ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕಬಳಿಕೆ ಆರೋಪ: ಪೊಲೀಸರಿಗೆ ಹೈಕೋರ್ಟ್ ನೋಟಿಸ್

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ನೇಮಕಗೊಂಡಿರುವ ಆರೋಪ ಹೊತ್ತ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಿಚಕ್ಷಣ ದಳದ ಡಿವೈಎಸ್ಪಿ ಬಿ.ಎಸ್.ಮಾಲಗತ್ತಿ (ಗುಲ್ಬರ್ಗ), ಡಿವೈಎಸ್ಪಿ ರಾಮಚಂದ್ರ ನಾಯ್ಕ (ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಉಪವಿಭಾಗ) ಎಸಿಪಿ ಜಿ.ಆರ್.ದೇಸಾಯಿ (ಬೆಂಗಳೂರಿನ ವಿಜಯನಗರ ವಿಭಾಗ), ಇನ್ಸ್‌ಪೆಕ್ಟರ್ ಗೀತಾ ಲಕ್ಷ್ಮಿ (ಮೈಸೂರು) ಹಾಗೂ  ಇನ್ಸ್‌ಪೆಕ್ಟರ್ ಸಂಜೀವ ನಾಯ್ಕ (ಚಿಕ್ಕಮಗಳೂರು) ಇವರ ವಿರುದ್ಧ ಕ್ರಮಕ್ಕೆ ಕೋರಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅರ್ಜಿ ಸಲ್ಲಿಸಿದೆ.
 
ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸರ್ಕಾರ, ಪೊಲೀಸ್ ಮಹಾನಿರ್ದೇಶಕರು ಹಾಗೂ ಈ ಎಲ್ಲ ಪೊಲೀಸರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.

`ಸರ್ಕಾರ 2002ರಲ್ಲಿ ಹೊರಡಿಸಿದ್ದ ಸುತ್ತೋಲೆ ಅನ್ವಯ ಪರಿವಾರ, ತಳವಾರ, ಕುರುಬ, ಬೆಸ್ತ ಜನಾಂಗಕ್ಕೆ ಸೇರಿದವರು ಹಿಂದುಳಿದ ವರ್ಗಗಳ ಸೌಲಭ್ಯಗಳನ್ನು ಮಾತ್ರ ಪಡೆದುಕೊಳ್ಳಬಹುದು. ಸುಪ್ರೀಂಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಈ ಆರೋಪಿಗಳು ಪರಿಶಿಷ್ಟ ಜನಾಂಗದ ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದಾರೆ.

`ನಾಗರಿಕ ಹಕ್ಕುಗಳ ಜಾರಿ ಘಟಕ ನಡೆಸಿದ್ದ ತನಿಖೆಯಿಂದಲೂ ನಕಲಿ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಇವೆಲ್ಲ ತಿಳಿದಿದ್ದರೂ ಸರ್ಕಾರ ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎಂದು ಅರ್ಜಿಯಲ್ಲಿ ದೂರಲಾಗಿದೆ.

28ಕ್ಕೆ ಆದೇಶ: ಯಡಿಯೂರಪ್ಪ ಅವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ದಾಖಲು ಮಾಡಿರುವ 4ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಸಮನ್ಸ್ ಜಾರಿ ಮಾಡಬೇಕೆ, ಬೇಡವೆ ಎಂಬ ಬಗೆಗೆ ಲೋಕಾಯುಕ್ತ ವಿಶೇಷ ಕೋರ್ಟ್ ಇದೇ 28ರಂದು ಆದೇಶ ಹೊರಡಿಸಲಿದೆ.

ತಮ್ಮ ಕುಟುಂಬದ ಒಡೆತನದ `ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್~ ಮೂಲಕ ಅಕ್ರಮವಾಗಿ ಆರ್ಥಿಕ ಅನುಕೂಲ ಮಾಡಿಕೊಂಡಿರುವುದು ಮತ್ತು ನಗರದ ಶ್ರೀರಾಮಪುರದ ಬಳಿ ಬಿಡಿಎ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಯನ್ನು `ಬೆಸ್ಟೋ ಇನ್‌ಫ್ರಾಸ್ಟ್ರಕ್ಚರ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್~ಗೆ ಲಾಭ ಮಾಡಿಕೊಡಲು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವ ಆರೋಪ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT