ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ಅಗತ್ಯ'

Last Updated 22 ಏಪ್ರಿಲ್ 2013, 19:53 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರನೇ ತರಗತಿಯ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು. ಶಿಕ್ಷಣ ಸ್ಥಳೀಯ ಭಾಷೆಯಲ್ಲಿ ನೀಡಿದರೆ ಇನ್ನಷ್ಟು ಉತ್ತಮವಾಗಿರುತ್ತದೆ' ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.

ಅಕ್ಷರ ಪ್ರತಿಷ್ಠಾನದ ಆಶ್ರಯದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ `ಪ್ರತಿಯೊಂದು ಮಗು ಶಾಲೆಯಲ್ಲಿದ್ದು ಉತ್ತಮವಾಗಿ ಕಲಿಯುತ್ತಿರಲಿ' ವಿಷಯ ಕುರಿತ ಚರ್ಚೆಯಲ್ಲಿ ಮಾತನಾಡಿದರು.

`ವಿಜಾಪುರದಲ್ಲಿ ವಿಜಾಪುರ ಕನ್ನಡ, ಧಾರವಾಡದಲ್ಲಿ ಅಲ್ಲಿನ ಕನ್ನಡ, ಮೈಸೂರಿನಲ್ಲಿ ಮೈಸೂರು ಕನ್ನಡದಲ್ಲಿ ಪಾಠ ಮಾಡಬೇಕು. ಆಗ ಮಕ್ಕಳು ವಿಷಯವನ್ನು ಸುಲಲಿತವಾಗಿ ಅರಿತುಕೊಳ್ಳುತ್ತಾರೆ' ಎಂದು ಅವರು ಕಿವಿಮಾತು ಹೇಳಿದರು.
`ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮಗಿಂತ ಚೀನಾ ಉತ್ತಮ ಸಾಧನೆ ಮಾಡಿದೆ. ಅಲ್ಲಿನ ಜನರಿಗೆ ಆಂಗ್ಲ ಭಾಷಾ ವ್ಯಾಮೋಹ ಇಲ್ಲ. ಸ್ಥಳೀಯ ಭಾಷೆಯಲ್ಲಿ ಸಂಕೇತಗಳ ನೆರವಿನಿಂದ ವಿಜ್ಞಾನವನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಇದೊಂದು ಉತ್ತಮ ಮಾದರಿ' ಎಂದು ಅವರು ವಿಶ್ಲೇಷಿಸಿದರು.

`ದೇಶದಾದ್ಯಂತ ಬಹುತೇಕ ಕಡೆಗಳಲ್ಲಿ ಆಂಗ್ಲ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಕುಸಿತ ಆಗಿದೆ ಎಂಬ ಆರೋಪ ಇದೆ. ಆದರೆ, ವಾಸ್ತವವಾಗಿ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಜನರ ಗ್ರಹಿಕೆ ಬದಲಾಗಬೇಕಿದೆ' ಎಂದು ಅವರು ಸಲಹೆ ನೀಡಿದರು.

`ಈಚಿನ ವರ್ಷಗಳಲ್ಲಿ ಮಕ್ಕಳ ಮೇಲಿನ ಒತ್ತಡ ಜಾಸ್ತಿ ಆಗುತ್ತಿದೆ. 9ರಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಅತಿ ಒತ್ತಡ ಅನುಭವಿಸುತ್ತಿದ್ದಾರೆ. ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಪಿಎಚ್.ಡಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಆದರೆ, ನಮ್ಮಲ್ಲಿ ಮಗುವಿಗೆ 5 ವರ್ಷ ಆಗುತ್ತಿದ್ದಂತೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತದೆ' ಎಂದು ಅವರು ಉದಾಹರಣೆ ಸಹಿತ ವಿವರಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, `ರಾಜ್ಯದಲ್ಲಿ 1.04 ಲಕ್ಷ ಬಿಸಿಯೂಟ ನೌಕರರು ಇದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದವರನ್ನೇ ಉದ್ಯೋಗಕ್ಕೆ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಕೆಲವು ಕಡೆಗಳಲ್ಲಿ ಬಿಸಿಯೂಟಕ್ಕೆ ಜಾತಿಯತೆ ಅಡ್ಡಿಯಾಯಿತು. ಈಗ ಎಲ್ಲ ಕಡೆಗಳಲ್ಲಿ ಈ ಸಮಸ್ಯೆ ಬಗೆಹರಿದಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT