ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಶಕ್ತಿ ಸಂಘಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Last Updated 26 ಏಪ್ರಿಲ್ 2013, 9:53 IST
ಅಕ್ಷರ ಗಾತ್ರ

ತುಮಕೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ತ್ರೀಶಕ್ತಿ ಸಂಘಗಳಿಗೆ ಬೇಡಿಕೆ ಬಂದಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ ಭಿಕ್ಷೆಗಾಗಿ ಮಹಿಳೆಯರನ್ನು ಓಲೈಸಲು ಸ್ತ್ರೀಶಕ್ತಿ ಸಂಘಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿನ ತಮ್ಮ ಅಗತ್ಯ ಮತ್ತು ಬೇಡಿಕೆಯನ್ನು ಅರಿತಿರುವ ಸ್ತ್ರೀಶಕ್ತಿ ಸಂಘಗಳು ಬಡಪಟ್ಟಿಗೆ ಯಾರಿಗೂ ಮಣಿಯುತ್ತಿಲ್ಲ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಒಗ್ಗೂಡಿದ್ದಾರೆ. ಈಗ ಪ್ರತಿ ಗ್ರಾಮದಲ್ಲಿ ಹತ್ತಾರು ಸ್ತ್ರೀಶಕ್ತಿ ಸಂಘಗಳು ಹುಟ್ಟಿಕೊಂಡಿವೆ. ಪ್ರಸ್ತುತ ಸಂದರ್ಭದಲ್ಲಿ ಈ ಸಂಘಗಳು ಆರ್ಥಿಕವಾಗಿ ಸಹ ಬಲಿಷ್ಠವಾಗುತ್ತಿವೆ. ಇಂತಹ ಒಗ್ಗಟ್ಟನ್ನು ಈಗ ಚುನಾವಣೆ ಸಂದರ್ಭದಲ್ಲಿ `ಸಂಪನ್ಮೂಲ ಸಂಗ್ರಹಕ್ಕೆ' ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಒಂದು ಸಂಘದಲ್ಲಿ ಎಷ್ಟು ಮಹಿಳಾ ಸದಸ್ಯರಿದ್ದಾರೆ. ಒಟ್ಟಾರೆ ಈ ಕುಟುಂಬಗಳ ಮತದಾರರ ಸಂಖ್ಯೆ ಎಷ್ಟು ಎಂಬುದರ ಆಧಾರದ ಮೇಲೆ ಸ್ತ್ರೀಶಕ್ತಿಗಳ ಮತ ಖರೀದಿಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಆಯಾ ಗ್ರಾಮದ ಮುಖಂಡರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಣ, ಚಿನ್ನ ಅಥವಾ ಬೆಳ್ಳಿ ಸಾಮಗ್ರಿಗಳ ರೂಪದಲ್ಲಿ ಬೆಲೆ ಕಟ್ಟಲಾಗುತ್ತಿದೆ. ಆದರೆ ಸ್ತ್ರೀಶಕ್ತಿಗಳು `ಜಾಗೃತ ಹೆಜ್ಜೆ' ಇಡುತ್ತಿದ್ದು, ಯಾವುದೇ ಪಕ್ಷದ ಅಭ್ಯರ್ಥಿ ಹಣ ಅಥವಾ ವಸ್ತುಗಳನ್ನು ನೀಡಿದರೂ ಬೇಡ ಎನ್ನದೆ ಸ್ವೀಕರಿಸಲು ಮುಂದಾಗಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮಗಳಲ್ಲಿ ಪುರುಷರ ಅಣತಿಯಂತೆ ಕೆಲಸ ಮಾಡುವ ಮಹಿಳೆಯರು ಈ ವಿಚಾರದಲ್ಲಿ ಮಾತ್ರ ತಮ್ಮ ಸಂಘದಲ್ಲಿ ನಿರ್ಣಯ ಮಾಡಿ, ಯಾರು ಎಷ್ಟು ಕೊಟ್ಟರೂ ಸರಿ ಪಡೆಯಲು ಸಿದ್ಧರಾಗುತ್ತಿದ್ದಾರೆ. ಪಡೆದ ಹಣವನ್ನು ಸಮನಾಗಿ ಹಂಚಿಕೊಳ್ಳುವ ನಿರ್ಧಾರವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸ್ತ್ರೀಶಕ್ತಿ ಸಂಘದ ಸದಸ್ಯೆಯೊಬ್ಬರು.

ನಗರ ಪ್ರದೇಶದ ಸ್ತ್ರೀಶಕ್ತಿ ಸಂಘಗಳ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಶ್ರೀಮಂತ ವರ್ಗದ ಮಹಿಳೆಯರು ಇಂತಹ ಸ್ತ್ರೀಶಕ್ತಿ ಸಂಘ ರಚಿಸಿರುವುದು ಕಡಿಮೆ. ಅಲ್ಲದೆ ಇಂತಹವರು ಬಂದು ಮತ ಹಾಕುತ್ತಾರೆ ಎಂಬ ಖಾತರಿ ಸಹ ಅಭ್ಯರ್ಥಿಗಳಿಗೆ ಇಲ್ಲ. ಹೀಗಾಗಿ ಕೊಳಚೆ ಪ್ರದೇಶಗಳು ಮತ್ತು ಬಡವರು ವಾಸಿಸುವ ಹಳೆ ಪ್ರದೇಶಗಳತ್ತ ಅಭ್ಯರ್ಥಿಗಳು ಗಮನ ಹರಿಸುತ್ತಿದ್ದಾರೆ.

ರಾಜಕೀಯ ಪಕ್ಷಗಳು ಕೊಳಚೆ ಪ್ರದೇಶಗಳ ಮಹಿಳೆಯರನ್ನು ದಿನಗೂಲಿ ಆಧಾರದಲ್ಲಿ ಕಾರ್ಯಕರ್ತರನ್ನಾಗಿ ನೇಮಕ ಮಾಡಿಕೊಳ್ಳುತ್ತಿವೆ.
ದಿನಕ್ಕೆ ರೂ. 300ರಿಂದ 400 ಕೂಲಿ ನೀಡಲಾಗುತ್ತದೆ. ಗುಂಪು ಗುಂಪಾಗಿ ಬಡಾವಣೆಗಳಿಗೆ ತೆರಳಿ ಕರಪತ್ರ ಹಂಚಿಕೆ ಮಾಡುತ್ತಾರೆ.

ಅಲ್ಲದೆ ಸಮಾವೇಶ, ಅಭ್ಯರ್ಥಿ ಮತ ಯಾಚನೆ ಸಂದರ್ಭ ಭಾಗವಹಿಸುತ್ತಾರೆ. ಇವರನ್ನು ಗುರುತಿಸಿ ಸ್ತ್ರೀಶಕ್ತಿ ಸಂಘಗಳ ಮೇಲೆ ಪ್ರಭಾವ ಬೀರುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ದಿನಗೂಲಿ ಜೊತೆಗೆ ಮತವನ್ನು ಖರೀದಿಸುವ ಕೆಲಸ ಸಹ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT