ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಕ್ಕಾಗಿ ಹಕ್ಕೊತ್ತಾಯ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸ್ವಚ್ಛತಾ ಕಾರ್ಯ, ಮಲ ಹೊರುವುದು ಸೇರಿದಂತೆ ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರು  ಬೇರೆ ಉದ್ಯೋಗ ಮಾಡುವ ಮೂಲಕ ಸ್ವಾಭಿಮಾನದ ಜೀವನ ನಡೆಸುವಂತಾಗಬೇಕು~ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಕರೆ ನೀಡಿದರು.

ಸಾವಿತ್ರಿಬಾಯಿ ಫುಲೆ ಸ್ಲಂ ಮಹಿಳಾ ಸಂಘಟನೆಯು ಸ್ಲಂ ಜನಾಂದೋಲನ ಸಂಘಟನೆಯ ಸಹಯೋಗದಲ್ಲಿ ನಗರದ ಕಬ್ಬನ್ ಉದ್ಯಾನದ ಆವರಣ ದಲ್ಲಿರುವ ಎನ್.ಜಿ.ಒ. ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನ ಶಕ್ತಿ ಜಾಗೃತಿ ಸಮಾವೇಶದಲ್ಲಿ ಹಕ್ಕೊತ್ತಾಯ ಮನವಿ ಸ್ವೀರಿಸಿ  ಮಾತನಾಡಿದರು.

`ಹಿಂದುಳಿದವರು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವತ್ತ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ಹೊಸ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು~ ಎಂದರು.

`ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಬಂದವರು ತಾವು ನಗರಕ್ಕೆ ಬಂದ ಉದ್ದೇಶ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೊಳೆಗೇರಿ ನಿವಾಸಿಗಳಿಗೆ ಸೂಕ್ತ ಸೌಲಭ್ಯವನ್ನು ತುರ್ತಾಗಿ ಕಲ್ಪಿಸುವಂತೆ ವಿಧಾನಪರಿಷತ್‌ನಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು~ ಎಂದು ಹೇಳಿದರು.

ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, `ಬಡವರನ್ನು ನಿರ್ಲಕ್ಷಿಸುವ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ~ ಎಂದರು.

ಸುಪ್ರೀಂ ಕೋರ್ಟ್‌ನ ಆಹಾರ ಭದ್ರತೆ ಸಲಹಾ ಸಮಿತಿ ಸದಸ್ಯ ಕ್ಲಿಪ್ಟನ್ ರೊಸಾರಿಯೋ, `ಗ್ರಾಮೀಣ ಪ್ರದೇಶ ಮತ್ತು ನಗರದ ಕೊಳೆಗೇರಿಗಳಲ್ಲಿನ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಕೂಡಲೇ ಈ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಿಸುವತ್ತ ಗಮನ ಹರಿಸಬೇಕು~ ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ಸಾವಿತ್ರಿಬಾಯಿ ಫುಲೆ ಸ್ಲಂ ಮಹಿಳಾ ಸಂಘಟನೆಯ ಸಂಚಾಲಕಿ ಚಂದ್ರಮ್ಮ ಅವರು ಮೋಟಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ಗೌರಮ್ಮ, ಪಿಯುಸಿಎಲ್ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ವೈ.ಜೆ. ರಾಜೇಂದ್ರ, ಸ್ಲಂ ಜನಾಂದೋಲನ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಎ. ನರಸಿಂಹಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT