ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ತಾವರೆಕಟ್ಟೆಮೋಳೆ

Last Updated 1 ಆಗಸ್ಟ್ 2013, 10:59 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ತಾವರೆಕಟ್ಟೆಮೋಳೆ ಗ್ರಾಮ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ಸೌಲಭ್ಯಕ್ಕಾಗಿ ನಿತ್ಯವೂ ಗ್ರಾಮಸ್ಥರು ಪರಿತಪಿಸುವಂತಾಗಿದೆ.

ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಗ್ರಾಮದಲ್ಲಿ ಸುಮಾರು 550 ಜನಸಂಖ್ಯೆ ಇದೆ. ಹಿಂದುಳಿದ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.

ಗ್ರಾಮಕ್ಕೆ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಇಲ್ಲ. ಇದರ ಪರಿಣಾಮ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದ ಸರ್ಕಾರಿ ಶಾಲೆಯ ಸಮೀಪವಿರುವ ಟ್ಯಾಂಕ್‌ನಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ನೀರು ಪೂರೈಕೆಗೆ 3 ಕೊಳವೆಬಾವಿ ಕೊರೆಯಲಾಗಿದೆ. ಒಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇನ್ನೊಂದೆಡೆ ವಿದ್ಯುತ್ ವ್ಯತ್ಯಯ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕ್‌ಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಗ್ರಾಮದಲ್ಲಿರುವ ಕೈಪಂಪ್ ದುರಸ್ತಿ ಕಂಡಿಲ್ಲ. ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ನೀತಿ ತಳೆದಿರುವ ಪರಿಣಾಮ ತೊಂಬೆಗಳು ನಿರುಪಯುಕ್ತವಾಗಿ ನಿಂತಿವೆ.

ಗ್ರಾಮದಲ್ಲಿರುವ ಐದು ಬೀದಿಗಳಲ್ಲಿ ಮೂರು ಬೀದಿಗೆ ಚರಂಡಿ ವ್ಯವಸ್ಥೆಯೇ ಇಲ್ಲ. ಉಳಿದ ಎರಡು ಬೀದಿಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಬೀದಿದೀಪಗಳು ಕೆಟ್ಟಿರುವ ಪರಿಣಾಮ ರಾತ್ರಿ ವೇಳೆ ನಿವಾಸಿಗಳು ಹುಳುಹುಪ್ಪಟೆ ಕಾಟಕ್ಕೆ ಭಯಪಡುವಂತಾಗಿದೆ.

`ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಸ್ಥಳದ ಕೊರತೆಯಿದೆ. ಹೀಗಾಗಿ, ಶೌಚಾಲಯ ನಿರ್ಮಿಸಿಕೊಳ್ಳಲು ತೊಂದರೆಯಾಗಿದೆ. ಬಸವ ವಸತಿ, ಇಂದಿರಾ ಆವಾಸ್ ಯೋಜನೆಯಡಿ ಮನೆಯ ಅಡಿಪಾಯ ಹಾಕಿರುವ ಕೆಲವು ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ಸೂರಿಲ್ಲದ ನಾವು ತೊಂದರೆ ಅನುಭವಿಸುತ್ತಿದ್ದೇವೆ' ಎನ್ನುವುದು ಫಲಾನುಭವಿಗಳ ಅಳಲು.

ಚಾವಡಿ ಸಮೀಪ ಸೌರದೀಪ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಇದು ಪ್ರಯೋಜನಕ್ಕೆ ಬರುವುದಿಲ್ಲ. ಚಾಮರಾಜನಗರದಿಂದ ಹರದನಹಳ್ಳಿ ಮಾರ್ಗವಾಗಿ ಆಗೊಮ್ಮೆ ಹೀಗೊಮ್ಮೆ ಒಂದು ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತದೆ. ಈ ಬಸ್ ನಂಬಿಕೊಂಡು ಇತರೆಡೆ ತೆರಳಲು ಸಾಧ್ಯವಿಲ್ಲ. ಆಸ್ಪತ್ರೆಗೆ ಹೋಗಬೇಕಾದರೆ 7 ಕಿ.ಮೀ. ದೂರದ ಚಾಮರಾಜನಗರ ಅಥವಾ ಹರದನಹಳ್ಳಿ ಆಸ್ಪತ್ರೆಗೆ ಬರಬೇಕು. ಚಾಮರಾಜನಗರ ಮಾರ್ಗವಾಗಿ ಹರದನಹಳ್ಳಿ ಮತ್ತು ಚೆನ್ನಪ್ಪನಪುರ ಗ್ರಾಮಗಳಿಗೆ ಸಂಚರಿಸುವ ಬಸ್‌ಗಳು ತಮ್ಮ ಗ್ರಾಮದ ಮೂಲಕವೇ ಸಂಚರಿಸಲು ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಒತ್ತಾಯ.

`13ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗೆ ರೂ 6 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ವಿದ್ಯುತ್ ಬಿಲ್ ಬಾಕಿ ರೂ 3 ಲಕ್ಷ ಕಡಿತವಾಗುತ್ತದೆ. ಉಳಿದ ಹಣವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಗ್ರಾಮಗಳಿಗೆ ಹಂಚಿಕೆ ಮಾಡಲಾಗು ವುದು. ಈ ಅನುದಾನ ಬಳಸಿಕೊಂಡು ಗ್ರಾಮದ ಮೂಲ ಸೌಕರ್ಯ ಕಲ್ಪಿಸಲಾಗುವುದು' ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್. ಮಹೇಶ್ `ಪ್ರಜಾವಾಣಿ'ಗೆ ತಿಳಿಸಿದರು.  

ಬಸವ ವಸತಿ, ಇಂದಿರಾ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಬಾಕಿ ಅನುದಾನ ಬಿಡುಗಡೆಗೊಳಿಸುವಂತೆ ತಾಲ್ಲೂಕು ಪಂಚಾಯಿತಿ ಸರ್ಕಾರದ ಗಮನಕ್ಕೆ ತರಲಾಗಿದೆ. ತ್ವರಿತವಾಗಿ ಫಲಾನುಭವಿಗಳಿಗೆ ಅನುದಾನ ವಿತರಿಸಲು ಕ್ರಮಕೈಗೊಳ್ಳಲಾಗುವುದು. ತಿಂಗಳೊಳಗೆ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಹಾಗೂ ಮೋಟಾರ್ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ  ಕ್ರಮಕೈಗೊಳ್ಳಲಾಗುವುದು. ಜಿಲ್ಲಾ ಪಂಚಾಯಿತಿ ಅನುದಾನದಿಂದ ಗ್ರಾಮದಲ್ಲಿನ ತೊಂಬೆಗಳನ್ನು ದುರಸ್ತಿಪಡಿಸಲು ಕ್ರಮವಹಿಸಲಾಗುವುದು ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT