ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರತೆ ಕಾಣುತ್ತಿರುವ ರೂಪಾಯಿ ಮೌಲ್ಯ

19 ಸಾವಿರ ಗಡಿ ದಾಟಿದ ಸೂಚ್ಯಂಕ: ಮಾರುಕಟ್ಟೆ ಚೇತರಿಕೆ
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಹಣಕಾಸು ಮಾರುಕಟ್ಟೆ ಚೇತರಿಕೆ ಮತ್ತು `ಆರ್‌ಬಿಐ'ನ ನೂತನ ಗವರ್ನರ್ ರಘುರಾಂ ಜಿ. ರಾಜನ್ ಅವರ ಭರವಸೆಯ ಮಾತುಗಳಿಂದ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯವು ಶುಕ್ರವಾರ ಮತ್ತೆ 77 ಪೈಸೆಗಳಷ್ಟು(ಶೇ 1.17ರಷ್ಟು) ಚೇತರಿಕೆ ಕಂಡಿದ್ದು, 2 ವಾರಗಳಲ್ಲೇ ಗರಿಷ್ಠ ಮಟ್ಟವಾದ ್ಙ65.24ಕ್ಕೆ ಮರಳಿದೆ.

ಹೊಸ ವ್ಯಾಪಾರ ಒಪ್ಪಂದಗಳನ್ನು ರೂಪಾಯಿಯಲ್ಲೇ ಮಾಡಿಕೊಳ್ಳುವಂತೆ `ಆರ್‌ಬಿಐ' ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಫ್ತುದಾರರು ಮತ್ತು ಬ್ಯಾಂಕುಗಳಿಂದ ಡಾಲರ್ ಮಾರಾಟ ಹೆಚ್ಚಿದೆ. ಇದರಿಂದ ಕಳೆದ ಮೂರು ವಹಿವಾಟು ಅವಧಿಗಳಲ್ಲಿ ರೂಪಾಯಿ 239 ಪೈಸೆಗಳಷ್ಟು (ಶೇ3.53) ಭಾರಿ ಚೇತರಿಕೆ ಕಂಡಿದೆ.

ಮೀಸಲು ನಿಧಿ ಸ್ಥಾಪನೆ
ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ `ಜಿ-20' ದೇಶಗಳ ಶೃಂಗಸಭೆ ಸಹ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ಒಂದು ವೇಳೆ ಅಮೆರಿಕ ಆರ್ಥಿಕ ಉತ್ತೇಜನ ಕೊಡುಗೆಗಳನ್ನು ಕಡಿತಗೊಳಿಸಿದರೆ ತಕ್ಷಣಕ್ಕೆ ಆ ಬಿಕ್ಕಟ್ಟು ಎದುರಿಸಲು 10,000 ಕೋಟಿ ಡಾಲರ್ ಮೊತ್ತದ ಕರೆನ್ಸಿ ಮೀಸಲು ನಿಧಿ ಸ್ಥಾಪಿಸಲು ಭಾರತವೂ ಸೇರಿದಂತೆ `ಬ್ರಿಕ್' ದೇಶಗಳು ಸಮ್ಮಿತಿ ಸೂಚಿಸಿವೆ. ಜತೆಗೆ ಶುಕ್ರವಾರ ಭಾರತ ಮತ್ತು ಜಪಾನ್ ನಡುವೆ ಕರೆನ್ಸಿ ವಿನಿಮಯ ಸೌಲಭ್ಯ ವಿಸ್ತರಿಸಲು ಒಪ್ಪಿಗೆ ಲಭಿಸಿದೆ. ಈ ಎಲ್ಲ ಕ್ರಮಗಳಿಂದ ದೇಶದ ಹಣಕಾಸು ಮಾರುಕಟ್ಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

`ಆರ್‌ಬಿಐ ಸೆ. 20ರಂದು ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ. ಹಣದುಬ್ಬರ ನಿಯಂತ್ರಿಸಲು ಬಿಗಿ ಹಣಕಾಸು ನೀತಿಯನ್ನೇ ಮುಂದುವರಿಸಿಕೊಂಡು ಹೋಗುವ ಸಂಪ್ರದಾಯ ಮುರಿಯುವ ಸೂಚನೆಯನ್ನು ಈಗಾಗಲೇ ರಾಜನ್ ನೀಡಿದ್ದಾರೆ. ಹೆಚ್ಚಿನ ವಿದೇಶಿ ವಿನಿಮಯ ಆಕರ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹೂಡಿಕೆದಾರರ ವಿಶ್ವಾಸ ಮರಳಿದೆ' ಎಂದು ಇಂಡಿಯಾ ಫೊರೆಕ್ಸ್ ಸಂಸ್ಥೆಯ `ಸಿಇಒ' ಅಭಿಷೇಕ್ ಗೋಯಂಕಾ ಅಭಿಪ್ರಾಯಪಟ್ಟಿದ್ದಾರೆ.

19 ಸಾವಿರ ದಾಟಿದ ಸೂಚ್ಯಂಕ
ರೂಪಾಯಿ ಚೇತರಿಕೆ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರದ ವಹಿವಾಟಿನಲ್ಲಿ 290 ಅಂಶಗಳಷ್ಟು ಜಿಗಿತ ಕಂಡು ಮೂರು ವಾರಗಳ ನಂತರ ಮತ್ತೆ 19 ಸಾವಿರ ಅಂಶಗಳ ಗಡಿ ದಾಟಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ಷೇರುಪೇಟೆಯಲ್ಲಿ ರೂ1,101 ಕೋಟಿ ಹೂಡಿಕೆ ಮಾಡಿದ್ದಾರೆ  ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ' ಹೇಳಿದೆ. ಒಟ್ಟಾರೆ ಕಳೆದ ಮೂರು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ 1029 ಅಂಶಗಳಷ್ಟು ಏರಿಕೆ ಕಂಡಿದೆ. ಶುಕ್ರವಾರ 19,270 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT