ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಉಪ್ಪಾರ ಬಡಾವಣೆ

Last Updated 19 ಡಿಸೆಂಬರ್ 2012, 9:12 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿಯ ಕಲ್ಮಷ ನೀರು. ಚರಂಡಿ ವ್ಯವಸ್ಥೆ ಇಲ್ಲದೆ  ಮನೆಗಳ ಮುಂಭಾಗವೇ ಹರಿಯುವ ಕೊಳಚೆ ನೀರು. ವಿಲೇವಾರಿಯಾಗದ ಕಸ. ಅಪೂರ್ಣ ಗೊಂಡಿರುವ ಸಿಮೆಂಟ್ ರಸ್ತೆಗಳು.

-ಇದು ಸುವರ್ಣಗ್ರಾಮ ಯೋಜನೆಗೆ ಸೇರ್ಪಡೆ ಗೊಂಡಿದ್ದರೂ ಸೌಲಭ್ಯದಿಂದ ವಂಚಿತವಾಗಿರುವ ಬಾಗಳಿ ಗ್ರಾಮದ ಉಪ್ಪಾರ ಬಡಾವಣೆಯ ಗೋಳಿನ ಕಥೆ.

ಗ್ರಾಮ ಮೂಲ ಸೌಕರ್ಯದಿಂದ ಸೊರಗು ತ್ತಿತ್ತು. ಅಭಿವೃದ್ಧಿಪಡಿಸಲು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಯಿತು. ಕಾಮಗಾರಿ ಪೂರ್ಣಗೊಂಡು 6 ತಿಂಗಳು ಕಳೆದಿದೆ. ಆದರೆ, ಯೋಜನೆಯ ಸೌಲಭ್ಯ ಈ ಬಡಾವಣೆಗೆ ದೊರಕಿಲ್ಲ. ಆದರೆ, ಬಾಗಳಿ ಮಾತ್ರ `ಸುವರ್ಣ ಗ್ರಾಮ' ಎಂಬ ಹಣೆಪಟ್ಟಿ ಹೊಂದಿದೆ.

ಬಡಾವಣೆಗೆ ಸೂಕ್ತ ಚರಂಡಿ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಹಲವು ವರ್ಷಗಳಿಂದ ನಿವಾಸಿಗಳ ಕೂಗಿಗೆ ಜನಪ್ರತಿನಿಧಿಗಳು ಕಿವಿಗೊಟ್ಟಿಲ್ಲ. ಕೆಲವೆಡೆ ಚರಂಡಿ ಇದ್ದರೂ ಹೂಳು ತೆಗೆಸಿಲ್ಲ. ಹೀಗಾಗಿ, ರಸ್ತೆಯಲ್ಲಿಯೇ ಕಲ್ಮಷ ನೀರು ಹರಿಯುತ್ತದೆ. ರಸ್ತೆಯ ಅವ್ಯವಸ್ಥೆಯಿಂದ ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದಿರುವ ಪರಿಣಾಮ ಕೆಲವೆಡೆ ರಸ್ತೆಮಧ್ಯೆದಲ್ಲಿಯೇ ಮನೆಯ ತ್ಯಾಜ್ಯ ನೀರು ಹರಿಯುತ್ತದೆ. ಹೀಗಾಗಿ, ಸಂಜೆಯಾಗುತ್ತಿದ್ದಂತೆಯೇ ಸೊಳ್ಳೆ ಕಾಟ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ.

ಕೆಲವೆಡೆ ಚರಂಡಿಯ ಹೂಳು ತೆಗೆದು ರಸ್ತೆಯಲ್ಲಿಯೇ ಬಿಡಲಾಗಿದೆ. ವಿಲೇವಾರಿ ಮಾಡದೆ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ. ದಿನ ಕಳೆದಂತೆ ರಸ್ತೆಯಲ್ಲಿಯೇ ಕಸ ಬೆರೆಯುತ್ತದೆ. ಅದರ ಮೇಲೆ ತಿರುಗಾಡಬೇಕಾಗುತ್ತದೆ. ಇದರಿಂದ ರೋಗರುಜಿನ ಕಾಡುವುದರಲ್ಲಿ ಅನುಮಾನವಿಲ್ಲ ಎಂಬುದು ನಿವಾಸಿಗಳ ನೋವು.

ಕುಡಿಯುವ ನೀರಿನಿಂದಲೂ ಬಡಾವಣೆ ಸಂಪೂರ್ಣವಾಗಿ ಸ್ವತಂತ್ರವಾಗಿಲ್ಲ. ವಿದ್ಯುತ್ ಇದ್ದರೆ ಮಾತ್ರ ಕಿರುನೀರು ಸರಬರಾಜು ಘಟಕದ ತೊಂಬೆಗಳಿಂದ ಕುಡಿಯುವ ನೀರು ದೊರಕುತ್ತದೆ. ಒವರ್‌ಹೆಡ್ ಟ್ಯಾಂಕ್‌ನಿಂದ ಈ ಬಡಾವಣೆಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಬಡಾವಣೆಯ ಪ್ರತಿ ಮನೆಗಳಿಗೂ ಸಮರ್ಪಕವಾಗಿ ನಲ್ಲಿ ಸಂಪರ್ಕ ಕಲ್ಪಿಸಿಲ್ಲ.

ಕೇವಲ 1 ಕೈಪಂಪ್ ಮಾತ್ರ ಬಡಾವಣೆಗೆ ಅಳವಡಿಸಲಾಗಿದೆ. ಅದು ಕೆಟ್ಟುಹೋಗಿ ವರ್ಷ ಕಳೆದಿದೆ. ದುರಸ್ತಿ ಮಾಡುವ ನೆಪದಲ್ಲಿ ಪೈಪ್‌ನ್ನು ಅರ್ಧಕ್ಕೆ ತೆಗೆದು ನಿಲ್ಲಿಸಲಾಗಿದೆ. ದುರಸ್ತಿಪಡಿಸಿ ಬಡಾವಣೆಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಬಡಾವಣೆಗೆ 8 ವರ್ಷದ ಹಿಂದೆ ಸಮುದಾಯ ಭವನ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಕಾಮಗಾರಿ ಅಪೂರ್ಣಗೊಂಡು 2 ವರ್ಷ ಕಳೆದಿದೆ. ಅರ್ಧಕ್ಕೆ ನಿಂತಿರುವ ಕಟ್ಟಡ ಮಳೆ-ಗಾಳಿಗೆ ಸಿಲುಕಿ ಶಿಥಿಲಾವಸ್ಥೆ ತಲುಪುತ್ತಿದೆ. ಬಡಾವಣೆಯಲ್ಲಿ ಹಿಂದುಳಿದ ಜನಾಂಗದವರೇ ಹೆಚ್ಚಾಗಿದ್ದಾರೆ. ಮದುವೆ ಮತ್ತು ಇತರೇ ಶುಭ ಕಾರ್ಯಕ್ರಮ ಹಮ್ಮಿಕೊಳ್ಳುವ ಸದುಪಯೋಗವಾಗಬೇಕಿದ್ದ ಭವನ ಗೋಳಿನ ಕಥೆ ಹೇಳುತ್ತಿದೆ.

`ಗ್ರಾಮವು ಸುವರ್ಣ ಗ್ರಾಮ ಯೋಜನೆಗೆ ಸೇರಿದ್ದರೂ ನಮ್ಮ ಬಡಾವಣೆಯನ್ನು ಮೂಲ ಸೌಲಭ್ಯದಿಂದ ವಂಚಿಸಲಾಗಿದೆ. ತಕ್ಷಣ ಅಧಿಕಾರಿಗಳು, ಜನಪ್ರತಿನಿಧಿಗಳು ಬಡಾವಣೆಯ ಸಮಸ್ಯೆ ಅರಿತು ಸೌಲಭ್ಯ ಕಲ್ಪಿಸದಿದ್ದರೆ ನಿವಾಸಿಗಳೊಟ್ಟಿಗೆ ಪ್ರತಿಭಟನೆ ನಡೆಸಲಾಗುವುದು' ಎಂದು ಬಡಾವಣೆಯ ಮುಖಂಡ ರೇವಣ್ಣ ಎಚ್ಚರಿಸುತ್ತಾರೆ.

`ಸುವರ್ಣ ಗ್ರಾಮ ಯೋಜನೆಯ ಅನುದಾನದಿಂದ ಈ ಬಡಾವಣೆ ವಂಚಿತವಾಗಿದೆ. ಅಧಿಕಾರಿಗಳ ಗಮನಸೆಳೆದು ಬಡಾವಣೆ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗು ವುದು' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT