ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೋವ್ ಖರೀದಿಯಲ್ಲಿ ಗೋಲ್‌ಮಾಲ್

Last Updated 29 ಮಾರ್ಚ್ 2011, 8:40 IST
ಅಕ್ಷರ ಗಾತ್ರ

ದೇವದುರ್ಗ: ಎಸ್.ಎಂ. ಕೃಷ್ಣಾ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ರಾಜ್ಯದಲ್ಲಿ ಒಂದು ವಿನೂತನ ಯೋಜನೆಯಾದ ಅಕ್ಷರ ದಾಸೋಹದಂತ ಮಹತ್ವದ ಯೋಜನೆಯನ್ನು ದೇವದುರ್ಗ ತಾಲ್ಲೂಕಿನಿಂದಲೇ ಈ ಅನುಷ್ಠಾನಗೊಳಿಸಬೇಕು ಎಂಬ ನಿರ್ಧಾರದಿಂದ ಕಳೆದ ದಶಕದ ಹಿಂದೆ ಜಾರಿಗೊಂಡರೂ ಅದರ ಸಂಪೂರ್ಣ ಲಾಭ ಮಾತ್ರ ಮಕ್ಕಳು ಪಡೆಯದೇ ಇರುವುದು ಕಂಡು ಬಂದಿದೆ.

 ಅಡುಗೆ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ, ಅಡುಗೆ ಅನಿಲ ದುರ್ಬಳಕೆಗಳ ಆರೋಪಗಳು  ಕೇಳಿಬಂದಿದ್ದವು.  ಈಗ ಸ್ಟೋವ್ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ದಾಖಲಾತಿಗಳಿಂದ ಬಯಲಾಗಿದೆ.2009-2010ನೇ ಸಾಲಿನಲ್ಲಿ ಅಡುಗೆ ಅನಿಲ ಸ್ಟೋವ್ ಖರೀದಿಗಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ತಾಲ್ಲೂಕು ಪಂಚಾಯಿತಿಗೆ 480000 ರೂಪಾಯಿ ಅನುದಾನವನ್ನು ನೀಡಿದ ನಂತರ ಸದ್ರಿ ಹಣವನ್ನು ಸರ್ಕಾರದ ನಿರ್ದೇಶನದಂತೆ ಬಳಕೆ ಮಾಡಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಅನುದಾನದ ಮಾಹಿತಿ ನೀಡುವ ಜತೆಗೆ ಐಎಸ್‌ಐ ಮಾರ್ಕ್ ಇರುವ ಮತ್ತು ಗುಣಮಟ್ಟವನ್ನು ಹೊಂದಿರುವ ಸ್ಟೋವ್‌ಗಳನ್ನು ಖರೀದಿಸಿ ಇಲಾಖೆಯ ನಿಯಮಗಳ ಅನುಸಾರವಾಗಿ ಸಂಬಂಧಿಸಿದ ಶಾಲೆಗಳಿಗೆ ನೀಡಲು ತಾರೀಖು 10-.03-2010ರಂದು ಪತ್ರ ಬರೆದಿರುವುದು ದಾಖಲಾತಿಯಿಂದ ಕಂಡು ಬಂದಿದೆ.
 

ಕಳಪೆ: ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ 101ರಿಂದ 300 ಮಕ್ಕಳ ಸಂಖ್ಯೆಯನ್ನು ಹೊಂದಿರುವ 98 ಶಾಲೆಗಳನ್ನು ಮತ್ತು 301ರಿಂದ ಮೇಲ್ಪಟ್ಟ ಮಕ್ಕಳ ಸಂಖ್ಯೆ ಇರುವ 22 ಶಾಲೆಗಳನ್ನು ಗುರುತಿಸಿ ಒಟ್ಟು 120 ಶಾಲೆಗಳಿಗೆ ತಲಾ ಒಂದರಂತೆ ನೀಡಲಾದ ಸ್ಟೋವ್ ತೀರ ಕಳಪೆ ಮಟ್ಟದಾಗಿರುವುದು ಕಂಡು ಬಂದಿದೆ.
 

ದುರಸ್ತಿ: 120 ಶಾಲೆಗಳಿಗೆ ನೀಡಲಾದ 120 ಸ್ಟೋವ್‌ಗಳ ಬೆಲೆ ಒಂದಕ್ಕೆ ನಾಲ್ಕು ಸಾವಿರ ರೂಪಾಯಿ ತೋರಿಸಿದ್ದು, ವರ್ಷ ಕಳೆಯುವ ಮೊದಲೇ ಕೆಲವು ಶಾಲೆಗಳಲ್ಲಿ ಸ್ಟೋವ್ ದುರಸ್ತಿಗೆ ಬಂದಿರುವುದು ಇಲಾಖೆಯ ಅಧಿಕಾರಿಗಳ ಬೇಜವ್ದಾರಿ ಎದ್ದುಕಾಣುವಂತಿದೆ.
 

ಗೋಲ್‌ಮಾಲ್: ಗುಣಮಟ್ಟದ ಸ್ಟೋವ್ ಹೊಂದಿರದಿದ್ದರೂ ಅದರ ಬೆಲೆ ಮಾತ್ರ ಹೆಚ್ಚುವರಿಯಾಗಿರುವುದು ಖರೀದಿ ವ್ಯವಹಾರದಲ್ಲಿ ದೊಡ್ಡ ಮಟ್ಟದ ಗೋಲ್‌ಮಾಲ್ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
 

ರಾಯಚೂರಿನ ನೇತಾಜಿ ನಗರದಲ್ಲಿ ಬರುವ ಸೂಗೂರೇಶ್ವರ ಟ್ರೇಡರ್ಸ್‌ ಎಂಬ ಅಂಡಗಿಯಿಂದ ಖರೀಸಿರುವಂತೆ ಸಂಬಂಧಿಸಿದ ಶಾಲೆಗಳಿಗೆ ರಶೀದಿ ನೀಡಲಾಗಿದ್ದು, ಸದ್ರಿ ರಶೀದಿಯ ಮೇಲೆ ಮಾರಾಟ ತೆರಿಗೆ ಇಲಾಖೆಯ ಯಾವುದೇ ಪರವಾಗಿ ಹೊಂದಿರುವ ಅಂಕಿ, ಸಂಖ್ಯೆ ಹೊಂದಿಲ್ಲ. ದಾಖಲಾತಿ ತೋರಿಸಲು ಪಡೆದಿರುವ ನಕಲಿ ರಶೀದಿಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
 

ಕೈವಾಡ: ಸುಮಾರು 4.80 ಲಕ್ಷ ರೂಪಾಯಿಯ ಸ್ಟೋವ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ರಾಜಕೀಯ ವ್ಯಕ್ತಿಯೊಬ್ಬರ ಕೈವಾಡ ಇರುವುದು ಶಂಕೆ ವ್ಯಕ್ತವಾಗಿದ್ದು, ಒಟ್ಟಾರೆ ಖರೀದಿ ವ್ಯವಹಾರ ಕುರಿತು ತನಿಖೆ ಕೈಗೊಂಡಾಗ ಮಾತ್ರ ಎಲ್ಲವನ್ನು ತಿಳಿಯಲು ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT