ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕೊರತೆ: ಪಂಚಾಯಿತಿಗೆ ಬೀಗ

Last Updated 3 ಜುಲೈ 2013, 5:52 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮೂಲಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ತಾಲ್ಲೂಕಿನ ತೊಗಲೂರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.

ನೀರಿನ ಕೊರತೆ ಇಲ್ಲದಿದ್ದರೂ ನೀರು ಬಿಡುವವರು ಬೇಕೆಂತಲೇ ನಳಕ್ಕೆ ನೀರು ಹರಿಸದೆ ತೊಂದರೆ ಕೊಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮದ ಕೆಲ ರಸ್ತೆಗಳಲ್ಲಿ ಕೆಸರು ನಿರ್ಮಾಣವಾಗಿದ್ದು ಸುಧಾರಣಾ ಕಾರ್ಯ ನಡೆಸಬೇಕು. ಚರಂಡಿಗಳನ್ನು ನಿರ್ಮಿಸಬೇಕು. ಪಡಿತರ ಚೀಟಿ ಎಲ್ಲರಿಗೂ ಒದಗಿಸಬೇಕು ಎಂದು ಆಗ್ರಹಿಸಲಾಯಿತು.

ಬೇರೆ ಗ್ರಾಮಗಳಕ್ಕಿಂತ ಇಲ್ಲಿ ಹೆಚ್ಚಿನ ಮನೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಲವಾರು ಸಲ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಕಿಡಿ ಕಾರಿದರು.

ಗ್ರಾಮಸಭೆ ಮೂಲಕ ಆಯ್ಕೆ ಮಾಡಿದ ಮನೆಗಳ ಫಲಾನುಭವಿಗಳ ಪಟ್ಟಿ ಬದಲಾಯಿಸಲಾಗಿದೆ ಎಂದೂ ಕೆಲವರು ದೂರಿದರು. 13 ನೇ ಹಣಕಾಸು ಯೋಜನೆಯ ಹಣದ ಸದುಪಯೋಗ ಆಗಿಲ್ಲ ಎಂದು ಪಂಚಾಯಿತಿ ಸದಸ್ಯ ರಾಜಶೇಖರ ಪಾಟೀಲ ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯನ್ನು ಕಚೇರಿ ಒಳಗಡೆ ಹಾಕಿ ಬೀಗ ಹಾಕಲಾಗಿತ್ತು. ಹೀಗೆ ದಿಗ್ಬಂಧನ ಹಾಕಿದ್ದರಿಂದ ಅವರು ಬೀಗ ತೆಗೆಯುವವರೆಗೆ ಒಳಗೇ ಇದ್ದರು.

ಪ್ರಮುಖರಾದ ಮಹಾದೇವ ಕಾಮಣ್ಣ, ಕಾಂತಾಬಾಯಿ, ಮಾರುತಿರೆಡ್ಡಿ, ಬಸವರಾಜ ಶೇರಿಕಾರ, ಸುಭಾಷ ಸಿಂಧೆ, ಗುರಮ್ಮ ಧನ್ನೂರೆ, ಅಂಕುಶ, ಭಾಗೀರಥಿ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಮಹಿಳೆಯರು ಅಧಿಕವಾಗಿದ್ದರು. ತಹಸೀಲ್ದಾರ ವೆಂಕಟಯ್ಯ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು. ಆಹಾರ ಇಲಾಖೆ ಶಿರಸ್ತೆದಾರ ಶಿವಾರೆಡ್ಡಿ ಸಹ ಭೇಟಿಕೊಟ್ಟು ಪಡಿತರ ಚೀಟಿಯ ಸಮಸ್ಯೆ ಬಗೆಹರಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT