ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರ ಸುದ್ದಿ-ಬಡವಾಗಿದೆ ಬಸ್ ನಿಲ್ದಾಣ

Last Updated 28 ಫೆಬ್ರುವರಿ 2011, 7:05 IST
ಅಕ್ಷರ ಗಾತ್ರ

ಬಜಗೋಳಿ: ಹೂವು ಹಾವಾಗಲಿದೆ. ಹಣ್ಣು ಬಣ್ಣಗೆಡಲಿದೆ. ಸದಾ ಜನಜಂಗುಳಿಯಿಂದ ಗಿಜಿಗುಟ್ಟುವ ವಠಾರ ನಿರ್ಜನವಾಗಲಿದೆ. ಹಾಲಿನ ಬೂತು ಕಾಲ್ಕೀಳಲಿದೆ.  ಸುಮಾರು 50 ವರ್ಷಗಳಿಂದ ಅವ್ಯವಸ್ಥೆಯ ನಡುವೆಯೇ ಒಗ್ಗಿ ಹೋದ ಪರಿಸರಕ್ಕೆ ಪರಿವರ್ತನೆಯ ಕತ್ತರಿ  ಆಘಾತ ನೀಡಲಿದೆ. ವರ್ಷಗಳಿಂದ ಬೆಳೆದು ನಿಂತ ಹಿತಾಸಕ್ತಿಗಳಿಗೆ ಕಾಲದ ಕರೆಗಂಟೆ ಕರ್ಣಕರ್ಕಶವಾಗಿ ಬಿಟ್ಟಿದೆ.
ಕಾರಣ ಇಷ್ಟೆ. ಕಾರ್ಕಳದ ಹೃದಯ ಬೇರೆ ಕಡೆಗೆ ಸ್ಥಳಾಂತರ ಆಗುತ್ತಿದೆ. ಜಿಲ್ಲಾಧಿಕಾರಿ ವೈದ್ಯರಾಗಿದ್ದಾರೆ. ಪುರಸಭಾಡಳಿತ ಸಹಾಯಕರ, ದಾದಿಯರ ಪಾತ್ರ ವಹಿಸುತ್ತಿದೆ. ಚುನಾಯಿತ ಜನಪ್ರತಿನಿಧಿಗಳು ಬೆಂಬಲಕ್ಕೆ ನಿಂತಿದ್ದಾರೆ. ಆಪರೇಶನ್ ಸಕ್ಸಸ್ ಆಗುತ್ತೆ.....

ಆಪರೇಶನ್‌ಗೆ ಪೂರ್ವಭಾವಿಯಾಗಿ ಕಳೆದ ಮಂಗಳವಾರ ಸಭೆ ನಡೆದಿದೆ. ಮುಂದಿನ ಮಂಗಳವಾರ ಮತ್ತೊಂದು ಸಭೆ ನಡೆಯಲಿದೆ. ಮುಂದೆ ಮೂರು ವಾರ ಸರಣಿ ಪರೀಕ್ಷೆಗಳು  ನಡೆಯಲಿದ್ದು ಬಹುಷ್ಯ ಮಾರ್ಚ್ 15 ರಿಂದ 20ರ ಒಳಗೆ ಆಪರೇಷನ್‌ಗೆ ದಿನ ನಿಗದಿಯಾಗುತ್ತೆ..... ಆಪರೇಷನ್ ನಡೆದೇ ತೀರುತ್ತೆ.....

ಕಾರ್ಕಳ ರಸ್ತೆ ವಿಸ್ತರಣೆ ಮತ್ತು ಅದರ ಮೊದಲು ಹಾಲಿ ಬಸ್‌ಸ್ಟ್ಯಾಂಡ್ ಬಂಡೀಮಠಕ್ಕೆ ಸ್ಥಳಾಂತರಗೊಳಿಸುವ ಕುರಿತಂತೆ ಉಡುಪಿ ಜಿಲ್ಲಾಧಿಕಾರಿ ಕಳೆದ ಮಂಗಳವಾರ ಕಾರ್ಕಳದಲ್ಲಿ ನಡೆಸಿದ ನಾಗರಿಕರ ಸಮಾಲೋಚನಾ ಸಭೆಯಲ್ಲಿ ಪ್ರಕಟಗೊಂಡ ಮಾಹಿತಿ ಹಿನ್ನಲೆಯಲ್ಲಿ ಕೇಳಿ ಬಂದ ಕಾವ್ಯಾತ್ಮಕ ಪ್ರತಿಕ್ರಿಯೆಯ ಸಾಲುಗಳಿವು. ಎಂದೋ ಆಗಬೇಕಾಗಿದ್ದ ತೀರ್ಮಾನ ಈಗಲಾದರೂ ಆಯ್ತುಲ್ಲಾ ಎಂದು ಕೆಲವರು, ಈಗಂತೂ ಅಗತ್ಯವಿಲ್ಲ. ಇನ್ನೂ 10 ವರ್ಷ ಇದೇ ಸ್ಥಿತಿಯಲ್ಲಿ ಮುಂದುವರೆಯುವುದೇ ಸೂಕ್ತವಿತ್ತು ಎನ್ನುವ ಮಾತುಗಳ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಕಾರ್ಕಳ ನಾಗರಿಕರ ನಡುವೆ ಅಭಿಪ್ರಾಯ ಭೇದಗಳ ಕಂದಕವೊಂದು ಸ್ಪಷ್ಟವಾಗಿ ಗೋಚರಿಸಿದ್ದು ಖುಷಿ ಮತ್ತು ಆತಂಕಗಳ ಮಿಶ್ರ ಪ್ರತಿಕ್ರಿಯೆ ಹರಿದಾಡಲಾರಂಭಿಸಿದೆ.

ಕಾರ್ಕಳ ಬಸ್‌ಸ್ಟ್ಯಾಂಡ್ ಅವ್ಯವಸ್ಥೆ, ರಸ್ತೆ ಸಂಚಾರ ಸಮಸ್ಯೆ ಕುರಿತಂತೆ 10 ವರ್ಷಗಳಿಂದ ಪ್ರಯಾಣಿಕರು, ಪುರಜನರು, ಮಾಧ್ಯಮಗಳು ಏಕಪ್ರಕಾರವಾಗಿ ಮಾತನಾಡುತ್ತಿದ್ದರೆ ಇದನ್ನು ತಲೆಗೆ ಹಚ್ಚಿಕೊಂಡ ಜನಪ್ರತಿನಿಧಿಗಳು  ಪರಿವರ್ತನೆ ಮಂತ್ರ ಪಠಿಸಿ ಕಾರ್ಕಳ ನಗರವನ್ನು ಸುಂದರಗೊಳಿಸುವ ಹಠಯೋಗಕ್ಕೆ  ಇಳಿದ ಪರಿಣಾಮ ಜಿಲ್ಲಾಡಳಿತ ಕಾರ್ಕಳದ ಸಮಸ್ಯೆಗೊಂದು ಶಾಶ್ವತ ಪರಿಹಾರ ಹುಡುಕುವಲ್ಲಿ  ಗಟ್ಟಿ ತೀರ್ಮಾನ ಕೈಗೊಳ್ಳಬೇಕಾಯಿತು.   ಅದರ ಮೊದಲ ಹೆಜ್ಜೆಯಾಗಿ ಬಸ್‌ಸ್ಟ್ಯಾಂಡ್ ಸ್ಥಳಾಂತರದ ಗಟ್ಟಿ ನಿರ್ಧಾರ ಕೈಕೊಂಡಿದೆ.

ಸೂಕ್ತ ಜಾಗವೇ ಇರದಿದ್ದ ಕಾರ್ಕಳ ಬಸ್‌ಸ್ಟ್ಯಾಂಡನ್ನು ಇಲ್ಲೇ ಉಳಿಸಿಕೊಳ್ಳುವ ಒಪ್ಪಂದದೊಂದಿಗೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅವಕಾಶ ನೀಡಿ ಖಾಸಗೀ ಮಾಲಿಕತ್ವದ ಜಮೀನು ಲೀಸ್ ಮೇಲೆ ಪಡೆದು ಬಸ್‌ಸ್ಟ್ಯಾಂಡ್ ವಿಸ್ತರಣೆ ನಡೆಸಿ 10 ವರ್ಷ ಬಸ್‌ಸ್ಟ್ಯಾಂಡ್‌ನ್ನು ಇಲ್ಲೇ ಉಳಿಸಿಕೊಂಡರೂ ಕೊನೆಗೂ ಸ್ಥಳಾಂತರ ಅನಿವಾರ್ಯವಾಗಿ ಬಿಟ್ಟಿದೆ. ಇನ್ನೊಂದು ಖಾಸಗಿ ಮಾಲಕತ್ವದ ಸ್ಥಳದಲ್ಲಿ ವ್ಯವಸ್ಥೆಗೊಳಿಸಿದ್ದ ಉಡುಪಿ ಬಸ್‌ಸ್ಟ್ಯಾಂಡನ್ನು ರದ್ದುಪಡಿಸಿಕೊಂಡ ಕಾರಣ ಈಗಿರುವ ಬಸ್‌ಸ್ಟ್ಯಾಂಡ್ ಮೇಲೆ ಹೆಚ್ಚಿದ ಒತ್ತಡವೂ ಸ್ಥಳಾಂತರ ಅನಿವಾರ್ಯತೆ ಸೃಷ್ಟಿಸಿತ್ತು. ಇದೇ ವೇಳೆಗೆ ಬಂಡೀಮಠದಲ್ಲಿ ಒಂದು ಕೋಟಿ ರೂ. ವೆಚ್ಚದ ಪೂರಕ ಬಸ್‌ಸ್ಟ್ಯಾಂಡ್ ನಿರ್ಮಾಣಗೊಂಡದ್ದು ಬದಲಿ ವ್ಯವಸ್ಥೆಗೆ ಅನುಕೂಲವಾಯಿತು. ಬಸ್‌ಸ್ಟ್ಯಾಂಡ್ ಸ್ಥಳಾಂತರಕ್ಕೆ ವಿರೋಧವೂ ಇದೆ. ಅದಕ್ಕಿಂತ ಹೆಚ್ಚಿನ ಬೆಂಬಲವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT