ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ಪರಿಶೀಲನೆ ನಡೆಸದ ಅಧಿಕಾರಿಗಳಿಗೆ ಸದಸ್ಯರ ತರಾಟೆ

Last Updated 13 ಸೆಪ್ಟೆಂಬರ್ 2013, 11:25 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಹಲವು ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬೀದಿಗಳ ಕಾಮಗಾರಿ ವೀಕ್ಷಣೆ ಮಾಡದೆ ಅವುಗಳ ದುಸ್ಥಿತಿಗೆ ನೀವೇ ನೇರ ಹೊಣೆಗಾರರಾಗಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸದಸ್ಯರು ಆರೋಪ ಮಾಡಿದರು.

ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಮತ್ತು ವರ್ಗಗಳ  ಹಿತರಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಕಾರ್ಯಪಾಲಕ ಎಂಜಿನಿಯರ್‌ ವಿಜಯ ಸಾರಥಿ ಅವರನ್ನು ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಚೌಡಹಳ್ಳಿ ಮತ್ತು ಬೆಳವಾಡಿ ಗ್ರಾಮಗಳ ಪರಿಶಿಷ್ಟರ ಬೀದಿಯಲ್ಲಿ  ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ಕಾಮಗಾರಿ ಇದೀಗ ತಾನೇ ಮುಗಿದಿದ್ದರೂ ಶಿಥಿಲಗೊಂಡಿದ್ದು, ಸ್ಥಳ ಪರಿಶೀಲನೆ ಮಾಡದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಅದನ್ನು ಬಿಟ್ಟು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಸಭೆ ನಿರ್ಧಾರ ಕೈಗೊಂಡಿತು.

ತಾಲ್ಲೂಕು ಪಂಚಾಯಿತಿಯ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡದೇ  ಬಿಲ್ ಮಾಡುತ್ತಿರುವ ಬಗ್ಗೆ ಆಕ್ಷೇಪಿಸಿದ ಸಮಿತಿ ಸದಸ್ಯರು, ಕೆಬ್ಬೇಪುರ ಗ್ರಾಮದ ದೌರ್ಜನ್ಯಗೊಳಗಾದ ಸಂತ್ರಸ್ತರ ಬೀದಿಗೆ ಭೇಟಿ ನೀಡದೆ ಹಾಗೂ ಕುಡಿಯುವ ನೀರು ಕಾಮಗಾರಿ ಆರಂಭವಾಗದೇ ಇರುವ ಬಗ್ಗೆ ಪ್ರಶ್ನಿಸಿದರು. ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ  85 ಮಂದಿ ಕಾರ್ಯ ನಿರ್ವಹಿಸಿದ್ದು ಕೇವಲ 45 ಜನರಿಗೆ ಕೂಲಿ ಹಣ ಪಾವತಿಸದೇ ಇದ್ದ ಬಗ್ಗೆ ದೂರು ಸಲ್ಲಿಸಿದಾಗ ಕಾಮಗಾರಿಯ ನಿರ್ವಹಣೆಗೆ ಹಣ ಸಾಕಾಗದೇ ಬೇರೆ ಯೋಜನೆಯಿಂದ ಅದನ್ನು ಸರಿದೂಗಿಸ­ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಚೌಡಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಜನರು ವಾಸಿಸುವ  ಬೀದಿಯಲ್ಲಿ ಚರಂಡಿ ಕಾಮಗಾರಿಯನ್ನು ನಿರುಪಯುಕ್ತ ಜಾಗದಲ್ಲಿ ನಿರ್ಮಿಸಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಬೇರಂಬಾಡಿ ಗ್ರಾಮದಲ್ಲಿ ನಿಲುಗಡೆಯಾಗುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಬೀಚನಹಳ್ಳಿ ಗ್ರಾಮದಲ್ಲಿ ನಿಲುಗಡೆಯಾಗುವಂತೆ ಕೋರಿದ ಪ್ರಸ್ತಾವನೆ ಅಂಗೀಕರಿಸಲಾಯಿತು.

ಆರೋಗ್ಯ ಅಧಿಕಾರಿ ಡಾ.ನರೇಂದ್ರಬಾಬು ಮಾತನಾಡಿ, ಆರೋಗ್ಯ ಇಲಾಖೆಯಿಂದ 205 ಪರಿಶಿಷ್ಟ ಜಾತಿಯ 95 ಪರಿಶಿಷ್ಟ ವರ್ಗದ ಜನರಿಗೆ ಮಡಿಲು ಕಿಟ್‌ ನೀಡಲಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯದ ಸ್ವಚ್ಛತೆ ಬಗ್ಗೆ ಗಮನ ಹರಿಸಲು ಸಭೆಯಲ್ಲಿ ಸಲಹೆ ನೀಡಲಾಯಿತು. ತಾಲ್ಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ತರಿಸುತ್ತಿರುವ ಬಗ್ಗೆ ಮತ್ತು ಕಗ್ಗಳದಹುಂಡಿ ಮತ್ತು ಕಬ್ಬಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮತ್ತೊಬ್ಬ ವೈದ್ಯರನ್ನು ನಿಯೋಜನೆ ಮಾಡಲು ಕೋರಲಾಯಿತು.

ಪಟ್ಟಣದ 2ನೇ ವಾರ್ಡ್‌ನ ಸಮುದಾಯ ಭವನದ ರಸ್ತೆ ತೀರಾ ಹದಗೆಟ್ಟಿರುವ ಬಗ್ಗೆ ದೂರು ಸಲ್ಲಿಸಲಾಯಿತು. ಆದರೆ  ಅದನ್ನು ಸರಿಪಡಿಸಲು ಕಾರ್ಯಪ್ರವೃತ್ತರಾಗಬೇಕಾದ ಪುರಸಭೆ ಮುಖ್ಯಾಧಿಕಾರಿ ಸಭೆಗೆ ಗೈರು ಹಾಜರಾಗಿರುವುದನ್ನು ಮನಗಂಡ ಸಭೆಯು ಸಹಾಯಕರ ಬದಲು ಅಧಿಕಾರಿಯೇ ಸಭೆಗೆ ಬರುವಂತೆ ಒತ್ತಡ ಹೇರಲು ನಿರ್ಧಾರ  ಕೈಗೊಂಡಿತು.

ತಹಶೀಲ್ದಾರ್ ರಂಗನಾಥ್, ಸಮಾಜ ಕಲ್ಯಾಣಾಧಿಕಾರಿ ಕನ್ಯಾಕುಮಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಉಪ ತಹಶೀಲ್ದಾರ್ ಸಿದ್ದಪ್ಪ , ಸಮಿತಿ ಅಧ್ಯಕ್ಷ ಸಿದ್ದಪ್ಪಾಜಿ, ಹನುಮಂತರಾಜು, ಬಸವರಾಜು, ದೇವರಾಜು ಬಹುಜನ, ಮಹೇಶ್, ಬಸವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT