ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ರತ್ನಪುರಿ ಜಾತ್ರೆ ರಂಗು

Last Updated 19 ಫೆಬ್ರುವರಿ 2011, 10:10 IST
ಅಕ್ಷರ ಗಾತ್ರ


ಹುಣಸೂರು: ಹಿಂದು-ಮುಸ್ಲಿಮರ ನಡುವೆ ಸೌಹಾರ್ದ ಸಾರುವ ತಾಲ್ಲೂಕಿನ ರತ್ನಾಪುರಿಯ 47ನೇ ವರ್ಷದ  ಹನುಮಂತೋತ್ಸವ ಮತ್ತು ಜಮಾಲ್ ಬೀಬಿ ಉರುಸ್ ಶುಕ್ರವಾರದಿಂದ ಆರಂಭಗೊಂಡಿದೆ. ಈ ಜಾತ್ರೆ ಮೂರು ದಿನಗಳ ಕಾಲ ನಡೆಯಲಿದೆ.ಜಾತ್ರೆಯಲ್ಲಿ ರೈತರಿಗೆ ಅಗತ್ಯವಾದ ಜಾನುವಾರು, ನೇಗಿಲು ಮತ್ತು ಇತರೆ ಕೃಷಿ ಪರಿಕರ ಮಾರಾಟ ಜೋರಾಗಿ ನಡೆಯುತ್ತದೆ. ಮೈಸೂರು ಜಿಲ್ಲೆಯಲ್ಲಿ ಚುಂಚನಕಟ್ಟೆ ದನದ ಜಾತ್ರೆ ಅತೀ ದೊಡ್ಡ ಜಾತ್ರೆಯಾಗಿದ್ದು, ಎರಡನೇ  ದೊಡ್ಡ ದನಗಳ ಜಾತ್ರೆ ರತ್ನಾಪುರಿ ಜಾತ್ರೆಯಾಗಿದೆ. ಹನುಮನ ದೇವಾಲಯ ಸೇರಿದಂತೆ ಸಂತೆಕೆರೆ ಕೋಡಿವರೆಗೂ   13 ಎಕರೆ ಪ್ರದೇಶದಲ್ಲಿ ಅಂದಾಜು 6-7 ಸಾವಿರ ಉತ್ತಮ ತಳಿ ರಾಸುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ.

ಆಕರ್ಷಣೆ:ಜಾನುವಾರು ಜಾತ್ರೆಯಲ್ಲಿ ಗಿರಾಕಿಯನ್ನು ಆಕರ್ಷಿಸಲು, ರೈತರು ಹೋರಿಗಳನ್ನು ಅಲಂಕರಿಸಿ ವಾದ್ಯಗಳೊಂದಿಗೆ   ಕರೆತರುವರು. ಹಲವಾರು ಜಾನುವಾರುಗಳಿಗೆ ಬಿಸಿಲಿನ ತಾಪ ತಟ್ಟದಂತೆ ಶಾಮಿಯಾನ ಹಾಕಿಸಿ, ಬಣ್ಣ ಬಣ್ಣದ  ಗೌನನ್ನು ಹೊದಿಸಿ, ಕೊಂಬುಗಳಿಗೆ ಟೇಪ್ ಕಟ್ಟಿ ಸಿಂಗರಿಸಲಾಗಿದೆ.ರತ್ನಾಪುರಿ ದನದ ಜಾತ್ರೆಗೆ ಮೈಸೂರು, ಹಾಸನ, ಅರಸಿಕೆರೆ, ಕೊಡಗು, ಕೇರಳದ ಗಡಿ ಭಾಗದಿಂದಲೂ ಗಿರಾಕಿ ಗಳು ಬಂದು ಉತ್ತಮ ತಳಿ ಜಾನುವಾರುಗಳನ್ನು ಖರೀದಿಸುತ್ತಾರೆ.

ವಹಿವಾಟು
: ಒಂದು ವಾರ ನಡೆಯುವ ದನದ ಜಾತ್ರೆಯಲ್ಲಿ ಪ್ರತಿ ದಿನವೂ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಕಳೆದ ವರ್ಷ ಕೆ.ಆರ್.ನಗರ ತಾಲ್ಲೂಕಿನ ಮೂಡಲಕೊಪ್ಪಲಿನವರಿಗೆ ಸೇರಿದ ಜೋಡೆತ್ತು ರೂ 1.40 ಲಕ್ಷ ಗಳಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಪ್ರಸಕ್ತ ಸಾಲಿನಲ್ಲಿ ಪಟ್ಟಣದ ಕರೀಗೌಡರ ಬೀದಿಯ ರಾಜುಗೆ ಸೇರಿದ ಜೋಡೆತ್ತು ರೂ 1.80 ಲಕ್ಷ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ  ಆರ್.ಪ್ರಭು ಹೇಳಿದರು.ಜಾತ್ರೆ ಪ್ರತಿ ವರ್ಷವೂ ನಡೆದಿದ್ದರು, ಜಾತ್ರಾ ಸಮಿತಿಯವರು ಜಾನುವಾರುಗಳಿಗೆ ಅವಶ್ಯಕವಾದ ನೀರಿನ  ಸೌಲಭ್ಯ ಕಲ್ಪಿಸುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ.

ಸಾವಿರಾರು ಜಾನುವಾರುಗಳು ಜಾತ್ರೆಗೆ ಸೇರುತ್ತಿದ್ದರೂ ಜಾತ್ರೆ  ಸ್ಥಳದಲ್ಲಿ  ಒಂದೆರಡು ನೀರು ಸಂಗ್ರಹ ಟ್ಯಾಂಕ್‌ಗಳಿವೆ. ಜಾನುವಾರುಗಳೊಂದಿಗೆ ಬರುವ ರೈತರಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಜಾತ್ರೆ ಪ್ರದೇಶದಲ್ಲಿ ಹಾಕಿರುವ ಬೆರಳೆಣಿಕೆ ನಲ್ಲಿಗಳಲ್ಲಿ ನೀರು ಹಿಡಿಯಲು  ಗಂಟೆ ಗಟ್ಟಲೆ ಸಾಲು  ನಿಲ್ಲಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT