ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಗಿತಗೊಳ್ಳುವ ವ್ಯಾಪಾರ ವಹಿವಾಟು: ಅರ್ಧ ನಗರವೇ ಬಂದ್!

Last Updated 1 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

ಸೋಮವಾರಪೇಟೆ: ನಗರದ ವಿವಿಧ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಡಿಸುವ ಕಾಮಗಾರಿ ಬುಧವಾರದಿಂದ ಪ್ರಾರಂಭವಾಗಲಿದೆ. ಈ ಕಾಮಗಾರಿಯಿಂದಾಗಿ ಅರ್ಧ ನಗರವೇ ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವ್ಯಾಪಾರ ವಹಿವಾಟು ಕುಸಿಯುವ ಆತಂಕದಲ್ಲಿ ವರ್ತಕರಿದ್ದಾರೆ. ವಾಹನ ಚಾಲನೆ ಮತ್ತು ನಿಲುಗಡೆಗಾಗಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಟ್ಯಾಕ್ಸಿ ನಿಲ್ದಾಣದ ಬಳಿಯ ಆಸ್ಪತ್ರೆ ಗೇಟಿನಿಂದ ಜೇಸಿ ವೇದಿಕೆ ತನಕ ರೂ.1.30 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸ ಆರಂಭವಾಗಲಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಳ್ಳುವುದಾದರೂ ಅಭಿವೃದ್ಧಿ ದೃಷ್ಟಿಯಿಂದ ನಗರದ ವರ್ತಕರು ಮತ್ತು ನಾಗರಿಕರು ಪಟ್ಟಣ ಪಂಚಾಯಿತಿಗೆ ಸಹಕಾರ ನೀಡಲು ಮುಂದಾಗಿದ್ದಾರೆ.

ಕೆಲಸ ಮುಗಿಯುವ ತನಕವೂ ಈ ಭಾಗದ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚುವುದು ಅನಿವಾರ್ಯವಾದ್ದರಿಂದ ವ್ಯಾಪಾರವನ್ನೇ ನಂಬಿ ಬದುಕುತ್ತಿರುವ ಮಂದಿ ತೊಂದರೆಗೆ ಸಿಲುಕಲಿದ್ದಾರೆ. ನಗರದ ಮುಖ್ಯ ರಸ್ತೆಗಳೇ ಬಂದ್ ಆಗುವುದರಿಂದ ವಾಹನ ಸಂಚಾರದ ಮೇಲೂ ಪರಿಣಾಮ ಬೀರಲಿದ್ದು, ಬದಲಿ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕೂಡಾ ಅನಿವಾರ್ಯವಾಗಿದೆ.

ಬಂದ್ ಆಗಲಿರುವ ರಸ್ತೆಗಳು: ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಮೇಲಿನ ಪೆಟ್ರೋಲ್ ಬಂಕ್‌ನಿಂದ ಖಾಸಗಿ ಬಸ್ ನಿಲ್ದಾಣದ ವರೆಗಿನ ಮುಖ್ಯ ರಸ್ತೆ, ಆಸ್ಪತ್ರೆ ಗೇಟಿನಿಂದ ವಿಎಸ್‌ಎಸ್‌ಎನ್ ಬ್ಯಾಂಕ್ ವರೆಗಿನ ರಸ್ತೆಗಳು ಬಂದ್ ಆಗಲಿವೆ.

ಬದಲಿ ವಾಹನ ಸಂಚಾರ ವ್ಯವಸ್ಥೆ: ಬಾಣಾವರ ಕಡೆಯಿಂದ ಬರುವ ಸರ್ಕಾರಿ ಬಸ್‌ಗಳು ಬಸವೇಶ್ವರ ದೇವಾಲಯ-ಆನೆಕೆರೆ ಹಾಗೂ ಎಂ.ಜಿ ರಸ್ತೆಯ ಮೂಲಕ ಮಡಿಕೇರಿ ರಸ್ತೆಗಾಗಿ ಕ್ಲಬ್ ರಸ್ತೆ ಮೂಲಕ ಬಸ್ ನಿಲ್ದಾಣ ತಲುಪಬೇಕಾಗುತ್ತದೆ. ಶನಿವಾರಸಂತೆ ಮೂಲಕ ಬರುವ ಬಸ್ಸುಗಳು ಎಂ.ಜಿ ರಸ್ತೆ ಮತ್ತು ಕ್ಲಬ್ ರಸ್ತೆಗಾಗಿ ಬಸ್ ನಿಲ್ದಾಣ ತಲುಪಬೇಕು. ಖಾಸಗಿ ವಾಹನಗಳೂ ಇದೇ ಮಾರ್ಗವನ್ನು ಅನುಸರಿಸಬೇಕು.

ತಾತ್ಕಾಲಿಕ ಬಸ್ ನಿಲ್ದಾಣ: ಕೆಲಸ ಮುಗಿಯುವ ತನಕ ತಾತ್ಕಾಲಿಕವಾಗಿ ನಗರದ ಮಡಿಕೇರಿ ರಸ್ತೆಯಲ್ಲಿರುವ ಅಮ್ಮಣ್ಣ ಆಟೋ ಗ್ಯಾರೇಜ್‌ನಿಂದ ತಾಲ್ಲೂಕು ಪಂಚಾಯಿತಿ ಕಚೇರಿ ತನಕ ರಸ್ತೆಯ ಒಂದೇ ಕಡೆ ನಿಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ಆಟೋರಿಕ್ಷಾಗಳನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಒಳಗೆ ಬಸ್ ಸಂಚಾರಕ್ಕೆ ತೊಂದರೆಯಾಗದಂತೆ ನಿಲ್ಲಿಸಬೇಕು. ಬಾಡಿಗೆ ವಾಹನ ಮತ್ತು ಟ್ಯಾಕ್ಸಿಗಳನ್ನು ವಿಎಸ್‌ಎಸ್‌ಎನ್ ಬ್ಯಾಂಕ್ ಬಳಿಯಿಂದ ಮಹದೇಶ್ವರ ಬಡಾವಣೆಗೆ ತೆರಳುವ ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಬೇಕು. ಲಾರಿ ಮತ್ತು ಟ್ರ್ಯಾಕ್ಟರ್‌ಗಳನ್ನು ವಿವೇಕಾನಂದ ವೃತ್ತದಿಂದ ಸಫಾಲಿ ಹೋಟೆಲ್ ತನಕ ಒಂದು ಬದಿಯಲ್ಲಿ ನಿಲ್ಲಿಸಲು ತಿಳಿಸಲಾಗಿದೆ.

ಆಸ್ಪತ್ರೆಗೆ ತೆರಳುವ ರಸ್ತೆ ಬಂದ್ ಆಗುವುದರಿಂದ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿಯಿಂದ ಆಸ್ಪತ್ರೆಗೆ ಹೋಗಬಹುದಾಗಿದ್ದು ಆಸ್ಪತ್ರೆಯ ಹತ್ತಿರ ಇರುವ ಕಾಂಪೌಂಡ್ ಗೋಡೆ ತೆರವುಗೊಳಿಸಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ನಗರ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದಿಂದ ಬರುವ ಖಾಸಗಿ ವಾಹನಗಳನ್ನು ಆನೆಕೆರೆ ಜಂಕ್ಷನ್, ಬಸವೇಶ್ವರ ರಸ್ತೆ, ಆರ್‌ಎಂಸಿ ಪ್ರಾಂಗಣ ಹಾಗೂ ಕೊಡವ ಸಮಾಜ ರಸ್ತೆಗಳ ಒಂದು ಬದಿಯಲ್ಲಿ ನಿಲ್ಲಿಸಲು ಅವಕಾಶ ನೀಡಲಾಗಿದ್ದು, ಶನಿವಾರಸಂತೆ-ಮಡಿಕೇರಿ ಮುಖ್ಯರಸ್ತೆ ಮತ್ತು ಎಂ.ಜಿ. ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT