ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕೋತ್ತರ ಕೇಂದ್ರ ಕಾಮಗಾರಿ ಶುರು

Last Updated 25 ಫೆಬ್ರುವರಿ 2012, 9:30 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದ ಮಂಗಸಂದ್ರ ಸಮೀಪ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲೆ ಉಳಿದಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಆಡಳಿತ ಕಚೇರಿ ನಿರ್ಮಾಣ ಕಾಮಗಾರಿ ಸೋಮವಾರರ ಪೂರ್ಣ ಪ್ರಮಾಣದಲ್ಲಿ ಮತ್ತೆ ಶುರುವಾಗಲಿದೆ.

ಫೆ. 22ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಸಂದರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಧರಣಿ ನಡೆಸಿದ ಪರಿಣಾಮವಾಗಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದು ಈಗ ನಿರ್ಮಾಣ ಹಂತದಲ್ಲಿರುವ ಕೇಂದ್ರದ ಆಡಳಿತ ಕಚೇರಿಯಷ್ಟೆ ಅಲ್ಲದೆ, ಇನ್ನಿತರ ಕಟ್ಟಡಗಳ ನಿರ್ಮಾಣಕ್ಕೂ ಚಾಲನೆ ನೀಡಲು ಸಭೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಫೆ. 22ರಂದೇ ಗುತ್ತಿಗೆ ದಾರ ಎಸ್.ಶಿವರಾಜು ಅವರಿಗೆ, ಕಾಮಗಾರಿ ಶುರು ಮಾಡುವಂತೆ ವಿಶ್ವವಿದ್ಯಾಲಯದ ಎಂಜಿನಿಯರ್ ಪುಟ್ಟಸ್ವಾಮಿ ಪತ್ರ ನೀಡಿದ್ದಾರೆ.

ಅದಾದ ಎರಡೇ ದಿನಕ್ಕೆ, ಶುಕ್ರವಾರ ಬೆಳಿಗ್ಗೆ ಯಿಂದ ಮಧ್ಯಾಹ್ನದವರೆಗೂ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ಸಹಾಯಕ ಎಂಜಿನಿಯರ್ ಕೃಷ್ಣಾರೆಡ್ಡಿ, ಗುತ್ತಿಗೆದಾರ ಶಿವರಾಜು ಹಾಗು ಪಿಜಿ ಕೇಂದ್ರದ ನಿರ್ದೇಶಕ ಡಾ.ಸಿ.ನಾಗಭೂಷಣ ಅವರ ತಂಡವು ಕೇಂದ್ರ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿತ್ತು. ಸೋಮವಾರದಿಂದ ಕಾಮಗಾರಿ ಶುರುವಾಗಲಿದೆ ಎಂದು ಅಧಿಕೃತ ಮೂಲಗಳು `ಪ್ರಜಾವಾಣಿ~ಗೆ ಖಚಿತಪಡಿಸಿವೆ.

ಅಲ್ಲದೆ, ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಈ ತಂಡದ ಸದಸ್ಯರು ನಗರ ಬೆಸ್ಕಾಂ ಕಚೇರಿಗೂ ಭೇಟಿ ನೀಡಿದ್ದರು. ಕೇಂದ್ರ ನಿರ್ಮಾಣವಾಗು ತ್ತಿರುವ ಸ್ಥಳವು ಬೆಸ್ಕಾಂನ ವಕ್ಕಲೇರಿ ಗ್ರಾಮೀಣ ಪ್ರದೇಶದ ವ್ಯಾಪ್ತಿಗೆ ಸೇರಿರುವುದರಿಂದ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಾದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವೀಂದ್ರ ಮತ್ತು ಅಶೋಕ್ ಎಂಬುವವರನ್ನು ಭೇಟಿ ಮಾಡಿ ಮಾಹಿತಿ ಪಡೆದರು ಎಂದು ಮೂಲ ತಿಳಿಸಿದೆ.

ಕೇಂದ್ರಕ್ಕೆ ಪ್ರತ್ಯೇಕವಾದ ಟ್ರಾನ್ಸ್‌ಫಾರ್ಮರ್ ಅನ್ನು ಅಳವಡಿಸಬೇಕು. ನಂತರ ವಿದ್ಯುತ್‌ಸಂಪರ್ಕವನ್ನು ಪಡೆಯಬೇಕು. ಅದಕ್ಕೂ ಮುನ್ನ ನಿಗದಿತ ಮೊತ್ತವನ್ನು ಬೆಸ್ಕಾಂಗೆ ಪಾವತಿಸಬೇ ಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂಬುದು ಮೂಲದ ನುಡಿ.

ಸದ್ಯಕ್ಕೆ, ನಿರ್ಮಾಣ ಹಂತದಲ್ಲಿರುವ ಆಡಳಿತ ಸೌಧದ ಶೌಚಾಲಯಗಳಿಗೆ ಟೈಲ್ಸ್‌ಗಳನ್ನು ಹಾಕಲಾಗುತ್ತಿದ್ದು, ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಕಬ್ಬಿಣದ ಕಿಟಕಿ ಗಳು ತುಕ್ಕು ಹಿಡಿಯುವ ಸಾಧ್ಯತೆ ಹಾಗೂ ಅಲ್ಪ ಕಾಲದ ಬಾಳಿಕೆಯ ಹಿನ್ನೆಲೆಯಲ್ಲಿ, ಅಲ್ಯುಮಿ ನಿಯಂ ಕಿಟಕಿ ಅಳವಡಿಸಲು ನಿರ್ಧರಿಸಲಾಗಿದೆ.
ಆಡಳಿತ ಭವನವಷ್ಟೆ ಅಲ್ಲದೆ, ನಿರ್ಮಾಣ ಹಂತದಲ್ಲಿರುವ ಕೇಂದ್ರದ ಎಲ್ಲ ಕಟ್ಟಡ ಕಾಮಗಾರಿಗಳನ್ನೂ ಶುರು ಮಾಡುವಂತೆ ವಿಶ್ವ ವಿದ್ಯಾಲಯ ಗುತ್ತಿಗೆದಾರರಿಗೆ ಆದೇಶಿಸಿದೆ.

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ರಿಂದ ಸಲಹೆ, ಸೂಚನೆ ಪಡೆದು ಕಾರ್ಯ ಶುರು ಮಾಡಬಹುದು ಎಂಬುದು ಮತ್ತೊಂದು ಸೂಚನೆ. ವಿಶೇಷವಾಗಿ, ಆಡಳಿತ ಭವನದ ನಿರ್ಮಾಣ ಕಾಮಗಾರಿ ಮಾ.15ರೊಳಗೆ ಮುಗಿಯ ಬೇಕು ಎಂಬ ಸೂಚನೆ ಕೇಂದ್ರದ ವಿದ್ಯಾರ್ಥಿ- ಸಿಬ್ಬಂದಿಗಳಲ್ಲಿ ಆಶಾಭಾವನೆ ಮೂಡಿಸಿದೆ.

ತಪ್ಪದ ಹೆಂಚಿನ ಮನೆ ವಾಸ

ನಗರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲ ಯದ ಸ್ನಾತಕೋತ್ತರ ಕೇಂದ್ರಕ್ಕೆ ಹೆಂಚಿನ ಮನೆ ವಾಸ ತಪ್ಪಿಲ್ಲ. ಕೇಂದ್ರ ಸ್ಥಾಪನೆಯಾಗಿ 13 ವರ್ಷ ಕಳೆದರೂ ಸೋರುತ್ತಿರುವ, ಶಿಥಿಲ ಗೊಂಡಿರುವ ಹೆಂಚಿನ ಮನೆಗಳಲ್ಲೆ ನೂರಾರು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.
 
ಸ್ವಂತ ಕಟ್ಟಡವಿಲ್ಲದೆ ಆರಂಭವಾದ ಕೇಂದ್ರದ ತರಗತಿ ಗಳು ಬಾಲಕರ ಸರ್ಕಾರಿ ಕಾಲೇಜಿನ ಕಟ್ಟಡದಲ್ಲಿ ಯೇ ಇಂದಿಗೂ ನಡೆಯುತ್ತಿವೆ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು 5 ವರ್ಷವಾದರೂ ಪೂರ್ಣಗೊಂಡಿಲ್ಲ.

ಕೋಲಾರದ ಬಾಲಕರ ಸರ್ಕಾರಿ ಕಾಲೇಜಿನ ಒಳ ಆವರಣದಲ್ಲಿರುವ ಕೇಂದ್ರವು ಬ್ರಿಟಿಷರ ಕಾಲದ ಕಾರಾಗೃಹ ಕಟ್ಟಡದಲ್ಲಿ ಕಾರ್ಯನಿರ್ವ ಹಿಸುತ್ತಿದೆ. ಕನ್ನಡ, ಅರ್ಥಶಾಸ್ತ್ರ, ಸಮಾಜ ಕಾರ್ಯ ಮತ್ತು ವಾಣಿಜ್ಯ ಶಾಸ್ತ್ರ ಪದವಿ ತರಗತಿಗಳು ನಡೆಯುತ್ತಿವೆ.

ಅಲ್ಲಿ ಎಂಟು ತರಗತಿ ಕೊಠಡಿಗಳು ಇವೆ. ಪುರುಷ, ಮಹಿಳೆಯರ ಶೌಚಾಲಯಗಳಿಗೆ ಒಂದೇ ಬಾಗಿಲ ಪ್ರವೇಶ. ಇರುವ ಒಂದೇ ಒಂದು ಬೋಧಕ ಸಿಬ್ಬಂದಿ ಕೊಠಡಿಯೂ ಇಕ್ಕಟ್ಟಿನದು. ನಿರ್ದೇಶಕರ ಕೊಠಡಿ, ಆಡಳಿತ ಕಚೇರಿ ಎಲ್ಲವೂ ಒಂದೇ ಕೊಠಡಿಯಲ್ಲಿದೆ. ಎಲ್ಲ ವಿಭಾಗಗಳ ಪುಸ್ತಕಗಳನ್ನು ಒಂದೇ ಸಣ್ಣ ಕೊಠಡಿಯ ಬೀರುಗಳಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ರೀಡಿಂಗ್ ರೂಮ್ ಇಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT