ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಚರಿತ್ರೆ-ಸಂಸ್ಕೃತಿ ಸಂಶೋಧನೆ ಅಗತ್ಯ

Last Updated 24 ಜನವರಿ 2012, 7:50 IST
ಅಕ್ಷರ ಗಾತ್ರ

ಕೋಲಾರ: ಸ್ಥಳೀಯವಾದ ಮಹತ್ವಪೂರ್ಣ ಚರಿತ್ರೆ ಮತ್ತು ಸಂಸ್ಕೃತಿ ಕುರಿತು ಗಹನ ಅಧ್ಯಯನ ಮತ್ತು ಸಂಶೋಧನೆ ನಡೆಯಬೇಕಾಗಿವೆ.

ಮುಳಬಾಗಲುವಿನಲ್ಲಿ ಮಂಗಳವಾರದಿಂದ ನಡೆಯಲಿರುವ ಮೊದಲನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಆರ್.ನರಸಿಂಹನ್ ಅವರ ಸ್ಪಷ್ಟ ಅಭಿಮತ ಇದು.

ಹಳ್ಳಿ, ಪಟ್ಟಣಗಳಲ್ಲಿ ಶಾಸನ, ದೇವಾಲಯ ಸೇರಿದಂತೆ ಹಲವು ಆಕರಗಳಲ್ಲಿ ಹುದುಗಿ ಹೋಗಿರುವ ಸಂಸ್ಕೃತಿ-ಚರಿತ್ರೆ ಕುರಿತು ಸ್ಥಳೀಯರಲ್ಲಿ ಮೊದಲು ಅರಿವು ಮೂಡಬೇಕು. ದಾಖಲೀಕರಣ ನಡೆಯಬೇಕು ಎನ್ನುತ್ತಾರೆ ಅವರು.
ಸಮ್ಮೇಳನದ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಅವರು `ಪ್ರಜಾವಾಣಿ~ಗೆ ನೀಡಿದ ಸಂದರ್ಶನದ ಭಾಗ ಇಲ್ಲಿದೆ.
*ಕನ್ನಡ ಅಧ್ಯಾಪಕರಾಗಿದ್ದ ನೀವು ಸಂಶೋಧನೆ ಕಡೆಗೆ ಆಸಕ್ತಿ ತಾಳಿದ್ದು ಹೇಗೆ?

ಮುಳಬಾಗಲು ಸುತ್ತಮುತ್ತಲಿನ ಐತಿಹಾಸಿಕ ಮಹತ್ವದ ಸ್ಥಳಗಳೇ ಅದಕ್ಕೆ ಪ್ರಮುಖ ಪ್ರೇರಣೆ. ನಾನು ಕೆಲಸ ಮಾಡಿದ ಊರುಗಳಲ್ಲಿ ಅಲ್ಲಿನವರಿಗೆ ಅವರದೇ ಊರಿನ ಸಂಸ್ಕೃತಿ-ಚರಿತ್ರೆ ತಿಳಿದಿಲ್ಲ ಎಂಬುದು ಗೊತ್ತಾಗುತ್ತಿತ್ತು.

ಅವರಿಗೆ ಅದನ್ನು ಮೊದಲು ಮನದಟ್ಟು ಮಾಡಿಸುವ ಸಲುವಾಗಿಯೇ ನಾನು ಸಂಶೋಧನೆಗೆ ತೊಡಗಿದೆ. ಅದು ನನ್ನಲ್ಲಿರುವ ಚರಿತ್ರೆ ಕುರಿತ ಪ್ರೀತಿ ಹೆಚ್ಚಿಸಿತು.

ಆದರೆ ತರಗತಿಯಲ್ಲಿ ಪಾಠ ಮಾಡುವಾಗ ನಾನು ನನ್ನ ಕೆಲಸವಾದ ಕನ್ನಡ ಸಾಹಿತ್ಯ-ಸಂಸ್ಕೃತಿ ಬೋಧನೆಗೆ ಆದ್ಯತೆ ನೀಡುತ್ತಿದ್ದೆ. ಸ್ಥಳೀಯ ಚರಿತ್ರೆಯನ್ನು ಅದೇ ಸಮುದಾಯಕ್ಕೆ ಅರ್ಪಿಸುವ ಶೈಕ್ಷಣಿಕ ಉದ್ದೇಶವೇ ನನ್ನನ್ನು ಇಷ್ಟು ಕಾಲ ನಡೆಸಿದೆ.

*ಸಾಹಿತ್ಯದ ಅಧ್ಯಾಪನದ ನಡುವೆ ಸಂಸ್ಕೃತಿ-ಚರಿತ್ರೆ ಸಂಶೋಧನೆ ಹೇಗೆ ಮಾಡಿದಿರಿ?
ಕಾಲೇಜು ಕೆಲಸದ ಬಿಡುವಿನ ವೇಳೆಯಲ್ಲಿಯೇ ಸಂಶೋಧನೆ ನಡೆಸುತ್ತಿದ್ದೆ. ನಾನು ಕೆಲಸ ಮಾಡುತ್ತಿದ್ದ ಊರುಗಳಲ್ಲೆ ಸಂಚರಿಸುತ್ತಿದೆ. ಅಷ್ಟಲ್ಲದೆ, ಭಾನುವಾರಗಳಂದು, ಇತರೆ ರಜಾದಿನಗಳಂದೂ ಕ್ಷೇತ್ರ ಕಾರ್ಯ ನಡೆಸುತ್ತಿದೆ. ಅಂಥ ಸಂದರ್ಭಗಳಲ್ಲಿ ಹಳ್ಳಿಗರು, ಸಹೋದ್ಯೋಗಿಗಳು, ಸರ್ಕಾರಿ ಅಧಿಕಾರಿಗಳು ಸಾಕಷ್ಟು ನೆರವು ನೀಡಿದ್ದಾರೆ. ಅವರಿಲ್ಲದೆ ನನ್ನ ಸಂಶೋಧನೆ ಗುರಿ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ.

ಕನ್ನಡ ಅಧ್ಯಾಪಕರು ಚರಿತ್ರೆ ಕ್ಷೇತ್ರದಲ್ಲಿ ಹಲವು ಮಹತ್ವದ ಸಂಶೋಧನೆ ನಡೆಸಿದ್ದಾರೆ. ದೇವರಕೊಂಡಾರೆಡ್ಡಿ, ಕೆ.ಆರ್.ಗಣೇಶ್ ಮೊದಲಾದವರು ಕನ್ನಡ ಅಧ್ಯಾಪಕರು. ಆದರೆ ಇತಿಹಾಸ ಕ್ಷೇತ್ರಕ್ಕೆ ಅವರ ಕೊಡುಗೆಗಳು ಮಹತ್ವದವೇ ಆಗಿವೆ. ನನ್ನ ಕಾರ್ಯವನ್ನೂ ಕರ್ನಾಟಕ ಇತಿಹಾಸ ಅಕಾಡೆಮಿ ಗುರುತಿಸಿದೆ. ಅಕಾಡೆಮಿಯ ಹಲವು ಸಮ್ಮೇಳನಗಳಲ್ಲಿ ಪ್ರಬಂಧಗಳನ್ನೂ ಮಂಡಿಸಿರುವೆ.

*ನೀವು ಕತೆ, ಕಾವ್ಯ ಪ್ರಕಾರದಲ್ಲಿ ಬರೆಯಲಿಲ್ಲವೆ?

ಕೆಲವು ಕವಿತೆ ಬರೆದಿರುವೆ. ಅಲ್ಲಲ್ಲಿ ಕೆಲವು ಪ್ರಕಟವಾಗಿವೆ. ಉಳಿದಂತೆ ಕತೆ ಬರೆದಿಲ್ಲ. ಆದರೆ ಕಾದಂಬರಿಯೊಂದಕ್ಕೆ ಅಗತ್ಯವಾದ ಎಲ್ಲ ಮಾಹಿತಿ-ಆಕರ ಸಂಗ್ರಹಿಸಿರುವೆ. ರಚಿಸಲು ಸಾಧ್ಯವಾಗಿಲ್ಲ. ವಿಜಯನಗರ ಅರಸರ ಬುಕ್ಕರಾಯನ ಮಗ ಕಂಪಣರಾಯನ ಕುರಿತದ್ದು ಅದು. ಮುಂದಿನ ದಿನಗಳಲ್ಲಿ ಸಾಧ್ಯವಾಗುವುದೇನೋ ನೋಡಬೇಕು.

*ಮುಳಬಾಗಲು ಮತ್ತು ಸಂಶೋಧನೆ ಕುರಿತು..?

ಚರಿತ್ರೆಯ ಸಂಶೋಧನೆಗೆ ವಿಫುಲ ಅವಕಾಶವಿರುವ ಇಲ್ಲಿ ಆ ಬಗ್ಗೆ ಗಂಭಿರವಾಗಿ ತೊಡಗಿರುವವರು ಕಡಿಮೆ ಎಂಬ ಭಾವ ಮೊದಲು ಮೂಡುತ್ತದೆ. ಡಾ.ಜಿ.ಶಿವಪ್ಪ, ನಾಯ್ಡು ಅವರಂಥ ಅಲ್ಲೊಬ್ಬರು, ಇಲ್ಲೊಬ್ಬರು ಕಾಣುತ್ತಾರಷ್ಟೆ. ಅಂಥವರ ಸಂಖ್ಯೆ ಹೆಚ್ಚಬೇಕು.

ಇತಿಹಾಸ ಸಂಶೋಧನೆ ಹೆಚ್ಚು ನಡೆಯಬೇಕಿದೆ. ತಾಲ್ಲೂಕಿನ ಹಲವೆಡೆ ಹಲವು ಮಹತ್ವದ ಶಾಸನಗಳು ಯಾರಿಗೂ ಕಾಣದೆ ಮೂಲೆ ಸೇರಿವೆ. ಅಂಥ ಆಕರಗಳನ್ನು ಹುಡುಕಿ ತೆಗೆಯಬೇಕು. ಕನಿಷ್ಠ 1 ಶತಮಾನದ ಅವಧಿಯ ಗಡುವನ್ನಾದರೂ ಇಟ್ಟುಕೊಂಡು ಕೆಲಸ ಮಾಡಬೇಕಿದೆ.

ತಾಲ್ಲೂಕಿನ ಶಿಲಾಶಾಸನ, ವೀರಗಲ್ಲು, ಪುರಾತನ ಧಾರ್ಮಿಕ ಸ್ಥಳ, ಕೆರೆ-ಕಾಲುವೆ, ಕೋಟೆ ಕೊತ್ತಲ, ಇವೆಲ್ಲದರ ಹಿಂದೆ ಅಗೋಚರವಾಗಿ ಹರಡಿಕೊಂಡಿರುವ ನಾಡು-ನುಡಿಗಳ ಸತ್ವವನ್ನು ಸಂಶೋಧಿಸಿ ಹೊಸ ತಲೆಮಾರಿಗಾಗಿ ಸಂಗ್ರಹಿಸಿಡಬೇಕು.

*ನಿಮ್ಮ ಸದ್ಯದ ಯೋಜನೆ ಏನು?
ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಲಿರುವ ಕೋಲಾರ ಜಿಲ್ಲೆಯ ಶಾಸನಗಳ ಸಂಪುಟಕ್ಕೆ ವಿದ್ವಾಂಸರಾದ ಪಿ.ವಿ.ಕೃಷ್ಣಮೂರ್ತಿ, ಡಾ.ಗೋಪಾಲಕೃಷ್ಣಯ್ಯ ಅವರೊಟ್ಟಿಗೆ ಸೇರಿ ಕೆಲಸ ಮಾಡುತ್ತಿರುವೆ.

*ಸಾಹಿತ್ಯ ಸಮ್ಮೇಳನ ಕುರಿತು?
ಸಮ್ಮೇಳನಗಳು ಸಮುದಾಯದಲ್ಲಿ ಭಾಷೆ, ಸಾಹಿತ್ಯ-ಸಂಸ್ಕೃತಿ-ಸಮಾಜದ ಕುರಿತು ಕಾಳಜಿ, ಪ್ರೀತಿ ಮೂಡಿಸುವಂತಿರಬೇಕು. ಸಮುದಾಯದ ಮನೋಧರ್ಮ ಮತ್ತು ಅಭಿರುಚಿಯನ್ನು ಉತ್ತಮ ರೀತಿಯಲ್ಲಿ ಪರಿಷ್ಕರಿಸುವಂಥ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿರಬೇಕು.

* ಸಮ್ಮೇಳನದ ಅಧ್ಯಕ್ಷರಾಗಿ ನಿಮ್ಮ ಆಶಯವೇನು ?

18ನೇ ಶತಮಾನದಲ್ಲಿ ಶೇಷಗಿರಿರಾವ್ ಎಂಬುವರು ಬರೆದ ಕೃಷಿಗೆ ಸಂಬಂಧಿಸಿದ ಪುಸ್ತಕ ಹುಡುಕುತ್ತಿರುವೆ. ಇನ್ನೂ ಸಿಕ್ಕಿಲ್ಲ. ಅಂಥ ಮಹತ್ವದ ಕೃತಿಗಳು ಆಸಕ್ತರಿಗೆ ದೊರಕುವಂತಾಗಬೇಕು. ಕನ್ನಡ ಭಾಷೆ, ಚರಿತ್ರೆ ಮತ್ತು ಸಂಸ್ಕೃತಿ ಬಗ್ಗೆ ಮಹತ್ವವಾದುದನ್ನು ಹುಡುಕುವ ಶ್ರದ್ಧಾವಂತ ಮನಸು ರೂಪುಗೊಳ್ಳಬೇಕು.

ಕೆ.ಆರ್.ನರಸಿಂಹನ್ ಪರಿಚಯ
ಕನ್ನಡ ಅಧ್ಯಾಪಕರ ಕೆಲಸ ಮಾಡಿದರೂ ಚರಿತ್ರೆಯ ಸಂಶೋಧಕ ರೆಂದೇ ಖ್ಯಾತಿಯಾಗಿರುವ ಕೆ.ಆರ್.ನರಸಿಂಹನ್ ಮುಳಬಾಗಲು ತಾಲ್ಲೂಕಿನ ಕುರುಡುಮಲೆಯವರು. 61ರ ವಯಸ್ಸಿನ ಅವರು (ಹುಟ್ಟಿದ್ದು 21-11-1950) ಸಂಶೋಧನೆ ಬಗ್ಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾದ ಮಹತ್ವಾಕಾಂಕ್ಷೆ ಮತ್ತು ಕಾಳಜಿಯುಇರುವವರು.

ರಮಾಮಣಿಯಮ್ಮ ಮತ್ತು ಕೆ.ಎನ್.ರಾಘವೇಂದ್ರರಾವ್ ದಂಪತಿಗೆ ಜನಿಸಿದ ಅವರು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ 1971ರಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದರು. ಮುಳಬಾಗಲು, ಶ್ರೀನಿವಾಸಪುರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಗದಗ ಜಿಲ್ಲೆಯ ಶಿರಹಟ್ಟಿ, ಮಂಡ್ಯದ ಮಹಿಳಾ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿದ್ದವರು.

ಪ್ರಾದೇಶಿಕ ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ಗುಲ್ಬರ್ಗ-ಧಾರವಾಡದಲ್ಲಿ ಕಾರ್ಯನಿರ್ವಹಿಸಿ 2010ರ ನವೆಂಬರ್‌ನಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದರು. ಆದರೆ ತಮ್ಮ ಪ್ರವೃತ್ತಿಯಾಗಿರುವ ಸಂಶೋಧನೆಗೆ ನಿವೃತ್ತಿ ನೀಡಿಲ್ಲ ಎಂಬುದು ಗಮನಾರ್ಹ.

ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ಶಾಸನ, ಪುರಾತತ್ವ ಶಾಸ್ತ್ರ ಕ್ಷೇತ್ರದಲ್ಲಿ ಪರಿಣಿತರಾಗಿರುವ ಅವರ ಕೃತಿಗಳು ಕೂಡ ಅದೇ ಕ್ಷೇತ್ರದಲ್ಲಿ ಹೆಸರು ಮಾಡಿವೆ. ಕೋಲಾರ ಜಿಲ್ಲೆಯ ಚಾರಿತ್ರಿಕ ಚಿತ್ರಗಳನ್ನು ನೀಡಿರುವ `ಕುವಳಾಲ~, ನರಸಿಂಹಾವತಾರದ ರೂಪ ವಿಶ್ಲೇಷಣೆ ಹಾಗೂ ಕ್ಷೇತ್ರದರ್ಶನವನ್ನು ಮಾಡಿಸಿರುವ `ನರಸಿಂಹ ಪದಾರ್ಥ ಭಾಗ 1 ಮತ್ತು 2, ಜಿಲ್ಲೆಯ ವಿಷ್ಣು ದೇವಾಲಯಗಳಿಗೆ ಮಾರ್ಗದರ್ಶನ ಕೈಪಿಡಿಯಂತಿರುವ `ಶ್ರೀ ವೆಂಕಟೇಶ್ವರ ದೇವಾಲಯಗಳು~ ಪ್ರಮುಖ ಕೃತಿಗಳು.

ಜೊತೆಗೆ `ಕೆರೆಯ ಹಾರ~ `ಶ್ರೀಕರ~ `ನೂರು ವರುಷ ನೂರು ಮುಖ~ `ಮುಂಗೋಳಿ ಕೂಗಿತು~ ಮೊದಲಾದ ಕೃತಿಗಳಲ್ಲಿ ಸಾಹಿತ್ಯ-ಇತಿಹಾಸ-ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳಿವೆ. ತಿರುಮಲ ಟ್ರಸ್ಟ್‌ನ `ಸಪ್ತಗಿರಿ~ ಮಾಸಪತ್ರಿಕೆಯಲ್ಲಿ ಹಲವು ಲೇಖನ ಪ್ರಕಟವಾಗಿವೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಸಮ್ಮೇಳನಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಚಾರ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸುವುದಷ್ಟೆ ಅಲ್ಲದೆ, ಕೆಲವು `ಸ್ಮರಣ ಸಂಚಿಕೆ~ಗಳ ಸಂಪಾದಕತ್ವದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಈಚೆಗೆ ಹಮ್ಮಿಕೊಂಡಿದ್ದ ವಿನೂತನ ಯೋಜನೆಯಾದ `ಸಂಶೋಧನಾ ಕಮ್ಮಟ~ಗಳ ಶಿಬಿರ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT