ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 12 ಸ್ಥಾಯಿ ಸಮಿತಿಗಳಿಗೆ ತಲಾ 11 ಜನ ಸದಸ್ಯರನ್ನು ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆದರೆ, ಅದಕ್ಕಿಂತ ಮುಂಚೆ ಮೂರೂ ಪಕ್ಷಗಳ ಪ್ರಮುಖ ನೇತಾರರು ಸ್ಥಾಯಿ ಸಮಿತಿಗಳ ಸದಸ್ಯರ ಪಟ್ಟಿ ತಯಾರಿಸಲು ಸುಮಾರು ಐದು ಗಂಟೆಗಳ ಕಾಲ ಕಸರತ್ತು ನಡೆಸಿದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಸಭೆಯನ್ನು ಕೋರಂ ಅಭಾವದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಗೌರವ್‌ ಗುಪ್ತಾ ನಾಲ್ಕು ಸಲ ಮುಂದೂಡಬೇಕಾಯಿತು (ಬೆಳಿಗ್ಗೆ 10, ಮಧ್ಯಾಹ್ನ 12, 1 ಹಾಗೂ 1.30). ಈ ಅವಧಿಯಲ್ಲಿ ಸಭಾಂಗಣದ ಪಕ್ಕದ ಕೋಣೆಗಳಲ್ಲಿ ತುರುಸಿನ ಸಭೆಗಳು ನಡೆಯುತ್ತಿದ್ದವು. ಕೊನೆಗೆ ಮಧ್ಯಾಹ್ನ 3ಕ್ಕೆ ಸಭೆ ನಡೆಸಲು ಆಯುಕ್ತರು ತೀರ್ಮಾನ ಕೈಗೊಂಡರು. ಆದರೆ, ಸಭೆ ಸೇರಿದಾಗ 3.40 ಆಗಿತ್ತು.

ಮುಚ್ಚಿದ ಬಾಗಿಲಿನ ಹಿಂದೆ ಹಲವು ಸಭೆಗಳು, ಸಂಧಾನದ ಬೈಠಕ್‌ಗಳು ನಡೆದವು. ಕೆಲವು ಸದಸ್ಯರು ತಮಗೆ ಇಂತಹದ್ದೇ ಸ್ಥಾಯಿ ಸಮಿತಿ ಸದಸ್ಯತ್ವ ಬೇಕು ಎಂದು ಪಟ್ಟು ಹಿಡಿದರು. ಅತೃಪ್ತರನ್ನು ಸಮಾಧಾನ ಮಾಡಲು ನಾಯಕರು ಹೆಣಗಾಡಿದರು. ಅಪೀಲುಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ ಸದಸ್ಯತ್ವಕ್ಕೆ ಅಷ್ಟಾಗಿ ಪೈಪೋಟಿ ಕಂಡು ಬರಲಿಲ್ಲ.

ಬಿಜೆಪಿ ಗುಂಪಿನ ಸದಸ್ಯರ ಆಯ್ಕೆ ಹೊಣೆಯನ್ನು ಶಾಸಕ ಆರ್‌.ಅಶೋಕ ಹೊತ್ತುಕೊಂಡಿದ್ದರು. ತೆರಿಗೆ ಮತ್ತು ಆರ್ಥಿಕ, ಬೃಹತ್‌ ಕಾಮಗಾರಿ ಸ್ಥಾಯಿ ಸಮಿತಿಗಳಿಗೆ ಸದಸ್ಯರಾಗಲು ತೀವ್ರ ಸ್ಪರ್ಧೆ ಇತ್ತು. ಕಾಂಗ್ರೆಸ್‌ ಗುಂಪಿನ ಸದಸ್ಯರ ಆಯ್ಕೆ ಸಚಿವರಾದ ಆರ್‌. ರಾಮಲಿಂಗಾರೆಡ್ಡಿ ಮತ್ತು ದಿನೇಶ್ ಗುಂಡೂರಾವ್‌ ಅವರ ನೇತೃತ್ವದಲ್ಲಿ ನಡೆಯಿತು.

ಅದಲು–ಬದಲು: ಮೊದಲು ನಿಗದಿ ಮಾಡಿದ್ದ ಸಮಿತಿಗೆ ಬದಲಾಗಿ ಬೇರೆ ಸಮಿತಿಗೆ ನಮ್ಮನ್ನು ಹಾಕಲಾಗಿದೆ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಸಾಮಾನ್ಯ ವಾಗಿತ್ತು. ಐದು ಗಂಟೆಗಳ ಕಾಲ ಸರ್ಕಸ್‌ ನಡೆಸಿ ಪಟ್ಟಿ ತಯಾರು ಮಾಡಿಕೊಂಡು ಬಂದರೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೂ ಗೊಂದಲ ನಡೆದೇ ಇತ್ತು. ಸಮಿತಿಗಳ ಸದಸ್ಯತ್ವಕ್ಕೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಅದಲು–ಬದಲು ಉಂಟಾಗುತ್ತಿದ್ದರಿಂದ ಸದಸ್ಯರು ಸಹ ಗೊಂದಲದಲ್ಲಿ ಇದ್ದರು. ವಿರೋಧ ಪಕ್ಷದ ಬಣದಲ್ಲೂ ಇಂತಹ ಹೊಯ್ದಾಟ ನಡೆದೇ ಇತ್ತು.

ಎಲ್ಲ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆದಾಗ ಪ್ರಾದೇಶಿಕ ಆಯುಕ್ತರು ಫಲಿತಾಂಶವನ್ನು ಘೋಷಿಸುವ ಮೂಲಕ, ಚುನಾವಣಾ ಪ್ರಕ್ರಿಯೆ ಪೂರೈಸಿದರು. ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಉಪ ಮೇಯರ್‌ ಇಂದಿರಾ, ಶಾಸಕರಾದ ಅರವಿಂದ ಲಿಂಬಾವಳಿ, ಎಸ್‌.ಟಿ. ಸೋಮಶೇಖರ್‌, ಎಚ್‌. ವಿಶ್ವನಾಥ್‌, ಎಸ್‌.ಮುನಿರಾಜು, ಎಂ.ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಜರಿದ್ದರು.

ಮಂಜುನಾಥ್‌ ರೆಡ್ಡಿ ವಿರೋಧ ಪಕ್ಷದ ನಾಯಕ ಆಡಳಿತ ಪಕ್ಷದ ನಾಯಕ ಯಾರು?
ಬಿಬಿಎಂಪಿ ಆಡಳಿತ ಪಕ್ಷದ ನಾಯಕನ ಆಯ್ಕೆ ಬಿಜೆಪಿಗೆ ಇನ್ನೂ ಕಗ್ಗಂಟಾಗಿ ಪರಿಣಮಿಸಿದೆ. ಮೇಯರ್‌ ಹುದ್ದೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಗದ ಹಲವರು ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಪಕ್ಷದ ನಾಯಕರ ಮೇಲೆ ಒತ್ತಡ ಹೆಚ್ಚುತ್ತಿದೆ.

ಡಾ. ರಾಜಕುಮಾರ್‌ ವಾರ್ಡ್‌ನ ಗಂಗಬೈರಯ್ಯ, ಶಿವನಗರ ವಾರ್ಡ್‌ನ ಮಂಜುನಾಥ್‌, ವಿಜಯನಗರ ವಾರ್ಡ್‌ನ ಎಚ್‌. ರವೀಂದ್ರ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಮೂವರಲ್ಲಿ ಒಬ್ಬರು ನಾಯಕನ ಸ್ಥಾನ ಅಲಂಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಡಿವಾಳ ವಾರ್ಡ್ ಸದಸ್ಯ ಕಾಂಗ್ರೆಸ್‌ನ ಬಿ.ಎನ್‌. ಮಂಜುನಾಥ್‌ ರೆಡ್ಡಿ ಬಿಬಿಎಂಪಿ ವಿರೋಧ ಪಕ್ಷದ ನೂತನ ನಾಯಕರಾಗಲಿದ್ದಾರೆ. ಇನ್ನು ಎರಡು ದಿನಗಳಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಆ ಪಕ್ಷದ ಮುಖಂಡರು ಹೇಳಿದ್ದಾರೆ.
ಬಿಜೆಪಿಯ ಎನ್‌.ನಾಗರಾಜ್‌ ಮತ್ತು ಕಾಂಗ್ರೆಸ್‌ನ ಎಂ.ಕೆ. ಗುಣಶೇಖರ್‌ ಸದ್ಯ ಬಿಬಿಎಂಪಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT