ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ ಕ್ಯಾನ್ಸರ್: ಜಾಗೃತಿ ಮದ್ದು

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಕ್ಟೋಬರ್ ತಿಂಗಳನ್ನು `ಸ್ತನ ಕ್ಯಾನ್ಸರ್ ಜಾಗೃತಿ ಮಾಸ~ವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಸ್ತನಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಅದರಲ್ಲೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತ್ವರಿತಗತಿಯಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಪ್ರತಿ ವರ್ಷ ಭಾರತದಲ್ಲಿ ಸ್ತನ ಕ್ಯಾನ್ಸರ್‌ನಿಂದ ಅಂದಾಜು 90,000 ಮಹಿಳೆಯರು ಸಾಯುತ್ತಿದ್ದಾರೆ.

ಹೀಗಾಗಿ, ಕಾಯಿಲೆಯನ್ನು ಆರಂಭದ್ಲ್ಲಲಿ ಪತ್ತೆಹಚ್ಚುವುದೇ ಬಹಳ ಮುಖ್ಯವಾದುದು ಎಂಬ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಭಾರತೀಯ ಮಹಿಳೆಯರಲ್ಲಿ ಈ ಕುರಿತ ಜಾಗೃತಿ ಇಲ್ಲವೇ ಇಲ್ಲ . ಕಾಯಿಲೆ ಪತ್ತೆಯಾಗುವಾಗ ಸುಮಾರು ಶೇ 65ರಷ್ಟು ಮಂದಿ ಕಾಯಿಲೆಯ ಮೂರು ಅಥವಾ ನಾಲ್ಕನೇ ಹಂತ ತಲುಪಿರುತ್ತಾರೆ ಎನ್ನುವುದು ಶೋಚನೀಯ.

ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರ ಪ್ರದೇಶಗಳ ಮಹಿಳೆಯರಲ್ಲಿ. ಹಾಗೆಯೇ, ಗ್ರಾಮಾಂತರ ಪ್ರದೇಶದ ಮಹಿಳೆಯರಲ್ಲಿ ಗರ್ಭಗೊರಳಿನ ಕ್ಯಾನ್ಸರ್ ಹೆಚ್ಚು ಎಂಬುದು ಸಾಮಾನ್ಯ ತಿಳಿವಳಿಕೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು 40 ವಯಸ್ಸು ದಾಟಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬಂದರೆ ಭಾರತದಲ್ಲಿ 30 ಹಾಗೂ 20ರ ವಯೋಮಾನದಲ್ಲಿರುವ ಮಹಿಳೆಯರಲ್ಲೂ ಕಂಡು ಬರುತ್ತಿರುವುದು ಹೊಸ ಬೆಳವಣಿಗೆ.

ಹೀಗಾಗಿಯೇ, ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚುವ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು ತುರ್ತು ಅಗತ್ಯ. ತಂತ್ರಜ್ಞಾನ ಆಧರಿತ `ಮ್ಯಾಮೊಗ್ರಫಿ~, ತರಬೇತಿ ಪಡೆದ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರಿಂದ ಕ್ಲಿನಿಕಲ್ ಪರೀಕ್ಷೆ ಅಥವಾ ಸ್ವಯಂ ಪರೀಕ್ಷಾ ವಿಧಾನಗಳು - ಸ್ತನ ಕ್ಯಾನ್ಸರ್‌ಅನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಹಾಯಮಾಡುತ್ತವೆ.     

 ಸ್ತನ ಕ್ಯಾನ್ಸರ್ ವಿರುದ್ಧ ಸೆಣಸಿ ಬದುಕುಳಿದ ಸುಮಾರು ಹತ್ತು ಲಕ್ಷದಷ್ಟು ಭಾರತೀಯ ಮಹಿಳೆಯರು ನಮ್ಮ ನಡುವೆ ಇದ್ದಾರೆ ಎಂಬ ಅಂಶವೇ ಕ್ಯಾನ್ಸರ್ ಕುರಿತಾದ ಆತಂಕವನ್ನು ತಗ್ಗಿಸಲು ನಮಗೆ ಸ್ಫೂರ್ತಿಯಾಗಬೇಕಿದೆ. ಮೊದಲಿಗೆ ಕ್ಯಾನ್ಸರ್ ಕುರಿತಾದ ತಪ್ಪುಕಲ್ಪನೆಗಳು ಜನಮಾನಸದಿಂದ ತೊಲಗಬೇಕು.

ಕ್ಯಾನ್ಸರ್ ಕಾಯಿಲೆಯಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆ ಬಹಳಷ್ಟು ದೈಹಿಕ ಹಾಗೂ ಭಾವನಾತ್ಮಕ ಸಮಸ್ಯೆಗಳನ್ನು ತರುವಂತಹದ್ದು. ಹೀಗಾಗಿ ಈ ಎಲ್ಲಾ ಆಯಾಮಗಳ ನಿರ್ವಹಣೆ ಮುಖ್ಯ. ಇದರ ಮಹತ್ವವನ್ನು ಅರಿತಿರುವ ಸರ್ಕಾರ 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ 58,000 ಕೋಟಿ ರೂಪಾಯಿಗಳನ್ನು ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕೆಂದು ಮೀಸಲಿರಿಸಿದೆ.

ಇದರಲ್ಲಿ ಕ್ಯಾನ್ಸರ್‌ಗೆಂದು ಮೀಸಲಿರಿಸಿರುವ ಮೊತ್ತ 16,000 ಕೋಟಿ ರೂಪಾಯಿ.  2017ರೊಳಗೆ ಎರಡು ರಾಷ್ಟ್ರೀಯ ಹಾಗೂ 20 ರಾಜ್ಯ ಕ್ಯಾನ್ಸರ್  ಸಂಸ್ಥೆಗಳನ್ನು ಆರಂಭಿಸುವ ಮಹತ್ವದ ಯೋಜನೆ ಹೊಂದಲಾಗಿದೆ. ಜೊತೆಗೆ 640ರಷ್ಟು  ಜಿಲ್ಲಾ ಕಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲೂ ಉದ್ದೇಶಿಸಲಾಗಿದೆ.

ಕ್ಯಾನ್ಸರ್ ತಜ್ಞರ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇದು ಪ್ರಮುಖ ಹೆಜ್ಜೆ.  ಜನಸಾಮಾನ್ಯರ ಕೈಗೆಟುಕದಷ್ಟು ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾದುದು. ಆದ್ದರಿಂದ ಕ್ಯಾನ್ಸರ್ ತಡೆ ಹಾಗೂ ಆರಂಭದ ಹಂತದಲ್ಲೇ ಕಾಯಿಲೆ ಪತ್ತೆ ಹಚ್ಚುವಿಕೆ ಕುರಿತಂತೆ  ಅರಿವು ಹೆಚ್ಚಿಸುವುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT