ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಅಂಗವಿಕಲರು: ಆಯುಕ್ತರ ವಿಷಾದ

Last Updated 27 ಜನವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ನಗರವು ಒಂದೆಡೆ ತೀವ್ರಗತಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದರೆ, ಇನ್ನೊಂದೆಡೆ ಅಂಗವಿಕಲರು, ಶೋಷಿತರು ಸೌಲಭ್ಯ ವಂಚಿತರಾಗಿ ಸಂಕಷ್ಟದ ಜೀವನ ನಡೆಸುವಂತಾಗಿದೆ~ ಎಂದು ಅಂಗವಿಕಲರ ಅಧಿನಿಯಮ ಆಯುಕ್ತ ಕೆ.ವಿ. ರಾಜಣ್ಣ ವಿಷಾದಿಸಿದರು.

ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ, ಅಂಗವಿಕಲರ 1995ರ ಅಧಿನಿಯಮದ ಆಯುಕ್ತರ ಕಚೇರಿ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ನಗರದ ಕೆ.ಆರ್. ರಸ್ತೆಯಲ್ಲಿರುವ ಕರ್ನಾಟಕ ಜೈನ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಕರ್ನಾಟಕ ರಾಜ್ಯ ಅಂಗವಿಕಲ ರಕ್ಷಣಾ ಸಮಿತಿ~ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ, ಮೇಲು ಸೇತುವೆ, ಅಂಡರ್‌ಪಾಸ್‌ಗಳ ನಿರ್ಮಾಣ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ರಸ್ತೆಬದಿ ಸಣ್ಣ ಪುಟ್ಟ ಮಳಿಗೆಗಳನ್ನು ಹೊಂದಿದ್ದ ಅಂಗವಿಕಲರನ್ನು ತೆರವುಗೊಳಿಸಲಾಗುತ್ತಿದೆ~ ಎಂದರು.

`ಪರಿಣಾಮವಾಗಿ ಈ ಮಳಿಗೆಗಳನ್ನೇ ನೆಚ್ಚಿಕೊಂಡಿದ್ದ ಅಂಗವಿಕಲರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಒಂದೆಡೆ ಪ್ರಬಲ ಜನರ ನೆಲೆಯಾಗುತ್ತಿದ್ದರೆ, ಇನ್ನೊಂದೆಡೆ ಶೋಷಿತರು ಇನ್ನಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ~ ಎಂದು ಹೇಳಿದರು.

`ರಾಜ್ಯ ಸರ್ಕಾರ ಅಂಗವಿಕಲರ ಕಲ್ಯಾಣಕ್ಕೆ 60 ಕೋಟಿ ರೂ. ಕಾಯ್ದಿರಿಸಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆ ಹಾಗೂ ಜಾರಿಗೊಳಿಸುವ ಸಿಬ್ಬಂದಿ ಇಲ್ಲದ ಕಾರಣ  ಪರಿಣಾಮಕಾರಿ ಬಳಕೆಯಾಗುತ್ತಿಲ್ಲ~ ಎಂದು ವಿಷಾದಿಸಿದರು.

ಚಾರುಕೀರ್ತಿ ಭಟ್ಟಾರಕ ವೇದಿಕೆಯ ಅಧ್ಯಕ್ಷ ಡಾ. ನಾಗೇಂದ್ರ ಪ್ರಸಾದ್, `ಅಂಗವೈಕಲ್ಯವನ್ನು ಅಸಹಾಯಕತೆ ಎಂದು ಭಾವಿಸಬಾರದು. ಸ್ವಾಭಿಮಾನದ ಜೀವನ ನಡೆಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು.

ಅಂಗವಿಕಲರಾಗಿದ್ದುಕೊಂಡು ಸಾಧನೆ ಮಾಡಿದವರಿಂದ ಸ್ಫೂರ್ತಿ ಪಡೆಯಬೇಕು~ ಎಂದರು. ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಸಮಿತಿ ಅಧ್ಯಕ್ಷ ಬೇ.ಹ. ಶ್ರೀಧರ್, ಗೌರವಾಧ್ಯಕ್ಷ ಪ್ರೊ. ಸಿ.ಕೆ. ಲಕ್ಷ್ಮಿನಾರಾಯಣ ಗುಪ್ತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT