ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೂಲಿಗೆ ಸೀಟ್ ಸಿಕ್ತಾ?

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಮನೆಯ ಮಗುವಿಗೆ ಮೂರು ತುಂಬುವ ಮುನ್ನವೇ ಹೆತ್ತವರಿಗೆ ಶಾಲೆಯ ಚಿಂತೆ.

ಮಹಾನವಮಿಯ ಸಂದರ್ಭದಲ್ಲಿ ಸರಸ್ವತಿ ಪೂಜೆ ಕೈಗೊಳ್ಳುವಾಗ ಶ್ರದ್ಧೆಯಿಂದ ಕೈ ಮುಗಿದು ದೇವರಿಗೆ ಕೇಳಿಕೊಳ್ಳುವುದು,`ಬೇಕಿರುವ ಶಾಲೆಯಲ್ಲಿ ಮಗುವಿಗೆ ಪ್ರವೇಶ ದೊರೆಯಲಿ~ ಎಂದು.
 
ಬೆಂಗಳೂರಿನಲ್ಲಂತೂ ಡಿಸೆಂಬರ್‌ನ ಚುಮುಚುಮು ಚಳಿಯೊಂದಿಗೆ ಪಾಲಕರಿಗೆ ನಡುಕು ಹುಟ್ಟಿಸುವುದು `ಅಂತರರಾಷ್ಟ್ರೀಯ~ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಕೆಲ ಶಾಲೆಗಳು. ಇಂಥ ಶಾಲೆಗಳಲ್ಲಿ ಕೆಲವು ನೋಂದಣಿ ಅರ್ಜಿಗೆ 5000 ರೂಪಾಯಿಗಳಷ್ಟು ಶುಲ್ಕ ವಿಧಿಸಿವೆ.

`ಎಷ್ಟಾಯಿತು? ಎಷ್ಟು ಕೊಟ್ರಿ?~ ಇದೀಗ ಪಾಲಕರು ಶಾಲೆಗಳ ಬಗ್ಗೆ ಕೇಳುವ ಸಾಮಾನ್ಯ ಪ್ರಶ್ನೆಯಾಗಿದೆ.

ಕೆಲ ಶಾಲೆಗಳಂತೂ ಶಾಲೆಯಿಂದ ಮನೆಯು ಗರಿಷ್ಠ ನಾಲ್ಕು ಕಿ.ಮೀ. ಅಂತರದೊಳಗಿದ್ದರೆ ಮಾತ್ರ ಪ್ರವೇಶ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತವೆ. ಇನ್ನು ಕೆಲವುಗಳಲ್ಲಿ ಮಗುವಿನ ಜಾಣ್ಮೆ ಆಧರಿಸಿ ಶಾಲಾ ಶುಲ್ಕ ನಿರ್ಧರಿಸಲಾಗುತ್ತದೆ.

ಇದೇ ಕಾರಣಕ್ಕೇ ಮಗು ಎರಡೂವರೆ ವರ್ಷ ತುಂಬಿ, ಅಮ್ಮ, ಅಪ್ಪ ಅಂತ ಹೇಳಲು ಕಲಿಯುವಾಗಲೇ `ಮೈ ನೇಮ್ ಈಸ್...~, `ಮೈ ಫಾದರ್ ನೇಮ್ ಈಸ್~, `ಎ ಫಾರ್ ಆಪ್ಪಲ್~ ಮುಂತಾದವುಗಳನ್ನು ಉರುಹೊಡೆಸುವ ಹೆಚ್ಚು`ವರಿ~ ಪಾಲಕರದ್ದಾಗುತ್ತದೆ.

ಒಂದೆರಡು ಸಾಲು ಕಲಿಯಲಿಕ್ಕಿಲ್ಲ, ಥೇಮ್ಸ ನದಿ ದಂಡೆಯಿಂದಲೇ ನಾಗರಿಕತೆ ಆರಂಭವಾದಂತೆ ಎಲ್ಲರೆದುರು ಇವಿಷ್ಟನ್ನೂ ಹೇಳಿಸುವುದೇ ಕೆಲಸವಾಗುತ್ತದೆ.

ಬಹುತೇಕ ಮಧ್ಯಮ ವರ್ಗದವರ ಮಕ್ಕಳ ಪಾಡು ಯಾರಿಗೂ ಬೇಡ. ಪ್ರತಿಷ್ಠಿತ ಶಾಲೆಗಳ ಶಿಕ್ಷಣ ಕೈಗೆಟುಕದು. ಉಳಿದ ಖಾಸಗಿ ಶಾಲೆಗಳೂ ಗಗನಕುಸುಮವಾಗುತ್ತಿವೆ. ಕೇಂದ್ರೀಯ ವಿದ್ಯಾಲಯಗಳಲ್ಲಂತೂ ಹನುಮನ ಬಾಲಕ್ಕಿಂತಲೂ ಉದ್ದನೆಯ ಸಾಲು. ಜಿಲ್ಲಾಧಿಕಾರಿ, ಆ ಮತಕ್ಷೇತ್ರದ ಶಾಸಕ, ಸಂಸದರ ಬಳಿ ನಡುಬಾಗಿ ಕೇಳಿದರೂ ಒಂದು ಸೀಟು ದೊರಕುವುದು ಅತಿ ಕಷ್ಟ! ಕಾರಣ ಪ್ರವೇಶ ಸಂಖ್ಯೆ ಸೀಮಿತ.

ಹೆತ್ತವರು ಶಾಲಾ ಶಿಕ್ಷಣ ಸಂಸ್ಥೆಗಳ ಮುಂದೆ ಹಿಡಿಯೊಡ್ಡಿ, ನಡುಬಾಗಿ ಮಕ್ಕಳಿಗೊಂದು ಸೀಟು ಪಡೆಯುವುದರಲ್ಲಿ, ಮನಸ್ಸು `ಡಿ-ಸ್ಕೂಲಿಂಗ್~ನತ್ತ ವಾಲಿದರೆ ಅಚ್ಚರಿ ಪಡಬೇಕಿಲ್ಲ.

ಕಳೆದ ವಾರವಷ್ಟೆ ಕಾಕ್ಸ್‌ಟೌನ್ ಶಾಲೆಯ ಮುಂದೆ ಗುರುವಾರ ಮಧ್ಯಾಹ್ನ ಅರ್ಜಿ ಕೊಡುವ ಸುದ್ದಿ ಹೊರ ಬಿದ್ದ ಕೂಡಲೇ ಬುಧವಾರ ಬೆಳಿಗ್ಗೆಯಿಂದಲೇ ಪಾಲಕರು ಶಾಲೆಯ ಮುಂದೆ ಸಾಲುಗಟ್ಟಿದ್ದರು. ರಾತ್ರಿ ಇಡೀ ಶಾಲೆಯ ಮುಂದೆಯೇ ಪ್ರವೇಶದ ಅರ್ಜಿಗಾಗಿ ತಪ-ಜಪ ಶುರುವಾಯಿತು.

ಮಿಶನರಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಕಡಿಮೆ. ಶಿಕ್ಷಣ, ಶಿಸ್ತು ಎಲ್ಲವೂ ಮಧ್ಯಮವರ್ಗದವರಿಗೆ ಸೂಕ್ತವಾಗಿದೆ. ಆದರೆ ಪ್ರವೇಶ ದೊರಕುವುದು ಕಷ್ಟ. ಅದಕ್ಕಾಗಿ ಇಂಥ ಎಲ್ಲ ಕಸರತ್ತುಗಳನ್ನೂ ಮಾಡಬೇಕಾಗುತ್ತದೆ ಎಂಬುದು ಮೂರುವರೆ ವರ್ಷದ ಏಂಜಲ್‌ಗಾಗಿ ಬುಧವಾರ ಅಹೋರಾತ್ರಿ ಜಪ ಮಾಡಿದ ಮರಿಯಾ ಅನುಭವದ ಮಾತು.

ಕೇಂಬ್ರಿಡ್ಜ್ ಶಾಲೆಯಲ್ಲಿ ಕಲಿಸಲು ವರ್ಷಕ್ಕೆ ಹತ್ತಿರ ಹತ್ತಿರ ಒಂದು ಲಕ್ಷ ರೂಪಾಯಿ ಎತ್ತಿಡುವುದು ಅನಿವಾರ್ಯ. ಇಂಡಿಯನ್ ಇಂಟರ್‌ನ್ಯಾಷನಲ್ ಶಾಲೆಗೆ ಅರ್ಜಿ ಪಡೆಯಲು 500 ರೂಪಾಯಿ, ಹೆಸರು ನೋಂದಾಯಿಸಲು 5000 ರೂಪಾಯಿ. ನಂತರ ಸಂದರ್ಶನ, ಆಮೇಲೆ ಮೂರು ಕಂತುಗಳಲ್ಲಿ ಹಣ ಪಾವತಿ. ಇಲ್ಲಿಯೂ ವರ್ಷಕ್ಕೆ ಒಂದು ಒಂದನೆಯ ತರಗತಿಗೆ ಕನಿಷ್ಠವೆಂದರೂ ಮುಕ್ಕಾಲು ಲಕ್ಷ ರೂಪಾಯಿಗಳಷ್ಟು ಹಣವನ್ನು ದಾಟುತ್ತದೆ.

ಇವೆಲ್ಲಕ್ಕಿಂತ ಭಿನ್ನವಾಗಿರುವ ಶಾಲೆಯೆಂದರೆ ಪ್ರಕ್ರಿಯಾ. ಔಪಚಾರಿಕ ಶಿಕ್ಷಣವನ್ನು ಬದಿಗೊತ್ತಿ, ಮಾಂಟೆಸ್ಸರಿ ವಿಧಾನವನ್ನು ಬಳಸುತ್ತಲೇ, ವಿದ್ಯಾರ್ಥಿಗೆ ಅವರಿಷ್ಟದಂತೆ ಕಲಿಸುವ ಶಾಲೆ. ಅಲ್ಲಿಯೂ ಒಂದರಿಂದ ಒಂದೂವರೆ ಲಕ್ಷ ಸುರಿಯಲೇಬೇಕು.

`ಆಟ-ಪಾಠ ಎರಡಕ್ಕೂ ಹೆಚ್ಚು ಗಮನ ನೀಡುವ ಶಾಲೆ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್. ಹಣ ಸುರಿದರೂ ಅಡ್ಡಿ ಇಲ್ಲ, ಉತ್ತಮ ಶಿಕ್ಷಣ ದೊರೆತರೆ ಸಾಕು ಎನಿಸಿದೆ.

ಬೆಂಗಳೂರಿನಂಥ ಊರಿನಲ್ಲಿ ಮಕ್ಕಳ ಆಟವನ್ನು ಪ್ರೋತ್ಸಾಹಿಸುವುದು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ನಮ್ಮಂಥವರಿಗೆ ಕನಸಿನ ಮಾತೇ ಸರಿ. ಕ್ರೀಡಾ ಅಕಾಡೆಮಿಗೂ ದುಡ್ಡು ನೀಡಿ, ಅಲ್ಲಿಂದ ಕರೆದೊಯ್ಯುವ ತರುವ ಈ ರಗಳೆ ಇರುವುದಿಲ್ಲವಲ್ಲ ಎಂದು ಯೋಚಿಸಿಯೇ ಮಗನಿಗೆ ಈ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡೆವು~ ಎನ್ನುತ್ತಾರೆ ಸಾಫ್ಟ್‌ವೇರ್ ಉದ್ಯೋಗಿ ಶಿವಗೀತಾ.

ಇನ್ನು ಬದುಕುವ ಕಲೆಯನ್ನು ಮನೆಯಲ್ಲಿಯೇ ಹೇಳಿಕೊಡಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರಿಯಲು ಅಂಕಗಳು ಬೇಕೆನ್ನುವ ಅರಿವು ಮುಖ್ಯ. ಪಠ್ಯವನ್ನಷ್ಟೇ ಗಮನದಲ್ಲಿರಿಸಿಕೊಂಡು ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸಲಾಗುತ್ತದೆ. ಕೇಂಬ್ರಿಡ್ಜ್ ಶಾಲೆಗೆ ಮಕ್ಕಳನ್ನು ಸೇರಿಸಿರುವುದು ಈ ಕಾರಣಕ್ಕಾಗಿ. ನಾವು ನಮ್ಮಪ್ಪ ಅಮ್ಮನಿಂದ ಹೇಳಿಸಿಕೊಂಡಷ್ಟೂ ಇವರಿಗೆ ಹೇಳಿಕೊಡುವುದಿಲ್ಲ. ಇಬ್ಬರೂ ನೌಕರಿಯಲ್ಲಿರುವುದರಿಂದ ಇಂಥ ಶಾಲೆ ಅಗತ್ಯ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷದಷ್ಟು ಖರ್ಚಾಗುತ್ತದೆ. ಆದರೆ ಮಕ್ಕಳ ಶಿಕ್ಷಣ ಮತ್ತು ಭವಿಷ್ಯವನ್ನು ಹಣದೊಂದಿಗೆ ಪಣಕ್ಕಿಡಲು ಆದೀತೆ? ಎನ್ನುವುದು ರವಿಶಂಕರ್ ಅವರ ವಾದ.

ಮಾಂಟೆಸ್ಸರಿ ವಿಧಾನದ ಶಾಲೆಗೆ 20ಸಾವಿರಗಳಿಂದ ಪ್ರವೇಶ ಶುಲ್ಕ-ದೇಣಿಗೆ, ಶಾಲಾ ನಿರ್ವಹಣೆ ಮುಂತಾದ ಹೆಸರುಗಳಿಗೆ ರಸೀದಿ ನೀಡಲಾಗುತ್ತದೆ.

ಇನ್ನುಳಿದಂತೆ ಮಾಸಿಕ ಶುಲ್ಕ, ಸಮವಸ್ತ್ರ, ಪುಸ್ತಕ, ಲ್ಯಾಬ್, ಪ್ರಯೋಗಾಲಯ, ಗ್ರಂಥಾಲಯ, ಆಡಿಯೋ ವಿಶುವಲ್ ಸ್ಮಾರ್ಟ್ ಕ್ಲಾಸ್ ಹೆಸರುಗಳಲ್ಲಿಯೂ ರಸೀದಿ ನೀಡಲಾಗತ್ತದೆ. ರಸೀದಿ ನೀಡದ ನಗದು, ಪಾಲಕರ ನಗೆಯನ್ನೇ ಕಸಿಯುತ್ತದೆ.

ಅಂತೂ ಇಂತೂ ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿ, ಗೆಲುವಿನ ನಗೆ ನಕ್ಕರೂ ತುಟಿಯ ಮೇಲಿನ ಸಾಲವಿಳಿಸಿದಂತೆ ಒಂದು ನಗೆ ಮೂಡಿ ಮಾಯವಾಗುತ್ತದೆ.

ಸದ್ಯಕ್ಕೆ ಯಾವುದೇ ಖರ್ಚು-ವೆಚ್ಚವಿಲ್ಲದೆ, ಶಿಫಾರಸ್ಸಿಲ್ಲದೆ, ಸಾಲುಗಳಲ್ಲಿ ಕಾಲು ನೋಯಿಸಿಕೊಳ್ಳದೇ ಯಾರನ್ನೂ ಕೇಳದೇ ಪ್ರವೇಶ ಪಡೆಯುವುದೆಂದರೆ ಗೌತಮಿ, ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆಯೇ ಆಗಿದೆ.

ಮೂರನೆಯ ವರ್ಷಕ್ಕೆ ಜ್ಞಾನವೆಂಬುದು ಅರಿಯಲು ಅಲ್ಲ, ಕೇವಲ ಸೀಟಿಗಾಗಿ ಎಂಬ ಪಾಠವನ್ನಂತೂ ಮಕ್ಕಳಿಗೆ ಹೇಳಿಕೊಡುವಲ್ಲಿ ಪಾಲಕರೇ ಮೊದಲಿಗರಾಗುತ್ತಿದ್ದಾರೆ. ಅಲ್ಲಿಂದ ರೇಸ್ ಆರಂಭವಾಗುತ್ತದೆ. ಗೆಲುವಿನ ಹಾದಿಯಲ್ಲಿ ಸೋಲು ಸೋಪಾನ ಎಂಬ ಮಾತೇ ಈಗ `ಔಟ್ ಡೇಟೆಡ್~ ಗೆಲುವಿಗಾಗಿಯೇ ಓಟ ಎಂಬ ಒತ್ತಡ ಈಗಿನಿಂದಲೇ ಮಕ್ಕಳ ಮೇಲೆ ಹೇರಲಾಗುತ್ತದೆ.
 
ಆಕಾಶದ ತಾರೆಗಳಲ್ಲಿ ಚಂದದ ಆಕಾರಗಳನ್ನು ಗುರುತಿಸುತ್ತ ಪುಟ್ಟ ಕೈಗಳನ್ನು ಆಕಾಶದತ್ತ ತೋರುವ ಕಂದಮ್ಮನ ಕೈಗೆ  ಶಾಲೆಯ ಲಗಾಮು ಹಾಕಿ `ಲೈಕ್ ಅ ಡೈಮಂಡ್ ಇನ್ ದ ಸ್ಕೈ~ಗೆ ಸೀಮಿತಗೊಳಿಸುತ್ತೇವೆ. 
 

ಕೇಂದ್ರೀಯ ವಿದ್ಯಾಲಯಕ್ಕೆ ಏಕಿಷ್ಟು ಬೇಡಿಕೆ?
ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆ ಪಾರದರ್ಶಕ ವ್ಯವಸ್ಥೆಯಿಂದ ಕೂಡಿದೆ. 5ನೇ ತರಗತಿಯಿಂದ ಒಂದೇ ಹೆಣ್ಣುಮಗುವಿನ ಕುಟುಂಬವಾಗಿದ್ದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಪತ್ರಿಕೆಯಲ್ಲಿ ಪ್ರವೇಶ ಅರ್ಜಿಗೆ ಜಾಹೀರಾತು ನೀಡಲಾಗುತ್ತದೆ. ಏಪ್ರಿಲ್ ಮೊದಲ ವಾರದಲ್ಲಿ ಪ್ರವೇಶ ಪರೀಕ್ಷೆ. ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಆಯ್ಕೆ ಪಟ್ಟಿ ಬಿಡುಗಡೆಯಾಗುತ್ತದೆ. ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ಬ್ಯಾಂಕ್ ಉದ್ಯೋಗಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಆದ್ಯತೆ ನೀಡಲಾಗುತ್ತದೆ. ಕೈಗೆಟಕುವ ಶುಲ್ಕ, ಉತ್ತಮ ಶಿಕ್ಷಣ, ದೇಶದಾದ್ಯಂತ ಏಕರೂಪ ಪಠ್ಯಕ್ರಮ ಇವೆಲ್ಲವೂ ಪಾಲಕರನ್ನು ಸೆಳೆಯುತ್ತಿವೆ.
ಮನೆ ಎಲ್ಲಿ?
ಬಹುತೇಕ ಪ್ರತಿಷ್ಠಿತ ಶಾಲೆಗಳಲ್ಲಿ ಮೊದಲು ಕೇಳುವುದೇ ಮನೆಯ ವಿಳಾಸ. ಶಾಲೆಯಿಂದ ನಾಲ್ಕರಿಂದ ಆರು ಕಿ.ಮೀ. ವ್ಯಾಪ್ತಿಯೊಳಗೆ ಮನೆ ಇದ್ದರೆ ಮಾತ್ರ ಪ್ರವೇಶ ಎಂಬುದು ಸೊಫಾಯ್, ಪೂರ್ಣ ಪ್ರಜ್ಞ ಹಾಗೂ ಬಾಲ್ಡ್‌ವಿನ್ ಶಾಲೆಗಳ ನಿಯಮವಾಗಿದೆ. ಕಾರಣ, ಮಕ್ಕಳು ಮನೆಯಿಂದ ಶಾಲೆಗೆ ತಲುಪಲು ಕೇವಲ 20 ನಿಮಿಷದ ಅಂತರವಿರಬೇಕು. ಅಂದ್ರೆ ಮಾತ್ರ ಅವರು ಶಾಲೆಗೆ ಬಂದಾಗ ಕಲಿಯುವ ಮನಃಸ್ಥಿತಿ ನಿರ್ಮಾಣ ಮಾಡಲು ಸರಳವಾಗುತ್ತದೆ. ದೂರದಿಂದ ಬಂದರೆ ಅದೊಂದು ಬಗೆಯ ಒತ್ತಡ ಸೃಷ್ಟಿಯಾಗುತ್ತದೆ. ಬೇಗ ಏಳಬೇಕು. ಶಾಲೆ ಆರಂಭದ ವೇಳೆಗಿಂತ ಒಂದು ಗಂಟೆ ಮುಂಚೆಯೇ ಮನೆಯಿಂದ ಹೊರಡಬೇಕು. ಬಂದಾಗಲೇ ಹಸಿವು ಆಗುತ್ತದೆ. ಬಹುತೇಕ ಮಕ್ಕಳು ಮಲಗಿಕೊಂಡಿರುತ್ತಾರೆ. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ಮನೆ ಸಮೀಪವಿರುವ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಗುಣಮಟ್ಟದ ಕಲಿಕಾ ಸಮಯ ಬಳಕೆಯಾಗಬೇಕೆಂದರೆ ಶಾಲೆಯ ಸಮೀಪವೇ ಮನೆ ಇರಲಿ ಎಂಬುದು ಈ ಶಿಕ್ಷಣ ಸಂಸ್ಥೆಗಳ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT