ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಶಕ್ತಿ ಸಂಘಗಳಿಗೆ ಅಭ್ಯರ್ಥಿಗಳ ಗಾಳ

Last Updated 26 ಏಪ್ರಿಲ್ 2013, 6:39 IST
ಅಕ್ಷರ ಗಾತ್ರ

ಮಂಡ್ಯ: ಸ್ತ್ರೀಶಕ್ತಿ, ಸ್ವಸಹಾಯ ಹಾಗೂ ಯುವಕ ಸಂಘಗಳಿಗೆ ರಾಜಕೀಯ ನಾಯಕರು ಗಾಳ ಹಾಕಿ ತಮ್ಮತ್ತ ಸೆಳೆದುಕೊಳ್ಳಲು ಪೈಪೋಟಿ ನಡೆಸಿದ್ದಾರೆ. ಅವರಿಗೆ ವಿವಿಧ ಬಗೆಯ ಆಮಿಷ ಒಡ್ಡುವ ಮೂಲಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಆರ್ಥಿಕ ನೆರವು, ಉಡುಗೊರೆ ನೀಡುವ ಮೂಲಕ ತಮ್ಮತ್ತ ಸೆಳೆದುಕೊಳ್ಳಲು ಎಲ್ಲ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ. ಪರಿಣಾಮ ಅವುಗಳಿಗೆ ಭಾರಿ ಬೇಡಿಕೆ ಹುಟ್ಟಿಕೊಂಡಿದೆ.

ಪ್ರಚಾರ ಸಭೆಗೆ ಜನರನ್ನು ಕರೆದುಕೊಂಡು ಬರುವುದು. ಅಭ್ಯರ್ಥಿಗಳ ಪರವಾಗಿ ಗ್ರಾಮದಲ್ಲಿ ಪ್ರಚಾರ ಮಾಡುವ ಉಸ್ತುವಾರಿಯನ್ನು ಈ ಸಂಘದ ಸದಸ್ಯರುಗಳಿಗೆ ವಹಿಸಲಾಗುತ್ತದೆ. ಸಭೆಗೆ ಆಗಮಿಸಿದಾಗ ಇಂತಿಷ್ಟು ಹಣದ ಜತೆಗೆ ಊಟದ ಖರ್ಚು ಬೇರೆ ನೀಡಬೇಕು. ಆಗಲೇ ಸಭೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರನ್ನು ಕಾಣಲು ಸಾಧ್ಯ ಎನ್ನುತ್ತಾರೆ ರಾಜಕೀಯ ಮುಖಂಡರೊಬ್ಬರು.

ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘದವರು ಆಯಾ ಗ್ರಾಮದವರೇ ಆಗಿರುವುದರಿಂದ ಅವರನ್ನು ಆ ಗ್ರಾಮದಲ್ಲಿ ಪ್ರಚಾರಕ್ಕೂ ಬಳಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿವೆ. ಅವುಗಳಿಗೆ ಉತ್ತಮ ಬೇಡಿಕೆ ಉಂಟಾಗಿದೆ.

ಕೆಲವು ಸಂಘಗಳು ಆರ್ಥಿಕ ನೆರವನ್ನು ಬೇಡಿದರೆ, ಇನ್ನೂ ಕೆಲವು ಸಂಘಗಳವರು ಸೀರೆ, ಅಡುಗೆ ಮನೆಯ ಸಾಮಗ್ರಿಗಳ ಬೇಡಿಕೆ ಸಲ್ಲಿಸುತ್ತಾರೆ. ಅವನ್ನೆಲ್ಲ ಕೊಡಿಸುವ ಮೂಲಕ ಅವರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ.

ಎರಡನೇ ಸಾಲಿನ ನಾಯಕರಿಗೂ ಬೇಡಿಕೆ: ಗ್ರಾಮದಲ್ಲಿ ಒಂದಷ್ಟು ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡುತ್ತಿದ್ದ ವ್ಯಕ್ತಿಗಳಿಗೂ ಈಗ ಬಹಳಷ್ಟು ಬೇಡಿಕೆ ಇದೆ.

ಇವರ ಮಾತು ಅವರ ಊರಲ್ಲಿ, ಅವರ ಸಮಾಜದಲ್ಲಿ ನಡೆಯುತ್ತದೆ ಎಂದು ಅಭ್ಯರ್ಥಿಯ ಹಿಂಬಾಲಕರು, ಅಭ್ಯರ್ಥಿಗಳಿಗೆ ಹೇಳುತ್ತಾರೆ. ಅಂಥವರಿಗೆ ಅಲ್ಲಿನ ಜವಾಬ್ದಾರಿ ವಹಿಸಿ ಖರ್ಚಿಗೆಂದು ಒಂದಷ್ಟು ದುಡ್ಡು ಕೊಟ್ಟು ಕಳುಹಿಸುತ್ತಿದ್ದಾರೆ.

ಗ್ರಾಮದಲ್ಲಿನ ಯುವಕ ಸಂಘಗಳಿಗೆ ಟೀ ಷರ್ಟ್, ಆಟದ ಸಾಮಗ್ರಿ, ಆರ್ಥಿಕ ನೆರವು ನೀಡುವ ಮೂಲಕ ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಗ್ರಾಮದ ಮುಖಂಡರನ್ನು ಕರೆಯಿಸಿ, ಊರ ದೇವಸ್ಥಾನಕ್ಕೆ ಇಂತಿಷ್ಟು ಹಣ ನೀಡುತ್ತೇವೆ ಎಂದು ಆಮಿಷವೊಡ್ಡಿ ಅಭ್ಯರ್ಥಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT