ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ ಬೌಲಿಂಗ್ ನಮ್ಮ ಶಕ್ತಿ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಸ್ಪಿನ್ನರ್‌ಗಳು ನಮ್ಮ ತಂಡದ ಶಕ್ತಿ. ಫಿರೋಜ್ ಶಾ ಕೋಟ್ಲಾ ಮೈದಾನದ ಪಿಚ್ ನಿಧಾನಗತಿಯ ಬೌಲರ್‌ಗಳಿಗೆ ಸಹಕಾರಿಯಾಗಿರುವುದು ನಮಗೆ ಅನುಕೂಲಕರ.

ಸೋಮವಾರ ಇಂಗ್ಲೆಂಡ್ ಪಂದ್ಯದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ `ತವರಿನ ಅಂಗಳ~ದಲ್ಲಿ ಆಡುವ ಖುಷಿಯಲ್ಲಿರುವ ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಭಿಪ್ರಾಯವಿದು. ತಾವು ಬೆಳೆದ ಮೈದಾನದ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದರು. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದ ಗೆಲುವಿನ ಪುಳಕದಲ್ಲಿ ಅವರಿದ್ದರು.

`ಈ ಪಿಚ್‌ನಲ್ಲಿ ಹೆಚ್ಚು ಬೌನ್ಸ್ ಇಲ್ಲ. ಮೊದಲಿಗಿಂತಲೂ ಪಿಚ್ ಉತ್ತಮವಾಗಿದೆ. ಹೈದರಾಬಾದ್ ಪಂದ್ಯದ ಗೆಲುವು ನಮ್ಮಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಕಳೆದ 15 ದಿನಗಳಲ್ಲಿ ಬಹಳಷ್ಟು ಅಭ್ಯಾಸ ಮಾಡಿದ್ದೇವೆ. ಹೆಚ್ಚು ಅಂತರದಿಂದ ಗೆಲುವು ಸಾಧಿಸಿರುವುದು ಸಂತಸದ ಸಂಗತಿ~ ಎಂದರು.

`ಹಿರಿಯ ಆಟಗಾರರಿಲ್ಲದಿದ್ದರೂ ಗೆಲುವು ಸಾಧಿಸಿರುವುದು ಒಳ್ಳೆಯ ಬೆಳವಣಿಗೆ. ತಂಡದ ಭವಿಷ್ಯಕ್ಕೆ ಇದು ಒಳ್ಳೆಯದು. ಇಂಗ್ಲೆಂಡ್‌ನಂತಹ ಬಲಾಢ್ಯ ತಂಡದ ಎದುರು ಇದೇ ರೀತಿಯ ಪ್ರದರ್ಶನ ಅಗತ್ಯವಾಗಿದೆ~ ಎಂದು ಹೇಳಿದರು.

ಇಂಗ್ಲೆಂಡ್ ಸರಣಿ ಮತ್ತು ಸದ್ಯದ ಸರಣಿಯ ಕುರಿತ ವ್ಯತ್ಯಾಸದ ಬಗ್ಗೆ ಮಾತನಾಡಿದ ಅವರು, `ಇಂಗ್ಲೆಂಡ್‌ನ ಏಕದಿನ ಸರಣಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದೆವು. ಮಳೆಯ ಕಾರಣದಿಂದ ಮತ್ತು ಡಕ್ವರ್ಥ್ ಲೂಯಿಸ್ ನಿಯಮದಿಂದಾಗಿ ಫಲಿತಾಂಶ ನಮ್ಮ ಪರವಾಗಿ ಬರಲಿಲ್ಲ. ಇಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಅದನ್ನು ನಾವು ಮೊದಲ ಪಂದ್ಯದಲ್ಲಿ ತೋರಿಸಿದ್ದೇವೆ~ ಎಂದರು.

`ಹೊನಲು ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅವಕಾಶ ಇದೆ. ಚಳಿಗಾಲ ಆರಂಭವಾಗುವ ಈ ಸಮಯದಲ್ಲಿ ಇಲ್ಲಿ ಮಂಜು ಇರುತ್ತದೆ. ಇದು ನನ್ನ ತವರಿನ ನೆಲ. ಆದರೆ ಇಲ್ಲಿ ಇದುವರೆಗೆ ನಾನು ಕೇವಲ ಎರಡು ಪಂದ್ಯಗಳನ್ನು ಆಡಿದ್ದೇನೆ. ನಾಳೆಯ ಪಂದ್ಯದಲ್ಲಿ ಏನಾಗುತ್ತದೆ ನೋಡೋಣ~ ಎಂದರು.

ಹೊಸ ಪವರ್ ಪ್ಲೇ ನಿಯಮದನ್ವಯ ಇನಿಂಗ್ಸ್‌ನಲ್ಲಿ ಎರಡು ಚೆಂಡಿನ ಬಳಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನಿಯಮ ಬದಲಾವಣೆಯಾಗಿದ್ದು ಒಳ್ಳೆಯದೇ ಆದರೂ ಕೆಲವು ಗೊಂದಲಗಳಿವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT