ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ: ಗೊಂದಲ ನಿವಾರಿಸಿ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಮಹಾನಗರಪಾಲಿಕೆ, ನಗರಸಭೆ ಒಳಗೊಂಡಂತೆ ರಾಜ್ಯದ ಇನ್ನೂ­ರಕ್ಕೂ ಹೆಚ್ಚು  ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಹತ್ತು ತಿಂಗಳಾಗಿದೆ. ಆದರೆ, ಅರ್ಧಕ್ಕೂ ಹೆಚ್ಚು ಕಡೆ ಜನಪ್ರತಿನಿಧಿಗಳ ಆಡಳಿತ ಇಲ್ಲ. ಅಧಿಕಾರಿಗಳ ದರ್ಬಾರೇ ಮುಂದುವರಿದಿದೆ.

ಮೇಯರ್‌, ಉಪ­ಮೇಯರ್‌ ಹಾಗೂ  ಅಧ್ಯಕ್ಷ, ಉಪಾಧ್ಯಕ್ಷ  ಸ್ಥಾನಗಳಿಗೆ ನಿಗದಿಪಡಿಸಿದ ಮೀಸಲು, ವಿವಾದವಾಗಿ ನ್ಯಾಯಾಲಯದ ಕಟ್ಟೆ ಏರಿದ ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಒಂದು ರೀತಿ ಗ್ರಹಣ ಬಡಿದಿದೆ. ಚುನಾಯಿತ ಮುಖ್ಯಸ್ಥರಿಲ್ಲ. ಜನರಿಂದ ಆರಿಸಿಬಂದ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸ­ಲಿಕ್ಕೂ ಸಾಧ್ಯವಾಗಿಲ್ಲ ಎಂಬುದು ಪ್ರಜಾತಂತ್ರದ ಅಣಕ.

ಈ ಸ್ಥಳೀಯ ಸಂಸ್ಥೆ­ಗಳಿಗೆ ಜನಗಣತಿ ನೆಪದಡಿ ಚುನಾವಣೆ ಮುಂದೂಡಲು ಹಿಂದಿದ್ದ ಬಿಜೆಪಿ ನೇತೃತ್ವದ ಸರ್ಕಾರ ಶಕ್ತಿಮೀರಿ ಪ್ರಯತ್ನಿಸಿತು. ರಾಜ್ಯ ಚುನಾವಣಾ ಆಯುಕ್ತ ಸಿ.ಆರ್‌.ಚಿಕ್ಕಮಠ ದಿಟ್ಟ ನಿಲುವು ತಳೆದ ಕಾರಣ ಕಳೆದ ಮಾರ್ಚ್‌­ನಲ್ಲಿ ಚುನಾವಣೆ ನಡೆಯಿತು. ಆದರೆ ಚುನಾವಣೆ ನಡೆಸಿದ್ದರ ಉದ್ದೇಶ ಮಾತ್ರ ಈಡೇರಿಲ್ಲ. ಕಾಂಗ್ರೆಸ್‌ ಸರ್ಕಾರದ ಬದ್ಧತೆಯ ಕೊರತೆಗೆ ಇದು ಕನ್ನಡಿ ಹಿಡಿ­ಯುತ್ತದೆ.

ಮೀಸಲು ನಿಗದಿಯಲ್ಲಿ ರೊಟೇಷನ್‌ ಪದ್ಧತಿ ಪಾಲಿಸಬೇಕಾ­ದುದು ಸರ್ಕಾರದ ಕರ್ತವ್ಯ. ಮಾರ್ಗಸೂಚಿಯನ್ನು ಶಾಸಕರ ಒತ್ತಡಕ್ಕೆ ಮಣಿದು ಮನಸೋ ಇಚ್ಛೆ ಬದಲಿಸುವುದನ್ನು ಸಾಮಾಜಿಕ ನ್ಯಾಯಕ್ಕೆ ನೀಡಿದ ದೊಡ್ಡ ಹೊಡೆತ ಅಂತ ಭಾವಿಸಬೇಕಾಗುತ್ತದೆ.
ಮೀಸಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕಸದಸ್ಯ ಪೀಠದ  ತೀರ್ಪು ಇದೀಗ ಹೊರಬಿದ್ದಿದೆ. ಒಂದು ಸ್ಥಳೀಯ ಸಂಸ್ಥೆಯಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನವನ್ನು ಒಂದು ನಿಗದಿತ ವರ್ಗಕ್ಕೆ ಮೀಸಲಿರಿಸಿದರೆ, ಎರಡನೇ ಅವಧಿಗೂ ಅದೇ ವರ್ಗಕ್ಕೆ ಅದೇ ಸ್ಥಾನ ನೀಡಬಾರದು ಎಂದು ಕೋರ್ಟ್‌ ಹೇಳಿರುವುದು ಸರಿಯಾಗಿಯೇ ಇದೆ.

ಎಲ್ಲಿ ಮೀಸಲು ಪುನರಾ­ವರ್ತನೆ ಆಗಿದೆಯೋ ಅಂತಹ ಕಡೆ ಮೀಸಲು ಬದಲಿಸಬೇಕು ಎಂದು ಸೂಚಿಸುವುದರೊಂದಿಗೆ ಈ ಕೆಲಸವನ್ನು ಎರಡು ತಿಂಗಳೊಳಗೆ ಮಾಡಿ ಮುಗಿಸಬೇಕು ಎಂದು ಗಡುವು ನೀಡಿದೆ. ಈ ಗಡುವಿನೊಳಗೆ ಸರ್ಕಾರ ಎಲ್ಲಾ ಗೊಂದಲ ನಿವಾರಿಸಬೇಕು. ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯುವಂತೆ ಸ್ಥಳೀಯ ಸಂಸ್ಥೆಗಳಿಗೂ ಚುನಾ­ವಣೆ ನಡೆಸಬೇಕು. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮೇಯರ್‌, ಉಪಮೇಯರ್‌ ಮೀಸಲು ನಿಗದಿಗೆ ಸ್ವತಂತ್ರವಾದ ಕಾಯಂ ವ್ಯವಸ್ಥೆ ಇರಬೇಕು. ಅದು, ಯಾವುದೇ ಕಾರಣಕ್ಕೂ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಉಲ್ಲಂಘಿಸಿದರೆ ಅದಕ್ಕೆ  ಕಾರಣರಾದವ­ರನ್ನು ಶಿಕ್ಷೆಗೆ ಒಳಪಡಿಸಲು ಅವಕಾಶ ಕಲ್ಪಿಸುವ ಕಾನೂನು ರೂಪಿಸಬೇಕು.

ಮೀಸಲು ನಿಗದಿ ಅಧಿಕಾರ ಸರ್ಕಾರದ ಕೈಯಲ್ಲಿ ಇರುವುದರಿಂದ, ಆಳುವ ಪಕ್ಷದ ರಾಜಕೀಯ ಅನುಕೂಲಕ್ಕೆ ತಕ್ಕಂತೆ ತಕ್ಕಡಿ ವಾಲುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ಚಾಳಿ ಯಾವುದೇ ಸರ್ಕಾರಕ್ಕೆ ಶೋಭಿಸು­ವುದಿಲ್ಲ. ಮೇಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಮೀಸಲು ನಿಗದಿ ಅಧಿಕಾರವನ್ನು ಚುನಾವಣಾ ಆಯೋಗಕ್ಕೇ ನೀಡಿದಲ್ಲಿ ನಿಯಮಬದ್ಧವಾಗಿ ಮತ್ತು ಕಾಲಬದ್ಧವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗ­ಬಹುದು. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT