ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಬಲಪಡಿಸಲು ಸಂಯೋಜನೆ ಸೂತ್ರ

Last Updated 16 ನವೆಂಬರ್ 2011, 5:25 IST
ಅಕ್ಷರ ಗಾತ್ರ

ದಾವಣಗೆರೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಯೋಜನೆಯ ಮೂಲಕ ವರಮಾನ ಸಂಗ್ರಹಕ್ಕೆ ಶ್ರಮಿಸಬೇಕು. ಆಮೂಲಕ ಸ್ಥಳೀಯ ಸಂಸ್ಥೆಗಳು ಸರ್ಕಾರದ ನೆರವಿಲ್ಲದೇ, ಸ್ವಂತ ಬಲದಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ರಾಜ್ಯ 3ನೇ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ಎ.ಜಿ. ಕೊಡ್ಗಿ ಕರೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 3ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಕುರಿತ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಕಷ್ಟು ಆದಾಯದ ಮೂಲಗಳಿವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಬೆಂಗಳೂರಿನಂತಹ ನಗರದಲ್ಲಿ 25 ಲಕ್ಷ ಅಕ್ರಮ ಕಟ್ಟಡಗಳಿದ್ದು, ಅವುಗಳಿಗೆ ತೆರಿಗೆ ವಿಧಿಸಿದರೆ 1,500 ಕೋಟಿ ವಾರ್ಷಿಕ ಆದಾಯ ಬರುತ್ತದೆ. ಎಲ್ಲ ನಗರಗಳಲ್ಲೂ ಈ ಸಮಸ್ಯೆ ಇದ್ದು, ದಾವಣಗರೆಯಲ್ಲೂ ಕೊಳೆಗೇರಿಯ ಮನೆಗಳು ಸೇರಿದಂತೆ 30,931 ಅಕ್ರಮಕಟ್ಟಡಗಳಿವೆ. ಅದಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಂಡು ತೆರಿಗೆ ವಿಧಿಸಬೇಕು. ವ್ಯಾಪಾರ ಪರವಾನಗಿ ಸೇರಿದಂತೆ ಕಂದಾಯವನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಬೇಕು. ಸ್ವಯಂಘೋಷಿತ ಆಸ್ತಿ ತೆರಿಗೆ ಅಡಿ ಘೋಷಣೆ ಮಾಡಿಕೊಳ್ಳದವರ ವಿರುದ್ಧ ಕ್ರಮ ಜರುಗಿಸಬೇಕು. ನಲ್ಲಿಗೆ ಮೀಟರ್ ಅಳವಡಿಸಬೇಕು ಎಂದು ತಾಕೀತು ಮಾಡಿದರು.

ಪಾಲಿಕೆಯಲ್ಲಿ ಶೇ. 54ರಷ್ಟು ತೆರಿಗೆ ಸಂಗ್ರಹಿಸಿದ್ದು, ಶೇ. 46 ಬಾಕಿ ಇದೆ. ಉಳಿದ ತೆರಿಗೆಯನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಲಾಗುವುದು. 10 ಕೋಟಿ ತೆರಿಗೆ ಬೇಡಿಕೆ ಇದೆ ಎಂದು ಮೇಯರ್ ಎಂ.ಎಸ್. ವಿಠ್ಠಲ್ ತಿಳಿಸಿದರು.
ಪಾಲಿಕೆ ಆಯುಕ್ತ ಪ್ರಸನ್ನಕುಮಾರ್ ಮಾತನಾಡಿ, ಸಿಬ್ಬಂದಿ ಕೊರತೆಯಿಂದ ಪಾಲಿಕೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಹೊರಗುತ್ತಿಗೆ ನೇಮಕಕ್ಕೆ ಕಾರ್ಮಿಕ ಇಲಾಖೆ ಆಕ್ಷೇಪ ಮಾಡಿದೆ. ತೆರಿಗೆ ಸಂಗ್ರಹಕ್ಕೆ ಸ್ತ್ರೀ ಶಕ್ತಿ ಸಂಘ ಬಳಸಿಕೊಂಡರೆ ಅವರಿಗೆ ಶೇ. 3 ಕಮಿಷನ್ ನೀಡಬೇಕು. ಸರ್ಕಾರ ಅದಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ, ಕಸ ವಿಲೇವಾರಿಗೆ ಮಾತ್ರ ಹೊರಗುತ್ತಿಗೆ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

3ನೇ ಹಣಕಾಸು ಆಯೋಗದ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು ಹಾಗೂ ಅನುಷ್ಠಾನ ಮಾಡಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಪ್ರಗತಿ ಸಾಧಿಸಲು ಎದುರಾಗುವ ಅಡೆ-ತಡೆಗಳನ್ನು ನಿವಾರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಕಾರ್ಯಪಡೆ ಚರ್ಚೆ ನಡೆಸುತ್ತಿದೆ ಎಂದು ಕಾರ್ಯಪಡೆ ಸದಸ್ಯ ಟಿ. ತಿಮ್ಮೇಗೌಡ ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಯಾರೂ ಉತ್ತಮವಾಗಿ ಕೆಲಸ ಮಾಡುತ್ತಾರೋ ಅವರಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ನೀತಿ-ನಿಯಮಗಳ ವಿರುದ್ಧ ಯಾರೂ ಹೋಗುವಂತಿಲ್ಲ, ಒಂದು ವೇಳೆ ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಸಂಬಂಧಿಸಿದ ಸಂಸ್ಥೆಯ ವಿರುದ್ಧವೇ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ ಎಂದರು.

ಸಭೆಯಲ್ಲಿ ತೆರಿಗೆ ವಸೂಲಾತಿ, ಸಿಬ್ಬಂದಿ ಕೊರತೆ, ಕುಡಿಯುವ ನೀರಿನ ಪೂರೈಕೆ, ಜಾಹೀರಾತು ತೆರಿಗೆ ವಸೂಲಾತಿ ಬಗ್ಗೆ, ಮುಕ್ತ ಪ್ರದೇಶದಲ್ಲಿ ಕಸ ಹಾಕುವುದು ಸೇರಿದಂತೆ ಹಲವು ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಉಂಟಾದ ಕೊರತೆಗಳ ಬಗ್ಗೆ ಚರ್ಚಿಸಲಾಯಿತು.

ಉಪ ಮೇಯರ್ ಜ್ಯೋತಿ ಪಾಟೀಲ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಸಿಇಒ ಗುತ್ತಿಜಂಬುನಾಥ್ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT