ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯವಿಲ್ಲದ ನೌಕರರ ವಸತಿ ಸಂಕೀರ್ಣ

Last Updated 26 ಮೇ 2012, 5:30 IST
ಅಕ್ಷರ ಗಾತ್ರ

ಲಿಂಗಸುಗೂರ(ಮಸ್ಕಿ): ಸರ್ಕಾರಿ ನೌಕರರಿಗೆ ಸರ್ಕಾರಗಳು ಹಲವು ಸವಲತ್ತುಗಳನ್ನು ನೀಡುವ ಸರ್ಕಾರ ವಸತಿ ಗೃಹಗಳನ್ನು ನೀಡುತ್ತದೆ. ತಾಲ್ಲೂಕಿನ ಮಸ್ಕಿ ಪಟ್ಟಣದ ಜಲಸಂಪನ್ಮೂಲ ಇಲಾಖೆಗೆ ಸೇರಿದ ನೌಕರರ ವಸತಿ ಸಂಕೀರ್ಣ (ಪಿಡಬ್ಲ್ಯೂಡಿ ಕ್ಯಾಂಪ್)ದಲ್ಲಿ ಖಾಸಗಿ ವ್ಯಕ್ತಿಗಳು ವಾಸವಾಗಿದ್ದು ಒಂದಡೆಯಾದರೆ, ಹಂದಿಗೂಡಿನಂತಿರುವ ಈ ಮನೆಗಳಲ್ಲಿ ವಾಸಿಸುವ ನೌಕರರ ಪಾಡು ಹೇಳತೀರದು ಎಂದು ಅವ್ಯವಸ್ಥೆಯ ವಸತಿ ಗೃಹಗಳಲ್ಲಿ ವಾಸಿಸುವ ನೌಕರರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾದ ತುಂಗಭದ್ರಾ ಎಡದಂಡೆ ನಾಲೆ ನಿರ್ಮಾಣದ ವೇಳೆ ಕಬ್ಬಿಣ, ಸಿಮೆಂಟ್ ಇತರೆ ಸಾಮಗ್ರಿ ಸಂಗ್ರಹಿಸಲು ಹಾಗೂ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ವಾಸಿಸಲೆಂದು ನಾಲ್ಕು ದಶಕಗಳ ಹಿಂದೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮನೆಗಳ ಸಂಕೀರ್ಣ ಇದೀಗ ಪಿಡಬ್ಲ್ಯೂಡಿ ಕ್ಯಾಂಪ್ ಎಂದು ಕರೆಯಲ್ಪಡುತ್ತದೆ.
 
ಇಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ಮಸ್ಕಿ ನಾಲಾ ಯೋಜನೆ ನೌಕರರು ವಾಸಿಸುತ್ತಿದ್ದಾರೆ. ವಿಚಿತ್ರವೆಂದರೆ ನೌಕರರಿಗಿಂತ ಖಾಸಗಿಯವರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಅಂದೇ ಕುಡಿಯುವ ನೀರು ಪೂರೈಸುವ ಕಬ್ಬಿಣದ ಪೈಪ್‌ಲೈನ್, ನೀರು ಸಂಗ್ರಹಿಸುವ ತೊಟ್ಟಿ ತುಕ್ಕು ಹಿಡಿದು ಹಾಳಾಗಿವೆ. ಅದೇ ಪೈಪ್‌ಲೈನ್ ಮೂಲಕ ನೀರು ಪೂರೈಸುತ್ತಿರುವುದರಿಂದ ತುಕ್ಕು ಮಿಶ್ರಿತ ಗಲೀಜು ನೀರೆ ಇಲ್ಲಿನ ಜನರಿಗೆ ಗತಿ. ನೌಕರರಲ್ಲದವರು ಇಲ್ಲಿ ವಾಸಿಸಬಾರದೆಂಬ ನಿಯಮವಿದ್ದರೂ ಅದನ್ನು ಪಾಲಿಸುವಲ್ಲಿ ಇಲ್ಲಿನ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ಮುಳ್ಳುಕಂಟಿಗಳ ಮಧ್ಯೆ ಶಿಥಿಲಗೊಂಡ ಶೀಟ್ ಮನೆಗಳಲ್ಲಿ ಅನಿವಾರ್ಯವಾಗಿ ದಿನ ದೂಡುತ್ತಿರುವ ನೌಕರರ ಕಾಲೊನಿಯಲ್ಲಿ ಚರಂಡಿ, ರಸ್ತೆ, ಬೆಳಕಿನ ವ್ಯವಸ್ಥೆಯೂ ಇಲ್ಲ. ಪ್ರತಿ ವರ್ಷ ಬರುವ ನಿರ್ವಹಣೆ ಹಣವನ್ನು ಅಧಿಕಾರಿಗಳು ತಮ್ಮ ವಸತಿ ಗೃಹಗಳ ಅಂದ ಚಂದಕ್ಕೆ ವೆಚ್ಚಮಾಡುತ್ತಾರೆ. ನೌಕರರ ಗೃಹಗಳಿಗೆ ದ್ವಿತೀಯ ದರ್ಜೆ ನಾಗರಿಕರಂತೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ ಎಂದು ಕೆಲ ನೌಕರರು ಭಯದಿಂದಲೆ ತಿಳಿಸಿದರು.

ಕ್ಯಾಂಪ್ ಏರಿಯಾದಲ್ಲಿ ಅನಧಿಕೃತವಾಗಿ ವಾಸಿಸುವ ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಎಂಜಿನಿಯರ್ ಒಬ್ಬರು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಬಳಿ ವಸತಿ ಗೃಹಗಳ ಮಾಹಿತಿ, ಬಾಡಿಗೆ ಸಂಗ್ರಹದ ಬಗ್ಗೆ ಮಾಹಿತಿ ಕೇಳಿದರೆ ಅನುಚಿತವಾಗಿ ವರ್ತಿಸುತ್ತಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕ್ಯಾಂಪ್ ಏರಿಯಾದ ಎಲ್ಲಾ ಅಕ್ರಮಗಳಿಗೆ ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಯಮನೂರು ಒಡೆಯರ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT