ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಗಳಿಗೆ ಕಾಯುತ್ತಿರುವ ನ್ಯಾಯಾಲಯಗಳು

Last Updated 16 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

‘ನ್ಯಾಯಾಲಯಗಳು ಪ್ರಜಾಪ್ರಭುತ್ವದ ದೇವಾಲಯಗಳು’. ಎಲ್ಲೋ ಇರುವ ದೇವರನ್ನು ನಂಬಿ ಆತನು ಕೊಡುವ ನ್ಯಾಯಕ್ಕಾಗಿ ಕಾಯ್ದು ಕುಳಿತು ಕೊಳ್ಳುವ ಕಾಲ  ಇದಲ್ಲ. ‘ಇಲ್ಲಿ ನಡೆದ ತಪ್ಪಿಗೆ ಇಲ್ಲಿಯೇ ಶಿಕ್ಷೆ, ಇಲ್ಲಿ ಆದ ಅನ್ಯಾಯಕ್ಕೆ ಇಲ್ಲಿಯೇ ಪರಿಹಾರ’ ಎಂಬುದು ಆಧುನಿಕ ನ್ಯಾಯಶಾಸ್ತ್ರದ ಸಿದ್ಧಾಂತ.

ಆದರೆ ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟುಕೊಂಡು ಬಂದ ಎಷ್ಟೋ ಜನರಿಗೆ ಇಂದು ನಿರಾಶೆಯಾಗುತ್ತಿದೆ. ನಿಗದಿತ ಸಮಯಕ್ಕೆ ಆತನಿಗೆ ನ್ಯಾಯ ದೊರಕುತ್ತಿಲ್ಲ. ಅದಕ್ಕೆ ನೂರೆಂಟು ಕಾರಣ. ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳು ಮತ್ತು ಅಗತ್ಯ ಮೂಲಸೌಲಭ್ಯಗಳು ಇಲ್ಲದೆ ಇರುವುದು ಕಂಡು ಬರುತ್ತಿದೆ. ಸರ್ಕಾರದ ಅನೇಕ ಇಲಾಖೆಗಳು ಗಣಕೀಕರಣಗೊಂಡಿವೆ.  ಕೆಲವು ಇಲಾಖೆಗಳಂತೂ ಬಹುರಾಷ್ಟ್ರೀಯ ಕಂಪೆನಿಗಳಂತೆ ಶೃಂಗಾರಗೊಂಡಿವೆ. ಆದರೆ ಕೆಲವು ನ್ಯಾಯಾಲಯಗಳು ಇನ್ನೂ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಯಾವುದೋ ಇಲಾಖೆ ಬೇಡವಾಗಿ ಬಿಟ್ಟು ಹೋದ ಹಳೆಯ ಕಟ್ಟಡಗಳನ್ನು ನ್ಯಾಯಾಂಗಕ್ಕೆ ನೀಡಲಾಗುತ್ತಿದೆ. ಗಾಳಿ, ಬೆಳಕು ಇಲ್ಲದ, ಕುಳಿತುಕೊಳ್ಳಲೂ ಸಾಕಷ್ಟು ಸ್ಥಳವಿಲ್ಲದ ಕಟ್ಟಡಗಳಲ್ಲಿ ದೂಳು ಹಿಡಿದ ಕಡತಗಳನ್ನು ಮುಂದೆ ಇಟ್ಟುಕೊಂಡು ಕುಳಿತುಕೊಳ್ಳಬೇಕಾಗಿದೆ. ಬಹುಪಾಲು ರಾಜಕಾರಣಿಗಳು ವಕೀಲಿ ವೃತ್ತಿ ಮಾಡಿದವರೇ ಇದ್ದರೂ ನ್ಯಾಯಾಲಯಗಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಕಂದಾಯ ಇಲಾಖೆಗೆ ಭವ್ಯವಾದ ಮಿನಿ ವಿಧಾನಸೌಧಗಳನ್ನು ಕಟ್ಟಲಾಗಿದೆ.

ಆದರೆ ಇದೇ ಉತ್ಸಾಹವನ್ನು ನ್ಯಾಯಾಲಯಗಳಿಗೆ ಕಟ್ಟಡ ಕಟ್ಟಲು ತೋರಿಸುತ್ತಿಲ್ಲ. ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಇದೇ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಲವಾರು ಕಾರಣಗಳನ್ನು ಹೊತ್ತುಕೊಂಡು ನ್ಯಾಯಾಲಯದ ಮೆಟ್ಟಿಲನ್ನೇರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಇದರಲ್ಲಿ ಸರ್ಕಾರದ ವಿರುದ್ಧವೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ವಿಶೇಷ. ಕಾರ್ಯಾಂಗ, ಶಾಸಕಾಂಗಗಳು ತಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿದಲ್ಲಿ ನ್ಯಾಯಾಂಗದ ಮೇಲೆ ಒತ್ತಡ ಕಡಿಮೆಯಾಗಬಲ್ಲದು, ಪ್ರಕರಣಗಳ ಹೊರೆಯೂ ಕಡಿಮೆಯಾಗುತ್ತದೆ. ಆದರೆ ಈಗ ಅಂತಹ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ. ಕರ್ತವ್ಯವನ್ನು ನಿರ್ವಹಿಸುವಂತೆ ಕಾರ್ಯಾಂಗಕ್ಕೆ ಹೆಚ್ಚುಕಡಿಮೆ ನಿತ್ಯವೂ ಕೋರ್ಟುಗಳು ಎಚ್ಚರ ನೀಡಬೇಕಾಗಿದೆ. ಇದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ ನ್ಯಾಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಈಚಿನ ಒಂದು ಅಂಕಿ ಅಂಶಗಳ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 50 ಸಾವಿರ ಪ್ರಕರಣಗಳು, ಹೈಕೋರ್ಟ್‌ಗಳಲ್ಲಿ ಸುಮಾರು 38ಲಕ್ಷ ಪ್ರಕರಣಗಳು ಮತ್ತು ಕೆಳನ್ಯಾಯಾಲಯಗಳಲ್ಲಿ 2.64 ಕೋಟಿ ಪ್ರಕರಣಗಳು ಇತ್ಯರ್ಥಕ್ಕಾಗಿ ಬಾಕಿ ಉಳಿದಿದ್ದವು.

ಭಾರತದ ಜನಸಂಖ್ಯೆ ಸುಮಾರು 116 ಕೋಟಿಯಾಗಿದೆ. ಆದರೆ ನ್ಯಾಯಾಧೀಶರುಗಳ ಸಂಖ್ಯೆ ಕೇವಲ ಸುಮಾರು 15 ಸಾವಿರಮಾತ್ರ.  ಅಂದರೆ 10 ಲಕ್ಷ ಜನಸಂಖ್ಯೆಗೆ 13 ಜನ ನ್ಯಾಯಾಧೀಶರು. ಇದೇ ಅಂಕಿಅಂಶಗಳನ್ನು ಅಭಿವೃದ್ಧಿಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ತುಂಬ ವ್ಯತ್ಯಾಸ ಕಂಡುಬರುತ್ತದೆ.  ಅಮೆರಿಕದಲ್ಲಿ 10 ಲಕ್ಷ ಜನಸಂಖ್ಯೆಗೆ 104 ಜನ, ಕೆನಡಾದಲ್ಲಿ 10 ಲಕ್ಷ ಜನಸಂಖ್ಯೆಗೆ 75 ಜನ, ಚೀನಾದಲ್ಲಿ 10ಲಕ್ಷ ಜನಸಂಖ್ಯೆಗೆ 60 ಜನ ನ್ಯಾಯಾಧೀಶರು ಕೆಲಸ ಮಾಡುತ್ತಾರೆ. 2002 ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ 10 ಲಕ್ಷ ಜನಸಂಖ್ಯೆಗೆ ಕನಿಷ್ಠ 50 ಜನ ನ್ಯಾಯಾಧೀಶರಾದರೂ ಇರುವಂತೆ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿತು. ಆದರೆ ಇಲ್ಲಿಯವರೆಗೆ ಯಾವುದೇ ಬದಲಾವಣೆಯು ಕಂಡು ಬಂದಿಲ್ಲ.

ಸೂಕ್ತ ಕಟ್ಟಡದ ಮತ್ತು ಸಿಬ್ಬಂದಿಯ ಕೊರತೆಯಂತೂ ಎಲ್ಲೆಡೆಗೂ ಕಂಡು ಬರುತ್ತಿದೆ. ನ್ಯಾಯಾಲಯಕ್ಕೆ ಮೂಲಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರಗಳದು ತೀವ್ರ ನಿರ್ಲಕ್ಷ್ಯ. ಆದರೂ, ‘ನ್ಯಾಯದಾನದಲ್ಲಿ ವಿಳಂಬವಾದರೆ ನ್ಯಾವನ್ನೇ ತಿರಸ್ಕರಿಸಿದಂತೆ’ ಎಂಬ ಕಾರಣದಿಂದ ಸ್ವಯಂ ಶಿಸ್ತು ಮತ್ತು ದಕ್ಷತೆಯಿಂದ ಭಾರತದ ನ್ಯಾಯಾಂಗ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇದೆ. ಹೊರೆ ಇಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಲೋಕ ಅದಾಲತ್, ಮಧ್ಯಸ್ಥಿಕೆ ಕೇಂದ್ರ, ಸಂಚಾರಿ ನ್ಯಾಯಾಲಯಗಳು, ಸಂಜೆ ನ್ಯಾಯಾಲಯ ಹಾಗೂ ಗ್ರಾಮ ನ್ಯಾಯಾಲಯಗಳೂ ಸ್ಥಾಪನೆಯಾಗಿವೆ. 

 ಸರ್ಕಾರ ಎಂದರೆ ಕೇವಲ ಕಾರ್ಯಾಂಗವಾಗಲಿ, ಶಾಸಕಾಂಗವಾಗಲಿ ಅಥವಾ ನ್ಯಾಯಾಂಗವಾಗಲಿ ಅಲ್ಲ. ಸಂವಿಧಾನದ ಈ ಮೂರು ಅಂಗಗಳು ಸೇರಿ ಕೆಲಸ ಮಾಡುವ ಒಂದು ವ್ಯವಸ್ಥೆ. ಅಂಥ ವ್ಯವಸ್ಥೆಯ ಭಾಗವಾಗಿರುವ ನ್ಯಾಯಾಲಯಗಳಿಗೆ ಅಗತ್ಯವಾಗಿ ಬೇಕಾಗಿರುವ ಕಟ್ಟಡಗಳು, ನ್ಯಾಯಾಧೀಶರು, ಸಿಬ್ಬಂದಿ, ಗಣಕಯಂತ್ರಗಳು, ಸಲಕರಣೆಗಳು, ವಸತಿ ಗೃಹಗಳು, ಕಕ್ಷಿದಾರರಿಗೆ ಕುಡಿಯುವ ನೀರು, ಉಪಹಾರ ಮಂದಿರ, ಕುಳಿತುಕೊಳ್ಳಲು ಆಸನ, ಶೌಚಾಲಯ, ಪೊಲೀಸ್ ಭದ್ರತೆ ಹಾಗೂ ತುರ್ತು ಚಿಕಿತ್ಸೆ ಹೀಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದು ಕಾರ್ಯಾಂಗದ ಜವಾಬ್ದಾರಿ.

-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT