ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಇಲ್ಲದ ಮೇದಿನಾಪುರ

Last Updated 24 ಜೂನ್ 2011, 9:25 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಕೋಠಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದಿನಾಪುರ ಗ್ರಾಮದ ಬಳಿ ಯಡಿಯಪ್ಪನ ಹಳ್ಳಕ್ಕೆ  ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಸೇತುವೆ ಕೊಚ್ಚಿಕೊಂಡು ಹೋಗಿದೆ. ಗ್ರಾಮ ಪಂಚಾಯಿತಿಗೆ ಮತ್ತು ಹೊಲಗಳಿಗೆ ಹೋಗಲು ಜನತೆ ತೊಂದರೆ ಅನುಭವಿಸುತ್ತಿದ್ದಾರೆ.

ಮೇದಿನಾಪುರ ಗ್ರಾಮವು ಕೋಠಾ ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ. ಈ ಗ್ರಾಮದ ಜನರು ಕೆಲಸ ನಿಮಿತ್ತ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಹೋಗಬೇಕಾದರೆ ಹಟ್ಟಿ ಗ್ರಾಮದ ಮುಖಾಂತರ ಸುಮಾರು 11 ಕಿ.ಮೀ. ಸುತ್ತಿಬಳಸಿ ಹೋಗಬೇಕು.  30 ರೂಪಾಯಿ ಖರ್ಚುಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರು ಹೇಳುತ್ತಾರೆ. ಹಲವು ಸಲ ಲಕ್ಷಾಂತರ ಹಣ ಖರ್ಚು ಮಾಡಿ ಪಿಚ್ಚಿಂಗ್ ಮೆಟಲಿಂಗ್ ಮಾಡಲಾಗುತ್ತಿದೆ.  ಆದರೆ ರಸ್ತೆ ಮಾತ್ರ ತೀರ ಹದಗೆಟ್ಟಿದೆ. 

2010-11ರ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ  ಯಡಿಯಪ್ಪನ ಹಳ್ಳಕ್ಕೆ  2 ಲಕ್ಷ ರೂಪಾಯಿ ವೆಚ್ಚದಲ್ಲಿ ಫೆಬ್ರುವರಿಯಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಆದರೆ ಈ ಕಾಮಗಾರಿಯು ಕಳಪೆಯಾಗಿದ್ದು, ಮೇ ತಿಂಗಳಲ್ಲಿ ಸುರಿದ ಅಲ್ಪ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಚಕ್ಕಡಿಗಳು ಸೇತುವೆ ಮೇಲೆ ಹೋಗಲು ಹರಸಾಹಸಪಡಬೇಕು. 

ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ ಸುಮಾರು 300 ಮಕ್ಕಳು ಆಟ ಆಡಲಿಕ್ಕೆ ಆಟದ ಮೈದಾನವೇ ಇಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಈ ಕುರಿತು ಕ್ರಮ ಜರುಗಿಸಿಲ್ಲ. ಶಾಲೆಯ ಸುತ್ತ ನಿರ್ಮಿಸುವುದರ ಬದಲಾಗಿ ಮುಂಭಾಗದಲ್ಲಿ ಮಾತ್ರ ಕಾಂಪೌಂಡ್ ನಿರ್ಮಿಸಲಾಗಿದೆ  ಎಂಬುದು ಪಾಲಕರ ದೂರಾಗಿದೆ.

ಹಲವು ದಶಕಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇಲ್ಲಿನ ಕೊಳವೆಬಾವಿಯಲ್ಲಿ ಸಿಗುವ ನೀರು ಉಪ್ಪಾಗಿದೆ. ಕುಡಿಯುವ ನೀರನ್ನು ಸುಮಾರು 5 ಕಿ.ಮೀ. ದೂರದ ಹಟ್ಟಿ ಕ್ಯಾಂಪಿನಿಂದ ತರಬೇಕು. ದಶಕಗಳು ಕಳೆದರೂ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು, ರಸ್ತೆ, ಒಳಚರಂಡಿಗಳಂತ ಮೂಲ ಸೌಲಭ್ಯಗಳನ್ನು  ಒದಗಿಸುವಲ್ಲಿ ಜನ ಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಊರಿನ ಹಿರಿಯರು ಹೇಳುತ್ತಾರೆ. ಇಲ್ಲಿ ಅಂಗನವಾಡಿ ಕೇಂದ್ರ ಇದೆ. ಕಾರ್ಯಕರ್ತೆಯರು ಎರಡು ಅಥವಾ ಮೂರು ದಿನಕ್ಕೆ ಒಂದು ಸಲ ಬರುತ್ತಾರೆ.

ಸಹಾಯಕಿಯೇ ಎಲ್ಲ ಕೆಲಸ ನಿರ್ವಹಿಸಬೇಕು. ಅಂಗನವಾಡಿ ಆವರಣದಲ್ಲಿ ದನ ಕರುಗಳನ್ನುಕಟ್ಟಲಾಗುತ್ತದೆ. ಕೃಷಿಪರಿಕರಗಳನ್ನು ಇಡಲಾಗುತ್ತಿದೆ. ಅಸ್ವಚ್ಛತೆಯಿಂದ ಕೂಡಿದೆ. ಇಂತಹ ಪರಿಸರದಲ್ಲಿ ಮಕ್ಕಳು ಕಲಿಯಬೇಕು.
ಆರೋಗ್ಯ ಇಲಾಖೆಯಿಂದ ಗ್ರಾಮದ ಹೊರ ವಲಯದಲ್ಲಿ ಉಪ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಯಿತು.

ಸುಮಾರು ಎರಡು ವರ್ಷಗಳಲ್ಲಿ  ಕಾಮಗಾರಿ ಮುಗಿಯಿತು. ಇಲಾಖೆ ಸ್ವಾಧೀನ ಪಡೆಸಿಕೊಂಡು ಆರು ತಿಂಗಳುಗಳು ಕಳೆದರೂ ಇಲ್ಲಿವರೆಗೆ ಸಾರ್ವಜನಿಕರ ಉಪಯೋಗಕ್ಕೆ ಬಳಸುತ್ತಿಲ್ಲ. ದಿನದಿಂದ ದಿನಕ್ಕೆ ಕಟ್ಟಡ ಹಾಳಾಗುತ್ತಿದೆ. ಈ ಉಪ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT