ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಂದ ಸಮಯ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪೋಷಕ ಪಾತ್ರಗಳಿಂದ ಕನ್ನಡಿಗರ ಮನಸ್ಸು ತುಂಬಿಕೊಂಡಿರುವ ನಟ ಕೆ.ಎಸ್.ಅಶ್ವತ್ಥ್. ಅವರ ಮೊಮ್ಮಗ ಈ ಸ್ಕಂದ ಅಶ್ವತ್ಥ್. ಆಕರ್ಷಕ ಮೈಕಟ್ಟಿನ ಕಣ್ತುಂಬ ಕನಸು ಹೊತ್ತುಕೊಂಡಿರುವ ಸ್ಕಂದ ಮೂಲತಃ ಕ್ರೀಡಾಪಟು.

ಈಜು, ಸೈಕ್ಲಿಂಗ್, ರನ್ನಿಂಗ್ ಮೂರನ್ನೂ ಮಾಡುವ ಟ್ರೈಟ್ಲಾನ್ ಹೆಸರಿನ ಕ್ರೀಡೆಯಲ್ಲಿ ಅವರು ರಾಷ್ಟ್ರೀಯ ಮಟ್ಟದ ಆಟಗಾರ. ಈಜಿನಲ್ಲಿ ಸಾಕಷ್ಟು ಚಿನ್ನದ ಪದಕಗಳನ್ನು ಪಡೆದಿದ್ದರೂ, ತಕ್ಕ ಪ್ರೋತ್ಸಾಹ ದೊರಕದೇ ಉತ್ಸಾಹ ಕಳೆದುಕೊಂಡವರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶಗಳುಆರ್ಥಿಕ ಕೊರತೆಯಿಂದ ಕೈಗೂಡದ ಕಾರಣ ಸ್ಕಂದ ಬಣ್ಣದ ಬದುಕನ್ನು ಆರಿಸಿಕೊಳ್ಳಬೇಕಾಯಿತು. ತಂದೆ ಶಂಕರ್ ಅಶ್ವತ್ಥ್ ಅವರಲ್ಲಿ ತಮ್ಮ ಮನದಾಳವನ್ನು ಹೇಳಿಕೊಂಡು ನಟನಾ ತರಬೇತಿ ಸಂಸ್ಥೆ ಸೇರಿದರು.

ನಂತರ `ಎಲ್ಲಿ ಜಾರಿತೋ ಮನವು~ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಕೆಲವು ದಿನಗಳು ಕಳೆದ ನಂತರ ಅದೇ ಧಾರಾವಾಹಿಯಲ್ಲಿ ಖಳನ ಪಾತ್ರ ನಿರ್ವಹಿಸಿದರು. ಅದು ಮುಗಿದ ಕೂಡಲೇ `ಮುತ್ತೈದೆ~ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶನದೊಂದಿಗೆ ಪಾತ್ರವೂ ಸಿಕ್ಕಿತು.

ಒಂದು ದಿನ `ಯಾರೇ ನೀ ಮೋಹನಿಯಾ?~ ಸಿನಿಮಾದ ವಿಲನ್ ಪಾತ್ರಕ್ಕೆ ಅವಕಾಶ ಬಂತು. ಅದರ ನಂತರ ಆರ್. ಎಸ್.ಗೌಡ ನಿರ್ಮಾಣದ `ಸಂಕ್ರಾಂತಿ~ ಚಿತ್ರದಲ್ಲಿ ಎರಡನೇ ನಾಯಕನಾದರು.

`ಇದೀಗ ಸಂಕ್ರಾಂತಿ ಮುಗಿದು ಎರಡು ತಿಂಗಳು ಕಳೆದರೂ ಅವಕಾಶಗಳು ಬರುತ್ತಿಲ್ಲ~ ಎಂದು ನೊಂದುಕೊಳ್ಳುವ ಅವರಿಗೆ ಅಪ್ಪ ಶಂಕರ್ ಅಶ್ವತ್ಥ್ `ಸಿನಿಮಾ ಬಿಡುಗಡೆಯಾಗುವ ತನಕ ಕಾಯಬೇಕು~ ಎಂದು ಬುದ್ಧಿ ಮಾತು ಹೇಳಿದ್ದಾರೆ. 

`ಈ ಕ್ಷೇತ್ರದಲ್ಲಿ ನಾವು ಹೆಸರಿಗೆ ಮಾತ್ರ ಇದ್ದೇವೆ. ಯಾರ ಪರಿಚಯವೂ ಅಷ್ಟಾಗಿ ಇಲ್ಲ. ಹೇಗೆ ಅವಕಾಶ ಕೇಳಬೇಕು ಎಂಬುದೂ ಗೊತ್ತಿಲ್ಲ. ನಮ್ಮ ತಾತ ಕೂಡ ಹಾಗೆಯೇ ಇದ್ದರು. ನನಗೆ ಶಿಫಾರಸು ಮಾಡಲು ಯಾರೂ ಗೊತ್ತಿಲ್ಲ ಎನ್ನುತ್ತಿದ್ದರು~ ಎಂದು ನುಡಿಯುತ್ತಾರೆ ಸ್ಕಂದ.

`ನನ್ನ ವಯಸ್ಸಿನ ಹುಡುಗರು ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ನಾನೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದೆ~ ಎನ್ನುವ ಸ್ಕಂದ ಅವರಿಗೆ- ನಾಯಕ, ವಿಲನ್, ಪೋಷಕ ಪಾತ್ರ ಎನ್ನುವುದಕ್ಕಿಂತ ಒಂದು ದೃಶ್ಯದಲ್ಲಿ ಬಂದು ಹೋದರೂ ನೆನಪಿನಲ್ಲಿ ಉಳಿಯುವ ಪಾತ್ರಗಳು ಬೇಕಿವೆ.

ಎಂಥ ಪಾತ್ರ ಸಿಕ್ಕರೂ ಸಿದ್ಧವಾಗಿರಬೇಕು ಎಂದುಕೊಂಡು ಡಾನ್ಸ್, ಫೈಟ್ ತರಗತಿಗಳಿಗೂ ಹೋಗುತ್ತಿರುವ ಸ್ಕಂದ ಗಿಟಾರ್ ಕೂಡ ಕಲಿಯುತ್ತಿದ್ದಾರೆ.

`ಕಲಾವಿದರಿಗೆ ರಿದಂ ಸೆನ್ಸ್ ಇರಬೇಕು ಎಂದು ತಾತ ಹೇಳುತ್ತಿದ್ದರು. ಯಾಕೆಂದರೆ ಯಾವಾಗ, ಹೇಗೆ ನಟಿಸಬೇಕು, ಮಾತನಾಡಬೇಕು ಎಂಬುದರ ಅರಿವು ಅದರಿಂದ ಬರುತ್ತದೆ~ ಎಂಬ ತಾತನ ಮಾತುಗಳನ್ನು ನೆನೆಯುವ ಅವರ ಕಿವಿಯಲ್ಲಿ `ಶ್ರದ್ಧೆ, ಭಕ್ತಿ, ಸಮಯಪಾಲನೆ ಮತ್ತು ನಿಷ್ಠೆಯಿಂದ ಕೆಲಸ ಮಾಡು ಶಾರದಾಂಬೆ ಕೈಹಿಡಿಯುವಳು~ ಎನ್ನುತ್ತಿದ್ದ ತಾತನ ಮಾತುಗಳು ಗುಯ್‌ಗುಡುತ್ತಿವೆಯಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT