ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೊಡೆನ್ ಭೀತಿ; ಬೊಲಿವಿಯಾ ಅಧ್ಯಕ್ಷರಿಗೆ ವಾಯುಮಾರ್ಗ ನಿರಾಕರಣೆ

Last Updated 3 ಜುಲೈ 2013, 10:59 IST
ಅಕ್ಷರ ಗಾತ್ರ

ವಿಯೆನ್ನಾ (ಎಪಿ): ಆಸ್ಟ್ರೀಯಾಕ್ಕೆ ಪ್ರಯಾಣಿಸಬೇಕಿದ್ದ ಬೊಲಿವಿಯಾ ಅಧ್ಯಕ್ಷ ಇವೊ ಮೋರೆಲ್ಸ್ ಅವರ ವಿಮಾನದಲ್ಲಿ, ರಷ್ಯಾದಲ್ಲಿ ತಲೆ ಮರೆಸಿಕೊಂಡಿರುವ ಅಮೆರಿಕದ ಬೇಹುಗಾರಿಕಾ ತಾಂತ್ರಿಕ ವಿಶ್ಲೇಷಕ ಎಡ್ವರ್ಡ್ ಸ್ನೊಡೆನ್ ಅವರು ಪ್ರಯಾಣಿಸುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತಪಡಿಸಿ ಕೆಲ ಯುರೋಪಿಯನ್ ದೇಶಗಳು ಮಂಗಳವಾರ ಮೋರೆಲ್ಸ್ ಅವರ ವಿಮಾನಕ್ಕೆ ತಮ್ಮ ವಾಯುಮಾರ್ಗ ನಿರಾಕರಿಸಿದ ಘಟನೆ ನಡೆದಿದೆ.

ಮೋರೆಲ್ಸ್ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸ್ನೊಡೆನ್ ಇರಲಿಲ್ಲ. ಮೋರೆಲ್ಸ್ ಅವರು ತಮ್ಮ ನಿವಾಸದಿಂದ ರಷ್ಯಾದಲ್ಲಿ ನಡೆಯುವ ಸಮ್ಮೇಳನವೊಂದಕ್ಕೆ ತೆರಳುತ್ತಿದ್ದರು. ಯುರೋಪಿಯನ್ ದೇಶಗಳ ಈ ಕ್ರಮದ ಹಿನ್ನೆಲೆಯಲ್ಲಿ ಪ್ರಯಾಣದ ಮಾರ್ಗವನ್ನು ಪುನಃ ರೂಪಿಸಲಾಯಿತು ಎಂದು ಘಟನೆಯ ನಂತರ ಆಸ್ಟ್ರೀಯಾ ಹಾಗೂ ಬೊಲಿವಿಯಾದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ಬೊಲಿವಿಯಾ ವಿದೇಶಾಂಗ ಸಚಿವ ಡೇವಿಡ್ ಚೊಕ್ಯುಹಂಕಾ ಅವರು ಫ್ರಾನ್ಸ್ ಹಾಗೂ ಪೋರ್ಚುಗಲ್ ಅಧ್ಯಕ್ಷರ ವಿಮಾನಕ್ಕೆ ಏಕೆ ಅನುಮತಿ ನಿರಾಕರಿಸಿದವು ಎನ್ನುವುದನ್ನು ವಿವರಿಸಬೇಕು. ಈ ನಿರ್ಣಯದ ಹಿಂದೆ ಅಧ್ಯಕ್ಷರ ಜೀವಕ್ಕೆನಾದರೂ ಅಪಾಯವಿತ್ತೆ ? ಎನ್ನುವುದನ್ನು ಅವು ತಿಳಿಸಬೇಕು ಎಂದು ಹೇಳಿದರು.

ಫ್ರಾನ್ಸ್, ಪೋರ್ಚುಗಲ್, ಇಟಲಿ, ಸ್ಪೆನ್ ಸೇರಿದಂತೆ ಹಲವು ಯುರೋಪಿಯನ್ ದೇಶಗಳು ಮೋರೆಲ್ಸ್ ಪ್ರಯಾಣಿಸಬೇಕಿದ್ದ ವಿಮಾನಕ್ಕೆ ತಮ್ಮ ದೇಶದ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿದವು ಎಂದು ಬೊಲಿವಿಯಾ ಉಪಾಧ್ಯಕ್ಷ ಅಲ್ವಾರೊ ಗಾರ್ಸಿಯಾ ಅವರು ಆಪಾದಿಸಿದ್ದಾರೆ.

ವಿಯೆನ್ನಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಲಿವಿಯಾ ಅಧ್ಯಕ್ಷ ಇವೊ ಮೋರೆಲ್ಸ್ ಅವರು `ನಾನೇನು ಅಪರಾಧಿಯಲ್ಲ. ಯಾವ ತಪ್ಪನ್ನು ಮಾಡಿಲ್ಲ' ಎಂದು ಹೇಳಿದರು.

ಅಂತರ್ಜಾಲ ತಾಣಗಳಿಗೆ ಕನ್ನ ಹಾಕಿ ಅಮೆರಿಕ ಸಂಗ್ರಹಿಸಿರುವ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆಪಾದನೆಗೆ ಗುರಿಯಾಗಿ ರಷ್ಯಾದಲ್ಲಿ ತಲೆ ಮರೆಸಿಕೊಂಡಿರುವ ಸ್ನೊಡೆನ್ ಅವರಿಗೆ ತಮ್ಮ ಸರ್ಕಾರ ಆಶ್ರಯ ನೀಡುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT