ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಕ್ಕೆ ಆಗ್ರಹಿಸಿ ರ‌್ಯಾಲಿ

Last Updated 16 ಸೆಪ್ಟೆಂಬರ್ 2011, 5:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವ ಮಹೇಬೂಬ್ ನಗರ ಹಾಗೂ ಪಕ್ಕದ ಕಾಲೊನಿಗಳಿಗೆ ಮೂಲ ಸೌಲಭ್ಯ ಒದಗಿಸದಿರುವುದನ್ನು ವಿರೋಧಿಸಿ ಗುರುವಾರ ಆ ಪ್ರದೇಶದ ನಾಗರಿಕರು ರ‌್ಯಾಲಿ ನಡೆಸಿ ಮನವಿಪತ್ರ ಸಲ್ಲಿಸಿದರು.

ಮಹಾತ್ಮಾಗಾಂಧಿ ವೃತ್ತದಿಂದ ಮುಖ್ಯರಸ್ತೆ ಮೂಲಕ ರ‌್ಯಾಲಿ ನಡೆಸಲಾಯಿತು. `ನಗರ ಸಭೆವಾಲೋ ಶರಮಕರೋ, ಗಂಧಿ ನಾಲಿ ಸಾಫ ಕರೋ~ `ನಗರಸಭೆ ಅಧಿಕಾರಿಗಳಿಗೆ ಧಿಕ್ಕಾರ~ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು. ತಹಸೀಲ್ದಾರ್ ಹಳೇ ಕಚೇರಿ ಆವರಣದಲ್ಲಿ ತಹಸೀಲ್ದಾರರಿಗೆ ಬರೆದ ಮನವಿಪತ್ರವನ್ನು ಶಿರಸ್ತೇದಾರ ಶಂಕರ ರಾಠೋಡ ಅವರಿಗೆ ಸಲ್ಲಿಸಲಾಯಿತು.

ಕಳೆದ 9 ವರ್ಷಗಳಿಂದ ಮನವಿಪತ್ರಗಳನ್ನು ಸಲ್ಲಿಸಲಾಗುತ್ತಿದ್ದರೂ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಕೆಲವು ಸಲ ನಗರಸಭೆಗೆ ಮುತ್ತಿಗೆ ಹಾಕಲಾಗಿದ್ದರೂ ಪ್ರಯೋಜನ ಆಗಿಲ್ಲ. ಬದಲಾಗಿ ನಗರಸಭೆಯ ಕೆಲ ಅಧಿಕಾರಿಗಳು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ನಾಗರಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನವಿಪತ್ರದಲ್ಲಿ ಹೇಳಲಾಗಿದೆ.

ಇಲ್ಲಿನ ಎಲ್ಲ ರಸ್ತೆಗಳಲ್ಲಿ ಚರಂಡಿ ನೀರು ನಿಂತಿದ್ದು ನಡೆಯಲು ಬಾರದಂತಾಗಿದೆ. ಮನೆಗಳ ಹೊರಗೆ ಬರಬೇಕಾದರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ನಳಗಳಿಗೆ ನಿಯಮಿತವಾಗಿ ನೀರು ಬರುತ್ತಿಲ್ಲ.

ಓಣಿಯಲ್ಲಿನ ಕಸವನ್ನು ಪ್ರತಿದಿನ ವಿಲೇವಾರಿ ಮಾಡುತ್ತಿಲ್ಲ. ಇಲ್ಲಿನ ವಿದ್ಯುತ್ ಕಂಬಗಳಿಗೆ ದೀಪಗಳನ್ನು ಅಳವಡಿಸದ ಕಾರಣ ರಾತ್ರಿ ಕತ್ತಲೆ ಆವರಿಸುತ್ತಿದೆ ಎಂದು ನಾಗರಿಕರು ಗೋಳು ತೋಡಿಕೊಂಡರು.

ಓಣಿಯ ಪ್ರಮುಖರಾದ ಅಲ್ತಾಫ್ ಅಹ್ಮದ್, ಜುಲ್ಫೇಕಾರ್ ಕುರೇಶಿ, ಖಾಜಾಭಾಯಿ ಕುರೇಶಿ, ಜಾಕೀರಮಿಯ್ಯಾ, ಮಹೇಬೂಬ್‌ಸಾಬ್ ಮುಂತಾದವರು ಪಾಲ್ಗೊಂಡಿದ್ದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT