ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ತೆರಿಗೆ ರದ್ಧತಿಗೆ ಸಲಹೆ

Last Updated 4 ಫೆಬ್ರುವರಿ 2011, 19:50 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರ್ಗ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಮಂಡಿ, ಆಕ್ಟ್ರಾಯ್ ಮತ್ತು ಸ್ಥಳೀಯ ತೆರಿಗೆ ರದ್ದುಪಡಿಸುವ ಬಗ್ಗೆ ಪರಿಶೀಲಿಸುವಂತೆ ಸಲಹೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನೀಡಿದ್ದಾರೆ.ರಾಜ್ಯ ಮುಖ್ಯ ಕಾರ್ಯದರ್ಶಿಗಳ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಿಂದ ಆರ್ಥಿಕತೆ ಏರುಹಾದಿಯಲ್ಲಿ ಸಾಗಿದೆಯಾದರೂ ಹಣದುಬ್ಬರವು ಬೆಳವಣಿಗೆಯ ವೇಗಕ್ಕೆ ಗಂಭೀರ ಆತಂಕ ತಂದೊಡ್ಡಿದೆ; ವ್ಯಾಪಕ ಸ್ವದೇಶಿ ಬೇಡಿಕೆಗೆ ತಕ್ಕಂತೆ ವಿವಿಧ ಉತ್ಪನ್ನಗಳ ಪೂರೈಕೆಯನ್ನು ವೃದ್ಧಿಸಲು ಮಾದರಿ ಸಾಂಸ್ಥಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರದ ವಿರುದ್ಧ ದನಿ: ಸರ್ಕಾರ ವಿವಿಧ ಹಗರಣಗಳ ಸುಳಿಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಪ್ರಧಾನಿ, ‘ಈ ಪಿಡುಗು ಉತ್ತಮ ಆಡಳಿತದ ಬೇರುಗಳನ್ನೇ ಅಲುಗಾಡಿಸುತ್ತಿದೆ. ದೇಶದ ಅಂತರರಾಷ್ಟ್ರೀಯ ಪ್ರತಿಷ್ಠೆಗೆ ಕಳಂಕ ತರುತ್ತಿರುವುದರ ಜತೆಗೆ ನಮ್ಮ ಜನರ ಮುಂದೆಯೇ ನಮ್ಮನ್ನು ಅಲ್ಪರನ್ನಾಗಿ ಮಾಡುತ್ತಿದೆ’ ಎಂದರು.‘ಇದೊಂದು ನೇರ, ದಿಟ್ಟ ಹಾಗೂ ಕ್ಷಿಪ್ರವಾಗಿ ಎದುರಿಬೇಕಾದ ಸವಾಲಾಗಿದೆ. ಇಲ್ಲವಾದರೆ ಸಾಮಾಜಿಕ ಬೆಳವಣಿಗೆಯ ನಮ್ಮ ಪ್ರಯತ್ನಗಳನ್ನೇ ಅದು ದುರ್ಬಲಗೊಳಿಸುತ್ತದೆ’ ಎಂದು ಎಚ್ಚರಿಸಿದರು.

ಭ್ರಷ್ಟಾಚಾರ ನಿವಾರಣೆಗೆ ಕಾನೂನು ಅಥವಾ ಆಡಳಿತಾತ್ಮಕವಾದ ಅಗತ್ಯ ಕ್ರಮಗಳ ಪರಿಶೀಲನೆಗಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಸಚಿವರ ತಂಡವನ್ನು (ಜಿಒಎಂ) ಪ್ರಧಾನಿ ಪ್ರಸ್ತಾಪಿಸಿದರು. ನ್ಯಾಯಾಂಗ ಹೊಣೆಗಾರಿಕೆ  ಹಾಗೂ ಮಾಹಿತಿದಾರರ ಸಂರಕ್ಷಣೆಗೆ ಸಂಬಂಧಿಸಿದ ಎರಡು ಮಸೂದೆಗಳನ್ನು ಈಗಾಗಲೇ ಸಂಸತ್ತಿನಲ್ಲಿ  ಮಂಡಿಸಲಾಗಿದೆ ಎಂದು ತಿಳಿಸಿದರು.

ಹಿಂಸಾಚಾರಕ್ಕೆ ವಿಷಾದ: ‘ಆಂತರಿಕ ಭದ್ರತೆ’ ವಿಷಯ ಪ್ರಸ್ತಾಪಿಸಿದ ಸಿಂಗ್, ದೇಶದ ಕೆಲ ಭಾಗಗಳಲ್ಲಿ ಉದ್ವಿಗ್ನ ಸ್ಥಿತಿ ಇದೆ.ಎಡಪಂಥೀಯ ಉಗ್ರವಾದ ಇರುವ ಸ್ಥಳಗಳಲ್ಲಿ ಹಾಗೂ ಕಾಶ್ಮೀರ ಕಣಿವೆಯಲ್ಲಿ ಅತಿ ಹೆಚ್ಚಿನ ಹಿಂಸಾಚಾರ ಇದೆ. ನಮ್ಮ ಸಾರ್ವಜನಿಕ ಜೀವನದಲ್ಲಿ ನೈತಿಕತೆ, ಪ್ರಾಮಾಣಿಕತೆಯ ಕೊರತೆ ಕಂಡುಬರುತ್ತಿದೆ. ಬಡತನ ನಿರ್ಮೂಲನೆ ಕಾರ್ಯಕ್ರಮಗಳು ಸಾಕಷ್ಟು ಯಶಸ್ಸು ಗಳಿಸಿರುವುದರ ನಡುವೆಯೂ ಸೇವಾ ಗುಣಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂದು ವಿಷಾದಿಸಿದರು.

ಕೇಂದ್ರ- ರಾಜ್ಯ ಸರ್ಕಾರಗಳ ನಡುವೆ ಅರ್ಥಪೂರ್ಣವಾದ ಸಹಭಾಗಿತ್ವ ಇದ್ದಾಗ ಮಾತ್ರ ಎಡಪಂಥೀಯ ಉಗ್ರವಾದ, ಗಡಿ ಭಯೋತ್ಪಾದನೆ, ಧಾರ್ಮಿಕ ಮೂಲಭೂತವಾದವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ. ಈ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯಗಳಿಗೆ ನೆರವಾಗಲು ಕೇಂದ್ರ ಬದ್ಧವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT