ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆಥಾಸ್ಕೋಪ್ ಬಿಟ್ಟೆರ‌್ಯಾಂಪ್‌ಗೆ ಕಾಲಿಟ್ಟೆ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬಣ್ಣಗಳ ಲೋಕದ ಆಕರ್ಷಣೆಯೇ ಹಾಗೆ; ಎಲ್ಲಿಂದಲೋ ತನ್ನಲಿಗೆ ಸೆಳೆದುಕೊಂಡು ಬಿಡುತ್ತದೆ. ಸುಪ್ರೀತ್ ಚಾಹಲ್ ಎನ್ನುವ ಚೆಂದುಳ್ಳಿ ಚೆಲುವೆಯನ್ನೂ ತನ್ನ ಅಪ್ಪುಗೆಯಲ್ಲಿ ಹಿಡಿದಿಟ್ಟಿದೆ. ಓದಿದ್ದು ವೈದ್ಯಕೀಯ. ಆದರೆ ಇವಳೀಗ ರೂಪದರ್ಶಿ. ಕಾಲೇಜು ದಿನಗಳಲ್ಲೊಮ್ಮೆ ರ‌್ಯಾಂಪ್ ಹತ್ತಿದ್ದು. ಮತ್ತೆ ಅದರ ಸೆಳೆತದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಉದ್ಯಾನನಗರಿಯಲ್ಲಿಯೇ ಓದಿ ಬೆಳೆದ ಹುಡುಗಿ ಇವಳು. ಆದರೆ ಈಗ ವಿಶ್ವದ ಮೂಲೆ ಮೂಲೆಯಲ್ಲಿ ರ‌್ಯಾಂಪ್ ಮೇಲೆ ತನ್ನ ಸೊಗಸಿನಿಂದ ಪ್ರೇಕ್ಷಕರ ಬೊಗಸೆ ಕಂಗಳ ಕಿಟಕಿಯಿಂದ ಮನದೊಳಗೆ ಇಳಿದಿದ್ದಾಳೆ. ಕನ್ನಡ ಹಾಗೂ ಕರ್ನಾಟಕವನ್ನು ಪ್ರೀತಿಸುವ ಈ ಮೈಮಾಟದ ಮಾಡೆಲ್ ಜೊತೆಗೆ ಒಂದಿಷ್ಟು ಮಾತು...

ರೂಪದರ್ಶಿಯಾಗಿ ವೃತ್ತಿ ಬದುಕು ಹೇಗೆ ಸಾಗಿದೆ?
ಒಳಿತಾಗಿಯೇ ಇದೆ ಎಂದುಕೊಳ್ಳುತ್ತೇನೆ. ಅದು ನನಗೆ ನಾನು ಹೇಳಿಕೊಳ್ಳುವ ಮಾತು. ಆದರೆ ಇದೊಂದು ಸಾಕಷ್ಟು ಏರಿಳಿತಗಳನ್ನು ಕಾಣುವಂಥ ಕ್ಷೇತ್ರ. ಒಂದು ರೀತಿಯಲ್ಲಿ ರೋಲರ್ ಕೋಸ್ಟರ್ ಸವಾರಿಯಂತೆ. ಒಳ್ಳೆಯವರನ್ನೂ ಭೇಟಿಯಾಗಿದ್ದೇನೆ. ಕೆಟ್ಟವರನ್ನೂ ಕಂಡು ದೂರ ಇಟ್ಟಿದ್ದೇನೆ. ಬದುಕು ಪಾಠ ಕಲಿಸುತ್ತದೆ. ನಾನೀಗ ಮಾನಸಿಕವಾಗಿ ಗಟ್ಟಿಯಾಗಿದ್ದೇನೆ.

ಯಾವ ಮಾಡೆಲಿಂಗ್ ಇಷ್ಟ?
ಮುದ್ರಣ ಜಾಹೀರಾತುಗಳಿಗೆ ರೂಪದರ್ಶಿ ಆಗುವುದು ಹೆಚ್ಚು ಖುಷಿ ನೀಡುತ್ತದೆ. ಆದರೆ ಆರ್ಥಿಕವಾಗಿ ಬಲಗೊಳ್ಳಲು ಟೆಲಿವಿಷನ್ ಜಾಹೀರಾತು ಹಾಗೂ ರ‌್ಯಾಂಪ್ ಶೋಗಳು ಅಗತ್ಯ. ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಆಸೆ. ಆದರೆ ಈಗ ರ‌್ಯಾಂಪ್ ಶೋಗಳ ನಡುವೆಯೇ ಬಿಡುವಿಲ್ಲ. ಇಲ್ಲಿ ಅವಕಾಶಗಳು ಇರುವಾಗ ಬೇರೆ ಕಡೆಗೆ ಗಮನ ಹರಿಸುವುದೂ ಸೂಕ್ತ ಎನಿಸದು.

ಈವರೆಗಿನ ದೊಡ್ಡ ಸಾಧನೆ?
ನಾನು `ಎಂಬಿಬಿಎಸ್~ ಪದವಿ ಶಿಕ್ಷಣ ಪೂರ್ಣಗೊಳಿಸಿ ಸುಪ್ರೀತ್ ಚಾಹಲ್ ಇದ್ದವಳು `ಡಾ ಸುಪ್ರೀತ್ ಚಾಹಲ್~ ಆಗಿದ್ದು. ಉನ್ನತ ಮಟ್ಟದ ಶಿಕ್ಷಣ ಪಡೆದಿರುವ ಕಾರಣ ನನ್ನಲ್ಲಿ ವಿಶ್ವಾಸವಿದೆ. ನಾನು ಬಯಸಿದ ಕ್ಷೇತ್ರದಲ್ಲಿ ಧೈರ್ಯದಿಂದ ಮುನ್ನುಗ್ಗುವ ಛಲವೂ ಇದೆ. ಕನಸು ಕಾಣುತ್ತೇನೆ; ನನಸು ಮಾಡಿಕೊಳ್ಳುವವರೆಗೆ ಕೈಚೆಲ್ಲಿ ನಿಲ್ಲುವುದಿಲ್ಲ. ಮಾಡೆಲಿಂಗ್ ಪ್ರೊಜೆಕ್ಟ್ ಗಳನ್ನು ಒಪ್ಪಿಕೊಳ್ಳುವುದೂ ಸ್ವಲ್ಪ ನಿಧಾನ. ಆತುರ ಮಾಡುವುದಿಲ್ಲ. ಆದ್ದರಿಂದ ನಂತರ ಬೇಸರ ಆಗುವುದಿಲ್ಲ.

ಕೆಲಸದಲ್ಲಿನ ಒತ್ತಡ ನಿಭಾಯಿಸುವುದು?
ಒಪ್ಪಿಕೊಂಡ ಕೆಲಸವು ನನಗೆ ಹೊರೆ ಎನಿಸುವುದೇ ಇಲ್ಲ. ಆದ್ದರಿಂದ ಒತ್ತಡಕ್ಕೆ ಒಳಗಾಗುವುದಿಲ್ಲ. ರೂಪದರ್ಶಿಯಾಗಿದ್ದು ಇಷ್ಟಪಟ್ಟು. ಈ ವೃತ್ತಿಯನ್ನು ಪ್ರೀತಿಸುತ್ತೇನೆ. ಒತ್ತಡ ಎನಿಸುವುದು ಕೆಲಸ ಇಲ್ಲದಾಗ.

ಮುಟ್ಟಬೇಕೆಂದಿರುವ ಗುರಿ?
ಇಂಥದೇ ಗುರಿ ಎನ್ನುವುದಿಲ್ಲ. ಆದರೆ ಉತ್ತಮವಾದ ಹಾಗೂ ಗುಣಮಟ್ಟದ ಪ್ರೊಜೆಕ್ಟ್‌ಗಳಲ್ಲಿ ಕೆಲಸ ಮಾಡುವುದು. ಹಾಗೆ ಸಾಗಿದಾಗ ಉನ್ನತವಾದ ಗುರಿಯೂ ಸ್ಪಷ್ಟವಾಗುತ್ತದೆ. ಕೊನೆಯಲ್ಲಿ ಆ ಮಟ್ಟಕ್ಕೆ ಏರಿದೆ ಎಂದು ಕೂಡ ಅನಿಸಬಹುದು. ಇಂಥದೊಂದು ಗುರಿಯ ಕಡೆಗೆ ನಡೆದಾಗ ಕೆಲವೊಮ್ಮೆ ಮಾರ್ಗಗಳು ಬದಲಾಗಬಹುದು. ಆದರೆ ಉದ್ದೇಶ ಮಾತ್ರ ಸ್ಥಿರವಾಗಿರುತ್ತದೆ.

ಎದುರಿಸಿದ ಸವಾಲುಗಳು?
ರೂಪದರ್ಶಿ ಆಗಬೇಕೆಂದು ಹೆಜ್ಜೆ ಮುಂದಿಟ್ಟ ದಿನದಿಂದ ಇಲ್ಲಿಯವರೆಗೆ ಕುಟುಂಬದ ಇತರ ಸದಸ್ಯರಿಂದ ಹೆಚ್ಚು ಕಾಲ ದೂರ ಉಳಿಯಬೇಕಾಗಿದೆ. ಪರದೇಶ ಸುತ್ತುವುದು ಹೆಚ್ಚು. ಆಗೆಲ್ಲ ಮನೆಯವರ ನೆನಪಾಗುತ್ತದೆ. ಅದೊಂದೇ ನಾನು ಎದುರಿಸಿರುವ ಸವಾಲು. ಅದರ ಹೊರತಾಗಿ ವೃತ್ತಿ ಬದುಕಿನಲ್ಲಿ ಬೇರಾವುದೇ ಕಷ್ಟದ ಅನುಭವ ಇಲ್ಲ.

ಪಾಲಕರ ಪ್ರೋತ್ಸಾಹ?
ಎಂದೂ ನನ್ನ ನಿರ್ಧಾರಗಳಿಗೆ ತೊಡಕಾಗಿಲ್ಲ. ಏನೇ ಮಾಡಿದರೂ ಶಿಸ್ತಿನಿಂದ ಮಾಡುತ್ತೇನೆ ಎನ್ನುವ ಭರವಸೆ ಅವರಿಗಿದೆ. ಸದಾ ಬೆಂಬಲಕ್ಕೆ ನಿಲ್ಲುತ್ತಾರೆ. ಇಂಥ ಪಾಲಕರನ್ನು ಕೊಟ್ಟಿರುವ ದೇವರಿಗೆ ನಾನು ಕೃತಜ್ಞಳಾಗಿದ್ದೇನೆ.

ಕನ್ನಡ ಹಾಗೂ ಕರ್ನಾಟಕದ ಬಗ್ಗೆ?
ನಾನು ಓದಿದ್ದು ಇಲ್ಲಿ. ಗ್ಲಾಮರ್ ಜಗತ್ತಿಗೆ ಕಾಲಿಟ್ಟಿದ್ದು ಕೂಡ ಇಲ್ಲೇ. ಈ ನಾಡಿನ ಬಗ್ಗೆ ನನಗೆ ಪ್ರೀತಿ ಹಾಗೂ ಗೌರವ ಇದೆ. ಅವಕಾಶ ಸಿಕ್ಕಾಗಲೆಲ್ಲ ಬೆಂಗ್ಳೂರ್‌ಗೆ ಹಾಜರ್. ಇಷ್ಟವಾಗುವ ಸ್ಥಳ. ನಾನೂ ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಕನಸು ಕಂಡವಳು.

ಬದುಕಿನ ಆದರ್ಶ?
ಆ್ಯಪಲ್ ಸಂಸ್ಥೆ ಸ್ಥಾಪಕ ಸ್ಟೀವ್ ಜಾಬ್ಸ್; ಕಂಡ ಕನಸಿಗಿಂತ ದೊಡ್ಡ ಸಾಧನೆ ಮಾಡಿದ ವ್ಯಕ್ತಿ. ಹಾಗೆ ಸೃಜನಾತ್ಮಕ ಹಾಗೂ ಪ್ರಗತಿಪರ ಯೋಚನೆಯೊಂದಿಗೆ ಕೆಲಸ ಮಾಡಬೇಕು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT