ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೊಡೆನ್‌ಗೆ ರಷ್ಯಾ ಆಶ್ರಯ: ಅಮೆರಿಕ ಹತಾಶೆ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಎಡ್ವರ್ಡ್ ಸ್ನೊಡೆನ್‌ಗೆ ತಾತ್ಕಾಲಿಕ ಆಶ್ರಯ ನೀಡಿರುವ ರಷ್ಯಾದ ನಿರ್ಧಾರದ ಬಗ್ಗೆ ಹತಾಶೆ ವ್ಯಕ್ತಪಡಿಸಿರುವ ಅಮೆರಿಕ, ಮುಂದಿನ ದಿನಗಳಲ್ಲಿ ಆ ರಾಷ್ಟ್ರದ ಜತೆಗಿನ ಬಾಂಧವ್ಯ ಹೇಗಿರಬೇಕೆಂಬ ಬಗ್ಗೆ ಅವಲೋಕಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

`ಸ್ನೊಡೆನ್‌ನನ್ನು, ವಿಚಾರಣೆ ಎದುರಿಸಲು ಸಾಧ್ಯವಾಗುವಂತೆ ನಮ್ಮ ವಶಕ್ಕೆ ನೀಡಬೇಕೆಂದು ರಷ್ಯಾವನ್ನು ಕೋರಿ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ ಅತ್ಯಂತ ಸ್ಪಷ್ಟವಾಗಿ, ಕಾನೂನುಬದ್ಧ ಮನವಿ ಮಾಡಿದ್ದೆವು. ಆದರೂ ರಷ್ಯಾ ಆತನಿಗೆ ಆಶ್ರಯ ನೀಡಲು ನಿರ್ಧರಿಸಿರುವುದು ತೀವ್ರ ಬೇಸರ ಮೂಡಿಸಿದೆ' ಎಂದು ಅಮೆರಿಕದ ಶ್ವೇತ ಭವನ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ತಿಳಿಸಿದ್ದಾರೆ.

ಇದರೊಂದಿಗೆ, ಸ್ನೊಡೆನ್‌ಗೆ ಒಂದು ವರ್ಷ ಅವಧಿಗೆ ತಾತ್ಕಾಲಿಕ ಆಶ್ರಯ ನೀಡಲು ನಿರ್ಧರಿಸಿರುವುದಾಗಿ ರಷ್ಯಾ ಸರ್ಕಾರ ಪ್ರಕಟಿಸಿದ ನಂತರ, ಅಮೆರಿಕದ ಅಧ್ಯಕ್ಷ ಒಬಾಮ ಆಡಳಿತದ ಕಡೆಯಿಂದ ಮೊತ್ತಮೊದಲ ಪ್ರತಿಕ್ರಿಯೆ ವ್ಯಕ್ತವಾದಂತೆ ಆಗಿದೆ.

ಸ್ನೊಡೆನ್ ಸಾಮಾಜಿಕ ಕಾರ್ಯಕರ್ತನೇನೂ ಅಲ್ಲ. ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಹಾಗೂ ಇತರ ಹೇಯ ಅಪರಾಧಗಳನ್ನು ಎಸಗಿದ ಆರೋಪಗಳು ಆತನ ಮೇಲಿವೆ. ಆದ್ದರಿಂದ ಆತನನ್ನು ಶೀಘ್ರವೇ ಅಮೆರಿಕದ ವಶಕ್ಕೆ ನೀಡಬೇಕು. ಆತನಿಗೆ ಎಲ್ಲಾ ಭದ್ರತೆ ಒದಗಿಸಿ ಕಾನೂನುಬದ್ಧ ವಿಚಾರಣೆಗೆ ಒಳಪಡಿಸಲಾಗುವುದು ಎಂದರು.

ಬಾಸ್ಟನ್ ಮ್ಯಾರಥಾನ್ ಬಾಂಬ್ ಸ್ಫೋಟ ಘಟನೆಯ ನಂತರ ಉಭಯ ರಾಷ್ಟ್ರಗಳ ನಡುವೆ ಕಾನೂನು ಜಾರಿ ವಿಷಯದಲ್ಲಿ ಸಹಕಾರ ವೃದ್ಧಿಯಾಗಿತ್ತು. ಆದರೆ ರಷ್ಯಾದ ಈಗಿನ ನಿರ್ಧಾರದಿಂದ ಆ ವಾತಾವರಣ ಹಿನ್ನೆಲೆಗೆ ಸರಿದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ರಷ್ಯಾದಲ್ಲಿ ನಡೆಯಲಿರುವ ಜಿ- 20 ಶೃಂಗಸಭೆಗೆ ಒಬಾಮ ಹಾಜರಾಗಲಿದ್ದಾರೆ. ಒಟ್ಟಾರೆ ರಷ್ಯಾದ ನಿರ್ಧಾರ ಸಕಾರಾತ್ಮಕ ಬೆಳವಣಿಗೆಯಲ್ಲ. ರಷ್ಯಾದೊಂದಿಗಿನ ನಮ್ಮ ಸಂಬಂಧ ಬಲು ವಿಶಾಲ ವ್ಯಾಪ್ತಿಯುಳ್ಳದ್ದು. ಆ ರಾಷ್ಟ್ರ ಸ್ನೊಡೆನ್‌ಗೆ ಆಶ್ರಯ ನೀಡಿರುವ ಸಂದರ್ಭದಲ್ಲಿ, ದ್ವಿಪಕ್ಷೀಯ ಬಾಂಧ್ಯವ ಕುರಿತ ಪ್ರಸ್ತಾಪಕ್ಕೆ ಶೃಂಗಸಭೆಯನ್ನು ಹೇಗೆ ಬಳಸಿಕೊಳ್ಳಬೇಕೆಂಬ ಚಿಂತನೆ ನಡೆದಿದೆ' ಎಂದರು.

ಇದಕ್ಕೆ ಮುನ್ನ ರಿಪಬ್ಲಿಕನ್ ಸಂಸದ ಜಾನ್ ಮೆಕೇನ್ ಅಭಿಪ್ರಾಯ ವ್ಯಕ್ತಪಡಿಸಿ, ಅಮೆರಿಕಕ್ಕೆ ಮುಜುಗರ ಉಂಟುಮಾಡುವ ಉದ್ದೇಶದಿಂದಲೇ ರಷ್ಯಾ ಈ ನಿರ್ಧಾರ ಕೈಗೊಂಡಿದೆ ಎಂದು ಆಕ್ಷೇಪ ವ್ಯಕ್ತಡಿಸಿದ್ದರು.

ಸ್ನೊಡೆನ್‌ಗೆ ಆಶ್ರಯ ನೀಡುವ ತನ್ನ ನಿರ್ಧಾರದ ಬಗ್ಗೆ ರಷ್ಯಾವು ಅಮೆರಿಕದೊಂದಿಗೆ ಪೂರ್ವಭಾವಿಯಾಗಿ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT