ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾಟ್ ಫಿಕ್ಸಿಂಗ್ ವಾಸನೆ: ಐಸಿಸಿಯಿಂದ ಪಂದ್ಯ ಪರಿಶೀಲನೆ

Last Updated 1 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆದಿರುವ ಬಗ್ಗೆ ಅನುಮಾನಗಳು ಉದ್ಭವವಾಗಿರುವ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆ ಪಂದ್ಯದ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿದೆ.

ಫೆಬ್ರುವರಿ 21ರಂದು ಅಹಮದಾಬಾದ್‌ನಲ್ಲಿ ನಡೆದ ‘ಎ’ ಗುಂಪಿನ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇನ್ ವಾಟ್ಸನ್ ಹಾಗೂ ಬ್ರಾಡ್ ಹಡ್ಡಿನ್ ಮೊದಲ 10 ಓವರ್‌ನಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ್ದರು. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮೊದಲ 11 ಓವರ್‌ಗಳಲ್ಲಿ ಈ ಆರಂಭಿಕ ಆಟಗಾರರು ಕೇವಲ 28 ರನ್ ಗಳಿಸಿದ್ದರು. 15 ಓವರ್‌ಗಳಲ್ಲಿ ತಂಡದ ಮೊತ್ತ 53 ಆಗಿತ್ತು. ಆಸ್ಟ್ರೇಲಿಯಾ ಆ ಪಂದ್ಯದಲ್ಲಿ ಸುಲಭವಾಗಿಯೇ ಗೆಲುವು ಸಾಧಿಸಿತ್ತು. ಆದರೆ ಮೊದಲ ಎರಡು ಓವರ್‌ಗಳ ಬಗ್ಗೆ ಐಸಿಸಿಯ ಭ್ರಷ್ಟಾಚಾರ ತಡೆ ಘಟಕ ಕೂಲಂಕಷ ಪರಿಶೀಲನೆ ನಡೆಸಿದೆ. ಹಡ್ಡಿನ್ ಹಾಗೂ ವಾಟ್ಸನ್ ಅವರ ಬ್ಯಾಟಿಂಗ್ ವಿಧಾನದ ಬಗ್ಗೆ ಅನುಮಾನ ಬಂದ ಕಾರಣ ಐಸಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ಕಾರಣ ಪಾಕಿಸ್ತಾನ ತಂಡದ ಸಲ್ಮಾನ್ ಬಟ್, ಮೊಹಮ್ಮದ್ ಅಮೇರ್ ಹಾಗೂ ಮೊಹಮ್ಮದ್ ಆಸಿಫ್ ಅವರ ಮೇಲೆ ಐಸಿಸಿ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಆ ಕಾರಣ ಐಸಿಸಿ ಭ್ರಷ್ಟಾಚಾರ ತಡೆ ಘಟಕ ಈಗ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎಲ್ಲಾ ಪಂದ್ಯಗಳು ಹಾಗೂ ಆಟಗಾರರ ಮೇಲೆ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹಾಗಾಗಿ ಎಲ್ಲಾ ಪಂದ್ಯಗಳನ್ನೂ ಪರಿಶೀಲನೆ ನಡೆಸಲು ಅದು ಮುಂದಾಗಿದೆ.

ಆದರೆ ಸನ್ನಿವೇಶಕ್ಕೆ ತಕ್ಕ ರೀತಿಯಲ್ಲಿ ನಮ್ಮ ಆರಂಭಿಕ ಬ್ಯಾಟ್ಸ್‌ಮನ್‌ಗಳು ಆಡಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಟಿಮ್ ನೀಲ್ಸನ್ ಸಮರ್ಥಿಸಿಕೊಂಡಿದ್ದರು.

‘ಮೊದಲ ಪಂದ್ಯದಲ್ಲಿ ಹಡ್ಡಿನ್ ಹಾಗೂ ವಾಟ್ಸನ್ ಚೆನ್ನಾಗಿಯೇ ಆಡಿದರು. ಅವರು ನಿಧಾನಗತಿ ಆಟಕ್ಕೆ ಮುಂದಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಜಿಂಬಾಬ್ವೆ ನಮಗೆ ತಕ್ಕ ಸ್ಪರ್ಧೆ ನೀಡಬೇಕಿದ್ದರೆ ಅವರು ಸ್ಪಿನ್ನರ್‌ಗಳಿಂದ ಆರಂಭದಲ್ಲಿ ನಮ್ಮ ವಿಕೆಟ್ ಪಡೆಯಬೇಕಿತ್ತು. ನಾವು ಆಡಿದ್ದ ರೀತಿ ಸರಿಯಾಗಿಯೇ ಇದೆ’ ಎಂದು ಅವರು ಪಂದ್ಯದ ಬಳಿಕ ವಿವರಿಸಿದ್ದರು.

ಈ ಬಾರಿಯ ವಿಶ್ವಕಪ್ ಟೂರ್ನಿಯ ಸ್ವರೂಪ ಹಾಗೂ ವೇಳಾಪಟ್ಟಿಯು ಸ್ಪಾಟ್ ಫಿಕ್ಸಿಂಗ್‌ಗೆ ಅನುವು ಮಾಡಿಕೊಡುವಂತಿದೆ ಎಂದು ಇತ್ತೀಚೆಗಷ್ಟೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತಿಫ್ ಆತಂಕ ವ್ಯಕ್ತಪಡಿಸಿದ್ದರು.

ಹಾಗೇ, ಭಾರತ-ಇಂಗ್ಲೆಂಡ್ ನಡುವೆ ಬೆಂಗಳೂರಿನಲ್ಲಿ ನಡೆದ ಪಂದ್ಯ ಕೂಡ ಅನುಮಾನಕ್ಕೆ ಕಾರಣವಾಗಿದೆ. ಕಾರಣ ಈ ಪಂದ್ಯ ಟೈ ಆಗುತ್ತೆ ಎಂದು ಪಂದ್ಯಕ್ಕೆ ಏಳು ಗಂಟೆ ಮುನ್ನ ಆಸ್ಟ್ರೇಲಿಯಾದ ಶೇನ್ ವಾರ್ನ್ ಟ್ವಿಟರ್‌ನಲ್ಲಿ ಭವಿಷ್ಯ ನುಡಿದಿದ್ದರು. ಅದೇಗೆ ಸಾಧ್ಯ ಎಂಬುದು ಈಗ ಕೆಲವರ ಪ್ರಶ್ನೆ.

ಅಕಸ್ಮಾತ್ ಈ ರೀತಿ ಪಾಕಿಸ್ತಾನ ಅಥವಾ ಭಾರತದ ಆಟಗಾರರು ಟ್ವಿಟರ್‌ನಲ್ಲಿ ಹೇಳಿದ್ದರೆ ದೊಡ್ಡ ವಿವಾದ ಸೃಷ್ಟಿಯಾಗುತಿತ್ತು. ಆದರೆ ಆಸ್ಟ್ರೇಲಿಯಾದ ಆಟಗಾರ ಹೇಳಿರುವುದರಿಂದ ಸುದ್ದಿಯಾಗಿಲ್ಲ. ಅವರನ್ನು ಜೀನಿಯಸ್ ಎಂದು ಬಿಂಬಿಸಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಅಮಿರ್ ಸೊಹೇಲ್ ಹೇಳಿದ್ದಾರೆ.

ಈ ಓವರ್ ಮೇಡಿನ್ ಆಗುತ್ತಾ? ಈ ಎಸೆತದಲ್ಲಿ ರನ್ ಬರುತ್ತಾ? ಈ ಎಸೆತ ನೋಬಾಲ್ ಆಗುತ್ತೆ? ಐದು ಓವರ್‌ಗಳಲ್ಲಿ ಒಂದು ತಂಡ ಎಷ್ಟು ರನ್ ಗಳಿಸುತ್ತೆ...? ಹೀಗೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬುಕ್ಕಿಗಳು ಬೆಟ್ ಕಟ್ಟುತ್ತಾರೆ.

ವರದಿ ಅಲ್ಲಗಳೆದ ಆಸೀಸ್
ಕೊಲಂಬೊ (ಐಎಎನ್‌ಎಸ್): ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದ ತನಿಖೆ ನಡೆಸುತ್ತಿದೆ ಎಂಬ ವರದಿಗಳನ್ನು ಆಸ್ಟ್ರೇಲಿಯಾ ತಂಡ ಅಲ್ಲಗಳೆದಿದೆ.

‘ಈ ವಾರ ಕೇಳುತ್ತಿರುವ ಅವಿವೇಕತನದ ವಿಷಯವಿದು. ಇಲ್ಲಿಗೆ ಬಂದ ಮೇಲೆ ಇಂತಹ ಅವಿವೇಕತನದ ಅನೇಕ ವಿಷಯಗಳನ್ನು ಕೇಳಿದ್ದೇನೆ’ ಎಂದು ಆಸ್ಟ್ರೇಲಿಯಾ ತಂಡದ ಮ್ಯಾನೇಜರ್ ಸ್ಟೀವ್ ಬೆರ್ನಾರ್ಡ್ ತಿಳಿಸಿದ್ದಾರೆ.

‘ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಯಾವುದೇ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುವಾಗ ಈ ರೀತಿ ಆಗುವುದು ಸಹಜ. ನಾವು ಗಳಿಸಿದ್ದ ಸ್ಕೋರ್ ಉತ್ತಮ ಮೊತ್ತವೇ ಆಗಿತ್ತು’ ಎಂದು ಅವರು ನುಡಿದಿದ್ದಾರೆ.

ಆ ಪಂದ್ಯದಲ್ಲಿ ಕಾಂಗರೂ ಪಡೆ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಬಳಿಕ 91 ರನ್‌ಗಳ ಗೆಲುವು ಸಾಧಿಸಿತ್ತು.

‘ಇದೊಂದು ನಗೆಪಾಟೀಲಿನ ವಿಷಯ. ಇದೊಂದು ಜೋಕ್’ ಎಂದು ಆರಂಭಿಕ ಬ್ಯಾಟ್ಸ್‌ಮನ್ ಬ್ರಾಡ್ ಹಡ್ಡಿನ್ ಹೇಳಿದ್ದಾರೆ.

 ಕಾನೂನು ಕ್ರಮಕ್ಕೆ ಮುಂದಾದ ಮಾಹೇಲ
ಕೊಲಂಬೊ (ಪಿಟಿಐ): ಪಾಕಿಸ್ತಾನ ಎದುರಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ತಮ್ಮ ವಿರುದ್ಧ ಆರೋಪ ಮಾಡಿರುವ ಟಿವಿ ಚಾನೆಲ್‌ವೊಂದರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಶ್ರೀಲಂಕಾ ತಂಡದ ಮಾಹೇಲ ಜಯವರ್ಧನೆ ಮುಂದಾಗಿದ್ದಾರೆ.

ಸೋಲು ಕಂಡ ಆ ಪಂದ್ಯದಲ್ಲಿ ಜಯವರ್ಧನೆ ಕೇವಲ ಎರಡು ರನ್ ಗಳಿಸಿದ್ದರು. ‘ಉದ್ದೇಶಪೂರ್ವಕವಾಗಿ ಜಯವರ್ಧನೆ ಕಳಪೆ ಪ್ರದರ್ಶನ ನೀಡಿರಬಹುದು’ ಎಂದು ಟಿವಿ ಚಾನೆಲ್ ವರದಿ ಮಾಡಿತ್ತು.

‘ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಆರಂಭಿಕ ಪ್ರಕ್ರಿಯೆ ಆರಂಭವಾಗಿದೆ’ ಎಂದು ಜಯವರ್ಧನೆ ಅವರ ಮ್ಯಾನೇಜರ್ ತಿಳಿಸಿದ್ದಾರೆ.

ಸ್ಥಳೀಯ ಉದ್ಯಮಿಯೊಬ್ಬರು ಶ್ರೀಲಂಕಾ ಸೋಲುತ್ತೆ ಎಂದು 18 ಸಾವಿರ ಡಾಲರ್ ಬೆಟ್ ಕಟ್ಟಿದ್ದರು. ಜಯವರ್ಧನೆ (2) ಹಾಗೂ ತಿಲಾನ್ ಸಮರವೀರ (1) ಅವರು ಬೇಗ ಔಟ್ ಆಗಿ ‘ಪಂದ್ಯಕ್ಕೆ ತಿರುವು’ ನೀಡಿದರು ಎಂದು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‌ನ ಕಾಮೆಂಟೇಟರ್‌ಗಳು ಹೇಳಿದ್ದರು. ಆದರೆ ಈ ಆಟಗಾರರ ವಿರುದ್ಧ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್‌ನ ಕಾಮೆಂಟೇಟರ್‌ಗಳ ಹೇಳಿಕೆಯನ್ನು 1996ರಲ್ಲಿ ವಿಶ್ವಕಪ್ ಗೆದ್ದ ಲಂಕಾ ತಂಡದ ನಾಯಕ ಅರ್ಜುನ ರಣತುಂಗಾ ತೀವ್ರವಾಗಿ ಟೀಕಿಸಿದ್ದಾರೆ.

‘ವಿಶ್ವಕಪ್ ವೇಳೆ ಈ ರೀತಿ ಆರೋಪ ಮಾಡುವುದರಿಂದ ಆಟಗಾರರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT