ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆವಿಯಾ ಎಂಬ ಪರ್ಯಾಯ

Last Updated 18 ಜನವರಿ 2016, 19:30 IST
ಅಕ್ಷರ ಗಾತ್ರ

ಇಂಚಿಂಚಾಗಿ ದೇಹವನ್ನು ಕೃಶವಾಗಿಸುವ ಸಕ್ಕರೆ ಕಾಯಿಲೆ ಪಾರಮ್ಯ ಮೆರೆದ ಮೇಲೆ ಅನೇಕರಿಗೆ ಸಿಹಿತಿಂಡಿ ಆಸೆ ಕನಸಾಗಿ ಬಿಟ್ಟಿದೆ. ಆದರೆ ಸಿಹಿ ಪ್ರಿಯರಿಗೆ ಯಾವುದೇ ಚಿಂತೆಯಿಲ್ಲದೆ ಸಿಹಿ ಮೆಲ್ಲುವ ಅವಕಾಶ ಸ್ಟೆವಿಯಾದಿಂದ ಸಿಗಲಿದೆ. ಸಿಹಿ ತುಳಸಿ ಎಂದೇ ಹೆಸರು ಪಡೆದಿರುವ ಈ ಎಲೆಗಳಲ್ಲಿ ನೈಸರ್ಗಿಕವಾಗಿಯೇ ಸಿಹಿ ಅಂಶವಿದ್ದು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.

ಕೆಲ ವರ್ಷಗಳ ಹಿಂದೆ ಭಾರತದಲ್ಲಿಯೂ ಸಿಹಿ ತುಳಸಿ ಬೆಳೆಯುವ ಸಾಹಸಕ್ಕೆ ಅನೇಕರು ಕೈಹಾಕಿದರಾದರೂ ಕೆಲ ಕಾರಣಗಳಿಂದ ಜನಪ್ರಿಯತೆ ಗಳಿಸುವಲ್ಲಿ ಸ್ಟೆವಿಯಾ ಹಿಂದೆ ಬಿದ್ದಿತು. 1977ರಿಂದಲೇ ಜಪಾನ್‌ನಲ್ಲಿ ಬಳಸಲಾಗುತ್ತಿದ್ದ ಸಿಹಿ ತುಳಸಿಯನ್ನು ಬಳಸಲು  2008ರಲ್ಲಿ ಒಪ್ಪಿಗೆ ಸಿಕ್ಕಿತು.   

2012ರಲ್ಲಿ ಯುರೋಪಿಯನ್‌ ಯೂನಿಯನ್‌ನಿಂದಲೂ ಮಾನ್ಯತೆ ದಕ್ಕಿತು. ಇದೀಗ ಸುಮಾರು 150ಕ್ಕೂ ಹೆಚ್ಚು ದೇಶಗಳು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ಜೀರೊ ಕ್ಯಾಲರಿ, ಜೀರೊ ಕಾರ್ಬೊಹೈಡ್ರೇಟ್‌, ಜೀರೊ ಗ್ಲೈಸೆಮಿಕ್‌ ಇಂಡೆಕ್ಸ್‌, 100ಕ್ಕೂ ಹೆಚ್ಚು ಬಗೆಯ ಪೋಷಕಾಂಶಗಳಿರುವುದೂ ಸೇರಿದಂತೆ ಅನೇಕ ಧನಾತ್ಮಕ ಅಂಶಗಳನ್ನು ಹೊಂದಿರುವುದೇ ಸ್ಟೆವಿಯಾ ಮತ್ತೆ ಜನಪ್ರಿಯತೆ ಪಡೆಯಲು ಕಾರಣವಾಗಿದೆ.

ಸಕ್ಕರೆಗೆ ಪರ್ಯಾಯವಾಗಿ ಸಿಹಿ ತುಳಸಿಯನ್ನು ಬಳಸಬಹುದಾಗಿದೆ. ಸಕ್ಕರೆ ಕಾಯಿಲೆ, ಸ್ಥೂಲಕಾಯ ಮುಂತಾದ ಸಮಸ್ಯೆಗಳಿಂದ ಭಾರತೀಯರು ಬಳಲುತ್ತಿರುವುದನ್ನು ಗಮನಿಸಿದ ಇಲ್ಲಿಯವರೇ ಆದ ಮಂಜುನಾಥ ಮಂಡಿಕಲ್‌ ಹಾಗೂ ರಂಗನಾಥ ಕೃಷ್ಣನ್‌ ಎನ್ನುವವರು ಸ್ಟೆವಿಯಾ ವರ್ಲ್ಡ್‌ ಅಗ್ರೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪೆನಿಯನ್ನು ಬೆಂಗಳೂರಿನ ಸಹಕಾರ ನಗರದಲ್ಲಿ ಪ್ರಾರಂಭಿಸಿದ್ದಾರೆ. ಅನೇಕ ವರ್ಷಗಳ ಕಾಲ ವಿದೇಶದಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಸ್ನೇಹಿತರು ರೈತರಿಗೆ ಹಾಗೂ ಗ್ರಾಹಕರಿಗೆ ಉಪಯೋಗವಾಗುವಂತಹ ಹಾಗೂ ಕೃಷಿಗೆ ಸಂಬಂಧಿಸಿದ ವಿನೂತನ ಕೆಲಸವನ್ನೇ ಮಾಡಬೇಕು ಎಂದು ಆಶಿಸಿ ಸ್ಟೆವಿಯಾ ಯೋಜನೆಯನ್ನು ಕೈಗೆತ್ತಿಕೊಂಡರು.

‘ಭಾರತಕ್ಕೆ ವಾಪಸಾದ ಮೇಲೆ ಸಾಮಾಜಿಕ ಹಾಗೂ ಆರ್ಥಿಕ ಕಳಕಳಿಯ ಕೆಲಸವನ್ನೇ ಮಾಡುವುದು ಎಂದು ನಿರ್ಧರಿಸಿದ್ದೆವು. ಹೀಗಾಗಿ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನೇ ಮಾಡಬೇಕು ಎಂದು ನಿರ್ಧರಿಸಿ ಸಂಶೋಧನೆ ಕೈಗೊಂಡೆವು. ನಮ್ಮಲ್ಲಿಯ ರೈತರು ಪ್ರತಿ ಮೂರು ತಿಂಗಳಿಗೊಮ್ಮೆ ಯಾವ ಬೆಳೆ ಬೆಳೆಯಬೇಕು, ಎಲ್ಲಿ ಮಾರಾಟ ಮಾಡಬೇಕು, ಎಷ್ಟು ಲಾಭ ಆಗಬಹುದು ಎಂದು ಯೋಚಿಸುತ್ತಲೇ ಇರಬೇಕಾಗುತ್ತದೆ. ಹೀಗಾಗಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ರೂಪವಾದ ಸ್ಟೆವಿಯಾ ಬೆಳೆಗೆ ಪ್ರೋತ್ಸಾಹ ನೀಡುವ ಮನಸ್ಸು ಮಾಡಿದೆವು’ ಎನ್ನುತ್ತಾರೆ ಮಂಜುನಾಥ.

ದೊಡ್ಡಬಳ್ಳಾಪುರದ ಅಲಿಪುರದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಎರಡು ವರ್ಷದಿಂದ ಸ್ಟೆವಿಯಾ ಬೆಳೆ ಬೆಳೆಯಲಾಗುತ್ತಿದೆ. ಕನಕಪುರ, ಮಳವಳ್ಳಿ, ಮೈಸೂರು ಮುಂತಾದೆಡೆ ಅನೇಕರು ಗುತ್ತಿಗೆ ಆಧಾರದ ಮೇಲೆ ಸ್ಟೆವಿಯಾ ಬೆಳೆಯಲು ಪ್ರಾರಂಭಿಸಿದ್ದಾರೆ. ಅದೂ ಅಲ್ಲದೆ ಅಸ್ಸಾಂ, ರಾಜಸ್ತಾನ, ಗುಜರಾತ್‌, ಜಾರ್ಕಂಡ್‌ಗಳಲ್ಲೂ ಸ್ಟೆವಿಯಾ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

ಭಾರತದಲ್ಲಿ ಸ್ಟೆವಿಯಾ ಮಾರುಕಟ್ಟೆ
ಭಾರತ ಸಕ್ಕರೆ ಕಾಯಿಲೆಯ ರಾಜಧಾನಿ ಎಂದು ಗುರುತಾಗಿದೆ. ಅಲ್ಲದೆ ಕೆಲವು ಸಂಶೋಧನೆಗಳ ಪ್ರಕಾರ 40 ವರ್ಷಕ್ಕೆ ಮೇಲ್ಪಟ್ಟ ಪ್ರತೀ ಮೂವರಲ್ಲಿ ಒಬ್ಬರು ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ನಿಯಂತ್ರಿಸುವುದರಲ್ಲಿ ಮಹತ್ವದ ಪಾತ್ರ ಹೊಂದಿರುವುದರಿಂದ ಸ್ಟೆವಿಯಾಗೆ ಬೇಡಿಕೆ ಹೆಚ್ಚಿದೆ. ಅಮೆರಿಕದಲ್ಲಿಯೂ ಬೇಡಿಕೆ ಇದೆ. ಸದ್ಯ ಚೀನಾ ಶೇ90ರಷ್ಟು ಮಾರುಕಟ್ಟೆ ಷೇರು ಹೊಂದಿದ್ದು ಸ್ಟೆವಿಯಾವನ್ನು ಪ್ರಪಂಚದಾದ್ಯಂತ ರಫ್ತು ಮಾಡುತ್ತಿದೆ. ಭಾರತ ಈ ನಿಟ್ಟಿನಲ್ಲಿ ಮುನ್ನಡೆ ಸಾಧಿಸುವ ಸಾಕಷ್ಟು ಅವಕಾಶಗಳಿವೆ ಎನ್ನುವುದು ಮಂಜುನಾಥ ಅಭಿಮತ.

ಗುತ್ತಿಗೆ ಆಧಾರದಲ್ಲಿ ಬೆಳೆ: ಬಹುಬೇಡಿಕೆಯ ಸ್ಟೆವಿಯಾವನ್ನು ಗುತ್ತಿಗೆ ವ್ಯವಸಾಯ ಪದ್ಧತಿ ಮೂಲಕ ಬೆಳೆಯುವ ಯೋಜನೆಯಲ್ಲಿದೆ ಕಂಪೆನಿ. ನಿಖರ ಮಣ್ಣಿನ ಗುಣಮಟ್ಟ ಹಾಗೂ ವಾತಾವರಣ ಬಯಸುವ ಸ್ಟೆವಿಯಾ ಬೆಳೆ ಬೆಳೆಯುವ ಕುರಿತು ಆಸಕ್ತಿ ಹೊಂದಿರುವವರಿಗೆ ಕಂಪೆನಿ ವತಿಯಿಂದ ತರಬೇತಿ ನೀಡಲಾಗುತ್ತದೆ.

ಸದಾಕಾಲ ಬೆಳೆಯುವ ಉಪೋಷ್ಣ ಗಿಡವಾಗಿರುವ ಸ್ಟೆವಿಯಾ ಎಲೆಗಳಲ್ಲಿ ಸ್ಟೆವಿಯಾಲ್‌ ಗ್ಲೈಕೋಸೈಡ್‌ ಎಂಬ ಸಿಹಿ ಉತ್ಪತ್ತಿ ಮಾಡುತ್ತದೆ. ಸಾಗುವಳಿಯ ಪ್ರಾರಂಭದಲ್ಲಿ ಪ್ರತಿ ಎಕರೆಗೆ ₹1.20 ಲಕ್ಷ ವೆಚ್ಚವಾಗಲಿದ್ದು ಅದರಲ್ಲಿ ₹45 ಸಾವಿರದಷ್ಟು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ಮುಂದೆ ಬಂದಿದೆ. ಅಲ್ಲದೆ ಸಂಸ್ಥೆಯು ಮುಂಗಡವಾಗಿ ₹40 ಸಾವಿರ ನೀಡಿ ಬೆಳೆ ಖರೀದಿ ಸಂದರ್ಭದಲ್ಲಿ ಹಿಂಪಡೆಯಲಿದೆ ಹಾಗೂ ಎಕರೆಗೆ ಒಂದು ಲಕ್ಷ ರೂಪಾಯಿವರೆಗೆ ಲಾಭ ಮಾಡಬಹುದು.

ಬೆಳೆಯುವ ಹದ: ಸ್ಟೆವಿಯಾ ಬೆಳೆಗೆ ಉತ್ತಮ ನೀರು ಸರಬರಾಜು ಇರುವ ಸಾವಯವ ಪದಾರ್ಥಗಳಿಂದ ಕೂಡಿದ ಮರಳು ಮಿಶ್ರಿತ ಕೆಂಪು ಮಣ್ಣು ಸೂಕ್ತ. ಲವಣಯುಕ್ತ ನೀರು ನಿಲ್ಲುವ ಜೇಡಿ ಮಣ್ಣು ಸೂಕ್ತವಲ್ಲ. 25–30 ಡಿಗ್ರಿ ಉಷ್ಣಾಂಶ ಇರುವ ಉತ್ತಮ ಬೆಳಕು, ಬೆಚ್ಚಗಿನ ತಾಪಮಾನ ಇರುವ ಪ್ರದೇಶ ಸೂಕ್ತ. ಹನಿ ನೀರಾವರಿ ಅಥವಾ ತುಂತುರು ನೀರಾವರಿ ವ್ಯವಸ್ಥೆ ಇದ್ದರೆ ಉತ್ತಮ ಫಲಿತಾಂಶ ಲಭಿಸಲಿದೆ.

ಸಾಗುವಳಿ ವಿಧಾನ: ಪ್ರಾರಂಭದಲ್ಲಿ ಭೂಮಿಯನ್ನು ಎರಡು ಬಾರಿ ಆಳವಾಗಿ ಉಳುಮೆ ಮಾಡಿ ಕುಂಟೆ ಹೊಡೆಯಬೇಕು. ಕೊನೆ ಸಲ ಉಳುವಾಗ ಎಕರೆಗೆ ಸುಮಾರು ಅರ್ಧ ಟನ್‌ನಷ್ಟು ಸಾವಯವ ಗೊಬ್ಬರ ಹಾಕಬೇಕು. ಗೊಬ್ಬರವನ್ನು ಮಣ್ಣಿನೊಂದಿಗೆ ಚೆನ್ನಾಗಿ ಬೆರೆಯುವಂತೆ ಮಾಡಿ ಕಾಲುವೆಗಳನ್ನು ಮಾಡಿ ಭೂಮಿಯನ್ನು ಅನುಕೂಲಕರವಾದ ಅಳತೆಯಲ್ಲಿ ವಿಭಜನೆ ಮಾಡಬೇಕು. ಎತ್ತರಿಸಿದ ಪಾತಿಗಳು ಉತ್ತಮ. ಹೀಗೆ ಸಿದ್ಧಗೊಳಿಸಿದ ಭೂಮಿಯಲ್ಲಿ 2ಅಡಿ ಅಗಲ ಮತ್ತು ಅರ್ಧಅಡಿ ಎತ್ತರದ ಸಾಲುಗಳನ್ನು ಮಾಡಿ ಗಿಡದಿಂದ ಗಿಡಕ್ಕೆ ಅರ್ಧಅಡಿ ಅಂತರಕೊಟ್ಟು ಎರಡು ಸಾಲುಗಳಲ್ಲಿ ನಾಟಿ ಮಾಡಬೇಕು. ಜನವರಿಯಿಂದ ಏಪ್ರಿಲ್ ತಿಂಗಳು ನಾಟಿ ಮಾಡಲು ಸೂಕ್ತವಾದ ಕಾಲವಾಗಿದ್ದು ಎಕರೆಗೆ ಸುಮಾರು 40 ಸಾವಿರ ಸಸಿಗಳನ್ನು ನೆಡಬಹುದಾಗಿದೆ.

ಒಂದು ಸಲ ನಾಟಿ ಮಾಡಿದ ಗಿಡ 5ವರ್ಷ ಇಳುವರಿ ನೀಡಲಿದೆ. 90 ದಿನಗಳಲ್ಲಿ ಬೆಳೆ ಮೊದಲ ಕೊಯ್ಲಿಗೆ ಸಿದ್ಧವಾಗುತ್ತದೆ. ಗಿಡದ ಎಲೆಗಳು ಬಲಿತು ಹೂವು ಬಿಡುವ ಮುನ್ನ ಭೂಮಿ ಮಟ್ಟದಿಂದ 2ರಿಂದ 3ಅಂಗುಲದಷ್ಟು ಬುಡವನ್ನು ಬಿಟ್ಟು ಕತ್ತರಿಸಬೇಕು. ಒಂದು ವರ್ಷದಲ್ಲಿ ಒಟ್ಟು 4 ರಿಂದ 5 ಕೊಯ್ಲು ಮಾಡಬಹುದು. ಮೊದಲ ವರ್ಷ ಎಕರೆಗೆ ಸುಮಾರು 1.50ಟನ್, ಎರಡನೇ ವರ್ಷ ಸುಮಾರು 2.50ಟನ್, ಮೂರನೇ ವರ್ಷ ಸುಮಾರು 3.0ಟನ್, ನಾಲ್ಕನೇ ವರ್ಷ ಸುಮಾರು 2.50ಟನ್, ಐದನೇ ವರ್ಷ ಸುಮಾರು 2.0ಟನ್, ಹೀಗೆ ಒಟ್ಟಾಗಿ 11.50ಟನ್‌ ಇಳುವರಿ (ಒಣಗಿದ ಎಲೆ) ಸಾಧ್ಯ.

ಎಲೆ ಸಂರಕ್ಷಣೆ: ಕಟಾವಾದ ಕೂಡಲೇ ಎಲೆಗಳನ್ನು ಒಣಗಿಸಬೇಕು. ಒಣಗಿಸುವ ಪ್ರಕ್ರಿಯೆಯಲ್ಲಿ ಅತಿಯಾದ ತಾಪ ಅಗತ್ಯವಿಲ್ಲ. ಗಾಳಿಯ ಸಂಚಲನ ಇದ್ದಷ್ಟೂ ಉತ್ತಮ. ಸ್ಟೆವಿಯಾ ಎಲೆಯ ಗುಣಮಟ್ಟವನ್ನು ಆಧರಿಸಿ ಪ್ರತಿ ಕೆ.ಜಿ.ಗೆ ₹70ರಿಂದ ₹110 ಬೆಲೆಯಲ್ಲಿ ಸಂಸ್ಥೆ ಖರೀದಿ ಮಾಡಲಿದೆ.

ಬಹೂಪಯೋಗಿ ತುಳಸಿ
ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತನಾಳಗಳನ್ನು ಶಕ್ತಿಯುತಗೊಳಿಸುತ್ತದೆ. ಜೀವಕೋಶಗಳ ಮರುಹುಟ್ಟಿಗೆ ಸಹಕಾರಿ. ಹಲ್ಲು ಹುಳುಕಾಗುವುದನ್ನು ನಿಯಂತ್ರಿಸುತ್ತದೆ. ಚರ್ಮವನ್ನು ಕಾಂತಿಯುತವಾಗಿಸುವುದಷ್ಟೇ ಅಲ್ಲದೆ ತಲೆ ಹೊಟ್ಟನ್ನೂ ಕಡಿಮೆ ಮಾಡುತ್ತದೆ.

ವಿಟಮಿನ್‌ ಸಿ, ಎ, ಝಿಂಕ್‌ ಮುಂತಾದವು ಇದರಲ್ಲಿದೆ. ರಕ್ತದೊತ್ತಡ, ರಕ್ತದಲ್ಲಿರುವ ಸಕ್ಕರೆ ಅಂಶ, ದೇಹದ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ. ಅಲ್ಲದೆ ಕಬ್ಬಿನಿಂದ ಮಾಡಿದ ಸಕ್ಕರೆಗಿಂತ 20–30ಪಟ್ಟು ಹೆಚ್ಚು ಸಿಹಿಯಾಗಿದೆ. ಚಹಾ, ಕಾಫಿ ಮುಂತಾದವುಗಳಲ್ಲಿ ಸಿಹಿಕಾರಿಯಾಗಿ  ಇದನ್ನು ಬಳಸಬಹುದು.  ಎಲ್ಲ ವಯೋಮಾನದವರು ಹಾಗೂ ಸಕ್ಕರೆ ಕಾಯಿಲೆ ಹೊಂದಿದವರು, ಅತಿಯಾದ ತೂಕ ಇರುವವರು, ಗರ್ಭಿಣಿಯರು ಬಳಸಬಹುದಾಗಿದ್ದು ಅಡ್ಡಪರಿಣಾಮಗಳು ವರದಿಯಾಗಿಲ್ಲ. 
*
ಸಿಹಿ ತುಳಸಿ 1500ಕ್ಕೂ ಹೆಚ್ಚು ವರ್ಷಗಳ ಕಾಲದಿಂದ ಬಳಕೆಯಲ್ಲಿದೆ. ಇದೊಂದು ಔಷಧೀಯ ಗಿಡವಾಗಿದ್ದು, ದಕ್ಷಿಣ ಅಮೆರಿಕದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ವೈಜ್ಞಾನಿಕವಾಗಿ ಇದಕ್ಕೆ ಸ್ಟೆವಿಯಾ ರೆಬೌಂಡಿಯಾನಾ ಬರ್ಟನಿ ಎಂದು ಕರೆಯಲಾಗುತ್ತದೆ. ಇಟಲಿಯ ಜೀವಶಾಸ್ತ್ರ ವಿಜ್ಞಾನಿ ಮಾಯ್ಸಸ್‌ ಎಸ್‌.ಬರ್ಟನಿ 1901ರಲ್ಲಿ ಇದರಲ್ಲಿರುವ ಸಿಹಿ ಅಂಶವನ್ನು ಕಂಡುಹಿಡಿದ. 16ನೇ ಶತಮಾನಕ್ಕೂ ಮುಂಚೆ ಗೌರಾಣಿ ಭಾರತೀಯರು ಔಷಧ ಹಾಗೂ ಆಹಾರ ಪದಾರ್ಥಗಳನ್ನು ಸಿಹಿಯಾಗಿಸಲು ಈ ತುಳಸಿಯನ್ನೇ ಬಳಸುತ್ತಿದ್ದರು ಎಂಬ ಮಾಹಿತಿಯೂ ಇದೆ.
*
ಸ್ಟೆವಿಯಾದಲ್ಲಿನ ಅಂಶಗಳು
ಕ್ಯಾಲರಿ ಶೂನ್ಯ
ಗ್ಲೈಸೆಮಿಕ್‌ ಇಂಡೆಕ್ಸ್‌ ಶೂನ್ಯ
ಕಾರ್ಬೊಹೈಡ್ರೇಟ್‌ ಶೂನ್ಯ
ಗ್ಲುಟೆನ್‌ ರಹಿತ
ಆ್ಯಂಟಿಯಾಕ್ಸಿಡೆಂಟ್‌
ಆ್ಯಂಟಿ ಬ್ಯಾಕ್ಟೀರಿಯಲ್‌
ಆ್ಯಂಟಿ ಮೈಕ್ರೊಬಯಲ್‌
ನಾನ್‌ ಟಾಕ್ಸಿಕ್‌
*
ಸ್ಟೆವಿಯಾ ಉತ್ಪನ್ನಗಳು
ಸ್ಟೆವಿಯಾ ಉತ್ಪನ್ನಗಳನ್ನು ತಣ್ಣನೆ ಹಾಗೂ ಬಿಸಿ ಪಾನೀಯಗಳಲ್ಲಿ ಬಳಸಬಹುದಾಗಿದೆ.
* ಸ್ಟೆವಿಯಾ ಸ್ವೀಟ್ನರ್‌: ನೈಸರ್ಗಿಕ ಸಿಹಿ ಅಂಶವನ್ನು ಹೊಂದಿರುವ ಇದನ್ನು ಸಿಹಿ ತುಳಸಿ ಎಲೆಗಳಿಂದ ಮಾಡಲಾಗಿದೆ.
* ಸ್ಟೆವಿಯಾ ಹೆಲ್ದಿ ಲೀಫ್‌: ಒಣಗಿದ ಸಿಹಿ ತುಳಸಿ ಎಲೆಗಳು ಲಭ್ಯ.
* ಸ್ವೀಟ್‌XX: ಇದನ್ನು ಅಡುಗೆ ಹಾಗೂ ಇತರೆ ಅವಶ್ಯಕತೆಗಳಿಗೆ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT