾಲ ನಡೆದ ಕಾರ್ಯಾ­ಚರಣೆಯಲ್ಲಿ ನೌಕೆಯು  ಪ್ರತಿ ಸೆಕೆಂಡ್‌ಗೆ 648 ಮೀ. ವೇಗ ಪಡೆದು ಭೂಮಿಯ ಗುರುತ್ವಾಕರ್ಷಣೆ ಶಕ್ತಿ­ಯನ್ನು ಮೀರಿ ಸೂರ್ಯನ ಕಕ್ಷೆಯನ್ನು ಸೇರಿತು ಎಂದು ಇಸ್ರೊ ಹೇಳಿದೆ. ಸುದೀರ್ಘ ಯಾನದ ಮಧ್ಯೆ ನೌಕೆಯ ಪಥದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದರೆ ಅದನ್ನು ಸರಿ ಪಡಿಸು­ವುದ­ಕ್ಕಾಗಿ ನಾಲ್ಕು ಕಾರ್ಯಾ­ಚರಣೆ­ಗಳನ್ನು­ ನಡೆಸಲು ಇಸ್ರೊ ಯೋಜಿಸಿದೆ.
ಐದು ಬಾರಿ ಕಾರ್ಯಾಚರಣೆ: ಶನಿವಾರ ತಡರಾತ್ರಿ ನಡೆಸಿ­ರುವ ಮಹತ್ವದ ಕಾರ್ಯಾಚಾರಣೆಗೂ ಮುನ್ನ ಇಸ್ರೊ ಐದು ಬಾರಿ ನೌಕೆಯ ಕಕ್ಷೆಯನ್ನು ವಿಸ್ತರಿಸುವ ಕಾರ್ಯಾಚಾರಣೆ ನಡೆಸಿತ್ತು.

ನಾಲ್ಕನೇ ಬಾರಿ ನಡೆಸಲಾಗಿದ್ದ ಕಾರ್ಯಾಚರಣೆ ಮಾತ್ರ ತಾಂತ್ರಿಕ ದೋಷದಿಂದಾಗಿ ವಿಫಲ­ಗೊಂಡಿತ್ತು. ಆದರೆ, ನಂತರ ನಡೆಸಲಾಗಿದ್ದ ಪೂರಕ ಕಾರ್ಯಾಚರಣೆಯಲ್ಲಿ ನೌಕೆಯನ್ನು ಭೂಮಿಯಿಂದ ಪೂರ್ವ ನಿಗದಿತ ಎತ್ತರಕ್ಕೆ ಕಳುಹಿಸಲು ಸಾಧ್ಯವಾಗಿತ್ತು.
ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ‘ಇಸ್ರೊ’ದ  ನಿಯಂತ್ರಣ ಕೇಂದ್ರದಿಂದ ನೌಕೆಯ ಮೇಲೆ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದೆ.

ಒಂದು ವೇಳೆ ಮಂಗಳನೌಕೆ ಸೆಪ್ಟೆಂಬರ್‌ನಲ್ಲಿ ಯಶಸ್ವಿಯಾಗಿ ಕೆಂಪು ಗ್ರಹದ ಕಕ್ಷೆಗೆ ತಲುಪಿದರೆ, ಮಂಗಳಗ್ರಹಕ್ಕೆ ಯಶಸ್ವಿಯಾಗಿ ನೌಕೆ­ಗಳನ್ನು ಕಳುಹಿಸಿದ ಅಮೆರಿಕ, ಯೂರೋಪ್‌ ಮತ್ತು ರಷ್ಯಾ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರಲಿದೆ. ಚೀನಾ (2011), ಜಪಾನ್‌ (2003) ಹಮ್ಮಿಕೊಂಡಿದ್ದ ಯೋಜನೆ­ಗಳೂ ಸೇರಿದಂತೆ ಇದುವರೆಗೆ ವಿವಿಧ ರಾಷ್ಟ್ರಗಳು ರೂಪಿಸಿದ್ದ ಮಂಗಳಯಾನ­ಗಳಲ್ಲಿ ಅರ್ಧಕ್ಕೂ ಹೆಚ್ಚು  ಯೋಜನೆ­ಗಳು ವಿಫಲಗೊಂಡಿದ್ದವು. 1,350 ಕೆ.ಜಿ ತೂಕದ ಮಂಗಳ ನೌಕೆಯನ್ನು ಇಸ್ರೊದ ಪಿಎಸ್‌ಎಲ್‌ವಿ ಸಿ–25 ರಾಕೆಟ್‌ ನವೆಂಬರ್‌ 5­ರಂದು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಿತ್ತು. ಮಹತ್ವಾಕಾಂಕ್ಷೆಯ ‘ಮಂಗಳಯಾನ’ಕ್ಕೆ ಭಾರತವು ₨ 450 ಕೋಟಿ ವೆಚ್ಚ ಮಾಡುತ್ತಿದೆ.

ಚೀನಾ ಚಂದ್ರಯಾನ
ಬೀಜಿಂಗ್‌ (ಪಿಟಿಐ): ಚೀನಾದ ಮಹತ್ವಾ­ಕಾಂಕ್ಷೆಯ ಮಾನವ ರಹಿತ ಉಪಗ್ರಹ ‘ಚಾಂಗ್‌–3’ ಚಂದ್ರ ಗ್ರಹದ ಕಡೆಗೆ ಐತಿಹಾಸಿಕ ಪಯಣ ಆರಂಭಿಸಲಿದೆ. ಸಿಚಾಂಗ್‌ ಉಪಗ್ರಹ  ಉಡ್ಡಯನ  ಕೇಂದ್ರದಿಂದ  ಉಪಗ್ರಹವನ್ನು ಭಾನುವಾರ ಉಡಾವಣೆ ಮಾಡಲಾಗುವುದು ಎಂದು  ಚಂದ್ರಯಾನ ಯೋಜನೆಯ ಕೇಂದ್ರ ಕಚೇರಿ ತಿಳಿಸಿದೆ.

ಇದೇ ಮೊದಲ ಬಾರಿಗೆ ಚೀನಾದ ಉಪಗ್ರಹವೊಂದು ಚಂದ್ರನ ಅಂಗಳಕ್ಕೆ ಕಾಲಿಡುತ್ತಿದೆ. ಆ ಮೂಲಕ ಅಮೆರಿಕ ಮತ್ತು ರಷ್ಯಾದಂತಹ ಪ್ರತಿಷ್ಠಿತ ರಾಷ್ಟ್ರಗಳ ಗುಂಪಿಗೆ  ಚೀನಾ ಸೇರ್ಪಡೆಯಾಗಲಿದೆ. 1976ರ ನಂತರ ಇಲ್ಲಿಯವರೆಗೂ ಚಂದ್ರನ ಮೇಲೆ ಯಾವ ಉಪಗ್ರಹವೂ  ಕಾಲಿಟ್ಟಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT