ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯರಿಗೆ ಆದ್ಯತೆ ನೀಡಲು ಒಕ್ಕೊರಲ ಆಗ್ರಹ

Last Updated 11 ಜೂನ್ 2011, 8:40 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಿವಿಧ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ 20 ನಿಲಯಪಾಲಕರು ಮತ್ತು 71 ಅಡುಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಳಿಬಂತು.

ಸಭೆಯಲ್ಲಿ ಸದಸ್ಯ ಮಹಮದ್ ಫಕೃದ್ದೀನ್ ಒತ್ತಾಯ ಮಾಡಿದಾಗ ಬಹುತೇಕ ಸದಸ್ಯರು ಅದಕ್ಕೆ ದನಿಗೂಡಿಸಿದರು.

ವಸತಿ ನಿಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಆಯ್ಕೆ ಸಮಿತಿ ನಿರ್ವಹಿಸುತ್ತದೆ. ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಮಾಜ ಕಲ್ಯಾಣಾಧಿಕಾರಿ ಉತ್ತರಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಲೆಕ್ಕದಲ್ಲಿ ತೋರಿಸಿರುವಷ್ಟು ಖಂಡಿತಾ ಇರುವುದಿಲ್ಲ. ಮಕ್ಕಳು ಕಡಿಮೆ ಇದ್ದ ಕಡೆ ನಿಲಯ ನಿರ್ವಹಿಸುವವರಿಗೆ ಒಳ್ಳೆಯ ಲಾಭವಾಗುತ್ತದೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ನಿಲಯಗಳನ್ನು ಬಂದ್ ಮಾಡಿ. ವಸತಿನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಶಿಕ್ಷಕರಿಲ್ಲದಿದ್ದರೆ ಹೇಗೆ? ಲೆಕ್ಕ ತೋರಿಸಲು ಹೆಚ್ಚಿನ ವಸತಿನಿಲಯಗಳಿದ್ದ ಆಗುವ ಪ್ರಯೋಜನವಾದರೂ ಏನು? ಪಟ್ಟಣದಲ್ಲಿ ವಸತಿನಿಲಯಗಳು ನಡೆಯುವಂತೆ ಹಳ್ಳಿಯಲ್ಲೂ ನಡೆಯಬೇಕು ಎಂದು ವೆಂಕಟೇಶ್ ಮತ್ತಿತರರು ಒತ್ತಾಯ ಮಾಡಿದರು.

ತಾಲ್ಲೂಕಿನಲ್ಲಿ ಆಯ್ದ ಶಾಲೆಗಳಿಗೆ ಗಣಕಯಂತ್ರ ಮತ್ತು ಪೀಠೋಪಕರಣ ಕೊಳ್ಳಲು 13ನೇ ಹಣಕಾಸು ಯೋಜನೆ ಅಡಿ 2009-10ನೇ ಸಾಲಿಗೆ ್ಙ 3.5 ಲಕ್ಷ ನೀಡಿದ್ದು, ಈ ಹಣ ಎಲ್ಲಿ ಹೋಗಿದೆ. ಯಾವ್ಯಾವ ಶಾಲೆಗೆ ಅನುದಾನ ಬಳಕೆ ಆಗಿದೆ ಎಂದು ಪ್ರಶ್ನೆ ಮಾಡಿದ ಶಿಪ್ರಸಾದ್‌ಗೌಡ ಮತ್ತು ವಿ. ವೆಂಕಟೇಶ್ ಅವರಿಗೆ ಯಾರೂ ಉತ್ತರಿಸಲೇ ಇಲ್ಲ.

ಶಿಶು ಅಭಿವೃದ್ಧಿ ಇಲಾಖೆಯಿಂದ ತಾ.ಪಂ. ಸದಸ್ಯರ ಗಮನಕ್ಕೆ ತಾರದೆಯೇ ಜಮಖಾನ ಮತ್ತಿತರ ವಸ್ತು ಖರೀದಿ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯರು ಮಾಡಿದ ಪ್ರಶ್ನೆಗೆ ಇಲಾಖೆ ಅಧಿಕಾರಿ ತಬ್ಬಿಬ್ಬಾದರು.
ನಿರ್ಮಿತಿ ಕೇಂದ್ರಕ್ಕೆ ಯಾವುದೇ ಕಾಮಗಾರಿ ಗುತ್ತಿಗೆ ನೀಡಬಾರದು ಎಂದು ನಿರ್ಣಯ ಅಂಗೀಕರಿಸಿ ಅದನ್ನು ಜಿಲ್ಲಾ ಪಂಚಾಯ್ತಿಗೆ ಕಳಿಸಿಕೊಡಿ. ನಿರ್ಮಿತಿ ಕೇಂದ್ರ, ಆಹಾರ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಪ್ರತೀ ಸಭೆಯಲ್ಲೂ ಚರ್ಚಿಸಿ ಸುಮ್ಮನಾಗುತ್ತಿದ್ದೇವೆ. ಕಠಿಣ ಕ್ರಮದ ಅಗತ್ಯ ಇದೆ ಎಂದು ಹಿರಿಯ ಸದಸ್ಯೆ ಡಾ.ಸುಜಾತಾ ತಾಕೀತು ಮಾಡಿದರು.

ಸಾರ್ವಜನಿಕ ಆಸ್ಪತ್ರೆ ಹೆಸರಿಗೆ ಮಾತ್ರ ನೂರು ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಅಲ್ಲಿ ಇಸಿಜಿ ಸೌಲಭ್ಯವಿಲ್ಲ. ರೋಗಿಗಳನ್ನು ಚಿತ್ರದುರ್ಗಕ್ಕೆ ಸಾಗ ಹಾಕಲಾಗುತ್ತದೆ. ಅಲ್ಲಿನ ಅವ್ಯವಸ್ಥೆ ಸುಧಾರಣೆ ಆಗಬೇಕು ಎಂದು ಸುಜಾತಾ ಒತ್ತಾಯ ಮಾಡಿದರು.

ಬುಡುರುಕುಂಟೆ ಮತ್ತು ಧರ್ಮಪುರಗಳಲ್ಲಿ ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ತೀರಾ ಕೆಳಮಟ್ಟದಲ್ಲಿ ಹಾದು ಹೋಗಿದ್ದು, ಬೆಸ್ಕಾಂ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು.

ಹರಿಯಬ್ಬೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಕಂಬಗಳು ಶಿಥಿಲವಾಗಿದ್ದು, ಅವನ್ನು ಬದಲಾಯಿಸಬೇಕು. ನಂದಿಹಳ್ಳಿಯಲ್ಲಿ ಕುಡಿಯುವ ನೀರಿನ ಪರಿವರ್ತಕವನ್ನು ಒಂದು ವರ್ಷವಾದರೂ ಅಳವಡಿಸಿಲ್ಲ. ಕೂಡ್ಲಹಳ್ಳಿಯಲ್ಲಿಯೂ ವಿದ್ಯುತ್ ಕಾರಣಕ್ಕೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ವಿ. ವೆಂಕಟೇಶ್, ಅರುಣಾ ಪಟೇಲ್ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುರಾಧಾ, ಉಪಾಧ್ಯಕ್ಷೆ ಪುಷ್ಪಾ, ಕಾ.ನಿ. ಅಧಿಕಾರಿ ಈಶ್ವರಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT