ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮಗಳಿಗೆ ನವೋತ್ಸಾಹ

Last Updated 29 ಫೆಬ್ರುವರಿ 2016, 19:54 IST
ಅಕ್ಷರ ಗಾತ್ರ

ಸ್ಟಾರ್ಟ್ಅಪ್‌ಗಳಿಗೆ ಮೊದಲ ಮೂರು ವರ್ಷ ತೆರಿಗೆ ವಿನಾಯ್ತಿ
ನವದೆಹಲಿ(ಪಿಟಿಐ): ನಿರೀಕ್ಷೆಯಂತೆ ಸ್ಟಾರ್ಟ್ಅಪ್‌ಗಳಿಗೆ ಬಜೆಟ್‌ನಲ್ಲಿ ಭಾರಿ ಉತ್ತೇಜನಾ ಕ್ರಮ ಮತ್ತು ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.

ನವೋದ್ಯಮಗಳಿಗೆ ಮೊದಲ ಮೂರು ವರ್ಷ ಶೇಕಡ ನೂರರಷ್ಟು ತೆರಿಗೆ ವಿನಾಯ್ತಿ ನೀಡಲಾಗಿದೆ.

ಏಪ್ರಿಲ್‌ 1, 2019ರ ಒಳಗಾಗಿ ಸ್ಥಾಪನೆಯಾಗುವ ತಂತ್ರಜ್ಞಾನ ಮತ್ತು  ಬೌದ್ಧಿಕ ಆಸ್ತಿ ಆಧಾರಿತ ನವೋದ್ಯಮಗಳು ಶೇಕಡಾ ನೂರರಷ್ಟು ತೆರಿಗೆ ವಿನಾಯ್ತಿ ಪಡೆಯಲಿವೆ. 

ನಿಧಿಗಳ ನಿಧಿ ಸ್ಥಾಪನೆ: ಸ್ಟಾರ್ಟ್‌ ಅಪ್‌ ಇಂಡಿಯಾ ಕ್ರಿಯಾ ಯೋಜನೆ ಅಡಿ ಹೊಸದಾಗಿ ‘ನಿಧಿಗಳ ನಿಧಿ’ ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ.

ಈ ನಿಧಿ ಮೂಲಕ ವಾರ್ಷಿಕ ₹ 2,500 ಕೋಟಿಯಂತೆ ನಾಲ್ಕು ವರ್ಷ  ಸಂಗ್ರಹಿಸಲಾಗುವ ಹಣವನ್ನು ಸ್ಟಾರ್ಟ್‌ ಅಪ್‌ಗಳಿಗೆ ಉತ್ತೇಜನ ನೀಡಲು  ವಿನಿಯೋಗಿಸಲಾಗುವುದು ಎಂದು ಜೇಟ್ಲಿ ತಿಳಿಸಿದರು. 

₹500 ಕೋಟಿ: ‘ಸ್ಟ್ಯಾಂಡ್‌ ಅಪ್‌ ಇಂಡಿಯಾ’ ಯೋಜನೆ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲು ಬಜೆಟ್‌ನಲ್ಲಿ ₹ 500 ಕೋಟಿ ತೆಗೆದಿರಿಸಲಾಗಿದೆ.

‘ಸರ್ಕಾರದ ಈ ಕೊಡುಗೆ ಸ್ಟಾರ್ಟ್‌ ಅಪ್‌ಗಳ ಬೆಳವಣಿಗೆಗೆ ಪೂರಕವಾಗಿದೆ’  ಎಂದು ಅಂತರ್ಜಾಲ ಮತ್ತು ಮೊಬೈಲ್‌ ಸಂಘದ ಅಧ್ಯಕ್ಷ ಸುಭೋ ರೇ ಅವರು ಪ್ರತಿಕ್ರಿಯಿಸಿದ್ದಾರೆ.

ಒಂದೇ ದಿನದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಮತ್ತು ಸ್ಟಾರ್ಟ್ಅಪ್‌ಗಳ ಮೂರು ವರ್ಷ ತೆರಿಗೆ ವಿನಾಯ್ತಿ ನೀಡಿರುವ ಕ್ರಮವನ್ನು ಪ್ರ್ಯಾಕ್ಟೊ  ಸಂಸ್ಥೆಯ ಸಿಇಒ ಶಶಾಂಕ್‌ ಎನ್.ಡಿ ಸ್ವಾಗತಿಸಿದ್ದಾರೆ.

ಆದರೆ, ಕೆಲವು ಸ್ಟಾರ್ಟ್‌ಅಪ್‌ಗಳು   ಈ ಘೋಷಣೆಗಳನ್ನು ‘ಕೇವಲ ತೋರಿಕೆಯ ಮಾತು’ ಎಂದು ಟೀಕಿಸಿವೆ.

‘ಬಜೆಟ್ ಘೋಷಣೆಯೇ ಬೇರೆ. ವಾಸ್ತವವೇ ಬೇರೆ. ಕೆಲವು ಸ್ಟಾರ್ಟ್‌ಅಪ್‌ಗಳು ಆರಂಭದ ಮೂರ್‍್ನಾಲ್ಕು ವರ್ಷ ಲಾಭವನ್ನೇ ಕಾಣುವುದಿಲ್ಲ. ಹೀಗಾಗಿ ತೆರಿಗೆ ವಿನಾಯ್ತಿಯಿಂದ ಏನು ಲಾಭ’ ಎಂದು ಶಿಂಪ್ಲಿ ಡಾಟ್‌ ಕಾಮ್‌ ಸಿಇಒ  ರಜತ್‌ ಗರ್ಗ್‌ ಪ್ರಶ್ನಿಸಿದ್ದಾರೆ.

ಇನ್ನೂ ಹಲವು ನವೋದ್ಯಮಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ಸ್ಟಾರ್ಟ್‌ಅಪ್‌ಗಳ ಪಿಎಫ್‌ಗೆ ₹1,000ಕೋಟಿ

ಕಾರ್ಪೊರೇಟ್ ತೆರಿಗೆ ಶೇ25ಕ್ಕೆ ಇಳಿಕೆ
ದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ಹೊಸದಾಗಿ ಸ್ಥಾಪನೆಯಾಗುವ ತಯಾರಿಕಾ ಕಂಪೆನಿಗಳಿಗೆ ಕಾರ್ಪೊರೇಟ್‌ ತೆರಿಗೆಯನ್ನು ಶೇ 25ಕ್ಕೆ ತಗ್ಗಿಸಲಾಗಿದೆ.

ನಾಲ್ಕು ವರ್ಷದಲ್ಲಿ ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 25ಕ್ಕೆ  ಇಳಿಸುವ ಬಗ್ಗೆ ಈಗಾಗಲೇ ಘೋಷಿಸಲಾಗಿದೆ. ಅದರ ಮೊದಲ ಹೆಜ್ಜೆ ಇದಾಗಿದೆ ಎಂದು ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಎರಡು ಬದಲಾವಣೆಗಳನ್ನು ಜಾರಿಗೆ ತರಲಾಗುವುದು. 2016ರ ಮಾರ್ಚ್‌ 1 ರ ನಂತರ ಅಸ್ತಿತ್ವಕ್ಕೆ ಬರುವ ತಯಾರಿಕಾ ವಲಯಕ್ಕೆ ಸಂಬಂಧಿಸಿದ ಕಂಪೆನಿಗಳಿಗೆ ಶೇ 25ರಷ್ಟು ಕಾರ್ಪೊರೇಟ್‌ ತೆರಿಗೆ ನಿಗದಿ ಮಾಡಲಾಗಿದೆ. 

ಸಣ್ಣ ಘಟಕಗಳು ಅಂದರೆ ವಾರ್ಷಿಕವಾಗಿ ₹5 ಕೋಟಿ ವಹಿವಾಟು ನಡೆಸುವಂತಹ ಘಟಕಗಳಿಗೆ ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 29ಕ್ಕೆ ಅಂದರೆ ಶೇ 1ರಷ್ಟು ಅಲ್ಪ ಇಳಿಕೆ ಮಾಡಲಾಗಿದೆ.

ವಿಮಾನ ಪ್ರಯಾಣ ದುಬಾರಿ
ವಿಮಾನ ಇಂಧನಕ್ಕೆ (ಎಟಿಎಫ್‌) ಅಬಕಾರಿ ಸುಂಕವನ್ನು ಶೇ 6ರಷ್ಟು ಹೆಚ್ಚಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ವಿಮಾನ ಪ್ರಯಾಣ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಆದರೆ, ಸ್ಥಳೀಯ ಸಂಪರ್ಕ ಯೋಜನೆಯಡಿ ದೇಶಿ ವಿಮಾನಯಾನ ಸಂಸ್ಥೆಗಳಿಗೆ ಇದು ಅನ್ವಯಿಸುವುದಿಲ್ಲ.

ಸದ್ಯ, ಎಟಿಎಫ್‌ಗೆ ಶೇ 8ರಷ್ಟು ಅಬಕಾರಿ ಸುಂಕವಿದ್ದು, ಸರ್ಕಾರದ ಪ್ರಸ್ತಾವನೆಯಂತೆ ಶೇ 6ರಷ್ಟು ಹೆಚ್ಚಿಸಿದಲ್ಲಿ ಒಟ್ಟು ಸುಂಕವು ಶೇ 14ಕ್ಕೆ ಏರಿಕೆಯಾಗಲಿದೆ.

ಇದರಿಂದ ಎಲ್ಲರಿಗೂ ವಿಮಾನ ಸೇವೆ ಲಭ್ಯವಾಗುವಂತೆ ಮಾಡುವ ಸರ್ಕಾರದ ಉದ್ದೇಶಕ್ಕೆ ಅಡ್ಡಿಯಾಗಲಿದೆ ಎಂದು ಕೆಪಿಎಂಜಿ ಕನ್ಸಲ್ಟೆನ್ಸಿ ಪಾಲುದಾರ ಅಂಬರ್‌ ದುಬೆ ಹೇಳಿದ್ದಾರೆ.

ಕೇಂದ್ರದಿಂದಲೇ ಪಿಎಫ್‌
ಉದ್ಯೋಗಿಗಳು ಹೊಸದಾಗಿ ಕೆಲಸಕ್ಕೆ ಸೇರಿದ ಮೊದಲ ಮೂರು ವರ್ಷ ಅವರ ಪಿಎಫ್‌ ಖಾತೆಗೆ (ಭವಿಷ್ಯನಿಧಿ ಯೋಜನೆ)   ಮೂಲ ವೇತನದ ಶೇ 8.33 ರಷ್ಟು  ಹಣವನ್ನು ಉದ್ಯೋಗದಾತ ಕಂಪೆನಿಗಳ ಬದಲು ತಾನೇ ಪಾವತಿಸುವುದಾಗಿ  ಕೇಂದ್ರ ಸರ್ಕಾರ ಪ್ರಕಟಿಸಿದೆ.

ಸರ್ಕಾರದ ಈ ನಿರ್ಧಾರದಿಂದ  ತೆರಿಗೆ ಪಾವತಿಸುವ ಉದ್ಯೋಗದಾತ ಕಂಪೆನಿಗಳು ನಿರಾಳವಾಗಿವೆ. 
ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಯ ಖಾತೆಗೆ ಮೊದಲ ಮೂರು ವರ್ಷ ಆತನ ಮೂಲವೇತನದ ಶೇ 8.33 ರಷ್ಟು ಹಣವನ್ನು ಸರ್ಕಾರ ಪಾವತಿಸಿದಲ್ಲಿ  ಹೆಚ್ಚಿನ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಿದಂತಾಗುತ್ತದೆ ಎಂದು  ಸಚಿವ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕಾಗಿ  ಬಜೆಟ್‌ನಲ್ಲಿ ₹ 1 ಸಾವಿರ ಕೋಟಿ  ತೆಗೆದಿರಿಸಲಾಗಿದೆ. ಪ್ರತಿ ತಿಂಗಳು ಗರಿಷ್ಠ ₹15 ಸಾವಿರ ಇಲ್ಲವೇ ಅದಕ್ಕಿಂತ ಕಡಿಮೆ  ವೇತನ ಪಡೆಯುವ ಉದ್ಯೋಗಿಗಳಿಗೆ ಮಾತ್ರ ಈ ಸೌಲಭ್ಯಗಳು ಅನ್ವಯವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT