ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ

ಡಾ. ವೀಣಾ ಭಟ್
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶೋಭಾ ಕೆ. (39), ಶಿವಮೊಗ್ಗ
ನಾನು ಸುಮಾರು ಮೂರು ವರ್ಷಗಳಿಂದ ಸೀಮೆಸುಣ್ಣ, ರಂಗೋಲಿ ಹಿಟ್ಟು, ವಿಭೂತಿ, ಗೋಪಿ ಚಂದನವನ್ನು ತಿನ್ನುತ್ತಿದ್ದೇನೆ. ನನಗೆ ಈ ಅಭ್ಯಾಸವನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಇವುಗಳನ್ನು ತಿನ್ನುವುದರಿಂದ ಮನಸ್ಸಿಗೆ ಒಂದು ರೀತಿಯ ಆನಂದ ಹಾಗೂ ನೆಮ್ಮದಿ ಸಿಗುತ್ತದೆ. ಇದು ಮುಂದೆ ನನ್ನ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು, ದಯವಿಟ್ಟು ತಿಳಿಸಿ.
-ಶೋಭಾ ಅವರೇ ನಿಮಗಿರುವುದು ಪೈಕಾ ಎನ್ನುವ ಸಮಸ್ಯೆ. ನಿಮ್ಮ ಆಹಾರದಲ್ಲಿ ಖನಿಜಾಂಶಗಳ ಕೊರತೆ ಆಗಿರುವುದು ಇದಕ್ಕೆ ಕಾರಣ. ಮುಖ್ಯವಾಗಿ ಕಬ್ಬಿಣ ಮತ್ತು ಸತುವಿನದ್ದು. ನೀವು ಹತ್ತಿರದ ಲ್ಯಾಬ್‌ನಲ್ಲಿ ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಎಷ್ಟಿದೆ ಎಂದು ತಪಾಸಣೆ ಮಾಡಿಸಿಕೊಳ್ಳಿ. ಅದು 11 ಮಿಲಿ ಗ್ರಾಮ್‌ಗಿಂತ ಕಡಿಮೆ ಇದ್ದರೆ ನಿಮಗೆ ರಕ್ತಹೀನತೆ ಇದೆ ಎಂದರ್ಥ.

ಹೆಚ್ಚಿಗೆ ನುಗ್ಗೆ ಸೊಪ್ಪು, ಮೆಂತ್ಯ ಸೊಪ್ಪು, ದಂಟಿನ ಸೊಪ್ಪು, ಮೊಳಕೆಯೊಡೆದ ಹೆಸರುಕಾಳು, ಹುರುಳಿ, ಕಡಲೆಕಾಳು, ಮೆಂತ್ಯ, ರಾಗಿ, ಬೆಲ್ಲ, ಹಸಿರು ತರಕಾರಿ, ಖರ್ಜೂರ, ಅಂಜೂರ, ಒಣ ಹಣ್ಣುಗಳನ್ನು ತಿನ್ನಿ. ತಿಂಡಿ ತಿಂದ  ತಕ್ಷಣ ಚಹಾ- ಕಾಫಿ ಕುಡಿಯಬೇಡಿ. ಯಾಕೆಂದರೆ ಅದರಲ್ಲಿರುವ ಟ್ಯಾನಿನ್ ಎಂಬ ಅಂಶ ಆಹಾರದಲ್ಲಿನ ಕಬ್ಬಿಣಾಂಶವನ್ನು ನಿಷ್ಕ್ರಿಯಗೊಳಿಸುತ್ತದೆ. ಸಕ್ಕರೆ ಬದಲು ಬೆಲ್ಲ ಬಳಸಿ.  ಅವಶ್ಯ ಬಂದಲ್ಲಿ ಪೂರಕ ಕಬ್ಬಿಣಾಂಶದ ಮಾತ್ರೆಗಳನ್ನು ದಿನಾಲೂ ಸೇವಿಸಿ.

ನೀವು ಹೇಳುತ್ತಿರುವುದು ನೋಡಿದರೆ ನಿಮಗಿರುವ ಪೈಕಾ ಗೀಳು ಮನೋಬೇನೆಯೂ ಆಗಿರಬಹುದು. ಶಿವಮೊಗ್ಗದಲ್ಲಿ ಅತ್ಯುತ್ತಮ ಮನೋವೈದ್ಯರುಗಳಿದ್ದು, ಯಾರಾದರೊಬ್ಬರನ್ನು ಆದಷ್ಟು ಬೇಗನೇ ಭೇಟಿ ಮಾಡಿ.

ಹೆಸರು, ಊರು ಬೇಡ
ನನಗೆ 55 ವರ್ಷ. ತುಂಬಾ ವರ್ಷಗಳಿಂದಲೂ ಹೊಟ್ಟೆಯಲ್ಲಿ ಹುಳುಗಳ ತೊಂದರೆ ಇದೆ. ವರ್ಷಕ್ಕೆ ಒಂದು ಬಾರಿ ಡಿ-ವೋರ್ಮಿಂಗ್ ಮಾತ್ರೆ ತೆಗೆದುಕೊಳ್ಳುತ್ತೇನೆ. ಆದರೂ 6 ತಿಂಗಳಿಗೇ ಪುನಃ ರಾತ್ರಿ ಹುಳುಗಳ ಬಾಧೆ, ಗುದದ್ವಾರದಲ್ಲಿ ತುರಿಕೆ ಆರಂಭವಾಗುತ್ತದೆ. ಶೌಚಾಲಯಕ್ಕೆ ಹೋಗಿ ಪರೀಕ್ಷಿಸಿದರೆ ಒಂದು ಸೆಂ.ಮೀ. ಉದ್ದದ ಬಿಳಿ ಹುಳು ಗೋಚರಿಸುತ್ತದೆ. ತುಂಬಾ ಕಿರಿಕಿರಿ ಆಗುತ್ತದೆ. ಈಗ ನನ್ನ ಸಮಸ್ಯೆ ಎಂದರೆ, ಹೀಗೆ ರಾತ್ರಿ ಹೊರ ಬರುವ ಹುಳುಗಳು ಮೂತ್ರದ್ವಾರವನ್ನು ಪ್ರವೇಶಿಸುತ್ತವೆಯೇ? ಅದನ್ನು ತಿಳಿಯುವುದು ಹೇಗೆ? ವರ್ಷಕ್ಕೆ ಎರಡು ಬಾರಿ ಡಿ-ವೋರ್ಮಿಂಗ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದೇ? ಈ ಸಮಸ್ಯೆಗೆ ಶಾಶ್ವತ ಪರಿಹಾರ ಏನು?
-ನಿಮಗಿರುವುದು ಪಿನ್‌ವರ್ಮ್ ಅಥವಾ ದಾರದ ಹುಳುವಿನ ಸೋಂಕು. ಗರ್ಭಿಣಿಯಾದ ಹೆಣ್ಣು ಹುಳು ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಚಲಿಸಿ ಗುದದ್ವಾರದಿಂದ ಹೊರಬಂದು ಮೊಟ್ಟೆ ಇಟ್ಟು ಸತ್ತು ಹೋಗುತ್ತದೆ. ಮೊಟ್ಟೆಗಳು ಬಹಳ ಚಿಕ್ಕದಿದ್ದು ಕಣ್ಣಿಗೆ ಕಾಣುವುದಿಲ್ಲ. ನಮ್ಮ ಕೈನ ಉಗುರುಗಳ ಮೂಲಕ ಮೊಟ್ಟೆಗಳು ಆಹಾರವನ್ನು ಸೇರಬಹುದು. ಇಲ್ಲವೇ ಹಾಸಿಗೆ, ಬಟ್ಟೆ, ನೀರು, ಆಟದ ಸಾಮಾನು ಇತ್ಯಾದಿಗಳಿಂದ ಮತ್ತೆ ನಮ್ಮ ಜೀರ್ಣಾಂಗ ವ್ಯೆಹವನ್ನು ಸೇರಿಕೊಂಡು ಜೀವನ ಚಕ್ರವನ್ನು ಮುಂದುವರಿಸಬಹುದು.

ಈ ಹುಳುಗಳ ಜೀವಿತಾವಧಿ ಹೆಚ್ಚೆಂದರೆ 13 ವಾರಗಳಾದರೂ ಪದೇ ಪದೇ ಸೋಂಕು ಆಗುವುದರಿಂದ 6 ತಿಂಗಳಿಗೊಮ್ಮೆ ನೀವು ಡಿ-ವೋರ್ಮಿಂಗ್ ಮಾತ್ರೆ ತೆಗೆದುಕೊಳ್ಳಲೇಬೇಕು. (ಆಲ್ಬೆಂಡಸೋಲ್ 400 ಮಿ.ಗ್ರಾಂ. ಸಿಂಗಲ್ ಡೋಸ್ ಅಥವಾ ಮೆಬೆಂಡಸೋಲ್ 200 ಮಿ.ಗ್ರಾಂ. ಬೆಳಿಗ್ಗೆ ಮತ್ತು ರಾತ್ರಿ ಮೂರು ದಿನ) ಉಗುರುಗಳನ್ನು ಕತ್ತರಿಸಿ ಸಮನಾಗಿ ಇಟ್ಟುಕೊಳ್ಳಿ. ಊಟಕ್ಕೆ ಮುಂಚೆ ಕೈಯನ್ನು ಸ್ವಚ್ಛವಾಗಿ ತೊಳೆಯಿರಿ. ಮಲ ವಿಸರ್ಜನೆಯ ನಂತರವೂ ಸ್ವಚ್ಛವಾಗಿ ಕೈ ತೊಳೆದುಕೊಳ್ಳಿ. ಒಳ ಉಡುಪು, ಹಾಸಿಗೆ ಬಟ್ಟೆಗಳನ್ನು ಬಿಸಿ ನೀರಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸುವ ಅಭ್ಯಾಸ ಇರಲಿ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ.

ಗೀತಾ (28), ಗುಬ್ಬಿ
ನಾನು 4 ತಿಂಗಳ ಗರ್ಭಿಣಿ. ಪದೇ ಪದೇ ಮೂಗಿನಲ್ಲಿ ನೀರು ಬರುತ್ತದೆ. ಒಮ್ಮಮ್ಮೆ ತಲೆ ಭಾರ ಆಗುತ್ತದೆ. ಅಕ್ಕಪಕ್ಕದವರು ಸೈನಸ್ ಎಂದು ಹೆದರಿಸುತ್ತಿದ್ದಾರೆ. ಗರ್ಭಿಣಿಯಾದ್ದರಿಂದ ಚಿಕಿತ್ಸೆ ಪಡೆಯಬಹುದೇ?
-ಸೈನಸ್ ದೊಡ್ಡ ಕಾಯಿಲೆಯಲ್ಲ. ನಮ್ಮ ತಲೆಬುರುಡೆಯ ಮೂಳೆಯು ಶರೀರಕ್ಕೆ ಭಾರ ಆಗಬಾರದೆಂಬ ಕಾರಣಕ್ಕೆ ಪೊಳ್ಳಾಗಿ ಸೃಷ್ಟಿಯಾಗಿರುತ್ತದೆ. ಈ ಪೊಳ್ಳು ಸ್ಥಳಗಳೇ ಸೈನಸ್. ಮುಖ್ಯವಾಗಿ ಕಣ್ಣುಗಳ ಮೇಲೆ, ಮೂಗಿನ ಬುಡದಲ್ಲಿ ಹಾಗೂ ಮೇಲ್ದವಡೆಯ ಮೇಲೆ ಇದೆ. ಶೀತವಾದಾಗ ಸೈನಸ್‌ನಲ್ಲಿ ಉತ್ಪಾದನೆಯಾಗುವ ದ್ರವ ಚಿಕ್ಕ ಮಾರ್ಗಗಳಲ್ಲಿ ಹರಿದು ಮೂಗಿಗೆ ಬರುತ್ತದೆ. ಈ ರೀತಿ ಅದು ಹರಿದು ಹೋಗುತ್ತಿದ್ದರೆ ನಿಮಗೆ ಕಿರಿಕಿರಿ ಅನಿಸಿದರೂ ಅದು ಒಳ್ಳೆಯದೇ. ಆದರೆ ಈ ಮಾರ್ಗದಲ್ಲಿ ತೊಡಕಾದರೆ ದ್ರವ ಅಲ್ಲೇ ಉಳಿದು ಸೈನಸೈಟಿಸ್ ಆಗಬಹುದು. ಅಂದರೆ ಸೈನಸ್ ಸೋಂಕಾಗಿ ಜ್ವರ, ತಲೆಭಾರ ಆಗಬಹುದು. ಆದ್ದರಿಂದ ಹಾಗಾಗಲಿಕ್ಕೆ ಬಿಡದೆ, ತಕ್ಷಣವೇ ಬಿಸಿನೀರಿನ ಹಬೆಗೆ ದಿನಕ್ಕೆ ಎರಡು ಬಾರಿಯಾದರೂ ಮುಖ ಒಡ್ಡಿ.

ಶೀತ ಗಾಳಿಗೆ ಮೈ ಒಡ್ಡುವುದನ್ನು (ಫ್ಯಾನ್, ಹೊರಗೆ ಓಡಾಡುವುದು) ತಪ್ಪಿಸಿ. ಬಿಸಿ ಆಹಾರ ಸೇವಿಸಿ. ಬಿಸಿ ನೀರನ್ನೇ ಕುಡಿಯಿರಿ. ಕರಿದ ಪದಾರ್ಥಗಳನ್ನು ವರ್ಜಿಸಿ. ಗರ್ಭಿಣಿ ಆಗಿರುವುದರಿಂದ ನೀವೇ ಮಾತ್ರೆಗಳನ್ನು ಸೇವಿಸಬೇಡಿ. ಏಕೆಂದರೆ ಕೆಲವು ಮಾತ್ರೆಗಳು ಹುಟ್ಟುವ ಮಗುವಿಗೆ ಅಪಾಯ ತಂದೊಡ್ಡಬಹುದು. ವೈದ್ಯರ ಸಲಹೆ ಮೇರೆಗೆ ಅವಶ್ಯ ಬಂದರೆ ಮಾತ್ರ ಸೇವಿಸಿ. ಗರ್ಭದ ಆರೋಗ್ಯವನ್ನು ಆಸ್ಪತ್ರೆಯಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ. `ತಾಯಿ' ಕಾರ್ಡನ್ನು ಪಡೆದು ಸಮಗ್ರವಾಗಿ ಅಭ್ಯಾಸ ಮಾಡಿ. ಅದರಲ್ಲಿ ಉತ್ತಮ ಮಾಹಿತಿಗಳು ಇರುತ್ತವೆ.

ಪದೇ ಪದೇ ಸೈನಸ್ ಸೋಂಕು ಬರದ ಹಾಗೆ 15-20 ನಿಮಿಷ ಪ್ರತಿ ದಿನ ಉಸಿರಾಟದ ಅಭ್ಯಾಸಗಳನ್ನು ತಜ್ಞರ ಸಲಹೆಯ ಮೇರೆಗೆ ಮಾಡಿ (ಬಸ್ತ್ರಿಕಾ ಹಾಗೂ ಅನುಲೋಮ ವಿಲೋಮ ಪ್ರಾಣಾಯಾಮ).
ವಿಳಾಸ: ಸಂಪಾದಕರು, `ಸ್ಪಂದನ', ಭೂಮಿಕಾ ವಿಭಾಗ, ಪ್ರಜಾವಾಣಿ, ನಂ.75, ಎಂ.ಜಿ. ರಸ್ತೆ, ಬೆಂಗಳೂರು- 560 001
ಇ-ಮೇಲ್: bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT