ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಸರ್ಕಾರಿ ಪಿಯು ಕಾಲೇಜು:350 ವಿದ್ಯಾರ್ಥಿಗಳಿಗೆ 5 ಕೊಠಡಿ!

Last Updated 2 ಮೇ 2012, 9:55 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಸಮರ್ಪಕ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.1984ರಲ್ಲಿ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜನ್ನು ಆರಂಭಿಸಲಾಯಿತು. ಆಗ ಪ್ರಾಥಮಿಕ ಶಾಲೆಯ ಕಟ್ಟಡದಲ್ಲೇ ತರಗತಿ ನಡೆಯುತ್ತಿದ್ದವು.

ಇಲ್ಲಿಗೆ ಬಂದ ಉಪನ್ಯಾಸಕರು ದಾವಣಗೆರೆಯಿಂದ ಓಡಾಡುತ್ತಿದ್ದರಿಂದ ರೈಲು ನಿಲ್ದಾಣಕ್ಕೆ ಹತ್ತಿರವಿರುವ ಈಗಿನ ಸ್ಥಳದಲ್ಲೇ ನೂತನ ಕಟ್ಟಡವನ್ನು ಕಟ್ಟಬೇಕು ಎಂದು ಬಯಸಿದರು. ಆಗಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಒಪ್ಪಿಸಿ ಕಾಲೇಜು ಕಟ್ಟಡವನ್ನು ಕಟ್ಟಲು ಅನುಮತಿ ಪಡೆದರು.

ಹಲವು ವರ್ಷಗಳ ಪ್ರಯತ್ನದಿಂದಾಗಿ ಸರ್ಕಾರ ಇದೇ ಸ್ಥಳದಲ್ಲಿ 5 ಕೊಠಡಿಗಳುಳ್ಳ 2 ಅಂತಸ್ತಿನ ಕಟ್ಟಡ ನಿರ್ಮಿಸಿಕೊಟ್ಟಿದೆ. ಆದರೆ, ಈ ನೂತನ ಕಟ್ಟಡದ ಕಿಟಕಿ ಬಾಗಿಲುಗಳು ಸುಸ್ಥಿತಿಯಲ್ಲಿಲ್ಲ. ಕೊಠಡಿಗಳಲ್ಲಿ ನಿರ್ವಹಣೆಯ ಕೊರತೆ ಕಂಡುಬರುತ್ತಿದೆ ಎಂಬ ಮಾತು ವಿದ್ಯಾರ್ಥಿಗಳದಾಗಿದೆ.

ಕಾಲೇಜಿನಲ್ಲಿ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿದ್ದು, ಮೂರೂ ವಿಭಾಗಗಳಿಗೆ ನೂತನ ಕಟ್ಟಡದಲ್ಲಿರುವುದು ಕೇವಲ 5 ಕೊಠಡಿ ಮಾತ್ರ. ಅದರಲ್ಲಿ ಒಂದು ಕೊಠಡಿಯಲ್ಲಿ ಕಂಪ್ಯೂಟರ್ ತರಗತಿ ನಡೆಯುತ್ತದೆ.

ಉಳಿದ ತರಗತಿಗಳನ್ನು ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ನಡೆಸಲಾಗುತ್ತಿದೆ. ಈ ಕೊಠಡಿಗಳು ಸಹ ಸಮರ್ಪಕವಾಗಿಲ್ಲ.ಈ ಕೊಠಡಿಗಳ ಹೆಂಚುಗಳು ಬಿದ್ದಿದ್ದು, ಮಳೆಗಾಲದಲ್ಲಿ ನೀರೆಲ್ಲಾ ತರಗತಿಯ ಒಳಗೆ ತುಂಬುತ್ತದೆ. ಕಾಲೇಜಿನ ಹಣವನ್ನು ನಿರ್ವಹಣೆ, ಅಭಿವೃದ್ಧಿಗೆ ಬಳಸಲಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಇಲ್ಲಿ ಸರಿಯಾಗಿ ವಿದ್ಯಾರ್ಥಿವೇತನ ಮತ್ತಿತರ ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ.

ವಿಜ್ಞಾನ ವಿಭಾಗವಿದ್ದರೂ ಪ್ರಯೋಗಾಲಯವಿಲ್ಲ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಇಲ್ಲ. ಗ್ರಂಥಾಲಯದಲ್ಲಿ ಅಗತ್ಯ ಪುಸ್ತಕಗಳು ಇಲ್ಲ ಎಂಬುದು ಇಲ್ಲಿನ ವಿದ್ಯಾರ್ಥಿಗಳ ದೂರು.

ಜೂನ್ ತಿಂಗಳಲ್ಲಿ ತರಗತಿಗಳು ಆರಂಭವಾಗುತ್ತವೆ. ಆ ವೇಳೆಗಾದರೂ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT